ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧಿ ಸಸ್ಯಗಳ ಕಣಜ ನಾಗರಹೊಳೆ

643 ಚದರ ಕಿ.ಮೀ ವಿಸ್ತೀರ್ಣ ಔಷಧಿ ಸಸ್ಯಗಳ ಭಂಡಾರ; ಚಿಣ್ಣಪ್ಪ
Last Updated 30 ಜನವರಿ 2017, 9:07 IST
ಅಕ್ಷರ ಗಾತ್ರ
ಗೋಣಿಕೊಪ್ಪಲು: ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದಲ್ಲಿ ಸುಮಾರು 735 ಔಷಧಿ ಗಿಡಗಳಿವೆ ಎಂದು  ವೈಲ್ಡ್‌ ಲೈಫ್‌ ಫಸ್ಟ್‌ನ ಕೆ.ಎಂ.ಚಿಣ್ಣಪ್ಪ ಹೇಳಿದರು.
 
ನಾಗರಹೊಳೆ ಅರಣ್ಯ ವೀಕ್ಷಣೆಗೆ ಬಂದಿದ್ದ  ಬೆಂಗಳೂರು ಸರ್ಕಾರಿ  ಆಯುರ್ವೇದ  ವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ನಾಗರಹೊಳೆ ಅರಣ್ಯದ ಬಗ್ಗೆ ಮಾಹಿತಿ ನೀಡಿದ ಅವರು, ಇಡೀ ಅರಣ್ಯವನ್ನು ಸುತ್ತು ಹಾಕಿದರೆ ಮತ್ತಷ್ಟು ಔಷಧಿ ಸಸ್ಯಗಳು ಕಂಡು ಬರಲಿವೆ ಎಂದು ಹೇಳಿದರು.
 
643 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ನಾಗರಹೊಳೆ ಉದ್ಯಾನ ಔಷಧಿ ಸಸ್ಯಗಳ ಭಂಡಾರವಾಗಿದೆ. ಅಮೂಲ್ಯ ಗಿಡಮೂಲಿಕೆಗಳನ್ನು ಹೊಂದಿರುವ ಅರಣ್ಯ ಪ್ರದೇಶ ಇತೀಚಿನ ವರ್ಷಗಳಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಬೆಂಕಿಗೆ ಆಹುತಿಯಾಗುತ್ತಿದೆ. ಇದರಿಂದ ಕೇವಲ ಔಷಧಿ ಸಸ್ಯಗಳು ಮಾತ್ರವಲ್ಲ ಜೀವ ಜಂತುಗಳು ವಿನಾಶದ ಅಂಚಿಗೆ ತಲುಪಿವೆ ಎಂದು ಆತಂಕ ವ್ಯಕ್ತಪಡಿಸಿದರು. 
 
ಮಾನವ ಪ್ರೇರಿತ ಆಧುನಿಕ ಭಸ್ಮಾಸುರರ ಕೆಟ್ಟ ಕೃತ್ಯಗಳಿಗೆ  ನೆಲಮಟ್ಟದಲ್ಲಿ ಗೂಡುಕಟ್ಟಿ ವಾಸಿಸುವ ಪ್ರಾಣಿ-ಪಕ್ಷಿ ಸಂಕುಲಗಳು, ಆನೆಗಳಿಗೆ ವೈದ್ಯರಂತೆ ಸೇವೆ ಸಲ್ಲಿಸುವ ಜೇಡಗಳು, ಕಾಡನ್ನು ಉಳಿಸಲು ಪ್ರಮುಖ ಪಾತ್ರ ನಿರ್ವಹಿಸುವ ಕ್ರಿಮಿ ಕೀಟಗಳು, ಉರಗ, ಮೊಲ ಇತ್ಯಾದಿ ಜೀವಿಗಳ ಪ್ರಾಣಕ್ಕೆ ಕಂಟಕವಾಗಿದೆ ಎಂದು ಹೇಳಿದರು.
 
ಮೈಸೂರು ಸರ್ಕಾರಿ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಂಶುಪಾಲ  ಡಾ.ಸತ್ಯನಾರಾಯಣ ಭಟ್ ಹಲವು ಔಷಧಿಯುಕ್ತ ಗಿಡಮರಗಳ ಪರಿಚಯ ಮಾಡಿಕೊಟ್ಟರು. ಇವುಗಳನ್ನು ಉಳಿಸಿ ಬೆಳೆಸುವ ಹೊಣೆ ಎಲ್ಲರ ಮೇಲಿದೆ ಎಂದು ಹೇಳಿದರು. ಪ್ರಕೃತಿ ನಡಿಗೆಯ ನಂತರ ವೈದ್ಯರ ತಂಡಕ್ಕೆ ಸ್ಲೈಡ್ ಶೋ ಮೂಲಕ ಮಾಹಿತಿ ನೀಡಲಾಯಿತು. 
 
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಕೇತ್ ಪೂವಯ್ಯ, ಗೋಣಿಕೊಪ್ಪಲು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ.ಬೋಪಣ್ಣ, ಸಂಯೋಜಕ ಟಿ.ಎಲ್.ಶ್ರೀನಿವಾಸ್, ಸ್ಥಳೀಯರಾದ ಸುಮನ್, ಡಾ.ಮದನ್, ಡಾ.ಟಿ.ಚೈತ್ರಾ, ಡಾ. ವಿಜಯಲಕ್ಷ್ಮಿ, ಡಾ.ಸುಜಿತ್ ಪ್ರಕಾಶ್ ರೆಡ್ಡಿ, ಡಾ. ಅಭಿಜ್ಞಾ ನರಸಿಂಹನ್ ಮೊದಲಾದವರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT