ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ಸೈಕ್ಲಿಂಗ್‌: ಕ್ರೈಟೀರಿಯಂಗೆ ಕೊಕ್‌

ರೋಡ್ ಸೈಕ್ಲಿಂಗ್ ಆಯೋಜಿಸಲು ಸೈಕ್ಲಿಂಗ್ ಸಂಸ್ಥೆ ನಿರ್ಧಾರ
Last Updated 31 ಜನವರಿ 2017, 5:31 IST
ಅಕ್ಷರ ಗಾತ್ರ

ಹುಬ್ಬಳ್ಳಿ:  ಫೆಬ್ರುವರಿ ಮೂರರಿಂದ ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ನಡೆಯಲಿರುವ ರಾಜ್ಯ ಒಲಿಂಪಿಕ್ಸ್‌ನ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಕ್ರೈಟೀರಿಯಂಗೆ ಕೊಕ್ ನೀಡಲಾಗಿದೆ.

ಇದರ ಬದಲು ರೋಡ್ ಸೈಕ್ಲಿಂಗ್ ಆಯೋಜಿಸಲು ನಿರ್ಧರಿಸಲಾಗಿದೆ. ವಾಹನ ಸಂಚಾರ ತಡೆದು ರಸ್ತೆಯನ್ನು ಸ್ಪರ್ಧೆಗೆ ಮುಕ್ತಗೊಳಿಸಲು ಪೊಲೀಸರು ಒಪ್ಪದೇ ಇದ್ದುದೇ ಇದಕ್ಕೆ ಕಾರಣ ಎನ್ನಲಾಗಿದೆ.

ಒಲಿಂಪಿಕ್ಸ್‌ನ ಒಟ್ಟು 25 ಸ್ಪರ್ಧೆಗಳ ಪೈಕಿ ನಾಲ್ಕನ್ನು ಹುಬ್ಬಳ್ಳಿಗೆ ಒದಗಿಸಲಾಗಿತ್ತು. ಇದರಲ್ಲಿ ಸೈಕ್ಲಿಂಗ್ ಕೂಡ ಒಂದು. ಈ ಭಾಗದಲ್ಲಿ ಸೈಕ್ಲಿಂಗ್ ಸ್ಪರ್ಧೆ ಅಪರೂಪವಾದ್ದರಿಂದ ಕ್ರೈಟೀರಿಯಂ (ನಗರ ಮಧ್ಯದಲ್ಲಿ ನಡೆಯುವ ವಿಶೇಷ ರೇಸ್‌) ಆಯೋಜಿಸಲು ರಾಜ್ಯ ಸೈಕ್ಲಿಂಗ್ ಸಂಸ್ಥೆಯವರು ಸಿದ್ಧತೆ ನಡೆಸಿದ್ದರು. ಆದರೆ ಪೊಲೀಸರ ಅನುಮತಿ ಸಿಗದ ಕಾರಣ ಕ್ರೈಟೀರಿಯಂ ಕೈಬಿಟ್ಟು ರೋಡ್ ರೇಸ್ ನಡೆಸಲು ನಿರ್ಧರಿಸಲಾಗಿದೆ.

‘ಪುಣೆ–ಬೆಂಗಳೂರು ರಸ್ತೆಯ ಗಬ್ಬೂರು ಕ್ರಾಸ್‌ ಸಮೀಪ ಇರುವ ಜೈನ ಮಂದಿರದ ಮುಂಭಾಗದಿಂದ ಸ್ಪರ್ಧೆ ಆರಂಭಿಸಲು ನಿರ್ಧರಿಸ­ಲಾಗಿದೆ. ಒಂದು ಭಾಗದ ರಸ್ತೆಯನ್ನು ಸಂಚಾರ ಮುಕ್ತ­ಗೊಳಿಸಿ ಸ್ಪರ್ಧೆಗೆ ಅನುಕೂಲ ಮಾಡಿಕೊಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ’ ಎಂದು ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಶೈಲ ಕುರಣಿ ‘ಪ್ರಜಾವಾಣಿ’ಗೆ ತಿಳಿಸಿದರು. ಸೈಕ್ಲಿಂಗ್ ಸ್ಪರ್ಧೆಗಳು ಫೆಬ್ರುವರಿ ನಾಲ್ಕು ಮತ್ತು ಐದರಂದು ನಡೆಯಲಿವೆ. 
  
ಕ್ರೈಟೀರಿಯಂ ಸ್ಪರ್ಧೆಯನ್ನು ಲ್ಯಾಮಿಂಗ್ಟನ್ ರಸ್ತೆ, ಕೇಶ್ವಾಪುರ ರಸ್ತೆ ಹಾಗೂ ಕ್ಲಬ್‌ ರಸ್ತೆಯಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಪೊಲೀಸರಿಂದ ಅನುಮತಿ ಸಿಗಲಿಲ್ಲ. ನಂತರ ರೋಡ್ ಸೈಕ್ಲಿಂಗ್ ನಡೆಸಲು ನಿರ್ಧರಿಸಲಾಯಿತು.

ಇದಕ್ಕೆ ಗೋಕುಲ ರಸ್ತೆಯಲ್ಲಿ ಅವಕಾಶ ನೀಡುವುದಾಗಿ ಪೊಲೀಸರು ತಿಳಿಸಿದರು. ಕೊನೆಗೆ ಸ್ಪರ್ಧೆಯನ್ನು ಪುಣೆ–ಬೆಂಗಳೂರು ರಸ್ತೆಗೆ ಸ್ಥಳಾಂತರಿಸಲಾಯಿತು ಎಂದು ಆಯೋಜನಾ ಸಮಿತಿಯವರು ತಿಳಿಸಿದ್ದಾರೆ.

ನಾಲ್ಕು ಸ್ಪರ್ಧೆ ಹಗಲು ರಾತ್ರಿ
ಒಲಿಂಪಿಕ್ಸ್‌ನ ಕಬಡ್ಡಿ, ವಾಲಿಬಾಲ್‌, ಕೊಕ್ಕೊ ಮತ್ತು ಕುಸ್ತಿ ಸ್ಪರ್ಧೆಗಳನ್ನು ಹಗಲು –ರಾತ್ರಿ ನಡೆಸಲು ನಿರ್ಧ­ರಿಸಲಾಗಿದೆ. ‘ಸಂಜೆ ನಾಲ್ಕು ಗಂಟೆಗೆ ಆರಂಭ­ವಾಗ­ಲಿರುವ ಸ್ಪರ್ಧೆಗಳು ರಾತ್ರಿ ಹತ್ತು ಗಂಟೆಯ ವರೆಗೆ ಹೊನಲು ಬೆಳಕಿನಲ್ಲಿ ಮುಂದುವರಿಯಲಿವೆ’ ಎಂದು ಸ್ಪರ್ಧೆಗಳ ಸಂಯೋಜಕ ಶ್ರೀನಿವಾಸ ತಿಳಿಸಿದರು.

ಟೆನಿಸ್‌ ಬೆಂಗಳೂರಿನಲ್ಲಿ
ಮೊದಲು ಬೆಂಗಳೂರಿನಲ್ಲಿ ಎರಡು ಸ್ಪರ್ಧೆಗಳನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ಈಗ ಮತ್ತೊಂದು ಸ್ಪರ್ಧೆಯನ್ನು ಕೂಡ ರಾಜಧಾನಿಗೆ ಸ್ಥಳಾಂತರಿಸಲಾಗಿದೆ. ಸ್ಪರ್ಧೆಗಳ ಹೊಸ ಪಟ್ಟಿ ಪ್ರಕಾರ ಲಾನ್ ಟೆನಿಸ್ ಬೆಂಗಳೂರಿನಲ್ಲಿ ನಡೆಯಲಿದೆ. ಕಬಡ್ಡಿ, ವಾಲಿಬಾಲ್, ಈಜು ಹುಬ್ಬಳ್ಳಿಯಲ್ಲಿ ನಡೆಯಲಿದೆ.
ನಾಲ್ಕು ದಿನ ಅಥ್ಲೆಟಿಕ್ಸ್‌
ಒಲಿಂಪಿಕ್ಸ್‌ನ ಪ್ರಮುಖ ಆಕರ್ಷಣೆಯಾದ ಅಥ್ಲೆಟಿಕ್ಸ್‌ಗೆ ನಾಲ್ಕು ದಿನ ಮೀಸಲಿಡಲಾಗಿದೆ. ಏಳನೇ ತಾರೀಕಿನಿಂದ 10ರ ವರೆಗೆ ಸ್ಪರ್ಧೆಗಳು ನಡೆಯಲಿವೆ. ಧಾರವಾಡದ ಆರ್‌.ಎನ್‌.ಶೆಟ್ಟಿ ಕ್ರಿಡಾಂಗಣ ಈ ಸ್ಪರ್ಧೆಗಳಿಗೆ ವೇದಿಕೆಯಾಗಲಿದೆ. ಇಲ್ಲಿ ಸಿಂಥೆಟಿಕ್ ಟ್ರ್ಯಾಕ್ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT