ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರ್ಗ್‌ ಗ್ರಾಮಚಿಕ್ಕದು; ಸಮಸ್ಯೆ ದೊಡ್ಡದು

ಅನುಷ್ಠಾನಗೊಳ್ಳದ ಯೋಜನೆಗಳು, ಬಸ್‌ ಸಂಚಾರ ಕಾಣದ ಗ್ರಾಮಸ್ಥರು
Last Updated 31 ಜನವರಿ 2017, 6:48 IST
ಅಕ್ಷರ ಗಾತ್ರ
ಕಮಲನಗರ: ಗಬ್ಬೆದ್ದು ನಾರುವ ಚರಂಡಿಗಳು, ರಸ್ತೆಯ ಮಧ್ಯೆದಲ್ಲಿ ಹರಿಯುವ ಕೊಳಚೆ ನೀರು, ಸಂಚಾರಕ್ಕೆ ಕಿರಿಕಿರಿ ಉಂಟುಮಾಡುತ್ತಿರುವ ರಸ್ತೆ ಮೇಲಿನ ತಿಪ್ಪೆಗಳು, ಕಣ್ಣು ಹಾಯಿಸಿದಲ್ಲೆಲ್ಲಾ ಅವ್ಯವಸ್ಥೆ–ಗಲೀಜು, ಸಂಚರಿಸದ ಬಸ್‌, ಮಹಿಳಾ ಶೌಚಾಲಯದ ಸಮಸ್ಯೆ... ಹೀಗೆ ಎಲ್ಲ ಸಮಸ್ಯೆಗಳ ಆಗರ ಸಮೀಪದ ಚಿಕಮುರ್ಗ್‌ ಗ್ರಾಮ.
 
ಕಮಲನಗರ ಗ್ರಾಮ ಪಂಚಾಯಿತಿಗೆ ಒಳಪಡುವ ಮುರ್ಗ್‌ (ಕೆ) ಎಂತಲೂ ಕರೆಯಲ್ಪಡುವ ಚಿಕಮುರ್ಗ್‌ ಗ್ರಾಮ  1,400  ಜನಸಂಖ್ಯೆ ಹೊಂದಿದೆ. ಚಿಕ್ಕ ಗ್ರಾಮವಾದರೂ ಇಲ್ಲಿ ಸಮಸ್ಯೆಗಳು ದೊಡ್ಡವು. ಸಮಸ್ಯೆಗಳ ಪರಿಹಾರಕ್ಕೆ ಗ್ರಾಮ ಪಂಚಾಯಿತಿಯವರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎನ್ನುತ್ತಾರೆ ಗ್ರಾಮಸ್ಥರು.
 
ಬಸ್‌ ಸಂಚಾರ ಇಲ್ಲ: ಸಮೀಪದ ಬಾಲೂರು ಗ್ರಾಮವು ಮಹಾರಾಷ್ಟ್ರದ ಗಡಿಯಲ್ಲಿರುವ ವಾಗಧರಿ ಗ್ರಾಮದಿಂದ ಕೇವಲ 1.5 ಕಿ.ಮೀ ಹಾಗೂ ಕಮಲನಗರದಿಂದ 3 ಕಿ.ಮೀ ಅಂತರದಲ್ಲಿದೆ. ಗಡಿಯಲ್ಲಿರುವ ಈ ಗ್ರಾಮಕ್ಕೆ ಬಸ್‌ ಸಂಚಾರವೇ ಇಲ್ಲ ಎಂದರೆ ಆಶ್ಚರ್ಯವಾಗಬಹುದು.
 
ಕಳೆದ 5 ವರ್ಷಗಳ ಹಿಂದೆ ಈ ಗ್ರಾಮಕ್ಕೆ ಮಹಾರಾಷ್ಟ್ರದ ಉದಗೀರ್‌ ಡಿಪೋದಿಂದ ಬಸ್‌ ಬಿಡಲಾಗಿತ್ತು. ಈ ಬಸ್‌ ಚಿಕಮುರ್ಗ್‌, ಬಾಲೂರು ಮಾರ್ಗವಾಗಿ ಸಂಚರಿಸುತಿತ್ತು.ಆದರೆ ಬಾಲೂರು–ಹೊರಂಡಿ ರಸ್ತೆ ಹದಗೆಟ್ಟಿದ್ದ ಕಾರಣದಿಂದ ಚಿಕಮುರ್ಗ್‌ ಗ್ರಾಮಕ್ಕೂ ಬಸ್‌ ಸಂಚಾರ ಸ್ಥಗಿತಗೊಂಡಿತು. ಹೀಗಾಗಿ ಪರಸ್ಥಳಕ್ಕೆ ಹೋಗಬೇಕಾದರೆ ನಡೆದುಕೊಂಡೇ ಹೋಗಬೇಕಾದ ಅನಿವಾರ್ಯತೆ ಇಲ್ಲಿನ ಗ್ರಾಮಸ್ಥರದ್ದಾಗಿದೆ ಎಂದು ವೆಂಕಟರಾವ ಜಾಧವ್‌ ತಿಳಿಸಿದರು.
 
ಇಲ್ಲಿಯವರೆಗೆ ಕರ್ನಾಟಕದ ಬಸ್‌ಗಳು ನಮ್ಮ ಗ್ರಾಮಕ್ಕೆ ಬಂದಿರುವುದನ್ನು ನಾವು ನೋಡಿಲ್ಲ. ಗಡಿಭಾಗದಲ್ಲಿರುವ ನಾವು ಸರ್ಕಾರದಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ ಎನ್ನುತ್ತಾರೆ ಇಲ್ಲಿನ ಜನ. ಕಾಲೇಜು ಅಭ್ಯಾಸಕ್ಕೆ ಹೋಗಬೇಕಾದ ವಿದ್ಯಾರ್ಥಿಗಳು, ಆಸ್ಪತ್ರೆಗೆ ಹೋಗುವ ಮಹಿಳೆಯರು, ವಯೋವೃದ್ಧರು ಬಸ್‌ ಸೌಲಭ್ಯವಿಲ್ಲದ ಕಾರಣ ಕಾಲ್ನಡಿಯಲ್ಲೇ ಪರಸ್ಥಳಕ್ಕೆ ಹೋಗುವುದು ಅನಿವಾರ್ಯವಾಗಿದೆ.
 
ಸುವರ್ಣವಾಗದ ಗ್ರಾಮ: ಬಾಲೂರು ಗ್ರಾಮವು ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆಯಾಗಿದೆ. ಇಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲೆಂದೇ ಸರ್ಕಾರದಿಂದ ಲಕ್ಷಾಂತರ ರೂಪಾಯಿ ಅನುದಾನ ಮಂಜೂರಾಗಿತ್ತು. ಆದರೆ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗದ ಕಾರಣ ಮನೆಗಳಲ್ಲಿಯ ಬಚ್ಚಲು ನೀರು, ತ್ಯಾಜ್ಯ ನೀರು ಹರಿದು ಹೋಗಲು ಇಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆ ಮೇಲೆಯೇ ಹೊಲಸು ನೀರು ಹರಿಯುತ್ತಿದೆ.  ಗ್ರಾಮದೆಲ್ಲೆಡೆ ಮಾಲಿನ್ಯವೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
 
ಪರಿಶಿಷ್ಟರ ಬಡಾವಣೆಯಲ್ಲಿ ಸುಮಾರು 50 ಮನೆಗಳಿವೆ. ಸುವರ್ಣ ಗ್ರಾಮೋದಯ ಯೋಜನೆಯಡಿ ಇಲ್ಲಿ ಸಿಮೆಂಟ್‌ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಿಸದ ಕಾರಣ ರಸ್ತೆ ಮೇಲೆ ಹೊಲಸು ನೀರು ನಿಲ್ಲುತ್ತಿವೆ. ಇದರಿಂದ ಈ ಬಡಾವಣೆಯ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಿವಾಸಿ ಕೇವಳಾಬಾಯಿ ಸೂರ್ಯವಂಶಿ, ಭಾರತಬಾಯಿ ಕಾಳೇಕರ್‌ ತಿಳಿಸಿದರು.
 
ಕುಡಿವ ನೀರಿನ ಸಮಸ್ಯೆ: ಜಲ ನಿರ್ಮಲ ಯೋಜನೆಯಡಿ ಚಿಕಮುರ್ಗ್‌ ಗ್ರಾಮಕ್ಕೆ ₹25 ಲಕ್ಷ ಅನುದಾನ ಕಲ್ಪಿಸಲಾಗಿದೆ. ಇದರಡಿ ಗ್ರಾಮದಲ್ಲಿ ಒಂದು ಕುಡಿವ ನೀರಿನ ಟ್ಯಾಂಕ್‌ ನಿರ್ಮಿಸಲಾಗಿದೆ. ಕೊಳವೆ ಬಾವಿಯಿಂದ ಟ್ಯಾಂಕ್‌ವರೆಗೆ ಪೈಪ್‌ಲೈನ್‌ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸದ ಕಾರಣ ಟ್ಯಾಂಕ್‌ ಉಪಯೋಗಕ್ಕೆ ಬಾರದಂತಾಗಿದೆ ಎಂದು ಗೋವಿಂದ ಜಾಧವ್‌ ತಿಳಿಸಿದರು.
 
ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ 5 ನೀರಿನ ಕರ್ಸಿಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಎರಡನ್ನು ಪರಿಶಿಷ್ಟರ ಬಡಾವಣೆಯಲ್ಲಿ ಅಳವಡಿಸಲಾಗಿದೆ. ಕರ್ಸಿ ಪಕ್ಕದಲ್ಲಿ ಚರಂಡಿ ನೀರು ಸಂಗ್ರಹವಾಗುತ್ತಿದೆ. ಹೀಗಾಗಿ ಕಲುಷಿತ ನೀರು ಕರ್ಸಿಗಳಲ್ಲಿ ಬರುತ್ತಿವೆ. ಈ ನೀರು ಕುಡಿದು ಅನೇಕರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ತೇಜಾಬಾಯಿ ಕರ್ಕರೆ ತಿಳಿಸಿದ್ದಾರೆ.
 
ಶೌಚಾಲಯ ಸಮಸ್ಯೆ: ಬಾಲೂರು ಗ್ರಾಮದಲ್ಲಿ ಇನ್ನೂ ಮಹಿಳೆಯರು ಗ್ರಾಮದ ರಸ್ತೆ ಬದಿಗಳಲ್ಲಿ ಬಹಿರ್ದೆಸೆ ಮಾಡುವ ಪರಿಪಾಠ ಇದೆ. ಸರ್ಕಾರದ ಮಹತ್ವಾಕಾಂಕ್ಷಿಯ ಸ್ವಚ್ಛ ಭಾರತ್‌ ಮಿಷನ್‌ ಆಂದೋಲನ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹ ಧನ ನೀಡುತ್ತಿದೆ. ಆದರೆ ಈ ಯೋಜನೆ ಕೇವಲ ಉಳ್ಳವರ ಪಾಲಾಗುತ್ತಿದೆ. ಬಡವರಿಗೆ ಇದರಿಂದ ಏನೂ ಪ್ರಯೋಜನವಾಗಿಲ್ಲ. ಮಹಿಳೆಯರು ಶೌಚಕ್ಕಾಗಿ ಪರದಾಡುವುದು ತಪ್ಪಿಲ್ಲ ಎಂದು ಹೀರಾಬಾಯಿ ಘಾಗರೆ ತಿಳಿಸಿದರು.
 
ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಲು ಚುನಾಯಿತರು, ಅಧಿಕಾರಿಗಳು ಮುಂದಾಗಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
 
**
ಮಹಾರಾಷ್ಟ್ರದ ಗಡಿಯಲ್ಲಿರುವ ನಾವು. ರಾಜ್ಯ ಸರ್ಕಾರದಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದ್ದೇವೆ. ಇದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಾರಣ.
-ವಿಠಲರಾವ್‌ ಕಾಳೇಕರ್‌
ಚಿಕಮುರ್ಗ್‌ ನಿವಾಸಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT