ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೂಲ್ಯ ಜೀವಹಾನಿ ತಪ್ಪಿಸಲಾಗದೇ?

Last Updated 30 ಜನವರಿ 2017, 19:30 IST
ಅಕ್ಷರ ಗಾತ್ರ

ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ನಿರೀಕ್ಷಿತ ಹಿಮಪಾತಕ್ಕೆ ಸಿಲುಕಿ ಹಲವು ಸೈನಿಕರು ಪ್ರಾಣ ಕಳೆದುಕೊಂಡ ವಿಚಾರ ಕೇಳಿ ಬಹಳ ನೋವಾಗುತ್ತಿದೆ. ಅಲ್ಲೇನೂ ಯುದ್ಧ ನಡೆಯುತ್ತಿಲ್ಲ. ಉಗ್ರರ ಬಾಂಬ್ ದಾಳಿಯೇನೂ ಆಗಿರಲಿಲ್ಲ ಅಥವಾ ಅನಿರೀಕ್ಷಿತ ಭೂಕಂಪ ಸಂಭವಿಸಿರಲಿಲ್ಲ. ಚಳಿಗಾಲದಲ್ಲಿ ಬಹುತೇಕ ನಡೆಯುವ ವಿದ್ಯಮಾನ ಇದು.

ಪದೇಪದೇ ನಾವು ಹೀಗೆ ಕರ್ತವ್ಯನಿಷ್ಠ ದೇಶಪ್ರೇಮಿ ಯುವ ಜೀವಗಳನ್ನು ಅನ್ಯಾಯವಾಗಿ ಬಲಿಕೊಡುತ್ತಿದ್ದೇವಲ್ಲ. ಇದಕ್ಕೆ ಕೊನೆಯಿಲ್ಲವೇ? ಪ್ರತಿವರ್ಷ ನಮ್ಮ ಸರ್ಕಾರ ಬಜೆಟ್‌ನಲ್ಲಿ ರಕ್ಷಣಾ ವೆಚ್ಚಕ್ಕೆಂದು ಲಕ್ಷಾಂತರ ಕೋಟಿ ಹಣವನ್ನು ಮೀಸಲಿಡುತ್ತಿದೆ. ಆದರೂ ಹೀಗೆ ವಿನಾಕಾರಣ ಸಾಯುವವರನ್ನು ಬದುಕಿಸಲು, ರಕ್ಷಿಸಲು  ಸಾಧ್ಯವಾಗುತ್ತಿಲ್ಲ ಎಂದಾದರೆ ಅದು ಯಾವ ರಕ್ಷಣೆ? ಅದು ಯಾವ ರೀತಿಯ ಬಜೆಟ್ ವೆಚ್ಚ? ಸತ್ತ ಒಬ್ಬೊಬ್ಬ ಸೈನಿಕನ ಸಂಸಾರದ ಕತೆಗಳನ್ನು ಕೇಳಿದರೆ ಎಂತಹ ಕಲ್ಲು ಹೃದಯ ಕೂಡ ಕಣ್ಣೀರು ಸುರಿಸುತ್ತದೆ.

ಇಂತಹ ಚಳಿಗಾಲದಲ್ಲಿ ಅಂತಹ ದುರ್ಗಮ ಪ್ರದೇಶದಲ್ಲಿ ನಿಂತು ಅಷ್ಟು ಅಮೂಲ್ಯವಾದ ಪ್ರಾಣವನ್ನು ಅನಾಯಾಸವಾಗಿ ಬಲಿಕೊಡುವ ಅನಿವಾರ್ಯ  ಇದೆಯೇ ಎನ್ನುವ ಮೂಲಭೂತ ಪ್ರಶ್ನೆ ಎದುರಾಗುತ್ತದೆ.

ಆಧುನಿಕ, ವೈಜ್ಞಾನಿಕ  ಎಂದೆಲ್ಲ ಕರೆಸಿಕೊಳ್ಳುವ ಬುದ್ಧಿವಂತರ ಈ ಯುಗದಲ್ಲಿ, ಆದಿಮಾನವರ ರೀತಿ ಯಾವುದೋ ಜಿದ್ದಿಗೆ ಬಿದ್ದು, ಇರಬಾರದ ಸ್ಥಳಗಳಲ್ಲಿ, ಇರಲಾಗದ ವೇಳೆಗಳಲ್ಲಿ ನೂರಾರು ಧೀರ ಯೋಧರನ್ನು ನಿಲ್ಲಿಸಿ, ಕಂಡೂ ಕಂಡೂ ಅವರು ಪ್ರಾಣ ಕಳೆದುಕೊಳ್ಳುವಂತೆ ಮಾಡುವ ನಿರ್ಮಾನುಷ ಕಾರ್ಯಗಳನ್ನು ಅನಿವಾರ್ಯವೇನೋ ಎನ್ನುವ ರೀತಿ ಮಾಡಿರುವ ಆಡಳಿತ ವ್ಯವಸ್ಥೆ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಿಲ್ಲವೇ? ಸಂಬಂಧಪಟ್ಟವರಿಗೆಲ್ಲ ಜ್ಞಾನೋದಯವಾಗಲು ಏನು ಮಾಡಬೇಕು?

ಅನಾದಿ ಕಾಲದಿಂದಲೂ ‘ವಸುದೈವ ಕುಟುಂಬಕಂ’ ಎನ್ನುವ ಉದಾರ ಮಂತ್ರವನ್ನು ಜಪಿಸಿದ ನಮ್ಮ ಈ ನಾಡು, ನಮ್ಮಿಂದಲೇ ಪಾಲು ಪಡೆದು ಬೇರೆಯಾದ ನಮ್ಮದೇ ಅಣ್ಣ ತಮ್ಮಂದಿರ ನೆರೆ ನಾಡಿನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಈ ಪಡಿಪಾಟಲು ಪಡಬೇಕಾಗಿದೆ ಎಂದರೆ ಇದು ಮಹಾದುರಂತವಲ್ಲವೇ? ಅವಿಭಕ್ತ ಕುಟುಂಬವೊಂದರಲ್ಲಿ ವಿಭಾಗವಾದಾಗ ಅಣ್ಣತಮ್ಮಂದಿರಲ್ಲಿ ವೈಮನಸ್ಸು ಬೆಳೆಯುವುದು ಸಹಜ.

ಎಲ್ಲರೂ ಅರಿತವರಾಗಿದ್ದರೆ ಅಂತಹ ವೈಮನಸ್ಸುಗಳನ್ನೂ ಜಯಿಸಿ ಚಂದಾಗಿರುವ ಅನೇಕ ಉದಾಹರಣೆಗಳನ್ನು ನಾವು ಕಂಡಿದ್ದೇವೆ,  ಕಾಣುತ್ತಿದ್ದೇವೆ. ಒಮ್ಮೆ ಒಡೆದ ಮನಸ್ಸುಗಳೇ ವಿಜೃಂಭಿಸುವ ಸಂದರ್ಭ ಬಂದಾಗ ಹಿರಿಯರಾದವರು ಅನುಸರಿಸಿಕೊಂಡು ಕಿರಿಯರನ್ನು ಸಂಭಾಳಿಸಿ ಅಥವಾ ಸ್ವತಃ ಸ್ವಲ್ಪ ತ್ಯಾಗ ಮಾಡಿ ಸಂದರ್ಭಗಳನ್ನು ತಿಳಿಗೊಳಿಸಿದ ಅನೇಕ ಉದಾಹರಣೆಗಳು ಕೂಡ ನಮ್ಮ ಕಣ್ಣೆದುರಿಗಿವೆ. ಇನ್ನು ಯಾವುದೇ ಕಾರಣಕ್ಕೂ ರಾಜಿಯಾಗದ ಸ್ವಾರ್ಥ ಸಾಧಕ ಸಹೋದರರಿರುವ ಕಡೆ ಮಾತ್ರ ಹೊಡೆದಾಟ, ಬಡಿದಾಟ, ಕೊಲೆಗಳು ನಡೆದಿರುವ ಉದಾಹರಣೆಗಳೂ ಸಾಕಷ್ಟಿವೆ. ನಾವು ಹಾಗಾದರೆ ಈ ಕೆಟ್ಟ ವರ್ಗಕ್ಕೆ ಸೇರಿದವರೇ?

ಇರುವಷ್ಟು ಕಾಲಕ್ಕೂ ಸದಾ ಕತ್ತಿ ಮಸೆಯುತ್ತಾ, ಹೀಗೆ ಸಂದರ್ಭ ಬಂದಾಗಲೆಲ್ಲ ಸೈನಿಕರ ಜೀವವನ್ನು ತದುಕಿ ಹಾಕಲು ಅನುವು ಮಾಡಿಕೊಡುತ್ತಾ ಬದುಕುವುದು ನಮಗೆ ಅನಿವಾರ್ಯ ಆಗಿಬಿಟ್ಟಿದೆಯೇ? ತಕ್ಷಣದ ಸರ್ಜಿಕಲ್ ಸ್ಟ್ರೈಕ್, ಕದನ ವಿರಾಮ ಉಲ್ಲಂಘನೆಗೆ ಪ್ರತಿದಾಳಿ, ಇವುಗಳ ಜೊತೆಗೆ ಇವೆಲ್ಲವುಗಳನ್ನೂ ಮೀರಿದ ದೂರದೃಷ್ಟಿಯುಳ್ಳ ಮುತ್ಸದ್ದಿತನದ ಕಾರ್ಯವೊಂದು ಆರಂಭವಾಗಬೇಕು. ಇದು ಅರ್ಥವಾಗದಿದ್ದರೆ ತನ್ನ ಗಂಡನನ್ನೋ ಮಗನನ್ನೋ ಸಹೋದರನನ್ನೋ ಅಥವಾ ಮನೆಗೆ ಆಧಾರ ಸ್ತಂಭವಾಗಿದ್ದ ಏಕೈಕ ಯಜಮಾನನನ್ನೋ ಕಳೆದುಕೊಂಡು ಅನಾಥವಾಗಿರುವ ಯಾವುದಾದರೂ ಸೈನಿಕರೊಬ್ಬರ ಮನೆಗೆ ಹೋಗಿ ಬಂದರೆ ಗೊತ್ತಾದೀತು.

ವ್ಯಾಪಾರ, ವಾಣಿಜ್ಯ ಉದ್ದೇಶಗಳನ್ನು ಹೊರತುಪಡಿಸಿ ನಮ್ಮ ಕುರಿತು ಇನ್ನಾವುದೇ ನೈಜ ಕಾಳಜಿಯಿಲ್ಲದ, ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರುವ ಕಪಟ ನಾಟಕವಾಡುವ ದೇಶಗಳ ಕೈಗೆ ಸಿಲುಕಿ, ಎಲ್ಲೋ ದೂರದಲ್ಲಿ ಕುಳಿತಿರುವ ಅಲ್ಲಿನ ಆಡಳಿತಾರೂಢರ ಇಚ್ಛೆಯಂತೆ ಅಕ್ಕಪಕ್ಕದಲ್ಲಿರುವ  ನಾವು ಸದಾ ಕಾಲ ಬಡಿದಾಡುತ್ತಲೇ ಇರಬೇಕೇ?

ನಮ್ಮ ಸ್ಪರ್ಧೆಯಿಂದಾಗಿ, ಸಮರಗಳಿಂದಾಗಿ ನಮಗಾಗುತ್ತಿರುವ ನಷ್ಟ, ಅವರುಗಳಿಗಾಗುತ್ತಿರುವ ಲಾಭ ನಮಗ್ಯಾಕೆ ಅರ್ಥವಾಗುತ್ತಿಲ್ಲ? ಈ ಸ್ಪರ್ಧೆ, ಸಮರಗಳಿಗೆ ಅನಗತ್ಯವಾಗಿ ನಾವು ವ್ಯಯಿಸುತ್ತಿರುವ ವೆಚ್ಚ, ಶ್ರಮ, ಕಳೆದುಕೊಳ್ಳುತ್ತಿರುವ ಜೀವಗಳಿಗಿಂತ ತುಂಡು ಭೂಮಿಗಳೇ ಹೆಚ್ಚಾದವೇ? ಕುಳಿತು ಮಾತನಾಡಿ ಈ ವಿಷಯಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯ ಇಲ್ಲವೇ?

ಬಾಂಗ್ಲಾ ದೇಶದ ಜೊತೆ ಗಡಿ ವಿವಾದ ಬಗೆಹರಿಸಿಕೊಳ್ಳಲು ಕೊಡುಕೊಳ್ಳುವ ಸೂತ್ರ ಪಾಲಿಸಲಾಯಿತು. ಭಾರತ– ಪಾಕಿಸ್ತಾನ ಕೂಡ ಮಾನವ ಸಂಬಂಧಗಳಿಗೆ, ಮಾನವ ಜೀವಗಳಿಗೆ ಆದ್ಯತೆ ಕೊಟ್ಟಲ್ಲಿ ಯಾಕೆ ಸಾಧ್ಯವಾಗುವುದಿಲ್ಲ? ಯಾಕೆ ಎರಡೂ ಕಡೆಯ ಜನ ಯೋಚಿಸುತ್ತಿಲ್ಲ? ಜನ ಯೋಚಿಸಿದರೂ ಸರ್ಕಾರಗಳೇಕೆ ಮುಂದಡಿಯಿಡುತ್ತಿಲ್ಲ?

ಒಂದು ಮಾತಂತೂ ಸತ್ಯ. ನಮ್ಮ ನಡುವೆ ರಾಜಿ ಮಾಡಿಸಲು ಇನ್ನಾವ ದೇಶವೂ ಮುಂದೆ ಬರುವುದಿಲ್ಲ. ಏಕೆಂದರೆ ನಮ್ಮಿಬ್ಬರ ರಾಜಿಯಿಂದ ಅವರೆಲ್ಲರಿಗೂ ಆಗುವುದು ನಷ್ಟವೇ ಹೊರತು ಯಾವ ಲಾಭವೂ ಇಲ್ಲ. ಎಲ್ಲ ಲಾಭ ನಮ್ಮಿಬ್ಬರಿಗೇ ಇರುವಾಗ ಇದು ನಮ್ಮಿಬ್ಬರಿಂದಲೇ ಆಗಬೇಕಾದ ಕಾರ್ಯ. ರಾಜಕೀಯ ಪಕ್ಷಗಳೂ ಪರಸ್ಪರ ಪಕ್ಕದ ದೇಶದ ಬೆದರು ಗೊಂಬೆಗಳನ್ನು ತೋರಿಸಿ ವೋಟು ಕೀಳುವ ದಾರಿ ಕಂಡುಕೊಂಡಿರುವುದರಿಂದ ಅಂತಹ ಒಂದು ಅಸ್ತ್ರವನ್ನು ತ್ಯಾಗ ಮಾಡುವ ವಿಶಾಲ ಹೃದಯ ತೋರುವ ಸಂಭವ ಕಡಿಮೆ.

ಈಗ ಸಾಮಾನ್ಯ ಜನರೇ ಈ ಕುರಿತು ಯೋಚಿಸಬೇಕಾಗಿದೆ. ಎರಡೂ ಕಡೆಯ ಜನರ ಗೌರವ, ಪ್ರೀತಿಯನ್ನು ಸಂಪಾದಿಸಿರುವ ಸಾಮಾಜಿಕ ಮುಖಂಡರು, ಕಲಾವಿದರು, ಕ್ರೀಡಾಪಟುಗಳು ಹಾಗೂ ಸಾಹಿತಿಗಳು ಒಂದು ಒಳ್ಳೆಯ ಕಾರ್ಯ ಆರಂಭಿಸಬೇಕಾಗಿದೆ. ಆರಂಭಿಕ ಅಡಚಣೆಗಳು ಬರಬಹುದು.

ದೇಶದ್ರೋಹಿಗಳು ಎನ್ನುವ ಆರೋಪಗಳೂ ಬರಬಹುದು. ಆದರೆ ಮಾನವೀಯ ನೆಲೆಯಲ್ಲಿ, ಮನುಷ್ಯತ್ವ ಇರುವವರೆಲ್ಲ ಸೇರಿ ಚಳವಳಿಯೋಪಾದಿಯಲ್ಲಿ ಎರಡೂ ಕಡೆ ಮುಂದಡಿಇಟ್ಟಲ್ಲಿ ಗೋಡೆ ಒಡೆಯುವ ಕೆಲಸ ದುಸ್ತರವೇನೂ ಅಲ್ಲ. ಮೇಲಾಗಿ ದೇಶ ಕಾಯುವ ಸೈನಿಕರ ಜೀವ ಉಳಿಸಬಹುದಾದ ಈ ಪ್ರಯತ್ನ ಯಾವುದೇ ನೈಜ ದೇಶಭಕ್ತಿಗೂ ಕಡಿಮೆಯಾದುದಲ್ಲ.

ಸೈನಿಕರ ಮರಣ ಸಂಭವಿಸಿದಾಗಲೆಲ್ಲ ಬರೀ ಬಾಯಿಮಾತಿನ ಮರುಕ ವ್ಯಕ್ತಪಡಿಸುವುದಷ್ಟೇ ಅಲ್ಲದೆ ಇನ್ನೇನನ್ನಾದರೂ ಮಾಡಬೇಕೆಂಬ ಮಾನವೀಯತೆ ಹಾಗೂ ಕಾಳಜಿಯುಳ್ಳ ಜನರು ಯೋಚಿಸಬೇಕಾದ ಸಮಯ ಬಂದಿದೆ. ಒಂದೇ ಹೆಜ್ಜೆಗೆ ಆಗಬಹುದಾದ ಕೆಲಸ ಇದಲ್ಲ. ಆದರೆ ಎರಡೂ ಕಡೆ ಜನರ ಕೂಗೆದ್ದರೆ ಸರ್ಕಾರಗಳು ಕಣ್ಣು ತೆರೆಯಬಹುದು.

ಕ್ಷಿಪಣಿಗಳ ಉತ್ಪಾದನೆಯ ಕ್ಷುದ್ರ ಸ್ಪರ್ಧೆ ಬಿಟ್ಟು ಹಂತ ಹಂತದ ಮಾತುಕತೆಯಾದರೂ ಮುಂದುವರಿದೀತು. ಕನಿಷ್ಠ ದುರ್ಗಮ ಪ್ರದೇಶದ ಗಡಿಗಳಲ್ಲಿ ಯಾರೂ ಪ್ರವೇಶಿಸಬಾರದು ಎಂಬ ಒಡಂಬಡಿಕೆ  ಮಾಡಿಕೊಂಡರೂ ಸಾಕು; ಬಹಳಷ್ಟು ಅಮೂಲ್ಯ ಪ್ರಾಣಗಳು ಉಳಿದಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT