ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದುಳಿದ ವರ್ಗ ಒಂದುಗೂಡಲಿ’

Last Updated 31 ಜನವರಿ 2017, 7:03 IST
ಅಕ್ಷರ ಗಾತ್ರ
ಯಾದಗಿರಿ: ‘ಭವಿಷ್ಯದ ದೃಷ್ಟಿಯಿಂದ ಹಿಂದುಳಿದ ವರ್ಗಗಳು ಒಂದುಗೂಡಬೇಕಾದ ತುರ್ತು ಅಗತ್ಯವಿದೆ’ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಅಧ್ಯಕ್ಷ ಬಾಬುರಾವ್ ಚಿಂಚನಸೂರ್‌ ಕರೆ ನೀಡಿದರು. 
 
ಜಿಲ್ಲೆಯ ಅಲ್ಲಿಪುರ ಗ್ರಾಮದಲ್ಲಿ ಭಾನುವಾರ ಅಂಬಿಗರ ಚೌಡಯ್ಯ ಮೂರ್ತಿ ಅನಾವರಣಗೊಳಿಸಿ ಅವರು ಮಾತನಾಡಿದರು.
 
‘ಕೇವಲ ಒಂದು ಜಾತಿಯಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ವರ್ಗವಾಗಿ ಸಾಗಿದರೆ ಸಾಧನೆ ಸಾಧ್ಯವಾಗುತ್ತದೆ. ಇದನ್ನು ಅರಿತು ಹಿಂದುಳಿದವರು ಒಂದಾಗಬೇಕು’ ಎಂದರು.
 
‘ದೇವರಾಜ ಅರಸು ಹಿಂದುಳಿದವರ ಏಳ್ಗೆಗಾಗಿ ನಿರಂತರ ಶ್ರಮಿಸಿದರು. ಭೂಮಿ ಇಲ್ಲದವರಿಗೆ ಭೂ ಒಡೆಯರನ್ನಾಗಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಹಿಂದುಳಿದವರು ಒಂದಾಗದಿದ್ದರೆ ಸಾಮಾಜಿಕ ನ್ಯಾಯದ ಸ್ಥಾನ ಕಳೆದುಕೊಳ್ಳುವ ಸ್ಥಿತಿಯೂ ಬಂದೊದಗಲಿದೆ. ಒಂದಾಗಿ ನಿಂತಲ್ಲಿ ಯಾರೂ ಹಿಂದುಳಿದವರ ಎದುರು ನಿಲ್ಲಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು. 
 
‘ಹಿಂದುಳಿದವರ ಆಶಾಕಿರಣ ಸಿದ್ಧರಾಮಯ್ಯ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಕಳೆದ ಮೂರು ವರ್ಷದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹಿಂದುಳಿದವರ ಬೆನ್ನಿಗೆ ನಿಂತು ಅವರ ಏಳಿಗೆಗೆ ದುಡಿಯುತ್ತಿದ್ದಾರೆ ಎಂದು ಸಿಎಂ ಅಭಿವೃದ್ಧಿ ಕಾರ್ಯಗಳನ್ನು ಒಂದೊಂದಾಗಿ ಜನರ ಮುಂದಿಟ್ಟ ಅವರು,‘ಹಾಲುಮತ ಮತ್ತು ಗಂಗಾಮತ ಎರಡು ಒಂದೇ ನಾಣ್ಯ’ದ ಎರಡು ಮುಖಗಳಿದ್ದಂತೆ’ ಎಂದರು.   
 
‘ರಾಜಕೀಯವಾಗಿ ಹಿಂದುಳಿದವರನ್ನು ದುರ್ಬಲಗೊಳಿಸುವ ಹುನ್ನಾರ ನಡೆದಿದೆ. ಈ ಷಡ್ಯಂತ್ರವನ್ನು ಅರಿತುಕೊಂಡು ಪ್ರತಿಯೊಬ್ಬ ಹಿಂದುಳಿದ ಹಾಗೂ ತುಳಿತಕ್ಕೆ ಒಳಗಾದವರು ಸಂಘಟಿತರಾಗಬೇಕು’ ಎಂದರು.
 
‘ಕೇವಲ ಸಂಘ ಕಟ್ಟಿದರೆ ಪ್ರಯೋಜನೆ ಇಲ್ಲ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣ ಹಾಗೂ ಸಂಘಟನೆಯಿಂದ ಮಾತ್ರ ಹಿಂದುಳಿದವರ ಬಾಳಲ್ಲಿ ಬೆಳಕು ಮೂಡಲು ಸಾಧ್ಯ. ಶಿಕ್ಷಣ ವಂಚಿತರಿಗೆ ಕಲಿಕೆ ನೀಡುವ ಕೆಲಸಕ್ಕೆ ಯಾರಾದರೂ ಮುಂದೆ ಬಂದರೆ ತಾವು ಸಹಾಯ ಮಾಡುವುದಾಗಿ ಭರವಸೆ ನೀಡಿದರು. 
 
ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕ ಅಧ್ಯಕ್ಷ ಉಮೇಶ ಕೆ. ಮುದ್ನಾಳ ಮಾತನಾಡಿ,‘ಅಂಬಿಗರ ಚೌಡಯ್ಯನ ಅಭಿವೃದ್ಧಿ ನಿಗಮ ಸ್ಥಾಪಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
 
ಶಾಶ್ವತ ಹಿಂದುಳಿದ ಆಯೋಗದ ಸದಸ್ಯ ಶರಣಪ್ಪ ಮಾನೇಗಾರ ಮಾತನಾಡಿ,‘ನಮ್ಮ ಸಮಾಜಕ್ಕೆ ಶೇ ೪ರಷ್ಟು ಮೀಸಲಾತಿ ಸಿಗಬೇಕಾಗಿದೆ. ಅದನ್ನು ಎಲ್ಲಾ ರಂಗದಲ್ಲಿ ಸರ್ಕಾರದಿಂದ ಸೌಲಭ್ಯಗಳು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
ಸಾಹೇಬಗೌಡ, ಹಂಪಯ್ಯ ಸದರಿ, ಚಂದ್ರಕಾಂತ ಹತ್ತಿಕುಣಿ, ಪರಶುರಾಮ ಚವ್ಹಾಣ, ಸುರೇಶ ಅಲ್ಲಿಪುರ, ಅಂಬರೀಷ ರಾಠೋಡ್, ಚಂದ್ರಶೇಖರ ಕಾವಲಿ ಬಾಡಿಯಾಳ್, ಶಾಂತಪ್ಪ ಕೋಲಿ, ರಾಯಪ್ಪ, ಲಕ್ಷ್ಮಿಬಾಯಿ, ದೇವಿಬಾವಿ ಚವ್ಹಾಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT