ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತ್ಯಕ್ಕೆ ಜನಪದ ಮೂಲ ಬೇರು’

ರಾಜ್ಯಮಟ್ಟದ ಜನಪದ ಗೀತಗಾಯನ ಸ್ಪರ್ಧೆ
Last Updated 30 ಜನವರಿ 2017, 7:56 IST
ಅಕ್ಷರ ಗಾತ್ರ

ರಾಮನಗರ: ‘ನಾಡಿನ ಎಲ್ಲಾ ಸಾಹಿತ್ಯಕ್ಕೂ ಮೂಲವಾದದು ಜನಪದ ಸಾಹಿತ್ಯವಾಗಿದೆ’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ರಾಜೇಗೌಡ ಹೊಸಹಳ್ಳಿ ಅಭಿಪ್ರಾಯಪಟ್ಟರು.

ಇಲ್ಲಿನ ಜಾನಪದ ಲೋಕದಲ್ಲಿ ಎಚ್‌.ಎನ್. ನಂಜರಾಜ್‌ ಸ್ಮರಣಾರ್ಥ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಶನಿವಾರ ನಡೆದ ರಾಜ್ಯ ಮಟ್ಟದ ಜನಪದ ಗೀತಗಾಯನ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.

‘ಇಂದು ದೇಶದ ಬಹುತೇಕ ಹಳ್ಳಿಗಳಲ್ಲಿ ಜನಪದ ಸಾಹಿತ್ಯ ಕಣ್ಮರೆಯಾಗುತ್ತಿರುವುದು ವಿಷಾದದ ಸಂಗತಿ. ಇದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದರು.
‘ಈ ಮೊದಲು ಜನಪದ ಸಾಹಿತ್ಯ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿತ್ತು. ಆದರೆ, ಇದು ದ್ವಂದ್ವಾರ್ಥಗಳಿಂದ ಮೂಲ ಸಾಹಿತ್ಯ ಮರೆಯಾಗುತ್ತಿದೆ.  ಇಂದು ನಾವೆಲ್ಲರೂ ಈ ಸಾಹಿತ್ಯವನ್ನು ಮರೆಯುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜನಪದ ಸಾಹಿತ್ಯ ಎಲ್ಲ ಭಾಷೆಗಳ ತವರು ಆಗಿದೆ. ಹಲವಾರು ಶತಮಾನಗಳಿಂದ ಬಾಯಿಯಿಂದ ಬಾಯಿಗೆ ಬಂದಿರುವ ಈ ಸಾಹಿತ್ಯ ಬರವಣಿಗೆ ರೂಪದಲ್ಲಿರುವುದು ಅತ್ಯಲ್ಪ. ಆದರೆ ನಶಿಸಿ ಹೋಗುವ ಮುನ್ನ ಇದನ್ನು ತಿಳಿದುಕೊಳ್ಳಬೇಕಿದೆ. ನಮ್ಮ ಪೂರ್ವಜರ ಬೀಸುಕಲ್ಲು ಹಾಡು, ಹಂತಿ ಹಾಡು, ಲಾವಣಿ ಪದ, ಲಾಲಿಹಾಡು, ಸೋಬಾನ, ಕುಟ್ಟುವ ಹಾಡು ಸೇರಿದಂತೆ ಜನಪದ ಪದಗಳು ಮನೆಮಾತಾಗಿದ್ದವು’ ಎಂದು ತಿಳಿಸಿದರು.

ಗಾಯನ ಸ್ಪರ್ಧೆ ಉದ್ಘಾಟಿಸಿದ ಕರ್ನಾಟಕ ಜಾನಪದ ಪರಿಷತ್ತಿನ ವ್ಯವಸ್ಥಾಪಕ ನಿರ್ದೇಶಕಿ ಇಂದಿರಾ ಬಾಲಕೃಷ್ಣ ಮಾತನಾಡಿ ‘ಆಧುನಿಕತೆಯ ಭರಾಟೆಯಲ್ಲಿ ಮಹಿಳೆಯರನ್ನು, ತಂದೆ–-ತಾಯಿ ಹಾಗೂ ಗುರು–ಹಿರಿಯರನ್ನು ಗೌರವಭಾವದಿಂದ ಕಾಣುವುದನ್ನೇ ಮರೆತಿದ್ದೇವೆ. ಇದು ಒಳ್ಳೆಯ ಬೆಳವಣಿಯಲ್ಲ. ಸಮಾಜದಲ್ಲಿ ಜನರು ಉತ್ತಮವಾದ ಆದರ್ಶ ಜೀವನ ನಡೆಸಲು ಜಾನಪದವು ಕೈಗನ್ನಡಿಯಂತಿದೆ’ ಎಂದು ತಿಳಿಸಿದರು.

‘ನಮ್ಮ ಹಳ್ಳಿಯ ಜನರ ಬದುಕಲ್ಲಿ ಬೆರೆತಿರುವ ಜಾನಪದದಲ್ಲಿ ಉತ್ತಮ ಮಾರ್ಗದರ್ಶನ ಹಾಗೂ ಸಾರಸತ್ವ ಇದೆ. ಜನರ ಕಲಾಶಕ್ತಿಯನ್ನು ಮೂಡಿಸುತ್ತಿದ್ದ ರಂಗಭೂಮಿ, ಪೌರಾಣಿಕ ನಾಟಕ, ಸಿನಿಮಾ ಮತ್ತು ಧಾರಾವಾಹಿಗಳ ಅಬ್ಬರದಲ್ಲಿ ಕಡಿಮೆಯಾಗಿವೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಾನಪದದ ಉಳಿವಿಗೆ ಎಲ್ಲರೂ ಶ್ರಮಿಸಬೇಕಿದೆ’ ಎಂದು ತಿಳಿಸಿದರು. ಜಾನಪದ ವಿದ್ವಾಂಸ ಡಾ.ಹಿ.ಶಿ. ರಾಮಚಂದ್ರೇಗೌಡ, ಸ್ಪರ್ಧೆಯ ತೀರ್ಪುಗಾರರಾದ ಡಾ.ರಂಗಾರೆಡ್ಡಿ ಕೋಡಿರಾಂಪುರ, ಹೊಳಗೇರಿ ಲೋಕೇಶ್, ನಾಗನಹಳ್ಳಿ ಮಲ್ಲಿಕಾರ್ಜುನ್‌, ಕರ್ನಾಟಕ ಜಾನಪದ ಪರಿಷತ್ತಿನ ಪದಾಧಿಕಾರಿಗಳಾದ ಕಲ್ಪನಾ ನಂಜರಾಜ್‌, ಆದಿತ್ಯಾ, ಜಾನಪದ ಲೋಕದ ಆಡಳಿತಾಧಿಕಾರಿ ಡಾ. ಕುರುವ ಬಸವರಾಜ್‌, ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT