ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮುಖಂಡ ಸೇರಿ ಇಬ್ಬರ ಬಂಧನ

₹ 1.5 ಕೋಟಿ ಮೌಲ್ಯದ ಆಸ್ತಿ ಕಬಳಿಕೆಗೆ ಹುನ್ನಾರ; ಆಸ್ಪತ್ರೆಯಿಂದಲೇ ವೃದ್ಧನ ಅಪಹರಣ
Last Updated 31 ಜನವರಿ 2017, 7:25 IST
ಅಕ್ಷರ ಗಾತ್ರ

ಮೈಸೂರು: ₹ 1.5 ಕೋಟಿ ಮೌಲ್ಯದ ಆಸ್ತಿ ಕಬಳಿಸುವ ಉದ್ದೇಶದಿಂದ ಆಸ್ಪತ್ರೆಯಿಂದ ವೃದ್ಧರೊಬ್ಬರನ್ನು ಅಪಹರಿಸಿದ ಆರೋಪದ ಮೇರೆಗೆ ಬಿಜೆಪಿ ಮುಖಂಡ ಪುಟ್ಟಸ್ವಾಮಿ ಹಾಗೂ ಈತನ ಸ್ನೇಹಿತ ಕಿಶೋರ್ ಎಂಬುವವರನ್ನು ನರಸಿಂಹ ರಾಜ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಅಗ್ರಹಾರದ ನಿವಾಸಿ ಗುರುಸಿದ್ದಪ್ಪ ಅಪಹರಣಗೊಂಡ ವೃದ್ಧ. ಅಗ್ರಹಾರದ ಗಣಪತಿ ದೇಗುಲದ ಬಳಿ ಇವರಿಗೆ ಸೇರಿದ ಕಟ್ಟಡ ಇದೆ. ಆಲನಹಳ್ಳಿ ಪುಟ್ಟಸ್ವಾಮಿ ಪತ್ನಿ ಮಂಜುಳಾ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ. ಕೆ.ಆರ್‌. ಮೊಹಲ್ಲಾದ ಕಿಶೋರ್‌ ಅಪಹರಣಕ್ಕೆ ಸಹಕರಿಸಿದ್ದ ಎಂದು ಎನ್‌.ಆರ್‌.ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
‘ಮಕ್ಕಳಿಲ್ಲದ ಗುರುಸಿದ್ದಪ್ಪ ಅವರು ಕಟ್ಟಡವನ್ನು ಮಾರಾಟ ಮಾಡಲು ನಿರ್ಧರಿಸಿದ್ದರು.

ಈ ಸಂಬಂಧ ಪುಟ್ಟಸ್ವಾಮಿ ಹಾಗೂ ಗುರುಸಿದ್ದಪ್ಪ ನಡುವೆ ಒಪ್ಪಂದ ನಡೆದಿತ್ತು. ಖರೀದಿಗೂ ಮುನ್ನವೇ ಗರಿಷ್ಠ ಮುಖಬೆಲೆಯ ನೋಟು ರದ್ದತಿ­ಯಿಂದ ಪುಟ್ಟಸ್ವಾಮಿಗೆ ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಬ್ಯಾಂಕ್‌ನಿಂದ ಸಾಲ ಪಡೆಯಲು ಕಟ್ಟಡದ ದಾಖಲೆಗಳನ್ನು ಒದಗಿಸುವಂತೆ ಗುರುಸಿದ್ದಪ್ಪ ಅವರಿಗೆ ಪೀಡಿಸುತ್ತಿದ್ದನು’ ಎಂದು ಮೂಲಗಳು ತಿಳಿಸಿವೆ.

‘ಈ ನಡುವೆ ಅನಾರೋಗ್ಯದಿಂದ ಬಳಲುತ್ತಿದ್ದ ಗುರುಸಿದ್ದಪ್ಪ ಅವರು ಬೆಂಗಳೂರು ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾದರು. ಭಾನುವಾರ ಆಸ್ಪತ್ರೆಗೆ ನುಗ್ಗಿದ ಪುಟ್ಟಸ್ವಾಮಿ ಹಾಗೂ ಕಿಶೋರ್‌ ವೃದ್ಧರನ್ನು ಸಿನಿಮಿಯ ರೀತಿಯಲ್ಲಿ ಅಪಹರಿಸಿದ್ದಾರೆ. ಜಗನ್ಮೋಹನ ಅರಮನೆಯ ಬಳಿ ಕರೆತಂದು ಬೆದರಿಕೆ ಹಾಕಿದ್ದಾರೆ. ಬಳಿಕ ಖಾಲಿ ಛಾಪ ಕಾಗದದ ಮೇಲೆ ಸಹಿ ಪಡೆದು ಪರಾರಿಯಾಗಿದ್ದರು. ಈ ಸಂಬಂಧ ಗುರುಸಿದ್ದಪ್ಪ ಅವರ ಸಂಬಂಧಿ ಮಂಜುನಾಥ ಅಪಹರಣ ದೂರು ನೀಡಿದ್ದರು’ ಎಂದು ವಿವರಿಸಿದ್ದಾರೆ.

ಚಿನ್ನಾಭರಣ ಕಳವು
ಮೈಸೂರು:
ಬೆಂಗಳೂರಿನಿಂದ ಮೈಸೂರಿಗೆ ಬಂದ ರಾಜ್ಯ ರಸ್ತೆ ಸಾರಿಗೆ ಬಸ್‌ನ ಪ್ರಯಾಣಿಕರೊಬ್ಬರ ಬ್ಯಾಗಿನಲ್ಲಿದ್ದ 115 ಗ್ರಾಂ ತೂಕದ ಚಿನ್ನಾಭರಣ ಕಳವಾಗಿರುವ ಘಟನೆ ನಡೆದಿದೆ.

ಬಬಿತಾ ಚಿನ್ನಾಭರಣ ಕಳೆದುಕೊಂಡ ಮಹಿಳೆ. ಬಬಿತಾ ಅವರು ನಾಲ್ಕು ಬ್ಯಾಗ್‌ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನ ಗೊಟ್ಟಿಗೇರಿಯಲ್ಲಿ ಮೈಸೂರು ಬಸ್‌ ಏರಿದ್ದರು. ನಗರದ ಬಸ್‌ ನಿಲ್ದಾಣಕ್ಕೆ ಬಂದ ಬಳಿಕ ಬ್ಯಾಗ್‌ ಪರಿಶೀಲಿಸಿದಾಗ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಲಷ್ಕರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರಿಕೆಟ್ ಬೆಟ್ಟಿಂಗ್: 6 ಮಂದಿ ಬಂಧನ
ಮೈಸೂರು:
ಎರಡು ಪ್ರತ್ಯೇಕ ಘಟನೆಗಳಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರು ಆರೋಪಿಗಳನ್ನು ನಗರ ಅಪರಾಧ ಘಟಕ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ವಿಶ್ವೇಶ್ವರನಗರದ ಕೈಗಾರಿಕಾ ಪ್ರದೇಶದ ಮ್ಯಾಕ್ಸ್‌ ಸ್ಮರಣ್‌ ವಸತಿ ಸಮುಚ್ಛಯದ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿದ ಪೊಲೀಸರು ಶ್ರೀಕಂಠವೀರ (29), ವಿಜಯಕುಮಾರ್‌ (34), ಅಬ್ದುಲ್‌ ರಜಾಕ್‌ (38), ಕೈಲಾಸ್‌ (32) ಹಾಗೂ ಗುರುಸ್ವಾಮಿ (33) ಎಂಬುವರನ್ನು ಬಂಧಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್‌ ನಡುವೆ ಭಾನುವಾರ ನಡೆದ ಟಿ–ಟ್ವೆಂಟಿ ಕ್ರಿಕೆಟ್‌ ಪಂದಕ್ಕೆ ಆರೋಪಿಗಳು ಬೆಟ್ಟಿಂಗ್‌ ನಡೆಸುತ್ತಿದ್ದರು. ಆರೋಪಿಗಳಿಂದ
₹ 9,550 ನಗದು, ಒಂದು ಕಾರು, ಲ್ಯಾಪ್‌ಟಾಪ್‌, 14 ಮೊಬೈಲ್‌ ಫೋನ್‌ ವಶಪಡಿಸಿಕೊಳ್ಳಲಾಗಿದೆ.

ಕ್ರಿಕೆಟ್‌ ಬೆಟ್ಟಿಂಗ್‌ ಹಣವನ್ನು ಬಟವಾಡೆ ಮಾಡಲು ಬಂದಿದ್ದ ಶ್ರೀರಂಗಪಟ್ಟಣ ತಾಲ್ಲೂಕಿನ ನಗುವಿನಹಳ್ಳಿಯ ಎನ್‌.ರಮೇಶ್‌ (34) ಎಂಬಾತ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿಯಿಂದ ₹ 38 ಸಾವಿರ ನಗದು ಹಾಗೂ 2 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜ.26ರಂದು ಭಾರತ ಮತ್ತು ಇಂಗ್ಲೆಂಡ್‌ ನಡುವೆ ನಡೆದ ಟಿ–ಟ್ವೆಂಟಿ ಕ್ರಿಕೆಟ್‌ ಪಂದ್ಯದಲ್ಲಿ ಬೆಟ್ಟಿಂಗ್‌ ನಡೆಸಿದ್ದನು. ಇದರಲ್ಲಿ ಗೆಲುವು ಸಾಧಿಸಿದವರಿಗೆ ಹಣ ನೀಡಲು ರಿಂಗ್‌ ರಸ್ತೆಯ ಪುಷ್ಪಾಶ್ರಮದ ಬಳಿ ಜ. 28ರಂದು ರಾತ್ರಿ ಬಂದಿದ್ದ.  ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸುಲಿಗೆ: ಮಹಿಳೆ ಸೇರಿ ನಾಲ್ವರ ಬಂಧನ
ಮೈಸೂರು:
ಮನೆಗೆ ಬಂದಿದ್ದ ಪರಿಚಿತ ವ್ಯಾಪಾರಿಯನ್ನೇ ಸುಲಿಗೆ ಮಾಡಿ, ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ನಾಲ್ವರನ್ನು ನಗರ ಅಪರಾಧ ಘಟಕ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಅರವಿಂದನಗರದ ಗೀತಾ (35), ಈತನ ಭಾವಿ ಅಳಿಯ ಕೆ.ಎನ್‌.ಪುರದ ಮಂಜುನಾಥ (22) ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಇಬ್ಬರು ಬಾಲಕರು ಬಂಧಿತರು. ಆರೋಪಿಗಳಿಂದ ₹ 95 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ₹ 15,650 ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕುವೆಂಪುನಗರದ ಸಣ್ಣಸ್ವಾಮಿ ಎಂಬುವರ ₹ 95 ಸಾವಿರ ಮೌಲ್ಯದ ಚಿನ್ನಾಭರಣವನ್ನು ದುಷ್ಕರ್ಮಿಗಳು ಸುಲಿಗೆ ಮಾಡಿದ್ದರು.
ಬಂಡಿಪಾಳ್ಯದ ಆರ್‌ಎಂಸಿಯಲ್ಲಿ ತರಕಾರಿ ವ್ಯಾಪಾರಿಯಾಗಿರುವ ಸಣ್ಣಸ್ವಾಮಿಗೆ ಅನು ಎಂಬ ಯುವತಿಯ ಪರಿಚಯವಿತ್ತು. ಡಿ.20ರಂದು ಸಣ್ಣಸ್ವಾಮಿಗೆ ದೂರವಾಣಿ ಕರೆ ಮಾಡಿದ ಅನು, ಕುವೆಂಪುನಗರದ ಬಸ್‌ ಡಿಪೊ ಬಳಿ ಕರೆಸಿಕೊಂಡಿದ್ದರು.  ಖಾಸಗಿಯಾಗಿ ಮಾತನಾಡಲು ಸ್ನೇಹಿತೆ ಅರವಿಂದನಗರದ ಗೀತಾ ಮನೆಗೆ ಸಣ್ಣಸ್ವಾಮಿಯನ್ನು ಕರೆದೊಯ್ದಿದ್ದರು. ಕೊಠಡಿಯಲ್ಲಿ ಕುಳಿತು ಚರ್ಚೆಯಲ್ಲಿ ತೊಡಗಿದ್ದಾಗ ಮೂವರು ಯುವಕರು ಏಕಾಏಕಿ ದಾಳಿ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

20 ಗ್ರಾಂ ತೂಕದ ಸರ, ಉಂಗುರ ಸೇರಿ ಚಿನ್ನಾಭರಣ ಕಸಿದಿದ್ದರು. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಯುವತಿಯೊಂದಿಗೆ ಸಂಬಂಧ ಇರುವುದಾಗಿ ಪತ್ನಿಗೆ ಹೇಳುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದರು. ಪತಿಯ ಮೈಮೇಲೆ ಚಿನ್ನಾಭರಣ ಇಲ್ಲದಿರುವುದನ್ನು ಪತ್ನಿ ಪ್ರಶ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗೀತಾಳಿಗೆ ಹಣಕಾಸಿನ ಅಗತ್ಯವಿತ್ತು. ಹೀಗಾಗಿ, ಭಾವಿ ಅಳಿಯ ಮಂಜುನಾಥನೊಂದಿಗೆ ಸೇರಿ ಸುಲಿಗೆಯ ಸಂಚು ರೂಪಿಸಿದ್ದಳು. ಐಟಿಐ ಶಿಕ್ಷಣ ಪಡೆದಿದ್ದ ಇಬ್ಬರು ಬಾಲಕರು ಈ ಕೃತ್ಯಕ್ಕೆ ನೆರವಾಗಿದ್ದಾರೆ. ಈ ಸಂಚು ಅನುಗೆ ತಿಳಿದಿರಲಿಲ್ಲ. ಗರಿಷ್ಠ ಮುಖಬೆಲೆಯ ನೋಟು ಚಲಾವಣೆ ರದ್ದಾದ ಪರಿಣಾಮ ಸುಲಿಗೆ ಮಾಡಿದ ಚಿನ್ನಾಭರಣವನ್ನು ಅಡವಿಡಲು ಹಾಗೂ ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT