ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಕಾಮಗಾರಿ: ರಾಜ್ಯ ಸರ್ಕಾರ ವಿಫಲ

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆರೋಪ
Last Updated 30 ಜನವರಿ 2017, 8:59 IST
ಅಕ್ಷರ ಗಾತ್ರ
ಮಡಿಕೇರಿ: ರಾಜ್ಯದಲ್ಲಿ ಬರ ತಾಂಡವವಾಡುತ್ತಿದ್ದು, ಸರ್ಕಾರ ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಸಂಪೂರ್ಣ ವಿಫಲವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆರೋಪಿಸಿದರು.
 
ನಗರದಲ್ಲಿ ಭಾನುವಾರ ನಡೆದ ಖಾಸಗಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘139 ತಾಲ್ಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತವೆಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಇನ್ನೂ 25ಕ್ಕೂ ಹೆಚ್ಚು ತಾಲ್ಲೂಕಿನಲ್ಲಿ ಬರವಿದೆ. ರಾಜ್ಯದಲ್ಲಿ ಬರದ ಭೀಕರತೆಯಿದೆ. ಯುದ್ಧೋಪಾದಿಯಲ್ಲಿ ಸರ್ಕಾರ ಬರ ಕಾಮಗಾರಿ ಕೈಗೊಳ್ಳಬೇಕಿತ್ತು. ಆದರೆ, ಮೋದಿ ಅವರನ್ನು ಟೀಕೆ ಮಾಡುತ್ತಲೇ ಕಾಲಹರಣ ಮಾಡುತ್ತಿದೆ’ ಎಂದು ಕುಟುಕಿದರು.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಆಪಾದಿಸಿದರು.
 
‘ಸಣ್ಣ ಕೈಗಾರಿಕೆ ಸಚಿವ ರಮೇಶ್‌ ಜಾರಕಿಹೊಳಿ ಅವರೇ ನನ್ನ ಬಳಿ ಘೋಷಿಸದ ₹ 162 ಕೋಟಿ ಮೌಲ್ಯದ ಆಸ್ತಿಯಿದೆ ಎಂದು ಒಪ್ಪಿಕೊಂಡಿದ್ದಾರೆ. ಸಚಿವ ಸ್ಥಾನದಲ್ಲಿ ಮುಂದುವರಿಯಲು ಅವರಿಗೆ ಯಾವುದೇ ನೈತಿಕತೆ ಇಲ್ಲ. ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರೆ ಯಾವ ಮಂತ್ರಿಗಳು ಸಚಿವ ಸಂಪುಟದಲ್ಲಿ ಉಳಿಯುವುದಿಲ್ಲ' ಎಂದು ರಮೇಶ್‌ ಅವರೇ ಪ್ರತಿಕ್ರಿಯಿಸಿದ್ದಾರೆ. ಹಾಗಿದ್ದ ಮೇಲೆ ಎಲ್ಲ ಸಚಿವರೂ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಸಚಿವರೇ ಒಪ್ಪಿಕೊಂಡಾಂತಾಗಿದೆ ಎಂದು ದೂರಿದರು. 
 
ರಮೇಶ್‌ ಜಾರಕಿಹೊಳಿ ಅವರು ಚುನಾವಣಾ ಆಯೋಗ ಹಾಗೂ ಲೋಕಾಯುಕ್ತಕ್ಕೆ ಸುಳ್ಳು ಆಸ್ತಿ ಸಲ್ಲಿಸಿದ್ದಾರೆ ಎಂಬುದು ಸಾಬೀತಾಗಿದೆ. ಘೋಷಣೆಗೂ ಮೀರಿ ಆಸ್ತಿ ಹೊಂದಿರುವ ರಮೇಶ್‌ ಅವರು ಸಚಿವರಾಗಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ಪುನರುಚ್ಚರಿಸಿದರು. 
 
ರಾಜಕೀಯ ಕಾರಣಕ್ಕೆ ದಾಳಿ ನಡೆದಿದ್ದರೆ ರಮೇಶ್‌ ಅವರ ಮನೆಯಲ್ಲಿ ಏಕೆ ಅಷ್ಟು ಮೊತ್ತದ ಹಣ ಸಿಗುತ್ತಿತ್ತು. ಬಿಜೆಪಿಗೂ ಐಟಿ ದಾಳಿಗೂ ಸಂಬಂಧವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
 
ಕಾಂಗ್ರೆಸ್‌ ಮುಕ್ತ ರಾಜ್ಯ: ಎಸ್‌.ಎಂ. ಕೃಷ್ಣ ಅವರು ಹಿರಿಯ ಮುತ್ಸದ್ದಿ. ಕಾಂಗ್ರೆಸ್‌ ದುರಾಡಳಿತದಿಂದ ಬೇಸತ್ತು ರಾಜೀನಾಮೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆಯ ಮೂಲಕ ಕಾಂಗ್ರೆಸ್‌ ಅವನತಿ ಆರಂಭಗೊಂಡಿದೆ. ದೇಶದಲ್ಲಿ ಕಾಂಗ್ರೆಸ್‌ ಮುಕ್ತವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಮುಕ್ತವಾಗುವ ಕಾಲ ಸನಿಹಗೊಂಡಿದೆ ಎಂದು ಎಚ್ಚರಿಸಿದರು.
 
ಕೇಂದ್ರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ‘ಶನಿವಾರ ಬೆಂಗಳೂರಿನಲ್ಲಿ ನಡೆದ ನನ್ನ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು. ರಾಜೀನಾಮೆ ಕೊಟ್ಟು ಎಲ್ಲೊ ಇರಬೇಕಾದ ಅವರು, ದೆಹಲಿಯಿಂದ ನೇರವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸುಸಂಸ್ಕೃತ, ಸಜ್ಜನ ರಾಜಕಾರಣಿ, ಅಂತಹವರು ವಿರಳ. ಕಾಂಗ್ರೆಸ್‌ ಪಕ್ಷಕ್ಕೆ ಹಲವು ವರ್ಷ ದುಡಿದರೂ ಪಕ್ಷ ಆಘಾತ ಉಂಟು ಮಾಡಿದೆ’ ಎಂದು ಹೇಳಿದರು.
 
**
ಕಂಬಳದಲ್ಲಿ ಪ್ರಾಣಿ ಹಿಂಸೆ ಇಲ್ಲ
ಮಡಿಕೇರಿ: ‘ಕರಾವಳಿ ಪ್ರದೇಶ ಜನಪದ ಕ್ರೀಡೆ ಕಂಬಳದಲ್ಲಿ ಯಾವುದೇ ರೀತಿಯಲ್ಲೂ ಪ್ರಾಣಿ ಹಿಂಸೆ ಇಲ್ಲ. ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಕಂಬಳ ಪ್ರೋತ್ಸಾಹಿಸಲು ಕರಾವಳಿಗೆ ಭಾಗಕ್ಕೆ ₹ 20 ಲಕ್ಷ ಅನುದಾನ ಬಿಡುಗಡೆ ಮಾಡಿದ್ದೆ’ ಎಂದು ಸದಾನಂದಗೌಡ ಹೇಳಿದರು.
 
‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಇದಕ್ಕೆ ನನ್ನ ಅವಧಿಯಲ್ಲೇ ಮುನ್ನುಡಿ ಬರೆಯಲಾಗಿತ್ತು’ ಎಂದು ಹೇಳಿದರು.
 
**
ಪಕ್ಷಕ್ಕೆ ಹಲವು ವರ್ಷ ದುಡಿದಿದ್ದರೂ ಕೃಷ್ಣ ಅವರಿಗೆ ಕಾಂಗ್ರೆಸ್‌ ಆಘಾತ ತಂದಿದೆ. ಹಾಗಿದ್ದರೆ ಕಾಂಗ್ರೆಸ್‌ ರಾಜ್ಯದ ಜನರಿಗೆ ಯಾವ ಮಟ್ಟದಲ್ಲಿ ದ್ರೋಹ ಎಸಗಿರಬಹುದು
-ಡಿ.ವಿ.ಸದಾನಂದಗೌಡ
ಕೇಂದ್ರ ಸಚಿವ
 
**
ಕಾಂಗ್ರೆಸ್‌ನಲ್ಲಿ ಹಿರಿಯರಿಗೆ ಬೆಲೆ ಸಿಗುತ್ತಿಲ್ಲ. ಎಸ್‌.ಎಂ.ಕೃಷ್ಣ ಅವರ ರಾಜೀನಾಮೆಯ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅವನತಿ ಆರಂಭಗೊಂಡಿದೆ
-ಜಗದೀಶ ಶೆಟ್ಟರ್‌
ವಿಧಾನಸಭೆ ವಿರೋಧ ಪಕ್ಷದ ನಾಯಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT