ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಪರಿಕಲ್ಪನೆಯ ಖಾದಿ ಈಗ ಉಳಿದಿಲ್ಲ...

Last Updated 31 ಜನವರಿ 2017, 5:41 IST
ಅಕ್ಷರ ಗಾತ್ರ

ಧಾರವಾಡ:  ‘ಮಹಾತ್ಮ ಗಾಂಧೀಜಿ ಕಂಡ ಕನಸು ಇನ್ನೂ ನನಸಾಗಿಲ್ಲ. ಅವರ ಪರಿಕಲ್ಪನೆಯ ಖಾದಿ ಕೂಡ ಉಳಿದಿಲ್ಲ’ ಎಂದು ಗಾಂಧೀಜಿ ಮರಿ­ಮೊಮ್ಮಗ ತುಷಾರ್‌ ಗಾಂಧಿ ಸೋಮ­ವಾರ ಇಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಹುತಾತ್ಮ ದಿನದ ಅಂಗವಾಗಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಸ್ಮಾರಕ ಮೂಲತತ್ವ ಉಪನ್ಯಾಸ ಕಾರ್ಯಕ್ರಮಕ್ಕೆ ಬಂದಿದ್ದ ಅವರು ‘ಪ್ರಜಾವಾಣಿ’ ಜತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಗ್ರಾಮೀಣ ಕೈಗಾರಿಕೆಗಳ ಆಯೋಗದ (ಕೆವಿಐಸಿ) ಗೋಡೆ ಕ್ಯಾಲೆಂಡರ್‌ನಲ್ಲಿ ನರೇಂದ್ರ ಮೋದಿ ನೂಲುತ್ತಿರುವ ಚಿತ್ರ ಹಾಕಿದ್ದರ ಬಗ್ಗೆ ನಿಮ್ಮ ಅಭಿಪ್ರಾಯ?
ಇದರಲ್ಲಿ ಆಶ್ಚರ್ಯ ಪಡುವಂಥದ್ದು ಏನೂ ಇಲ್ಲ. ಕಾರಣ, ಗಾಂಧಿ ಆಶಯ­ದಂತೆ ಆಯೋಗ ಕಾರ್ಯನಿರ್ವ­ಹಿಸುತ್ತಿಲ್ಲ. ಹೀಗಾಗಿ ಅವರ ಖಾದಿ ಕನಸು ನನಸಾಗಲಿಲ್ಲ. ಸ್ವಾವಲಂಬನೆ ಹಾಗೂ ಗ್ರಾಮೋದ್ಯೋಗಕ್ಕೆ ನೆರವಾಗುವ ಉದ್ದೇಶದಿಂದ ತಾವೇ ಚರಕ ಹಿಡಿದು ಗಾಂಧಿ ನೂಲುವುದನ್ನು ಆರಂಭಿಸಿದರು. ಬಳಿಕ ಬಂದ ಸರ್ಕಾರಗಳು ಅದಕ್ಕೆ ಪೂರಕವಾಗಿ ಸ್ಪಂದಿಸಲಿಲ್ಲ.

ಆಯೋಗದಿಂದ ಖಾದಿ ಜೀನ್ಸ್‌ ತಯಾರಿಸುವ ಪ್ರಯತ್ನ ಏನಾಯಿತು?
ಆ ನಿಟ್ಟಿನಲ್ಲಿ ಯಾವ ಪ್ರಯತ್ನವನ್ನೂ ಮಾಡಿಲ್ಲ. ಕುರ್ತಾ ಹಾಗೂ ಪೈಜಾಮಾಕ್ಕೆ ಖಾದಿ ಆಯೋಗದ ವಿನ್ಯಾಸ ಹಾಗೂ ಆವಿಷ್ಕಾರಗಳು ನಿಂತಿವೆ. ಇದೀಗ ಬಾಬಾ ರಾಮದೇವ್‌ ಅವರು ಸ್ವದೇಶಿ ಜೀನ್ಸ್ ತರುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಅದು ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕು.

ನೋಟು ರದ್ದತಿ ಬದಲಾವಣೆ ತರಲಿದೆಯೇ?
ಇದು ಒಳ್ಳೆಯ ಉದ್ದೇಶವಾದರೂ ಜಾರಿ ಮಾಡಿದ ರೀತಿ ಸರಿ ಇರಲಿಲ್ಲ. ಜನರು ತೊಂದರೆ ಪಡುವಂತಾಯಿತು. ಕಂಗಾ­ಲಾಗಿದ್ದ ಜನರ ಖರ್ಚಿಗೆ ₹ 2 ಸಾವಿರ ಮುಖಬೆಲೆಯ ನೋಟು ಬಿಡುಗಡೆ ಮಾಡಿದ್ದು ಪರ್ಯಾಯವಂತೂ ಅಲ್ಲ. ಈಗಲೂ ಚಿಲ್ಲರೆ ಸಮಸ್ಯೆ ಬಗೆಹರಿದಿಲ್ಲ. ಕಪ್ಪು ಹಣ ಇರುವವರು ಅನ್ಯ ಮಾರ್ಗ­ಗಳ ಮೂಲಕ ತಮ್ಮ ಹಣ ಉಳಿಸಿಕೊಂಡಿದ್ದಾರೆ.

ಬಜೆಟ್‌ ನಿರೀಕ್ಷೆ ಏನು?
70 ವರ್ಷಗಳಲ್ಲಿ ಕೇವಲ 5–6 ಬಾರಿ ಮಾತ್ರ ಸಾಮಾನ್ಯ ಜನರ ಮೇಲೆ ಪ್ರಭಾವ ಬೀರುವ ಬಜೆಟ್‌ಗಳು ಮಂಡನೆ­ಯಾಗಿವೆ. ಉಳಿದಂತೆ ಪ್ರಯೋಜವಿಲ್ಲ. ಬಜೆಟ್ ಮಂಡನೆ ಒಂದು ಔಪಚಾರಿಕ ಪ್ರಕ್ರಿಯೆಯಾಗಿದೆ. ಹೀಗಾಗಿ ಮೋದಿ ಬಜೆಟ್‌ ಮೇಲೆ ಹೆಚ್ಚಿನ ನಿರೀಕ್ಷೆಗಳು ಇಲ್ಲ. ಬಂಡವಾಳಶಾಹಿಗಳು, ಉದ್ಯಮಿ­­ಗಳು ಬಜೆಟ್‌ ಅನ್ನು ಪೂರ್ವ­ಭಾವಿಯಾಗಿ ವೈಭ­ವೀಕರಿಸಿ, ಜನರಲ್ಲಿ ನಿರೀಕ್ಷೆ ಹುಟ್ಟಿ­ಸುವ ಮೂಲಕ ತಮ್ಮ ವ್ಯಾಪಾರ ಹೆಚ್ಚಿಸಿ­ಕೊಳ್ಳುತ್ತಿವೆಯೇ ಹೊರತು, ಬಜೆಟ್‌­ನಿಂದ ಸಾಮಾನ್ಯ ಜನರ ಜೀವನದಲ್ಲಿ ಯಾವುದೇ ಬದಲಾವಣೆ ಆಗುತ್ತಿಲ್ಲ.

ಪ್ರಸ್ತುತ ರಾಜಕೀಯ ವ್ಯವಸ್ಥೆ ಹೇಗಿದೆ?
ಕೇವಲ ಭಾರತ ಮಾತ್ರವಲ್ಲ ಇಡೀ ಜಗತ್ತಿನ ರಾಜಕೀಯ ಪರಿಸ್ಥಿತಿ ಸರಿ ಇಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಮತದಾರ­ರನ್ನು ನಂಬಿಸಿ ಮೋಸ ಮಾಡುತ್ತಿವೆ. ದೇಶ­ದಲ್ಲಿ ಜಾರಿ ಇರುವ ಗ್ರಾಮ ಸ್ವರಾಜ್‌, ಅಧಿಕಾರ ವಿಕೇಂದ್ರೀಕರಣ, ಉದ್ಯೋಗ ಖಾತ್ರಿಯಂಥ ಮಹತ್ವದ ಯೋಜನೆಗಳು ಬರೀ ಘೋಷಣೆಗಳಾಗಿ, ಜನರ ಆಶೋತ್ತರಗಳನ್ನು ಈಡೇರಿ­ಸುವಲ್ಲಿ ವಿಫಲವಾಗಿವೆ. ಎಲ್ಲೆಡೆ ಭ್ರಷ್ಟಾ­ಚಾರವೇ ಮುಖ್ಯವಾಗಿದೆ. ಇಂಥ ಸಂದರ್ಭದಲ್ಲಿ ನಕ್ಸಲ್‌ ಮಾದರಿಯ ಹೋರಾಟ ನಡೆದರೆ ಅದು ತಪ್ಪು ಎಂದು ಹೇಗೆ ಹೇಳುವುದು?

ಗಾಂಧೀಜಿ ಕನಸಿನಂತೆ ಭಾರತ ಅಭಿವೃದ್ಧಿ ಆಗಿದೆಯೇ?
ದೇಶದ ಅಭಿವೃದ್ಧಿ ಎನ್ನುವುದು ಕೇವಲ ಮಾತುಗಳಲ್ಲಿ ಆಗುತ್ತಿದೆ. ವಾಸ್ತವ ಸ್ಥಿತಿ ಬೇರೆಯೇ ಇದೆ. ನಗರದ ಆರ್ಥಿಕ ಚಟುವಟಿಕೆ  ಹೆಚ್ಚಾಗುತ್ತಿದ್ದರೆ, ಗ್ರಾಮೀಣ ಜನರ ಬಡತನ ಏರುಮುಖ­ದಲ್ಲಿದೆ. ಆಳುವ ವರ್ಗ ಗ್ರಾಮೀಣ ಭಾರತವನ್ನು ಮರೆತಂತಿದೆ. ಭಾರತ ಕೃಷಿ ಪ್ರಧಾನ ರಾಷ್ಟ್ರ. ಆದರೆ ಕೃಷಿಯನ್ನೇ ದೂರವಿಟ್ಟು ಕೈಗಾರಿಕೆ ಬೆಳೆಯಲು ಅವಕಾಶ ಕಲ್ಪಿಸುತ್ತಿರುವುದು ನಿಜಕ್ಕೂ ಕಳವಳಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT