ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿಫಾರಂ ತೆರವುಗೊಳಿಸಲು ಸದಸ್ಯರ ಆಗ್ರಹ

ಚನ್ನರಾಯಪಟ್ಟಣ ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆ
Last Updated 31 ಜನವರಿ 2017, 7:08 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ:  ಮಳ್ಳೇನಹಳ್ಳಿ ಯಲ್ಲಿರುವ ಕೋಳಿಫಾರಂ ಅನ್ನು ತೆರವುಗೊಳಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಆಗ್ರಹಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸೌಮ್ಯಾ ಚಂದ್ರೇಗೌಡ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಸದಸ್ಯರು ಈ ವಿಷಯ ಪ್ರಸ್ತಾಪಿಸಿದರು.

ಗ್ರಾಮದಲ್ಲಿ ಕೋಳಿಫಾರಂ ಇರುವುದರಿಂದ ದುರ್ನಾತ ಬರುತ್ತಿದೆ. ಇದರಿಂದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಕೋಳಿಫಾರಂ ತೆರವುಗೊಳಿಸುವಂತೆ ನಾಲ್ಕು ತಿಂಗಳಿಂದ ಆಗ್ರಹಿಸುತ್ತಿದ್ದರೂ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸದಸ್ಯ ಎಂ.ಎಸ್‌.ಮಂಜುನಾಥ್‌ ದೂರಿದರು.

ಇದನ್ನು ಬೆಂಬಲಿಸಿದ ಸದಸ್ಯರಾದ ಕೆ.ಬಿ.ರಾಮಕೃಷ್ಣೇಗೌಡ, ಎಚ್‌.ಎಸ್‌. ಶಾಮಲಾ, ಎಲ್‌.ಜಿ.ಗಿರೀಶ್‌, ವಿ.ಬಿ. ಶಿವಸ್ವಾಮಿ, ಭೈರೇಗೌಡ, ಕೋಳಿಫಾರಂಗೆ ನೀಡಿದ್ದ ಪರವಾನಿಗೆಯನ್ನು ರದ್ದು ಮಾಡಲಾಗಿದೆಯಾದರೂ ಫಾರಂ ನಡೆಸಲಾಗುತ್ತಿದೆ. ಈ ವಿಚಾರದಲ್ಲಿ ಅಧಿಕಾರಿಗಳು ಕ್ರಮತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಎಷ್ಟು ದಿನದಲ್ಲಿ ತೆರವುಗೊಳಿಸಲಾಗುತ್ತದೆ ಎಂಬುದನ್ನು ಸಭೆಗೆ ತಿಳಿಸಬೇಕು ಎಂದು ಪಟ್ಟು ಹಿಡಿದರು.

ಈಗಾಗಲೇ ಕೋಳಿ ಫಾರಂಗೆ ನೀಡಿದ್ದ ಪರವಾನಿಗೆ ರದ್ದು ಮಾಡ ಲಾಗಿದೆ. ನಿಯಮಾನುಸಾರ ತೆರವು ಗೊಳಿಸಲು ಕ್ರಮತೆಗೆದುಕೊಳ್ಳ ಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಎನ್‌.ದತ್ತೇಶ್ವರ ಉತ್ತರಿಸಿದರು.

‘ತಾಲ್ಲೂಕು ಪಂಚಾಯಿತಿಗೆ ಸೇರಿದ ಸುವರ್ಣ ಮಳಿಗೆಗಳ ಬಾಡಿಗೆ ಕರಾರು ಪತ್ರದಲ್ಲಿ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಸಹಿ, ಸೀಲ್‌ ಇಲ್ಲ. ಇದು ಹೇಗೆ ಅಧಿಕೃತವಾಗುತ್ತದೆ’ ಎಂದು ಸದಸ್ಯ ಮಂಜುನಾಥ್‌ ಖಾರವಾಗಿ  ಪ್ರಶ್ನಿಸಿದರು. ವಾಣಿಜ್ಯ ಮಳಿಗೆಯಲ್ಲಿ ವಾಸವಿರುವವರನ್ನು ಕೂಡಲೇ ತೆರವು ಗೊಳಿಸಬೇಕು ಎಂದು ಒತ್ತಾಯಿಸಿದರು.

‘ಸದಸ್ಯರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹಾಗಾದರೆ ಸಾಮಾನ್ಯಸಭೆಯ ಔಚಿತ್ಯವಾದರು ಏನು? ಪ್ರತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಗುತ್ತಿದೆಯಾದರೂ ಸಮಸ್ಯೆ ನಿವಾರಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ’ ಎಂದು ಸದಸ್ಯೆ ಎಚ್‌.ಎಂ. ಪ್ರಮೀಳಾ ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ವೈಜ್ಞಾನಿಕವಾಗಿ ಬಾಡಿಗೆ ನಿಗದಿ ಪಡಿಸಿದರೆ ಹೆಚ್ಚು ವರಮಾನ ಬರುತ್ತದೆ ಎಂದು ಸದಸ್ಯ ಎಂ.ಆರ್‌.ವಾಸು ಸಭೆಯ ಗಮನಕ್ಕೆ ತಂದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸೌಮ್ಯಾ ಚಂದ್ರೇಗೌಡ, ಉಪಾಧ್ಯಕ್ಷ ಹೊನ್ನೇಗೌಡ ಇದ್ದರು.

ಪಡಿತರದಲ್ಲಿ ಕಲ್ಲು– ಮಣ್ಣು
ಚನ್ನರಾಯಪಟ್ಟಣ:
‘ನ್ಯಾಯಬೆಲೆ ಅಂಗಡಿಗಳಲ್ಲಿ ಸಮರ್ಪಕವಾಗಿ ಪಡಿತರ ವಿತರಣೆ ಮಾಡುತ್ತಿಲ್ಲ. ಈ ವಿಷಯದ ಬಗ್ಗೆ ಸಾಮಾನ್ಯ ಸಭೆಯಲ್ಲಿ ಹಲವಾರು ಸಲ ಪ್ರಸ್ತಾಪಿಸಿದರು ಸಮಸ್ಯೆ ಬಗೆಹರಿದಿಲ್ಲ’ ಎಂದು ಸದಸ್ಯ ಭೈರೇಗೌಡ ಆಪಾದಿಸಿದರು.

ಇದನ್ನು ಬೆಂಬಲಿಸಿದ ಸದಸ್ಯೆ ಮೀನಾಕ್ಷಿ, ‘ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ನೆಲದ ಮೇಲೆ ಸುರಿದು ವಿತರಿಸುವುದರಿಂದ ಕಲ್ಲು, ಮಣ್ಣು ಮಿಶ್ರಣವಾಗುತ್ತದೆ. ಬಡವರ ಕಷ್ಟ ನ್ಯಾಯಬೆಲೆ ಅಂಗಡಿ ಯವರಿಗಾಗಲಿ ಅಥವಾ ಅಧಿಕಾರಿಗಳಿಗೆ ಹೇಗೆ ಅರ್ಥವಾಗಬೇಕು’ ಎಂದು ಮೂದಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT