ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನಿಗೆ ಗೊಬ್ಬರವಾದ ‘ಬೆಂಬಲ ಬೆಲೆ ಈರುಳ್ಳಿ’

ಗದುಗಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕೊಳೆತು ನಾರುತ್ತಿರುವ ಟನ್‌ಗಟ್ಟಲೆ ಉಳ್ಳಾಗಡ್ಡಿ
Last Updated 31 ಜನವರಿ 2017, 5:38 IST
ಅಕ್ಷರ ಗಾತ್ರ

ಗದಗ: ಜಿಲ್ಲಾಡಳಿತವು ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿದ ಈರುಳ್ಳಿಯಲ್ಲಿ ಟನ್‌ಗಟ್ಟಲೆ ಈರುಳ್ಳಿ ಮಾರಾಟವಾಗದೆ ಹಾಗೆಯೇ ಗದುಗಿನ ಕಾಟನ್‌ ಸೇಲ್‌ ಸೊಸೈಟಿ ಹಾಗೂ ಎಪಿಎಂಸಿ ಆವರಣದಲ್ಲಿ ರಾಶಿ ಈರುಳ್ಳಿ ಬಿದ್ದಿದ್ದು, ಕೊಳೆತು ನಾರುತ್ತಿದೆ. ಸುತ್ತ ಮುತ್ತಲಿನ ರೈತರು ಜಮೀನಿಗೆ ಗೊಬ್ಬರ ವಾಗಿ ಬಳಸಲು ಟ್ರ್ಯಾಕ್ಟರ್‌ಗಳಲ್ಲಿ ಈ ಕೊಳೆತ ಈರುಳ್ಳಿಯನ್ನು ಹೇರಿಕೊಂಡು ಹೋಗುತ್ತಿದ್ದಾರೆ.

ಜಿಲ್ಲಾಡಳಿತವು ರೈತರಿಂದ ಕ್ವಿಂಟ ಲ್‌ಗೆ ₹624ರಂತೆ ಬೆಂಬಲ ಬೆಲೆ ಯೋಜನೆಯಡಿ ಈರುಳ್ಳಿ ಖರೀದಿಸಿತ್ತು. 2016ರ ನವೆಂಬರ್‌ 4ರಿಂದ ಡಿಸೆಂಬರ್‌ 7ರವರೆಗೆ ಜಿಲ್ಲೆಯ ಐದು ಖರೀದಿ ಕೇಂದ್ರಗಳಲ್ಲಿ ಅಂದಾಜು 3.8 ಲಕ್ಷ ಕ್ವಿಂಟಲ್‌ ಈರುಳ್ಳಿ ಖರೀದಿಯಾಗಿತ್ತು. ಇದರಲ್ಲಿ ಶೇ 75ರಷ್ಟು ಈರುಳ್ಳಿ ಮಾರಾಟವಾಗಿದೆ.  ಎಪಿಎಂಸಿ ವರ್ತಕರು ಹರಾಜಿನಲ್ಲಿ ಕ್ವಿಂಟಲ್‌ಗೆ ₹175ರಿಂದ ₹225 ದರದಲ್ಲಿ ಜಿಲ್ಲಾಡಳಿತದಿಂದ ಈರುಳ್ಳಿ ಖರೀದಿಸಿದ್ದಾರೆ. ಸಾರ್ವಜನಿಕ ಮಾರಾಟ ಮಳಿಗೆಯ ಮೂಲಕವೂ ಜಿಲ್ಲಾಡಳಿತ ಒಂದಿಷ್ಟು ದಾಸ್ತಾನು ಕರಗಿಸಿದೆ. ಆದರೆ, ಕೊನೆ ಕೊನೆಗೆ ಸಣ್ಣ ಗಾತ್ರದ,  ಮೊಳೆಯೊಡೆಯಲು ಪ್ರಾರಂ ಭಿಸಿದ ಈರುಳ್ಳಿ ಖರೀದಿಸಲು ಎಪಿಎಂಸಿ ವರ್ತಕರು ಹಿಂದೇಟು ಹಾಕಿದ್ದರಿಂದ ಟನ್‌ಗಟ್ಟಲೆ ಈರುಳ್ಳಿ ಚೀಲದಲ್ಲೇ ಕೊಳೆಯಿತು.

ತೇವಾಂಶ ಮತ್ತು ಡಿಸೆಂಬರ್‌ ಮೊದಲ ವಾರದಲ್ಲಿ ಸುರಿದ ಮಳೆಯಿಂದಾಗಿ ಎಪಿಎಂಸಿ ಆವರಣದಲ್ಲಿ ದಾಸ್ತಾನಿದ್ದ 60 ರಿಂದ 70 ಸಾವಿರ ಕ್ವಿಂಟಲ್‌ನಷ್ಟು ಈರುಳ್ಳಿ ಅಲ್ಲಿಯೇ ಮೊಳಕೆಯೊಡೆದು ಕೊಳೆಯಿತು. ಈಗ ಈ ಕೊಳೆತ ಈರುಳ್ಳಿಯನ್ನು ರೈತರು ಜಮೀನಿಗೆ ಗೊಬ್ಬರವಾಗಿ ಬಳಸಲು ತೆಗೆದುಕೊಂಡು ಹೋಗುತ್ತಿದ್ದಾರೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಗಾದೆಯಂತೆ ಜಿಲ್ಲಾಡಳಿತ ರೈತರಿಂದ ಖರೀದಿಸಿದ ಈರುಳ್ಳಿಯನ್ನು ಮತ್ತೆ  ರೈತರ ಜಮೀನಿಗೆ ವಾಪಸ್‌ ಕಳುಹಿಸುತ್ತಿದೆ.

3.81 ಲಕ್ಷ ಕ್ವಿಂಟಲ್‌ ಈರುಳ್ಳಿ ಖರೀದಿ: ಬೆಂಬಲ ಬೆಲೆ ಯೋಜನೆಯಡಿ ಜಿಲ್ಲಾಡಳಿತ ರೈತರಿಂದ ಒಟ್ಟು 3.81 ಲಕ್ಷ ಕ್ವಿಂಟಲ್‌ ಈರುಳ್ಳಿ ಖರೀದಿ ಮಾಡಿದೆ. ಡಿಸೆಂಬರ್‌ ಮೊದಲ ವಾರದಲ್ಲಿ ಮಳೆ ಸುರಿದಿದ್ದರಿಂದ 5 ಖರೀದಿ ಕೇಂದ್ರಗಳಲ್ಲಿ ದಾಸ್ತಾನಿದ್ದ ಸಾಕಷ್ಟು ಈರುಳ್ಳಿ ಮೊಳಕೆಯೊಡೆದು, ಕೊಳೆತು ಹೋಗಿವೆ. ಜಿಲ್ಲಾಡಳಿತವು ಸರ್ವ ಪ್ರಯತ್ನ ನಡೆಸಿ ಸಾಧ್ಯವಿರುವಷ್ಟು ಈರುಳ್ಳಿಯನ್ನು ಮಾರಾಟ ಮಾಡಿದೆ. ಕೊಳೆತಿರುವ ಈರುಳ್ಳಿಯನ್ನು ರೈತರು ಸ್ವಯಂ ಪ್ರೇರಿತವಾಗಿ ಬಂದು ಟ್ರ್ಯಾಕ್ಟರ್‌ ಮೂಲಕ ತಮ್ಮ ಜಮೀನಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ರಾಜ್ಯ  ಸಹಕಾರ ಮಹಾಮಂಡಳದ ಶಾಖಾ ವ್ಯವಸ್ಥಾಪಕ ಶ್ರೀಕಾಂತ ‘ಪ್ರಜಾವಾಣಿ’ಗೆ ತಿಳಿಸಿದರು.

ನೀರೀಕ್ಷೆ ಮೀರಿ ಖರೀದಿ:   ರಾಜ್ಯದಲ್ಲೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆ ಗದಗ. ಜಿಲ್ಲೆಯಲ್ಲಿ ಕಳೆದ ಒಂದು ದಶಕದಲ್ಲೇ ಈರುಳ್ಳಿ ಬೆಳೆಯುವ ಪ್ರದೇಶ ಶೇ 40ರಷ್ಟು ಅಂದರೆ 10,562 ಹೆಕ್ಟೇರ್‌ಗಳಷ್ಟು ಹೆಚ್ಚಿದೆ. 2005–06ರಲ್ಲಿ ಜಿಲ್ಲೆಯ ಐದೂ ತಾಲ್ಲೂಕುಗಳು ಸೇರಿ ಒಟ್ಟು 26,665 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿತ್ತು. ಸದ್ಯ ಇದು 37,227 ಹೆಕ್ಟೇರ್‌ ಪ್ರದೇಶಕ್ಕೆ ವಿಸ್ತರಿಸಿಕೊಂಡಿದೆ. ಸತತ 4 ವರ್ಷಗಳ ಬರ ಇದ್ದರೂ, ಈ ಬಾರಿ ದಾಖಲೆ ಪ್ರಮಾಣದಲ್ಲಿ ಈರುಳ್ಳಿ ಬೆಳೆಯ ಲಾಗಿದೆ. ಜಿಲ್ಲಾಡಳಿತದ ಎಲ್ಲ ನಿರೀಕ್ಷೆಗ ಳನ್ನು ತಲೆಕೆಳಗೆ ಮಾಡಿ ದುಪ್ಪಟ್ಟು ಪ್ರಮಾಣದಲ್ಲಿ ಈರುಳ್ಳಿ ಖರೀದಿ ಕೇಂದ್ರಕ್ಕೆ ಬಂದಿದೆ. ಬೇರೆ ಜಿಲ್ಲೆಗಳಿಂದ ಈರುಳ್ಳಿ ಆವಕ ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಈರುಳ್ಳಿ ಹೇಗೆ ಖರೀದಿ ಕೇಂದ್ರಕ್ಕೆ ಬಂತು ಎಂಬ ದೊಡ್ಡ ಪ್ರಶ್ನೆ ಈಗಲೂ ಅಧಿಕಾರಿ ಗಳನ್ನು ಕಾಡುತ್ತಿದೆ.  ಒಟ್ಟಿನಲ್ಲಿ ಬೆಂಬಲ ಬೆಲೆ ಖರೀದಿಯಲ್ಲಿ ಜಿಲ್ಲಾಡ ಳಿತಕ್ಕೆ ₹7ರಿಂದ ₹8 ಕೋಟಿಯಷ್ಟು ನಷ್ಟವಾಗಿದೆ.

***

– ಹುಚ್ಚೇಶ್ವರ ಅಣ್ಣಿಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT