ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರಿಗೆ ಮಿಡಿಯುವ ಮನ

Last Updated 30 ಜನವರಿ 2017, 19:30 IST
ಅಕ್ಷರ ಗಾತ್ರ

1992ರ ಸೆಪ್ಟೆಂಬರ್ ತಿಂಗಳು ಶಿರಸಿ ಮತ್ತು ಯಲ್ಲಾಪುರ ಸೀಮೆಯ ಜನರಿಗೆ ಮರೆಲಾಗದ ದಿನಗಳು. ಕಿರಾಣಿ ಅಂಗಡಿ, ಹಾಲು ಸೊಸೈಟಿ, ಪಂಚಾಯಿತಿ ಪೌಳಿ, ತಿಥಿ ಮನೆ, ದೇವಕಾರ್ಯದ ಊಟದ ಪಂಕ್ತಿ ಎಲ್ಲೆಡೆಗೂ ಒಂದೇ ಸುದ್ದಿ ‘ಬೇಡ್ತಿಗೆ ಅಣೆಕಟ್ಟು ಕಟ್ತವಡಲ್ರೊ, ಮುಂದೆಂತ ಮಾಡದು?’ ಕೃಷಿಕರು ತೋಟ, ಗದ್ದೆಗಳಿಗೆ ಹೋಗುವ ಉತ್ಸಾಹವನ್ನೇ ಕಳೆದುಕೊಂಡು ಹತಾಶರಾಗಿದ್ದರು ‘ಮುಳುಗುವ ಐಶ್ವರ್ಯಕ್ಕೆ ಮತ್ಯಾಕೆ ಆರೈಕೆ’ ಎಂದು. 

ರೈತರ ಈ ಸಾಮೂಹಿಕ ಸಂಕಟಕ್ಕೆ ಹೆಗಲು ಕೊಟ್ಟವರು ಯುವ ಸನ್ಯಾಸಿಯೊಬ್ಬರು. ಲೌಕಿಕ ಬದುಕಿನ ಸೆಳೆತದಿಂದ ಅಧ್ಯಾತ್ಮಕ್ಕೆ ಹೊರಳಿ ಆಗಿನ್ನೂ ಒಂದೂವರೆ ವರ್ಷವಾಗಿತ್ತಷ್ಟೇ. 24ರ ಹರೆಯದ ಸನ್ಯಾಸಿಯ ದೇಹದಲ್ಲಿ ಬಿಸಿರಕ್ತದ ಯುವ ಚೈತನ್ಯ ಸ್ಫುರಿಸುವ ಸಮಯ. ಜನರ ಪ್ರತಿಭಟನೆ, ಪರಿಸರವಾದಿಗಳ ಹೇಳಿಕೆ, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಈ ಎಲ್ಲ ಬೆಳವಣಿಗೆಗಳನ್ನು ಶಾಂತಚಿತ್ತದಿಂದ ಗಮನಿಸಿದ ಯುವ ಸನ್ಯಾಸಿ ಮೌನ ಮುರಿದು ‘ನಾವು ಈಗ ಅಹಿಂಸಾತ್ಮಕ ಕುರುಕ್ಷೇತ್ರಕ್ಕೆ ಕಾಲಿಡುತ್ತಿದ್ದೇವೆ.

ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ’ ಎಂದು ಘೋಷಿಸಿಬಿಟ್ಟರು. ಮಂಕಾಗಿದ್ದ ಅನ್ನದಾತನ ಮುಖದಲ್ಲಿ ಮಂದಹಾಸ ಮೂಡಿತು. ಕುರುಕ್ಷೇತ್ರಕ್ಕೆ ಹೊರಡಲು ಜನರು ಅಣಿಯಾದರು. ವಯೋವೃದ್ಧರು, ಬಾಣಂತಿಯರು, ಬಾಲರನ್ನು ಮನೆಯಲ್ಲಿ ಬಿಟ್ಟು ಇಡಿ ಇಡೀ ಹಳ್ಳಿಗಳೇ ಕಾವಿಧಾರಿಯ ಹಿಂದೆ ಹೆಜ್ಜೆ ಹಾಕಿದವು. ಮಳೆಗಾಲದ ಸಂಭ್ರಮ ಮುಗಿಸಿ ತಿಳಿನೀರು ತುಂಬಿಕೊಂಡು ಭೋರ್ಗರೆಯುತ್ತಿದ್ದ ಬೇಡ್ತಿ ನದಿಯ ಕಣಿವೆಯಲ್ಲಿ ಸಹಸ್ರಾರು ಜನರ ಕಾಲ್ನಡಿಗೆಯ ಸದ್ದು ಮಾರ್ದನಿಸಿತು.

ಸ್ವರ್ಣವಲ್ಲಿ ಮಠದಿಂದ ಹೊರಟ ಬೃಹತ್ ಪಾದಯಾತ್ರೆ ಐದು ದಿನಗಳಲ್ಲಿ ಸುಮಾರು 100 ಕಿಲೋ ಮೀಟರ್ ಕ್ರಮಿಸಿ ಯೋಜಿತ ಬೇಡ್ತಿ ಅಣೆಕಟ್ಟು ನಿರ್ಮಾಣವಾಗುವ ಯಲ್ಲಾಪುರ ತಾಲ್ಲೂಕು ಮಾಗೋಡಿನಲ್ಲಿ ಸಮಾವೇಶಗೊಂಡಿತು. ಎಕರೆಗಟ್ಟಲೆ ಹರವಿಕೊಂಡಿದ್ದ ಬಟಾ ಬಯಲು ಚಿಕ್ಕದಾಗಿ ಕಂಡಿತು. 35ಸಾವಿರ ಜನರು ಬಯಲಿನಲ್ಲಿ ಕಿಕ್ಕಿರಿದು ಸೇರಿದ್ದರು.

ಐದು ದಿನ ಸತತ ನಡಿಗೆಯಲ್ಲಿ ಸಾಗಿದ್ದ ಸನ್ಯಾಸಿ, ಅಂಗಾಲಿಗೆ ಎದ್ದಿದ್ದ ಬೊಬ್ಬೆಗಳಿಗೆ ನೀರು ಚಿಮುಕಿಸಿಕೊಂಡು ಎತ್ತರದ ವೇದಿಕೆಯೇರಿ ಕೊಂಚವೂ ವಿಚಲಿತರಾಗದೇ ಪರಿಸರದ ರಕ್ಷಣೆಯ ಪರ ಆಡಿದ ನಿರರ್ಗಳ ನುಡಿಗೆ ಅಧಿಕಾರಶಾಹಿ ಮಣಿಯಿತು. ಅರಣ್ಯ, ಕೃಷಿ ನೆಲ, ವಸತಿ ಪ್ರದೇಶವನ್ನೊಳಗೊಂಡ 10ಸಾವಿರ ಎಕರೆ ಭೂಮಿ ನುಂಗಲಿದ್ದ ಬೇಡ್ತಿ ಜಲವಿದ್ಯುತ್ ಯೋಜನೆಯ ನಿರ್ಧಾರವನ್ನು ಸರ್ಕಾರ ಹಿಂಪಡೆಯಿತು.

ಈ ಐತಿಹಾಸಿಕ ಬೇಡ್ತಿ ಚಳವಳಿಯ ಮೂಲಕ ‘ಹಸಿರು ಸ್ವಾಮೀಜಿ’ ಎಂದು ನಾಮಾಂಕಿತರಾದ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಸ್ವರ್ಣವಲ್ಲಿ ಮಠದ 54ನೇ ಪೀಠಾಧಿಪತಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಜನರು ಇಟ್ಟಿರುವ ಹೆಸರಿಗೆ ಅನ್ವರ್ಥಕವಾಗಿದ್ದಾರೆ. ನಂತರದ ದಿನಗಳಲ್ಲಿ ಮತ್ತೆ ಧುತ್ತನೆ ಬಂದೆರಗಿದ ಅಘನಾಶಿನಿ ಜಲ ವಿದ್ಯುತ್ ಯೋಜನೆ, ಗಣಿಗಾರಿಕೆ, ನದಿ ತಿರುವು, ತೀರಾ ಇತ್ತೀಚಿನ ಗಣೇಶಪಾಲ್ ಕಿರು ಅಣೆಕಟ್ಟು ಪ್ರಸ್ತಾವದ ವಿರುದ್ಧ ಸೆಟೆದುನಿಂತ ಅಧ್ಯಾತ್ಮದ ಶಕ್ತಿ ಕಣಿವೆಯ ನಿವಾಸಿಗಳ ತಲ್ಲಣಗಳನ್ನು ನಿರುಮ್ಮಳಗೊಳಿಸಿದೆ.

ಓಝೋನ್ ಪದರಕ್ಕೆ ಹಾನಿ, ತಾಪಮಾನ ಹೆಚ್ಚಳ, ಪ್ರಕೃತಿಯಲ್ಲಿ ಉಂಟಾಗುತ್ತಿರುವ ಅನಿರೀಕ್ಷಿತ ಆಪತ್ತು ಇಂಥ ವಿಷಯಗಳು ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಬಹು ಚರ್ಚಿತವಾಗಿವೆ. ನಿತ್ಯಬೆಳಗಾದರೆ ಪರಿಸರ ಸಂರಕ್ಷಣೆಯ ತುಡಿತ ಅನುರಣಿಸುತ್ತಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಜನರಲ್ಲಿ ಎರಡೂವರೆ ದಶಕಗಳಿಂದ ಈ ಜಾಗೃತಿ ಸದಾ ಜೀವಂತವಾಗಿದೆ. ಶೇ 80ರಷ್ಟು ಅರಣ್ಯ ಹೊಂದಿರುವ ಜಿಲ್ಲೆಯ ಜನರು ಕಾಡಿನ ಅವಿನಾಭಾವ ಸಂಬಂಧದೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ.

ಸಮೃದ್ಧ ಅರಣ್ಯ, ನದಿ, ಕಣಿವೆ, ಹಳ್ಳ– ತೊರೆಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಹಸಿರನ್ನು ಆಹುತಿ ಪಡೆಯುವ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜನರು ದಿಟ್ಟತನದಿಂದ ತಿರಸ್ಕರಿಸಿದ್ದಾರೆ. ಇಂತಹ ಹೋರಾಟಗಳಿಗೆ ಹಸಿರು ಸ್ವಾಮೀಜಿ ನೀಡುವ ಬೆಂಬಲ ಜನರಿಗೆ ಆನೆಬಲ ತಂದುಕೊಟ್ಟಿದೆ.

ಹಸಿರು ಹೆಜ್ಜೆ
ಉತ್ತರ ಕನ್ನಡದ ನೆತ್ತಿಯ ಮೇಲೆ ಕಿರು ಜಲ ವಿದ್ಯುತ್ ಯೋಜನೆಗಳ ತೂಗುಕತ್ತಿ ಸದಾ ತೂಗಾಡುತ್ತಲೇ ಇರುತ್ತದೆ. ಪರಿಸರ ನಾಶದ ಯೋಜನೆಗಳು ಪ್ರಸ್ತಾಪವಾದಾಗ ಅವನ್ನು ಸಾರಾಸಗಟಾಗಿ ವಿರೋಧಿಸುವ ಸ್ವರ್ಣವಲ್ಲಿ ಮಠಾಧೀಶರು 1992ರಲ್ಲೇ ಬೇಡ್ತಿ– ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.

ಪಶ್ಚಿಮ ಘಟ್ಟದ ಪರಿಸರ ರಕ್ಷಣೆಗೆ ಕಟಿಬದ್ಧವಾಗಿರುವ ಈ ಸಂಸ್ಥೆಯ ಮೂಲಕ ಜಿಲ್ಲೆಯಲ್ಲಿ ವೃಕ್ಷಾರೋಪಣ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಸ್ವರ್ಣವಲ್ಲಿ ಮಠದ ಆವರಣದಲ್ಲಿರುವ 225ಕ್ಕೂ ಅಧಿಕ ಜಾತಿಯ ಅಪರೂಪದ ಗಿಡಗಳ ‘ಸಸ್ಯ ಲೋಕ’ ಸಸ್ಯೋದ್ಯಾನವು ಕೊಳ್ಳ ಸಂರಕ್ಷಣಾ ಸಮಿತಿಯ ನೆರಳಿನಲ್ಲಿ ಪೋಷಣೆಯಾಗುತ್ತಿದೆ.

1991ರ ಫೆಬ್ರುವರಿಯಲ್ಲಿ ಸ್ವರ್ಣವಲ್ಲಿ ಮಠದ ಸಾರಥ್ಯ ವಹಿಸಿಕೊಂಡ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರ ಪೀಠಾರೋಹಣದ ರಜತೋತ್ಸವ ಆಚರಣೆಯ ವರ್ಷವಿದು. 25ನೇ ವರ್ಷದ ರಜತ ಪ್ರಭೆಯಲ್ಲಿ ಆಯೋಜಿತವಾಗಿರುವ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆಧ್ಯಾತ್ಮಿಕ, ಪರಿಸರ ಕಳಕಳಿ ಸಮ್ಮಿಳಿತಗೊಂಡ 25 ವಿಭಿನ್ನ ಕಾರ್ಯಕ್ರಮಗಳು ಬಹುತೇಕ ಮುಕ್ತಾಯದ ಹಂತದಲ್ಲಿವೆ.

ಜಿಲ್ಲೆಯಾದ್ಯಂತ ಪ್ರೌಢಶಾಲೆಗಳಲ್ಲಿ ವ್ಯಸನಮುಕ್ತ ಸಮಾಜ ಜಾಗೃತಿ, ‘ಗ್ರಾಮಾಭ್ಯುದಯ’ದ ಮೂಲಕ ಸ್ವ ಸಹಾಯ ಸಂಘಗಳ ಸಮಾವೇಶ, ವನವಾಸಿ ಸತ್ಸಂಗ ಸಮಾವೇಶ, ಭಗವದ್ಗೀತಾ ಪಠಣ ಅಭಿಯಾನ, ಸಂಸ್ಕೃತ ಶಿಬಿರ, 25 ಸಾಧಕರಿಗೆ ಸನ್ಮಾನ, ಧಾರ್ಮಿಕ ಕಾರ್ಯಕ್ರಮಗಳು, ಹೋಮ ಹವನಗಳು ನಡೆದಿವೆ.

ವಿಶ್ವ ಪರಿಸರ ದಿನಾಚರಣೆ (ಜೂ.5)ಯಿಂದ ಒಂದು ತಿಂಗಳು ನಡೆದ 25 ಸಾವಿರ ಸಸಿ ನಾಟಿ ಕಾರ್ಯಕ್ರಮ ರಜತೋತ್ಸವ ಆಚರಣೆಯ ಹೆಗ್ಗುರುತಾಗಿದೆ. ಜಿಲ್ಲೆಯ ಮೂಲೆಮೂಲೆಗೆ ತೆರಳಿ ಶ್ರೀಗಳು ಸಸಿ ನಾಟಿ ಮಾಡಿದ್ದಾರೆ, ಶಾಲಾ ಮಕ್ಕಳಿಗೆ ವೃಕ್ಷ ಮಂತ್ರಾಕ್ಷತೆ ನೀಡಿ ಹಸಿರು ಬೆಳೆಸಲು ಪ್ರೇರೇಪಣೆ ನೀಡಿದ್ದಾರೆ.

ಧಾರ್ಮಿಕ ಕೇಂದ್ರ ಮುಖ್ಯಸ್ಥರಾಗಿ ಆತ್ಮೋನ್ನತಿಯ ಮಾರ್ಗದರ್ಶನ ನೀಡುವ ಸ್ವಾಮೀಜಿ ಶಿಷ್ಯ ಸಮೂಹದಲ್ಲಿ ಪ್ರಕೃತಿ ಅಧ್ಯಾತ್ಮದ ಪ್ರೀತಿ ಮೊಳೆಯುವ ಬೀಜ ಬಿತ್ತುತ್ತಿದ್ದಾರೆ.

2016ರ ಫೆ. 24ರಂದು ರಾಜ್ಯಪಾಲ ವಜುಬಾಯಿ ವಾಲಾ ಚಾಲನೆ ನೀಡಿರುವ ಸ್ವರ್ಣವಲ್ಲಿ ಶ್ರೀಗಳ ಪೀಠಾರೋಹಣ ರಜತೋತ್ಸವ ವರ್ಷಾಚರಣೆಯ ಸಮಾರೋಪ ಫೆ. 9ರಿಂದ 14ರವರೆಗೆ ಮಠದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಆಲಯ ದೇವರಿಗೆ ಸಮರ್ಪಣೆಗೊಳ್ಳಲಿದೆ. ಸಂಪರ್ಕಕ್ಕೆ 9242662900

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT