ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡುಕರ ಅಡ್ಡೆಯಾದ ಸರ್ಕಾರಿ ಶಾಲಾ ಕಟ್ಟಡ!

ಸೋಮಲಿಂಗದಳ್ಳಿ: ಮೂಲಸೌಕರ್ಯ ಕೊರತೆ, ಬಾಂದಾರು ಸೇತುವೆ ನಿರ್ಮಾಣಕ್ಕೆ ಆಗ್ರಹ
Last Updated 31 ಜನವರಿ 2017, 7:13 IST
ಅಕ್ಷರ ಗಾತ್ರ
ಚಿಂಚೋಳಿ: ಮಕ್ಕಳ ಭವಿಷ್ಯ ನಿರ್ಮಾಣದ ಜ್ಞಾನ ದೇಗುಲ ಕುಡುಕರ ಅಡ್ಡೆಯಾಗಿದೆ. ದಶಕದ ಹಿಂದೆ ನಿರ್ಮಿಸಿದ ಈ ಕಟ್ಟಡದಲ್ಲಿ ಜ್ಞಾನ ದಾಸೋಹದ ಬದಲಾಗಿ ಅನೈತಿಕ ಚಟು ವಟಿಕೆಗಳು ನಡೆಯುತ್ತಿವೆ.ಇದು ತಾಲ್ಲೂಕಿನ ಸೋಮಲಿಂಗದಳ್ಳಿ ಗ್ರಾಮದ ಹೊರ ವಲಯದಲ್ಲಿ ನಿರ್ಮಿಸಿರುವ ಶಾಲಾ ಕಟ್ಟಡದ ದುಃಸ್ಥಿತಿ.
 
ತೆಲಂಗಾಣ ಗಡಿಗೆ ಹೊಂದಿಕೊಂಡ ಈ ಗ್ರಾಮದ ಬಸ್‌ ನಿಲ್ದಾಣದ ಬಳಿಯೇ ಶಾಲಾ ಕಟ್ಟಡವಿದೆ. 8ನೇ ತರಗತಿವರೆಗೆ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ಕೊಠಡಿಗಳಲ್ಲಿಯೇ 8 ತರಗತಿ ನಡೆಸಲಾಗುತ್ತಿದೆ. ಇದನ್ನು ಹೊರತುಪಡಿಸಿ ಗ್ರಾಮದ ಹೊರ ವಲಯದ ದಾನಿಗಳಾದ ಬಕ್ಕಣ್ಣ ಹೂಗಾರ, ಶೇಖರ ದೊಂತುಲ್‌, ಝರಣಪ್ಪ ದೊಂತುಲ್‌ ಅವರ ಜಮೀನಿನಲ್ಲಿ 2007–08 ಹಾಗೂ 2008–09ರಲ್ಲಿ ನಿರ್ಮಿಸಿದ ಬಾಲ ಯೋಜನೆಯ ಮೂರು ಕೊಠಡಿಗಳು ಬಳಕೆಯಿಲ್ಲದೇ ಹಾಳಾಗುತ್ತಿವೆ. ಶಾಲಾ ಕೊಠಡಿಗಳು, ಆವರಣ ಗೋಡೆ, ಶೌಚಾಲಯ ಮತ್ತು ಕುಡಿವ ನೀರಿನ ಸೌಕರ್ಯ ಕಲ್ಪಿಸಿದರೂ ಈ ಕಟ್ಟಡ ಪಾಳು ಬಿದ್ದಿದ್ದು, ಈಗ ಮದ್ಯ ವ್ಯಸನಿಗಳ ಮೋಜಿನ ತಾಣವಾಗಿ ಮಾರ್ಪಟ್ಟಿದೆ.
 
ಶಾಲೆಗೆ ಹೋಗಲು ಕಚ್ಚಾ ರಸ್ತೆಯಿದ್ದು, ಹೊಂಡಗಳು ಬಿದ್ದಿವೆ. ರಸ್ತೆ ದುರಸ್ತಿ ಮಾಡಬೇಕು. ಜತೆಗೆ ದಾರಿ ಮಧ್ಯೆ ಕಲ್ವರ್ಟ್‌ ನಿರ್ಮಿಸಬೇಕಾಗಿದೆ.
 
179 ಮಕ್ಕಳು 8 ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದು, 7 ಮಂದಿ ಶಿಕ್ಷಕರಿದ್ದಾರೆ.  ಒಂದರಿಂದ ಎಂಟು ತರಗತಿ ಇದ್ದರೂ ಈಲ್ಲಿ 2013ರಿಂದ ಟಿಜಿಟಿ ಮತ್ತು ವಿಜ್ಞಾನ ಹಾಗೂ ಇಂಗ್ಲೀಷ್ ಶಿಕ್ಷಕರಿಲ್ಲ ಎನ್ನುತ್ತಾರೆ, ಮುಖ್ಯ ಶಿಕ್ಷಕ ಸಂತೋಷ ಬಲ್ಲೂರು.
 
ಗ್ರಾಮದಲ್ಲಿ 400 ರಿಂದ 450 ಮನೆಗಳು ಇವೆ. ಗ್ರಾಮವು ಸೋಮೇಶ್ವರ ದೇವಾಲಯ ಹಾಗೂ ಹತ್ತಕ್ಕೂ ಹೆಚ್ಚು ವೀರಗಲ್ಲು ಮತ್ತು ಮಾಸ್ತಿಕಲ್ಲುಗಳಿಂದ ಪ್ರಸಿದ್ಧಿ ಪಡೆದಿದೆ.
 
ಊರಿನ ಎತ್ತರದ ಸ್ಥಳದಲ್ಲಿ ಅನಾಥವಾಗಿ ಬಿದ್ದಿರುವ ಈ ಇತಿ ಹಾಸದ ಮೂಕ ಸಾಕ್ಷಿಯ ಸ್ಮಾರಕಗಳು ಇಂದು ತಿಪ್ಪೆಯಾಗಿ ಬಳಕೆ ಯಾಗುತ್ತಿವೆ. ಸೋಮೇಶ್ವರ ದೇವಾಲಯದ ದಂಡೆ ಯಲ್ಲಿ ಹರಿಯುವ ನದಿಯಲ್ಲಿ ವರ್ಷಪೂರ್ತಿ ನೀರು ಇರುತ್ತದೆ. ಆದರೆ ಇವರಿಗೆ ನದಿ ದಾಟಲು ಸೇತುವೆ ಇಲ್ಲ. ಹೀಗಾಗಿ ಇಲ್ಲಿ ಬ್ರಿಜ್‌ ಕಂ ಬ್ಯಾರೇಜು ನಿರ್ಮಿಸಿದರೆ ವ್ಯರ್ಥವಾಗಿ ಹರಿದು ಹೋಗುವ ನೀರು ನೀರಾವರಿಗೆ ಬಳಸಿಕೊಳ್ಳುವುದರ ಜತೆಗೆ ಜನರಿಗೆ ಹೋಗಿ ಬರಲು ಸೇತುವೆ ನಿರ್ಮಿಸಿ ದಂತಾಗುತ್ತದೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುವುದರಿಂದ ಮಹಿಳೆ ಯರು, ಮಕ್ಕಳು, ವಯೋವೃದ್ಧರು ನರಕ ಯಾತನೆ ಅನು ಭವಿಸುತ್ತಿದ್ದಾರೆ.
 
ಸೋಮಲಿಂಗದಳ್ಳಿಯಿಂದ ಭೈಂರಂಪಳ್ಳಿ ಕೇವಲ 3 ಕಿ.ಮೀ ಅಂತರದಲ್ಲಿದೆ. ಇದಕ್ಕೆ ಬರಗಾಲದಲ್ಲಿ ನಿರ್ಮಿಸಿದ ರಸ್ತೆಯೂ ಇದ್ದು, ಇದರಲ್ಲಿ 1 ಕಿ.ಮೀ ರಸ್ತೆ ವನ್ಯಜೀವಿ ಧಾಮದ ಕಾಡಿಗೆ ಹೊಂದಿಕೊಂಡಿದೆ. ಭೈರಂಪಳ್ಳಿಯವರು ಇಲ್ಲಿಗೆ ಬರಬೇಕಾದರೆ 16 ಕಿ.ಮೀ ಸುತ್ತಿ ಬರಬೇಕು. ತಾಲ್ಲೂಕು ಕೇಂದ್ರ ಸ್ಥಾನ ಚಿಂಚೋಳಿಗೆ ಬರಲು ಅವರು 25 ಕಿ.ಮೀ ಕ್ರಮಿಸುವುದು ಅನಿ ವಾರ್ಯವಾಗಿದೆ.ಒಂದು ವೇಳೆ ಇಲ್ಲಿ ಸೇತುವೆ ನಿರ್ಮಿಸಿ ಬರಗಾಲದ ರಸ್ತೆಗೆ ಮರುಜೀವ ನೀಡಿ ಡಾಂಬರಿಕರಣ ಕೈಗೊಂಡರೆ ಭೈರಂಪಳ್ಳಿ ಜನರು ಚಿಂಚೋಳಿ ತಲುಪಲು ಕೇವಲ 12 ಕಿ.ಮೀ ಅಂತರವಾಗುತ್ತದೆ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡ ಸುರೇಶ ಬಂಟಾ.
 
ಗ್ರಾಮದ ಹಲವು ಕಡೆ ಸಿಮೆಂಟ್‌ ರಸ್ತೆಯಿಲ್ಲ. ಒಳ ಚರಂಡಿ ವ್ಯವಸ್ಥೆ ಸರಿ ಇಲ್ಲ. ಗ್ರಾಮದ ಚಾವಡಿ ಪಾಳು ಬಿದ್ದಿದೆ. ಸೋಮ ಲಿಂಗದಳ್ಳಿಯಿಂದ ಚಿಕ್ಕಲಿಂಗದಳ್ಳಿ, ಸೋಮ ಲಿಂಗ ದಳ್ಳಿಯಿಂದ ಕಲ್ಲೂರು ರೋಡ್‌ ರಸ್ತೆ ಸಂಪೂರ್ಣ ಹಾಳಾಗಿದೆ. ಮಹಿಳಾ ಶೌಚಾಲಯಗಳ ಕೊರತೆಯೂ ಕಾಡುತ್ತಿದೆ. ಗ್ರಾಮದ ಶಾಲೆಯ ಹತ್ತಿರ ಇರುವ ಬಸ್‌ ನಿಲ್ದಾಣ ಹಾಳಾಗಿದ್ದು ಕಟ್ಟಡ ಬಿರುಕು ಬಿಟ್ಟಿದೆ. ಜನರು ಕುಳಿತುಕೊಳ್ಳಲು ಹೆದರುವಂತಾಗಿದೆ. 
 
ಚಿಕ್ಕಲಿಂಗದಳ್ಳಿ ರಸ್ತೆ ಮಾರ್ಗದ ಬಡಾವಣೆಯ ಮನೆಗಳಿಗೆ ಹೋಗಲು ಸರಿಯಾದ ರಸ್ತೆ ಹಾಗೂ ಚರಂಡಿ ಇಲ್ಲ.  ವಿದ್ಯುತ್‌ ಪರಿವರ್ತಕ ಬಯಲಿನಲ್ಲಿದ್ದು ಇದಕ್ಕೆ ಯಾವುದೇ ರಕ್ಷಣಾ ವ್ಯವಸ್ಥೆಯಿಲ್ಲ. ಸಾರಿಗೆ ಬಸ್‌ ಬೆಳಿಗ್ಗೆ ಸಂಜೆ ಬಂದು ಹೋಗುತ್ತದೆ. ಕನ್ನಡಕ್ಕಿಂತ ತೆಲುಗು ಭಾಷೆ ಹೆಚ್ಚು ಮಾತಾಡುವ ಇಲ್ಲಿನ ಜನರಿಗೆ ಕನ್ನಡಕ್ಕಿಂತ ಹೆಚ್ಚು ತೆಲುಗು ಅರ್ಥವಾಗುತ್ತದೆ.ಈಗಾಗಲೇ ಗ್ರಾಮಕ್ಕೆ 2 ಶೌಚಾಲಯ, ಸಿಸಿ ರಸ್ತೆ, ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಹಾಗೂ ಸೋಮ ಲಿಂಗದಳ್ಳಿ ಚಿಕ್ಕಲಿಂಗದಳ್ಳಿ ಮಧ್ಯೆ ರಸ್ತೆ ನಿರ್ಮಾಣಕ್ಕೆ ಹಣ ಮಂಜೂರಾಗಿದೆ ಎಂದು ತಾ.ಪಂ ಸದಸ್ಯ ಜಗನ್ನಾಥ ಈದಲಾಯಿ ತಿಳಿಸಿದ್ದಾರೆ.
 
**
ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡ ನಿರ್ಮಿಸಿ 10 ವರ್ಷ ಕಳೆಯುತ್ತಿದ್ದು, ಒಮ್ಮೆ ಮಾತ್ರ ತರಗತಿ ನಡೆದಿದೆ.  ಇಲ್ಲಿ ಶೈಕ್ಷಣಿಕ ಚಟುವಟಿಕೆಗಿಂದ ಅನೈತಿಕ ಚಟುವಟಿಕೆಗಳು ಹೆಚ್ಚು ನಡೆಯುತ್ತಿವೆ
-ಚಂದ್ರಕಾಂತ ಮುಕರಂಬಾ
ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT