ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೆ ಹಾಹಾಕಾರ; ಸಂಕಷ್ಟದಲ್ಲಿ ಜನ–ಜಾನುವಾರು

ಆರಂಭವಾಗಿದೆ ಬಿಸಿಲಿನ ನರ್ತನ; ಮಾರ್ಚ್‌ ಏಪ್ರಿಲ್‌ ವೇಳೆಗೆ ಜಲಾಶಯ ಬರಿದಾಗುವ ಆತಂಕ
Last Updated 31 ಜನವರಿ 2017, 6:43 IST
ಅಕ್ಷರ ಗಾತ್ರ

ಹೊಸಪೇಟೆ: ಬೇಸಿಗೆಗೆ ಮುನ್ನವೇ ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ಕುಡಿ­ಯುವ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿದೆ.

ಮಳೆಗಾಲದಲ್ಲಿ ಸಮರ್ಪಕವಾಗಿ ವರ್ಷಧಾರೆ ಆಗದೇ ಇರುವ ಕಾರಣ ಈ ಬಾರಿ ಜಲಾಶಯ ಭರ್ತಿಯಾಗಿಲ್ಲ. ಅಷ್ಟೇ ಅಲ್ಲ, ಅಣೆಕಟ್ಟೆ ನಿರ್ಮಾಣವಾದ ಬಳಿಕ ಇದೇ ಮೊದಲ ಬಾರಿಗೆ ಅತಿ ಕಡಿಮೆ ನೀರಿನ ಸಂಗ್ರಹ ಇದೆ. ಜನವರಿ ಅಂತ್ಯದಲ್ಲೇ ಸೂರ್ಯ ಕೆಂಡ ಕಾರುತ್ತಿ­ದ್ದಾನೆ. ಪರಿಸ್ಥಿತಿ ಹೀಗೆಯೇ ಮುಂದು­ವರಿದರೆ ಜಲಾಶಯದಲ್ಲಿ ಈಗಿರುವ ನೀರು ಕೂಡ ಆವಿಯಾಗಿ ಬರುವ ಮಾರ್ಚ್‌, ಏಪ್ರಿಲ್‌ ವರೆಗೆ ಸಂಪೂರ್ಣ ಬತ್ತು ಹೋದರೂ ಅಚ್ಚರಿ ಪಡಬೇಕಿಲ್ಲ.

ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಕಾರಣ ಈ ಬಾರಿ ಮಕರ ಸಂಕ್ರಮಣದ ದಿನವೂ ನೀರು ಹರಿಸಲಿಲ್ಲ. ಇದರಿಂದ ಪುಣ್ಯಸ್ನಾನಕ್ಕೆ ಜನ ಪರದಾಟ ನಡೆಸುವಂತಾಗಿತ್ತು. ಕುಡಿಯುವುದಕ್ಕೆ ಹೊರತುಪಡಿಸಿ ಅನ್ಯ ಉದ್ದೇಶಕ್ಕೆ ನೀರು ಹರಿಸಬಾರದು ಎಂದು ಸರ್ಕಾರ ನಿರ್ದೇಶನ ಕೊಟ್ಟಿರುವುದರಿಂದ ಕಾಲುವೆಗಳಲ್ಲಿ ನೀರಿಲ್ಲದೆ ಬಿಕೋ ಎನ್ನುತ್ತಿವೆ.

ಬರದ ವಲಸೆ ಹಕ್ಕಿಗಳು:
ತುಂಗಭದ್ರಾ ಜಲಾಶಯ ಹಾಗೂ ಕಾಲುವೆಗಳಲ್ಲಿರುವ ನೀರನ್ನು ನೆಚ್ಚಿಕೊಂಡು ವಿವಿಧ ಭಾಗಗಳಿಂದ ಪ್ರತಿವರ್ಷ ಅಪಾರ ಸಂಖ್ಯೆಯಲ್ಲಿ ಹಕ್ಕಿಗಳು ವಲಸೆ ಬರುತ್ತಿದ್ದವು. ಆದರೆ, ಈ ಬಾರಿ ಪರಿಸ್ಥಿತಿ ಅನುಕೂಲಕರವಿಲ್ಲದ ಕಾರಣ ಹಕ್ಕಿಗಳು ಈ ಕಡೆ ಮುಖ ಮಾಡಿಲ್ಲ. ಸ್ಥಳೀಯ ಜನ–ಜಾನುವಾರುಗಳು ನೀರಿಲ್ಲದೇ ಸಮಸ್ಯೆ ಎದುರಿಸುತ್ತಿವೆ.
ಜಲ ಮೂಲವನ್ನೇ ನೆಚ್ಚಿಕೊಂಡು ತುಂಗಭದ್ರಾ ನದಿ ತಟದಲ್ಲಿ ಅನೇಕ ಜೀವ ಜಂತುಗಳು ವಾಸಿಸುತ್ತಿವೆ. ನೀರು ನಾಯಿ, ಮೊಸಳೆ, ಆಮೆ, ಚಿರತೆ ಹಾಗೂ ಮಂಗಗಳು ಇದರಲ್ಲಿ ಸೇರಿವೆ.

ನದಿ ಸಂಪೂರ್ಣ ಬತ್ತು ಹೋಗಿರುವುದರಿಂದ ಮಂಗಗಳು ಸೇರಿದಂತೆ ಇತರ ಜಾನುವಾರುಗಳು ಜನವಸತಿ ಪ್ರದೇಶಗಳಿಗೆ ಲಗ್ಗೆ ಇಟ್ಟು ಬಾಯಾರಿಸಿಕೊಳ್ಳುತ್ತಿವೆ. ಹಂಪಿಗೆ ಬರುವ ಪ್ರವಾಸಿಗರ ಕೈಯಲ್ಲಿ ನೀರು ಅಥವಾ ತಂಪು ಪಾನೀಯಗಳ ಬಾಟಲ್‌ಗಳನ್ನು ಕಂಡರೆ ಮಂಗಗಳು ಮೂಗಿ ಬೀಳುತ್ತಿವೆ. ನಲ್ಲಿ ಹಾಗೂ ಕೊಳವೆಬಾವಿಗಳ ಬಳಿ ದಾಹ ತೀರಿಸಿಕೊಳ್ಳಲು ಹೆಣಗಾಟ ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

‘ಜನವರಿಯಲ್ಲೇ ತುಂಗಭದ್ರಾ ನದಿ ಎಂದೂ ಬತ್ತಿರಲಿಲ್ಲ. ಇದೇ ಮೊದಲ ಬಾರಿಗೆ ಹೀಗಾಗಿದೆ. ಈಗಲೇ ಪರಿಸ್ಥಿತಿ ಹೀಗಿದ್ದರೆ ಬೇಸಿಗೆಯಲ್ಲಿ ಹೇಗಿರಬಹುದು. ಈ ಬಾರಿ ಬೇಸಿಗೆ ಕಳೆಯುವುದು ಬಹಳ ಕಷ್ಟ ಎನಿಸುತ್ತಿದೆ’ ಎಂದು ಹಂಪಿ ಗೈಡ್‌ ಗೋಪಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನ ಗಾದಿಗನೂರು, ಕೊಟಗಿನಹಾಳು, ಕಾಕುಬಾಳು, ಧರ್ಮಸಾಗರ ಸೇರಿದಂತೆ ಹಲವೆಡೆ ಈಗಾಗಲೇ ನೀರಿಗಾಗಿ ಜನ ಪರದಾಟ ನಡೆಸುತ್ತಿದ್ದಾರೆ. ನಗರದ ಚಿತ್ರಕೇರಿಯ ಕುರುಬರ ಓಣಿ, ಕಬ್ಬೇರಪೇಟೆಯಲ್ಲೂ ಇದೇ ಪರಿಸ್ಥಿತಿ ಇದೆ. ಈ ಭಾಗಗಳಿಗೆ ನಗರಸಭೆಯು ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದೆ. ಈಗಲೇ ಪರಿಸ್ಥಿತಿ ಹೀಗಿದ್ದರೆ ಬೇಸಿಗೆಯಲ್ಲಿ ಎಂತಹ ಸ್ಥಿತಿ ಇರಬಹುದು ಎಂದು ಇದರಿಂದ ಅಂದಾಜಿಸಬಹುದು.

‘ಬೇಸಿಗೆಯಲ್ಲಿ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವ ಪ್ರದೇಶಕ್ಕೆ ಹೇಗೆ ನೀರು ಪೂರೈಸಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಸಿದ್ಧತೆ ಮಾಡಿಕೊಳ್ಳಲು ತಿಳಿಸಲಾಗಿದೆ. ನೀರು ಮತ್ತು ಮೇವಿಗೆ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ. ಭಾಸ್ಕರ್‌ ತಿಳಿಸಿದ್ದಾರೆ.

‘ಲಕ್ಷ್ಮಿ’ಗೂ ಸಮಸ್ಯೆ
ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿರುವ ‘ಲಕ್ಷ್ಮಿ’ ಹೆಸರಿನ ಆನೆಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ನೀರು ಕುಡಿಯಲು ಲಕ್ಷ್ಮಿಗೆ ಸರಿಯಾದ ವ್ಯವಸ್ಥೆ ಇಲ್ಲ. ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಜನರಿಗಾಗಿ ಕುಡಿಯುವ ನೀರಿಗಾಗಿ ಅಳವಡಿಸಿರುವ ನಲ್ಲಿಗಳ ಬದಿ ಕೊಳವೆ ಮೂಲಕ ಅದಕ್ಕೆ ನೀರು ಕೊಡಲಾಗುತ್ತಿದೆ. ಕೊಳವೆ ಮೂಲಕ ಹರಿದು ಬರುವ ನೀರನ್ನು ಸ್ವಲ್ಪ ಸ್ವಲ್ಪವಾಗಿ ಸೊಂಡಿಲನಲ್ಲಿ ಸಂಗ್ರಹಿಸಿ ಕುಡಿಯಬೇಕಾಗಿದೆ.
ವಿರೂಪಾಕ್ಷ ದೇಗುಲಕ್ಕೆ ಯಾರೇ ಭೇಟಿ ನೀಡಿದರೂ ಲಕ್ಷ್ಮಿಗೆ ನಮಸ್ಕರಿಸಿ, ಅದರ ಆಶೀರ್ವಾದ ಪಡೆಯದೇ ಹಿಂತಿರುಗುವುದಿಲ್ಲ. ಅದನ್ನು ಅಷ್ಟು ಪೂಜ್ಯ, ಗೌರವದಿಂದ ಜನ ಕಾಣುತ್ತಾರೆ. ಹೀಗಿರುವಾಗ ಅದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದೇ ಇರುವುದಕ್ಕೆ ಭಕ್ತರು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಎರಡನೇ ಬೆಳೆ ಬೆಳೆಯದಿರಿ’
‘ಅಣೆಕಟ್ಟೆಯಲ್ಲಿ ನೀರಿನ ಅಲಭ್ಯತೆ ಇರುವ ಕಾರಣ ರೈತರು ಎರಡನೇ ಬೆಳೆ ಬೆಳೆಯಬಾರದು’ ಎಂದು ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ತಿಳಿಸಿದ್ದಾರೆ.
ಮೋಟಾರ್‌ಗಳ ಮೂಲಕ ಯಾರೂ ಅಕ್ರಮವಾಗಿ ನದಿ ನೀರನ್ನು ಉಪಯೋಗಿಸಿ­ಕೊಳ್ಳ­ಬಾರದು. ಕಾನೂನು ಮೀರಿದರೆ ಕ್ರಮ ಜರುಗಿಸಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಬಹಳ ಕಡಿಮೆ ಇದೆ. ಸದ್ಯ ಜಲಾಶಯದಲ್ಲಿ 5.679 ಟಿಎಂಸಿ ಅಡಿ ನೀರಿದೆ. ಹಿಂದಿನ ವರ್ಷ ಇದೇ ದಿನ 10.857 ಟಿಎಂಸಿ ಅಡಿ ನೀರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT