ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವೇಶ ನಿರ್ಬಂಧಿಸುವ ಟ್ರಂಪ್ ನೀತಿ ಅಸಾಂವಿಧಾನಿಕ, ಅಮಾನವೀಯ

Last Updated 30 ಜನವರಿ 2017, 19:30 IST
ಅಕ್ಷರ ಗಾತ್ರ

ಅಮೆರಿಕಕ್ಕೆ ನಿರಾಶ್ರಿತರ ಪ್ರವೇಶ ಕುರಿತಂತೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಕಟಿಸಿರುವ ಹೊಸ ನೀತಿ ಅಸಾಂವಿಧಾನಿಕ ಹಾಗೂ ಅಮಾನವೀಯವಾದದ್ದು.  ಒಂದೇ ಮಾತಿನಲ್ಲಿ ಹೇಳಬೇಕಾದರೆ ಅನಗತ್ಯವಾದ ನೀತಿ ಇದು. ಸಿರಿಯಾ ಸೇರಿದಂತೆ ಮುಸ್ಲಿಂ ಪ್ರಾಬಲ್ಯದ ಇರಾಕ್, ಇರಾನ್, ಸುಡಾನ್, ಲಿಬ್ಯಾ, ಸೊಮಾಲಿಯಾ ಹಾಗೂ ಯೆಮನ್ ರಾಷ್ಟ್ರಗಳ ಜನರಿಗೆ ಅಮೆರಿಕ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ಈ ಏಳು ಮುಸ್ಲಿಂ ರಾಷ್ಟ್ರಗಳ ಮೇಲೆ ಹೇರಿರುವ ನಿರ್ಬಂಧ ಸೃಷ್ಟಿಸಿರುವ ಜಾಗತಿಕ ತಳಮಳ ಅಪಾರವಾದದ್ದು. ವಲಸೆಯನ್ನು ನಿರ್ಬಂಧಿಸುವ ಅತಿರೇಕದ ನಿರ್ಧಾರ ಇದು. ಈ ವಿವಾದಾತ್ಮಕ ಆದೇಶವನ್ನು ವಿರೋಧಿಸಿ ಅಮೆರಿಕದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಪ್ರತಿಭಟನೆಗಳೂ ನಡೆದಿವೆ.

ಕಡೆಗೆ ಈ ವಿವಾದಾತ್ಮಕ ನಿರ್ಧಾರಕ್ಕೆ ಫೆಡರಲ್ ನ್ಯಾಯಾಧೀಶರೊಬ್ಬರು ತಡೆ ನೀಡಿದ್ದಾರೆ ಎಂಬುದು ಸಮಾಧಾನಕರ. ಈ ವಿವಾದಾತ್ಮಕ ನಿರ್ಧಾರದಿಂದ ಅಧಿಕೃತ ವೀಸಾ ಇದ್ದೂ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡವರು ಸದ್ಯಕ್ಕಷ್ಟೇ  ನಿಟ್ಟುಸಿರು ಬಿಡುವಂತಾಗಿದೆ.

ಜಾಗತೀಕರಣದ ಈ ಯುಗದಲ್ಲಿ ಜಗತ್ತೇ ಒಂದು ಹಳ್ಳಿಯಾಗಿದೆ. ರಾಷ್ಟ್ರಗಳು ಪರಸ್ಪರ ಬೆಸೆದುಕೊಂಡಿರುವ ಕಾಲ ಇದು. ಇಂತಹ ಸಂದರ್ಭದಲ್ಲಿ ಅಮೆರಿಕ ಏಕಾಂಗಿಯಾಗಿರುವುದು ಸಾಧ್ಯವಿಲ್ಲ ಎಂಬುದನ್ನು ಟ್ರಂಪ್‌ ಮನಗಾಣಬೇಕು. ಯಾವ ರಾಷ್ಟ್ರಕ್ಕೆ ಸೇರಿದವರು ಎಂಬ ಆಧಾರದ ಮೇಲೆ ವಲಸಿಗರ ಮಧ್ಯೆ ತಾರತಮ್ಯ ಮಾಡುವುದಕ್ಕೆ ಅಮೆರಿಕದ ಕಾನೂನಿನಲ್ಲಿ ಅವಕಾಶವಿಲ್ಲ.

ಹೀಗಿದ್ದೂ ರಾಷ್ಟ್ರೀಯ ಭದ್ರತೆ  ನೆಪದಲ್ಲಿ ಇಂತಹ ನೀತಿ ರಚನೆಗೆ ಟ್ರಂಪ್ ಮುಂದಾಗಿರುವುದು ಸರಿಯಲ್ಲ. ಭಯೋತ್ಪಾದನೆಯನ್ನು ಮಟ್ಟ ಹಾಕಲು ಗಡಿ ನಿಯಂತ್ರಣ ಮಾಡುವುದರಿಂದ ಅಪೇಕ್ಷಿತ ಫಲಿತಾಂಶ ಹೊರಬರುತ್ತದೆ ಎಂದು ನಿರೀಕ್ಷಿಸಿದರೆ ಅದು ತಪ್ಪು.  ಇಸ್ಲಾಂ ಧರ್ಮದ ಹೆಸರಲ್ಲಿ ನಡೆಸುತ್ತಿರುವ ಭಯೋತ್ಪಾದನೆಯನ್ನು ಮಟ್ಟ ಹಾಕುವ ಬದಲು ಇಸ್ಲಾಂ ವಿರುದ್ಧವೇ  ಸಮರ ಸಾರುವಂತಹ ಇಂತಹ ಕ್ರಮ ಸರಿಯಲ್ಲ. 

ಇಸ್ಲಾಂ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರ ಸಮರ ಸಾರಿದೆ ಎಂಬಂತಹ ಸಂದೇಶ ಭಯೋತ್ಪಾದನೆಯತ್ತ ಆಕರ್ಷಿತರಾಗುವ ಯುವ ಮನಸ್ಸುಗಳಲ್ಲಿ ಇನ್ನಷ್ಟು ವಿಷ ಬಿತ್ತುತ್ತದೆ. ಅಷ್ಟೇ ಅಲ್ಲ, ಟ್ರಂಪ್ ಅವರ ಆದೇಶ ಶುಕ್ರವಾರ ಹೊರಬಿದ್ದ ನಂತರ ಬೀದಿಗಳಲ್ಲಿ ಜನರನ್ನು ನಿಲ್ಲಿಸಿ ಅವರ ರಾಷ್ಟ್ರೀಯತೆ ಪ್ರಶ್ನಿಸುವಂತಹ ವಿದ್ಯಮಾನಗಳೂ ನಡೆದಿವೆ.

ಅಮೆರಿಕದಲ್ಲೇ 30 ವರ್ಷಗಳಿಂದ ನೆಲೆಸಿ, ಶಾರೂಖ್ ಖಾನ್ ಅವರ ‘ಸ್ವದೇಶ್’ ಚಿತ್ರಕ್ಕೆ ಸ್ಫೂರ್ತಿಯಾಗಿದ್ದ ಭಾರತ ಮೂಲದ ಅಮೆರಿಕನ್ ಮಹಿಳೆ ಅರವಿಂದಾ ಪಿಲ್ಲಾಲಮರ್ರಿ ಅವರನ್ನೂ ಈ ನಿಟ್ಟಿನಲ್ಲಿ ಪ್ರಶ್ನಿಸಿದಂತಹ ಅಹಿತಕರ ಬೆಳವಣಿಗೆ ಆತಂಕಕಾರಿ. ಬಿಳಿಯರಲ್ಲದವರ ವಿರುದ್ಧ ತೋರಿದಂತಹ ಈ ತಾರತಮ್ಯ ನೀತಿ ಹೇಯವಾದದ್ದು. 

ನೂತನ ವಲಸೆ ನೀತಿಯಿಂದಾಗಿ ಪ್ರತಿಭಾನ್ವಿತರನ್ನು ಅಮೆರಿಕಕ್ಕೆ ಕರೆತರಲು ಅಡ್ಡಿಯುಂಟಾಗಲಿದೆ ಎಂದು ಗೂಗಲ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್‌ ಪಿಚೈ ಅವರೂ ಟೀಕಿಸಿದ್ದಾರೆ. ಹೀಗಾಗಿ ಭಾರತದ ಮೇಲೆ ಈ ನೀತಿ ಬೀರುವ ಪ್ರಭಾವವೂ ಆಳವಾದದ್ದು.

ತಮಗೆ ಯಾವುದೇ ವಾಣಿಜ್ಯ ಹಿತಾಸಕ್ತಿ ಇಲ್ಲದ ರಾಷ್ಟ್ರಗಳನ್ನಷ್ಟೇ  ಟ್ರಂಪ್  ಅವರು ಗುರಿಯಾಗಿಸಿಕೊಂಡಿದ್ದಾರೆ ಎಂಬುದೂ  ಈ ಆದೇಶದಲ್ಲಿ ಎದ್ದು ಕಾಣುವ ಅಂಶ. ನಿಷೇಧಕ್ಕೆ ಗುರಿಯಾಗಿಲ್ಲದ ಸೌದಿ ಅರೇಬಿಯಾ ಹಾಗೂ ಅರಬ್ ಒಕ್ಕೂಟ (ಯುಎಇ) ರಾಷ್ಟ್ರಗಳಲ್ಲಿ ಟ್ರಂಪ್ ಅವರ ಸಂಸ್ಥೆಗಳು ಸಕ್ರಿಯವಾಗಿವೆ ಎಂಬುದನ್ನು ಗಮನಿಸಬೇಕು. ಈ ಮಟ್ಟದಲ್ಲಿ ಸ್ವಹಿತಾಸಕ್ತಿ ಕಾಯ್ದುಕೊಳ್ಳುವಲ್ಲಿ ವಹಿಸಿರುವ ಎಚ್ಚರಿಕೆ, ಒಳ್ಳೆಯ ಆಡಳಿತಗಾರನ ಲಕ್ಷಣವಲ್ಲ.

ಜೊತೆಗೆ ನಿರಾಶ್ರಿತರು ರಾಷ್ಟ್ರಕ್ಕೆ ವಿಶೇಷ ಬೆದರಿಕೆ ಒಡ್ಡುತ್ತಾರೆ ಎಂಬುದಕ್ಕೆ ಯಾವುದಾದರೂ ಸೂಚನೆ ಇತ್ತೇ ಎಂದರೆ ಅಂತಹದ್ದೇನೂ  ಈವರೆಗೆ ಲಭ್ಯವಾಗಿಲ್ಲ. ಯಾವುದೇ ಭಯೋತ್ಪಾದನೆ ಕೃತ್ಯದೊಂದಿಗೆ ಅಮೆರಿಕದಲ್ಲಿರುವ ಸಿರಿಯಾದ ನಿರಾಶ್ರಿತರ ಪಾತ್ರ ಈವರೆಗೂ ಕಂಡುಬಂದಿಲ್ಲ.

ಅಂತರ್ಯುದ್ಧ ಹಾಗೂ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದನೆಯಿಂದಾಗಿ ದಯನೀಯ ರೀತಿಯಲ್ಲಿ ದೇಶ ಬಿಟ್ಟು ಪಲಾಯನ ಮಾಡುವ ಸಂಕಷ್ಟಕ್ಕೆ ಸಿರಿಯನ್ನರು ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಈವರೆಗೆ ಸಿರಿಯಾದ ಸುಮಾರು 15,000 ನಿರಾಶ್ರಿತರಿಗಷ್ಟೇ ಅಮೆರಿಕ ನೆಲೆ ನೀಡಿದೆ.

ಈಗ ಟ್ರಂಪ್ ಆದೇಶ ಅದಕ್ಕೂ ತಡೆ ಒಡ್ಡಲಿದೆ. ವಲಸೆಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷರಿಗೆ ವಿಸ್ತೃತ ಅಧಿಕಾರವಿದೆ ಎಂಬುದು ನಿಜ. ಆದರೆ ಅದು ಮಿತಿ ಮೀರಿದ ಅಧಿಕಾರವಲ್ಲ. ಶಾಸನಬದ್ಧವಾದ ಸ್ಥಾನಮಾನ ಪಡೆದು ನೆಲೆಸಿದವರನ್ನು ಅಧ್ಯಕ್ಷರು ನಿರ್ಬಂಧಿಸಲಾಗದು ಎಂಬುದನ್ನು ಅರಿಯಬೇಕು. ಇಂತಹ ಆದೇಶ ತಡೆಗೆ ಅಮೆರಿಕ ಕಾಂಗ್ರೆಸ್ ಒತ್ತಡ ಹೇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT