ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಾವೇಶದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ ವಿಶ್ವಾಸ
Last Updated 31 ಜನವರಿ 2017, 6:45 IST
ಅಕ್ಷರ ಗಾತ್ರ
ರಾಯಚೂರು: ಕಾಂಗ್ರೆಸ್‌ ಪಕ್ಷಕ್ಕೆ ಈಗ ಸಂಘರ್ಷದ ಸಮಯ ಎದುರಾಗಿದೆ. ಆದರೆ, ಎದೆಗುಂದುವ ಅಗತ್ಯ ಇಲ್ಲ. ಶ್ರೀಮಂತ ಇತಿಹಾಸ ಇರುವ ಪಕ್ಷವು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷೆ  ಲಕ್ಷ್ಮಿ ಹೆಬ್ಬಾಳ್ಕರ್‌ ವಿಶ್ವಾಸ ವ್ಯಕ್ತಪಡಿಸಿದರು.
 
ನಗರದ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸೋಮವಾರ ನಡೆದ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದರು.
 
ದೇಶ ಒಡೆಯುವ ಕೋಮುವಾದಿ ಶಕ್ತಿಗಳನ್ನು ದೂರ ಇರಿಸಬೇಕಿದೆ. ದೇಶಕ್ಕೆ ಈಗ ಬೇಕಿರುವುದು ಅಚ್ಛೆ ದಿನ್‌ ಅಲ್ಲ, ಸಚ್ಛೆ ದಿನ್‌. ಆದ್ದರಿಂದ ಮುಖವಾಡದ ನಾಯಕರ ಮಾತುಗಳಿಗೆ ಮರುಳಾಗಬಾರದು. 
 
ಬಿಜೆಪಿ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದರೆ ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ ಎಂದು ಅವರು ದೂರಿದರು.
 
ಮಹಿಳೆಯರಿಗೆ ಸಮಾನ ಅವಕಾಶವನ್ನು ಸಾರಿದ ಬಸಣ್ಣನವರ ಸಿದ್ಧಾಂತವೇ ಕಾಂಗ್ರೆಸ್‌ ಪಕ್ಷದ ಬುನಾದಿ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸಲು ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಪ್ರಯತ್ನ ನಡೆದಿತ್ತು. ಆದರೆ, ಬಿಜೆಪಿ ಅದಕ್ಕೆ ಅಡ್ಡಗಾಲು ಹಾಕಿತು. ಈಗ ಇಲ್ಲ ಅಪಪ್ರಚಾರ ಮಾಡುತ್ತಿದೆ ಎಂದು ಟೀಕಿಸಿದರು.
 
ದಲಿತರು, ಹಿಂದುಳಿದವರ್ಗದವರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಯವರು ಈಗ ಈ ವರ್ಗಗಳ ಬಗ್ಗೆ ಮಾತನಾಡುತ್ತಿದ್ದಾರೆ. ಮೊದಲಿಲ್ಲದ ಕಾಳಜಿ ಈಗೇಕೆ ಬಂತು ಎಂದು ಮೂದಲಿಸಿದರು.
 
ಸಮಾವೇಶವನ್ನು ಉದ್ಘಾಟಿಸಿದ ಬಿ.ವಿ.ನಾಯಕ ಮಾತನಾಡಿ,  ಪುರುಷ ಪ್ರಧಾನ ದೇಶದಲ್ಲಿ ಮಹಿಳೆಯ ಪಾತ್ರ ಮಹತ್ವದ್ದು. ಕುಟುಂಬದ ಆರ್ಥಿಕತೆ, ಮಕ್ಕಳಿಗೆ ಸಂಸ್ಕೃತಿ, ಶಿಕ್ಷಣ ನೀಡುವ ಮಹಿಳೆಯರು ಮುನ್ನೆಲೆಗೆ ಬಂದರೆ ಸಮಾಜವು ಅಪರಾಧ ಮುಕ್ತವಾಗುತ್ತದೆ. ದೇಶ ಪ್ರಗತಿಯತ್ತ ಸಾಗುತ್ತದೆ ಎಂದರು.
 
ಜಿಲ್ಲಾ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಎ.ವಸಂತಕುಮಾರ ಮಾತನಾಡಿ, ಸಮಾಜ ಸೇವೆ ಮತ್ತು ರಾಜಕೀಯದಲ್ಲಿ ಮಹಿಳೆಯರು ಸಕ್ರಿಯವಾಗಿ ತೊಡಗಿಕೊಳ್ಳಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
 
ಅಧಿಕಾರ ವಿಕೇಂದ್ರೀಕರಣ ನಿಜ ಅರ್ಥದಲ್ಲಿ ಆಗಬೇಕಾದರೆ, ರಾಜಕೀಯ ಮುಖಂಡರು ತಮ್ಮ ಕುಟುಂಬದ ಹೆಣ್ಣು ಮಕ್ಕಳನ್ನು ಬೆಳೆಸುವ ಬದಲು ಸಾಮಾನ್ಯ ಮಹಿಳೆಯರನ್ನು ರಾಜಕೀಯವಾಗಿ ಬೆಳೆಯಲು ಪ್ರೋತ್ಸಾಹಿಸುವ ಪ್ರಯತ್ನಗಳು ನಡೆಯಬೇಕು ಎಂದು ಹೇಳಿದರು.
 
ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ರಾಮಣ್ಣ ಇರಬಗೇರಾ, ಮುಖಂಡ ಸೈಯದ್‌ ಯಾಸೀನ್‌ ಮಾತನಾಡಿದರು.
 
ಸಮಾವೇಶದಲ್ಲಿ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಾಲಾ ಬೆಣ್ಣಿ, ನಗರಸಭೆ ಅಧ್ಯಕ್ಷೆ ಹೇಮಲತಾ ಬೂದೆಪ್ಪ, ರಾಜ್ಯ ಮಹಿಳಾ ಘಟಕದ ಪದಾಧಿಕಾರಿಗಳಾದ ಕವಿತಾ ರೆಡ್ಡಿ, ನಯನಾ, ಮಾಜಿ ಸಚಿವೆ ಎ.ಪುಷ್ಪಾವತಿ, ಮುಖಂಡರಾದ ಕೆ.ಶಾಂತಪ್ಪ, ಜಿ.ಶಿವಮೂರ್ತಿ, ಜಯವಂತರಾವ್‌ ಪಂತಗೆ, ರಾಜಶೇಖರನಾಯಕ ಸೇರಿದಂತೆ ಪಕ್ಷದ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.
 
**
‘ಐ.ಟಿ ದಾಳಿ: ಬಿಜೆಪಿ ಅಪಪ್ರಚಾರ’
ರಾಯಚೂರು: ‘ನನ್ನ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು ದುರುದ್ದೇಶ ಪೂರಿತ. ನನ್ನ ಮನೆಯಲ್ಲಿ ₹162 ಕೋಟಿ ಹಣ ದೊರೆತಿದೆ ಎಂದು ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಪಪ್ರಚಾರ ಮಾಡುತ್ತಿದೆ’ ಎಂದು  ಲಕ್ಷ್ಮಿ ಹೆಬ್ಬಾಳ್ಕರ್‌ ಆರೋಪಿಸಿದರು.
 
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರು ರಾಜೀನಾಮೆಗೆ ಒತ್ತಾಯಿಸಿದ ಮಾತ್ರಕ್ಕೆ ನಾನು ರಾಜೀನಾಮೆ ಕೊಡುವುದಿಲ್ಲ. ನನ್ನಿಂದ ಕಾಂಗ್ರೆಸ್‌ಗೆ ಮುಜುಗರ ಆಗಿದೆ ಎಂದು ವರಿಷ್ಠರು ಹೇಳಿದರೆ ರಾಜೀನಾಮೆ ನೀಡುತ್ತೇನೆ’ ಎಂದರು.
 
‘ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯ ಬಗ್ಗೆ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ ನಂತರ ದಾಳಿ ಸಂದರ್ಭದಲ್ಲಿ ಎಷ್ಟು ಹಣ ದೊರೆಯಿತು ಎಂಬುದನ್ನು ಬಹಿರಂಗ ಪಡಿಸುವೆ’ ಎಂದರು.
 
‘ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವುದು ದುರದೃಷ್ಟಕರ. ಅವರ ಮನವೊಲಿಸುವ ಪ್ರಯತ್ನವನ್ನು ಪಕ್ಷದ ವರಿಷ್ಠರು ಮಾಡುತ್ತಿದ್ದಾರೆ. ಸಂಸದ ಪ್ರಕಾಶ ಹುಕ್ಕೇರಿ ಕಾಂಗ್ರೆಸ್ ತೊರೆಯುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 
**
ನೆಹರೂ– ಗಾಂಧಿ ಕುಟುಂಬ ದೇಶಕ್ಕೆ ಸಲ್ಲಿಸಿರುವ ಸೇವೆ ಸ್ಮರಣೀಯ. ಆದರೆ, ಟೀಕೆ ಮಾಡುತ್ತಾರೆ. ಗಾಂಧೀಜಿ ಅವರನ್ನು ಹತ್ಯೆ ಮಾಡಿದವರಿಂದ ನಾವು ನೀತಿ ಪಾಠ ಕಲಿಯಬೇಕಿಲ್ಲ
-ಲಕ್ಷ್ಮಿ ಹೆಬ್ಬಾಳ್ಕರ್‌, 
ಮಹಿಳಾ ಕಾಂಗ್ರೆಸ್‌   ರಾಜ್ಯ  ಘಟಕದ ಅಧ್ಯಕ್ಷೆ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT