ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಅಧ್ಯಕ್ಷರಾಗಿ ಮುದೇಗೌಡರ ಗಿರೀಶ್‌ ಆಯ್ಕೆ

ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ: ಕಾಂಗ್ರೆಸ್‌ ಬೆಂಬಲಿತರಿಗೆ ಅಧಿಕಾರ
Last Updated 31 ಜನವರಿ 2017, 6:41 IST
ಅಕ್ಷರ ಗಾತ್ರ
ದಾವಣಗೆರೆ: ಇಲ್ಲಿನ ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಮುದೇಗೌಡರ ಗಿರೀಶ್‌ ಹಾಗೂ ಉಪಾಧ್ಯಕ್ಷರಾಗಿ ಎಂ.ಬಿ.ಹಾಲಪ್ಪ ಸೋಮವಾರ ಆಯ್ಕೆಯಾದರು.
 
ಎಪಿಎಂಸಿ ಆವರಣದಲ್ಲಿ ಬೆಳಿಗ್ಗೆ 10ರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿತು. ಬೆಳಿಗ್ಗೆ 11ರವರೆಗೆ ನಾಮಪತ್ರ ಸ್ವೀಕರಿಸಲಾಯಿತು. ಬಳಿಕ 11.45ರ ವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಿತು. ಮಧ್ಯಾಹ್ನ 12ರಿಂದ 12.15 ರವರೆಗೆ ನಾಮಪತ್ರಗಳನ್ನು ಹಿಂಪಡೆ ಯಲು ಅವಕಾಶ ಕಲ್ಪಿಸಲಾಗಿತ್ತು. 
 
ಕಾಂಗ್ರೆಸ್‌ ಬೆಂಬಲಿತ ಮುದೇಗೌಡರ ಗಿರೀಶ್‌ ಹಾಗೂ ಮಾಯಕೊಂಡದ ಬಿಜೆಪಿ ಬೆಂಬಲಿತ ಆರ್‌.ಸುಧಾ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಹದಡಿ ಕ್ಷೇತ್ರದ ಕಾಂಗ್ರೆಸ್‌ ಬೆಂಬಲಿತ ಎಂ.ಬಿ.ಹಾಲಪ್ಪ ಹಾಗೂ ಲೋಕಿಕೆರೆ ಕ್ಷೇತ್ರದ ಬಿಜೆಪಿ ಬೆಂಬಲಿತ ಎಸ್‌.ಎಚ್‌. ಮಂಜುನಾಥ ಅವರು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
 
ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಒಟ್ಟು 14 ಸದಸ್ಯರು ಮತ ಚಲಾಯಿಸಿದರು. ಕಾಂಗ್ರೆಸ್‌ ಬೆಂಬಲಿತ 10 ಸದಸ್ಯರು ಹಾಗೂ ಬಿಜೆಪಿ ಬೆಂಬಲಿತ  ನಾಲ್ವರು ಸದಸ್ಯರಿದ್ದರು. ಮಧ್ಯಾಹ್ನ 1ಕ್ಕೆ ಆರಂಭವಾದ ಮತ ಚಲಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾದ ಎಲ್ಲ ಸದಸ್ಯರು ಮತಪತ್ರದ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು. 
 
ನಿರೀಕ್ಷೆಯಂತೆ ಮುದೇಗೌಡರ ಗಿರೀಶ್‌  ಹಾಗೂ ಎಂ.ಬಿ.ಹಾಲಪ್ಪ ಅವರು ತಲಾ 10 ಮತಗಳನ್ನು ಪಡೆದು ಆಯ್ಕೆಯಾದರೆ, ಆರ್‌.ಸುಧಾ ಹಾಗೂ ಎಚ್‌.ಎಸ್‌. ಮಂಜುನಾಥ ಅವರು ತಲಾ 4 ಮತಗಳನ್ನು ಪಡೆದರು. 
 
ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ತಹಶೀಲ್ದಾರ್‌ ಜಿ.ಸಂತೋಷ್‌ ಕುಮಾರ್‌ ಅವರು ಫಲಿತಾಂಶವನ್ನು ಘೋಷಿಸಿದರು. 
 
**
‘₹ 9.58 ಕೋಟಿ ಆದಾಯ ನಿರೀಕ್ಷೆ’
‘ಪ್ರಸಕ್ತ ಸಾಲಿನಲ್ಲಿ ₹ 9.58 ಕೋಟಿ ಆದಾಯ ನಿರೀಕ್ಷಿಸಿದ್ದು, ಈಗಾಗಲೇ ₹ 7.5 ಕೋಟಿ ತೆರಿಗೆ ಸಂಗ್ರಹವಾಗಿದೆ. ಇನ್ನೂ ₹ 2.08 ಕೋಟಿ ಆದಾಯ ಬರಬೇಕಿದೆ’ ಎಂದು ದಾವಣಗೆರೆ ಎಪಿಎಂಸಿ ನೂತನ ಅಧ್ಯಕ್ಷ ಮುದೇಗೌಡರ ಗಿರೀಶ್‌ ತಿಳಿಸಿದರು. 
 
ಚುನಾವಣೆ ಬಳಿಕ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದು, ಸಾವಿರಾರು ಎಕರೆ ಪ್ರದೇಶಗಳಲ್ಲಿ ಬೆಳೆ ಹಾನಿಯಾಗಿದೆ. ಹೀಗಾಗಿ ನಿರೀಕ್ಷಿತ ಗುರಿ ಸಾಧಿಸಲು ಕಷ್ಟವಾಗುತ್ತದೆ’ ಎಂದು ತಿಳಿಸಿದರು. 
 
‘ಎಪಿಎಂಸಿಯ ₹141 ಕೋಟಿ ಅನುದಾನದಲ್ಲಿ ನಗರದ ವಿವಿಧೆಡೆ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಜೊತೆಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸುವುದು, ರೈತರ ಧಾನ್ಯಗಳ ಸಂಗ್ರಹಕ್ಕೆ ಗೋದಾಮುಗಳ ನಿರ್ಮಾಣ, ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸೇರಿದಂತೆ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಇದಕ್ಕಾಗಿ ₹30 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.
 
‘ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ, ಎಪಿಎಂಸಿಯಲ್ಲಿ ವಿದ್ಯುನ್ಮಾನ ತೂಕದ ಯಂತ್ರಗಳ ಅಳವಡಿಕೆ, ಮಳಿಗೆಗಳ ಬಾಡಿಗೆ ಪರಿಶೀಲನೆ ಸೇರಿದಂತೆ ರೈತರ ಪ್ರಗತಿಗೆ ಶ್ರಮಿಸಲಾಗುವುದು’ ಎಂದು ಹೇಳಿದರು.
 
‘ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮಾರ್ಗದರ್ಶನದಲ್ಲಿ ದಾವಣಗೆರೆ ಎಪಿಎಂಸಿಯನ್ನು ರಾಜ್ಯದಲ್ಲಿಯೇ ನಂ. 1 ಎಪಿಎಂಸಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ಅವರು ತಿಳಿಸಿದರು. 
 
ನೂತನ ಉಪಾಧ್ಯಕ್ಷ ಎಂ.ಬಿ. ಹಾಲಪ್ಪ ಮಾತನಾಡಿ, ‘ಅಗತ್ಯವಿರುವ ಕಡೆಯಲ್ಲಿ ಗೋದಾಮು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಎಪಿಎಂಸಿ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT