ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳಾಗದಿರುವುದು ಕಾಯಿಲೆಯಲ್ಲ’

ಗರ್ಭಗುಡಿ ಐ.ವಿ.ಎಫ್‌. ಸೆಂಟರ್‌ ಆಯೋಜಿಸಿದ್ದ ಬಂಜೆತನ ನಿವಾರಣೆ ಶಿಬಿರ
Last Updated 30 ಜನವರಿ 2017, 8:45 IST
ಅಕ್ಷರ ಗಾತ್ರ

ಕನಕಪುರ:  ಮಕ್ಕಳಾಗದಿರುವುದು ಒಂದು ಕಾಯಿಲೆಯಲ್ಲ, ದಂಪತಿ ಸರಿಯಾದ ಕ್ರಮ ಅನುಸರಿಸಿ ಅಗತ್ಯ ಔಷಧಿ ಪಡೆದುಕೊಂಡರೆ ಮಕ್ಕಳಾಗುವ ಸಾಧ್ಯತೆಯಿದೆ ಎಂದು ಗರ್ಭಗುಡಿ ಐ.ವಿ.ಎಫ್‌. ಸೆಂಟರ್‌ನ ಡಾ. ಆಶಾ.ಎಸ್‌.ವಿಜಯಕುಮಾರ್‌ ತಿಳಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಗ್ರಾಮಾಂತರ ಶಾಲೆಯ ಆವರಣದಲ್ಲಿ ಹಾರೋಹಳ್ಳಿ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ಗರ್ಭಗುಡಿ ಐ.ವಿ.ಎಫ್‌. ಸೆಂಟರ್‌ ಭಾನುವಾರ ಆಯೋಜಿಸಿದ್ದ ಬಂಜೆತನ ನಿವಾರಣೆ ಉಚಿತ ತಪಾಸಣೆ ಮತ್ತು ಆಪ್ತ ಸಮಾಲೋಚನೆ ಶಿಬಿರದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ವಿದ್ಯಾವಂತರು ಮತ್ತು ನಗರದ ನಿವಾಸಿಗಳಿಗೆ ಮಕ್ಕಳಾಗದಿರುವಿಕೆಯ ಕಾರಣ ಮತ್ತು ಅದರ ನಿವಾರಣೆಯ ಬಗ್ಗೆ ತಿಳಿದಿರುತ್ತದೆ. ಗ್ರಾಮೀಣ ಭಾಗದ ಜನತೆಗೆ ಲೈಂಗಿಕತೆ ಎನ್ನುವುದು ತುಂಬಾ ಗೌಪ್ಯ ಸಂಗತಿ. ತಮಗಾಗುತ್ತಿರುವ ಸಮಸ್ಯೆಯನ್ನು ಯಾರ ಬಳಿಯು ಹೇಳಿಕೊಳ್ಳಲಾಗದೆ ಮುಜುಗರಕ್ಕೆ ಒಳಗಾಗಿ ಸಮಸ್ಯೆ ತಂದುಕೊಳ್ಳುತ್ತಾರೆ ಎಂದರು.

ಮಕ್ಕಳಾಗದಿದ್ದರೆ ದೇವರ ಮೊರೆ ಹೋಗುತ್ತಾರೆ, ಹರಕೆ ಪೂಜೆ ಪುರಸ್ಕಾರಗಳನ್ನು ಮಾಡುತ್ತಾ ವೈದ್ಯರ ಬಳಿಯೇ ಬರುವುದಿಲ್ಲ. ಅವರ ಬಳಿ ಹೋಗಿ ಹೇಗೆ ಹೇಳಿಕೊಳ್ಳುವುದು ಎಂಬ ಭಯವು ಇರುತ್ತದೆ ಎಂದು ತಿಳಿಸಿದರು.

ಗ್ರಾಮೀಣ ಜನತೆಯ ತಪ್ಪು ಅಭಿಪ್ರಾಯವನ್ನು ದೂರ ಮಾಡಿ ದಂಪತಿ ಜತೆ ಸಮಾಲೋಚನೆ ನಡೆಸಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಅವಕಾಶವಿದ್ದವರಿಗೆ ಮಕ್ಕಳಾಗುವಂತೆ ಮಾಡಿಕೊಡುವ ಉದ್ದೇಶದಿಂದ ರೋಟರಿ ಸಂಸ್ಥೆಯೊಂದಿಗೆ ಉಚಿತ ತಪಾಸಣಾ ಶಿಬಿರ ನಡೆಸುತ್ತಿರುವುದಾಗಿ ಹೇಳಿದರು.

ಹಾರೋಹಳ್ಳಿ ರೋಟರಿ ಸಂಸ್ಥೆಯ ಅಧ್ಯಕ್ಷ ಸಿ.ಎನ್‌.ಪ್ರಾಣೇಶ್‌ ಮಾತನಾಡಿ ಕುಟುಂಬಗಳಲ್ಲಿ ಬಂಜೆತನ ಅಥವಾ ಮಕ್ಕಳಾಗದಿರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದ ಕುಟುಂಬಗಳು ಬೇರ್ಪಡುತ್ತವೆ. ಮಗನಿಗೆ ಮತ್ತೊಂದು ಮದುವೆ ಮಾಡುವ ಸಂದರ್ಭಗಳು ಒದಗಿ ಬರುತ್ತವೆ. ಇಂತಹ ಸಮಸ್ಯೆಯನ್ನು ಪರಿಹರಿಸಲು ರೋಟರಿ ಸಂಸ್ಥೆಯು ನಿರಂತರವಾಗಿ ಗ್ರಾಮೀಣ ಪ್ರದೇಶದಲ್ಲಿ ತಪಾಸಣೆ ಶಿಬಿರ ನಡೆಸುತ್ತಿದೆ ಎಂದರು.

ಮಕ್ಕಳಾಗದಿರುವ ದಂಪತಿ ಒಟ್ಟಿಗೆ ಶಿಬಿರಗಳಿಗೆ ಬಂದರೆ ಅವರನ್ನು ಪ್ರತ್ಯೇಕವಾಗಿ ಆಪ್ತ ಸಮಾಲೋಚನೆ ನಡೆಸಿ ಅವರಲ್ಲಿರುವ ಸಮಸ್ಯೆ ಅರಿತು ಮುಂದಿನ ಪರಿಹಾರ ಕೊಡುತ್ತಾರೆ, ಜನತೆಗೆ ಅನುಕೂಲವಾಗಲೆಂದು ವಿವಿಧ ತಪಾಸಣಾ ಶಿಬಿರ ನಡೆಸುತ್ತಿದ್ದೇವೆ, ಅದರಲ್ಲಿ ಬಂಜೆತನ ನಿವಾರಣೆ ತಪಾಸಣಾ ಶಿಬಿರವು ಪ್ರಮುಖವಾದುದು ಎಂದರು.

ಶಿಬಿರವು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ನಡೆಯಿತು. 30 ಕ್ಕೂ ಹೆಚ್ಚು ದಂಪತಿ ತಪಾಸಣೆ ಮಾಡಿಸಿಕೊಂಡರು. ಡಾ.ಆಶಾ.ಎಸ್‌.ವಿಜಯಕುಮಾರ್‌ ಮತ್ತು ತಂಡದವರು ತಪಾಸಣಾ ಶಿಬಿರ ನಡೆಸಿಕೊಟ್ಟರು.

ಹಾರೋಹಳ್ಳಿ ರೋಟರಿ ಸಂಸ್ಥೆಯ ಉಪಾಧ್ಯಕ್ಷ  ಚಂದ್ರೇಗೌಡ, ಕಾರ್ಯದರ್ಶಿ ಮಹಮ್ಮದ್‌ ಏಜಾಸ್‌, ಖಜಾಂಚಿ ಹರಿಪ್ರಸಾದ್‌, ಸದಸ್ಯರಾದ ಕಾಂತರಾಜು, ಭರತ್‌, ತಿಮ್ಮೇಗೌಡ, ಆನಂದ, ಹೊನ್ನೇಗೌಡ, ಶ್ರೀನಿವಾಸ  ಇದ್ದರು.

**

ಹೆಚ್ಚಿನ ಜನತೆಗೆ ಬಂಜೆತನ ನಿವಾರಣೆಗೆ ಪ್ರತ್ಯೇಕ ವೈದ್ಯರು ಇರುತ್ತಾರೆ, ಅವರಲ್ಲಿ ಸಮಸ್ಯೆ ಹೇಳಿಕೊಂಡು ಪರಿಹರಿಸಿಕೊಳ್ಳಬಹುದೆಂಬ ವಿಚಾರವೇ ತಿಳಿದಿರುವುದಿಲ್ಲ
- ಡಾ. ಆಶಾ ವಿಜಯಕುಮಾರ್‌, ಗರ್ಭಗುಡಿ ಐ.ವಿ.ಎಫ್‌. ಸೆಂಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT