ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಪನ್‌; ನಾಳೆಯಿಂದ ವಿಸ್ತರಣೆ

ಪಡಿತರಕ್ಕಾಗಿ ಕೂಪನ್ ವ್ಯವಸ್ಥೆಗೆ ಚಾಲನೆ ನೀಡಲಿರುವ ಮುಖ್ಯಮಂತ್ರಿ
Last Updated 30 ಜನವರಿ 2017, 7:55 IST
ಅಕ್ಷರ ಗಾತ್ರ
ಮೈಸೂರು: ಪಡಿತರ ಕೂಪನ್ ವ್ಯವಸ್ಥೆಗೆ ಜ.31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಚಾಲನೆ ನೀಡುವ ಮೂಲಕ ರಾಜ್ಯದಾದ್ಯಂತ ವಿಸ್ತರಿಸಲಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿ ಹರ್ಷ ಗುಪ್ತ ಇಲ್ಲಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
 
ಸದ್ಯ ಕೆಲವು ನಗರ ಪ್ರದೇಶಗಳಲ್ಲಿ ಜಾರಿಯಾಗಿರುವ ಕೂಪನ್ ಪದ್ಧತಿ­ಯಿಂದ ನ್ಯಾಯಬೆಲೆ ಅಂಗಡಿ ಮಾಲೀಕರ ಅಕ್ರಮ ವಹಿವಾಟಿಗೆ ಮೂಗು­ದಾರ ಬಿದ್ದಿದೆ. ಇದರ ಯಶಸ್ಸಿ­ನಿಂದ ಯೋಜನೆಯನ್ನು ರಾಜ್ಯದೆಲ್ಲೆಡೆ ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು.
 
ಕೂಪನ್‌ಗಳನ್ನು ನ್ಯಾಯಬೆಲೆ ಅಂಗಡಿ, ಪಡಿತರ ಚೀಟಿಯ ಫೋಟೊ ಸೇವಾ ಕೇಂದ್ರಗಳಲ್ಲಿ ಆಧಾರ್‌ ಸಂಖ್ಯೆ ಹಾಗೂ ಬಯೊಮೆಟ್ರಿಕ್ ನೀಡುವ ಮೂಲಕ ಪಡೆಯಬಹುದು. ಮೊಬೈಲ್‌ ಮೂಲಕವೂ ಪಡೆಯಬಹುದು. ಕೂಪನ್ ಪಡೆಯಲು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಹೇಳಿದರು.
 
‘ಉಜ್ವಲ್’ ಯೋಜನೆ ಜಾರಿಗೆ ಸಿದ್ಧತೆ: ಅಡುಗೆ ಅನಿಲ ಸಂಪರ್ಕ ಹೊಂದದೆ ಇರುವವರಿಗೆ ‘ಉಜ್ವಲ್’ ಯೋಜನೆ­ಯಡಿ ಕೇಂದ್ರ ಸರ್ಕಾರ ಅಡುಗೆ ಅನಿಲದ ಸಂಪರ್ಕವನ್ನು ಉಚಿತವಾಗಿ ನೀಡಿದರೆ, ರಾಜ್ಯ ಸರ್ಕಾರ ಉಚಿತವಾಗಿ ಅಡುಗೆ ಅನಿಲದ ಒಲೆ ವಿತರಿಸಲಿದೆ ಎಂದರು. 
 
ಬೆಳಕು ಹಾಗೂ ಅಡುಗೆ ಉದ್ದೇಶಕ್ಕೆ ಸೀಮೆಎಣ್ಣೆ  ನೀಡಲಾಗುತ್ತಿತ್ತು. ಎಲ್ಲೆಡೆ ವಿದ್ಯುತ್ ಸಂಪರ್ಕ ಇರುವುದರಿಂದ ಬೆಳಕಿಗಾಗಿ ಸೀಮೆಎಣ್ಣೆ ಬಳಸುವವರ ಸಂಖ್ಯೆ ಕಡಿಮೆಯಾಯಿತು. ಇದೀಗ ಅಡುಗೆ ಉದ್ದೇಶಕ್ಕಾಗಿ ಸೀಮೆಎಣ್ಣೆ ಬಳಸುವವರಿಗೆ ಅಡುಗೆ ಅನಿಲ ಸಂಪರ್ಕ ನೀಡಿ ಹೊಗೆಮುಕ್ತ ರಾಜ್ಯವಾಗಿ­ಸುವುದು ಈ ಯೋಜನೆ ಉದ್ದೇಶ ಎಂದರು.
 
ವಿತರಣೆ ವಿಳಂಬ: ನ್ಯಾಯಬೆಲೆ ಅಂಗಡಿ ಗಳಲ್ಲಿ ಉಳಿದಿರುವ ಪಡಿತರ ಪ್ರಮಾಣದ ಗಣಕೀಕರಣ ನಡೆಯುತ್ತಿರುವುದರಿಂದ 2 ಸಾವಿರ ಅಂಗಡಿಗಳಲ್ಲಿ ಪಡಿತರ ವಿತರಣೆ ವಿಳಂಬವಾಗುತ್ತಿದೆ. ಜನವರಿ ತಿಂಗಳ ಪಡಿತರ ವಿಳಂಬ­ವಾಗಿರುವ ಕಡೆ ಫೆ. 5ರವರೆಗೂ ವಿತರಿಸ ಲಾಗುವುದು. ಫೆಬ್ರುವರಿ ಅಂತ್ಯದೊಳಗೆ ವ್ಯವಸ್ಥೆ ಸರಿಹೋಗಲಿದೆ ಎಂದು  ವಿವರಿಸಿದರು. 
 
**
‘ಕೂಪನ್ ವ್ಯವಸ್ಥೆ ಜಾರಿಯಿಂದ  ಶೇ 15ರಷ್ಟು ಹಣ ಉಳಿತಾಯ’
ಮೈಸೂರು: ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಕೂಪನ್ ವ್ಯವಸ್ಥೆ ಜಾರಿ ಮಾಡುವುದರಿಂದ ಶೇ 15ರಷ್ಟು ಹಣ ಉಳಿತಾಯವಾಗಲಿದೆ ಎಂದು ಹರ್ಷ ಗುಪ್ತ ತಿಳಿಸಿದರು.
 
ಜ. 31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಿದರೂ ಅದು ರಾಜ್ಯದಾದ್ಯಂತ ವ್ಯವಸ್ಥಿತವಾಗಿ ಜಾರಿಗೆ ಬರಲು ಇನ್ನೆರಡು ತಿಂಗಳು ಹಿಡಿಯುವ ಸಾಧ್ಯತೆ ಇದೆ. ಈ ಮೊದಲು ಖಾಸಗಿ ಫೋಟೊ ಸೇವಾ ಕೇಂದ್ರ ಹಾಗೂ ಮೊಬೈಲ್ ಮೂಲಕ ಮಾತ್ರ ಕೂಪನ್ ವಿತರಣೆಗೆ ಅವಕಾಶ ಇತ್ತು. ಇದೀಗ ನ್ಯಾಯಬೆಲೆ ಅಂಗಡಿಗೂ ಸೇವೆಯನ್ನು ವಿಸ್ತರಿಸಿರುವುದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು
 
ಆಧಾರ ಸಂಖ್ಯೆ ಜತೆ ಜತೆಯಾಗಿರುವ ಮೊಬೈಲ್ ಸಂಖ್ಯೆಯನ್ನು 161ಗೆ ಕರೆ ಮಾಡಿ ಕೋಡ್ ಸಂಖ್ಯೆಯನ್ನು ಪಡೆಯಬಹುದು. ಇದನ್ನೇ ಕೂಪನ್ ತರಹ ಬಳಸಬಹುದು. 
 
ಒಟ್ಟು 4.10 ಲಕ್ಷ ಕೋಟಿ ಕುಟುಂಬಗಳಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಆಧಾರ್ ಜೋಡಣೆಯಿಂದ 65 ಲಕ್ಷ ನಕಲಿ ಪಡಿತರ ಚೀಟಿದಾರರು ಪತ್ತೆಯಾಗಿದ್ದಾರೆ. ಸದ್ಯ, 3.40 ಕೋಟಿ ಕುಟುಂಬಗಳಿಗೆ ಪಡಿತರ ನೀಡಲಾಗುತ್ತಿದೆ. ಅರ್ಹ ಫಲಾನುಭವಿ ಇದ್ದರೂ ಸೂಕ್ತ ದಾಖಲೆ ಒದಗಿಸಿದರೆ ಪಡಿತರ ಚೀಟಿಯನ್ನು ನೀಡಲಾಗುವುದು ಎಂದು ಹೇಳಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT