ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿಗಳಿಂದ ಮೋದಿ ದೂರವಿರಲಿ

ಸರ್ವೋದಯ ದಿನಾಚರಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಸಲಹೆ
Last Updated 31 ಜನವರಿ 2017, 7:26 IST
ಅಕ್ಷರ ಗಾತ್ರ

ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ಸದುದ್ದೇಶದಿಂದ ಗರಿಷ್ಠ ಮುಖಬೆಲೆಯ ನೋಟು ರದ್ದು ಮಾಡಿದರು. ಆದರೆ, ಉದ್ಯಮಿಗಳು, ಬ್ಯಾಂಕ್‌ನವರು ಅವರ ಬೆನ್ನಿಗೆ ಚೂರಿ ಹಾಕಿದರು. ಹೀಗಾಗಿ, ನೋಟು ಅಮಾನ್ಯ ವಿಫಲವಾಗಿದ್ದು ಕಪ್ಪು ಹಣ ಸಂಗ್ರಹ ಮುಂದುವರಿದಿದೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರ ಸೋಮವಾರ ಮಾನಸಗಂಗೋತ್ರಿಯಲ್ಲಿ ಆಯೋಜಿಸಿದ್ದ ಸರ್ವೋದಯ ದಿನಾಚರಣೆಯಲ್ಲಿ ಮಾತನಾಡಿದರು.
‘ಮೋದಿ ಅವರ ಉದ್ದೇಶವೇ ಈಗ ದಾರಿ ತಪ್ಪಿದೆ. ಪೂರ್ವತಯಾರಿ ಕೊರತೆ ಇದಕ್ಕೆ ಕಾರಣ. ಅವರು ಮೊದಲು ಅಂಬಾನಿ, ಅದಾನಿ ಅವರಂಥ ಉದ್ಯಮಿಗಳ ಸಹವಾಸ ಬಿಡಬೇಕು. ಉದ್ಯಮಿಗಳ ಹಣದಿಂದಲೇ ಚುನಾವಣೆ ಗೆದ್ದಿರುವ ಅವರು ಏನುತಾನೇ ಮಾಡಿಯಾರು’ ಎಂದು ವ್ಯಂಗ್ಯವಾಡಿದರು.

‘ಬ್ಯಾಂಕ್‌ಗಳು ವಿಜಯ ಮಲ್ಯ ಅವರಂಥವರನ್ನು ಸಾಕುತ್ತಿವೆ. ಬಡವರನ್ನು ದಾಸರನ್ನಾಗಿ ಮಾಡಿ ಉದ್ಯಮಿಗಳನ್ನು ಬೆಳೆಸುತ್ತಿವೆ. ಇಂಥ ಸಮಾಜದಲ್ಲಿ ಬಡವರು ಬದುಕಲು ಕಷ್ಟವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಆಡಂಬರದ ಮದುವೆಗಳ ಮೂಲಕ ಸಮಾಜ ಕೀಳುಮಟ್ಟಕ್ಕೆ ಇಳಿದಿದೆ. ಜೈಲಿನಿಂದ ಹೊರಬಂದ ಉದ್ಯಮಿ ಜನಾರ್ದನ ರೆಡ್ಡಿ ತನ್ನ ಮಗಳ ವಿವಾಹವನ್ನು ಅದ್ದೂರಿಯಾಗಿ ಮಾಡಿದರು. ಅವರಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು? ಜನರು ಅವರ ಮನೆ ಬಳಿಗೆ ಹೋಗಿ ದಾನ ನೀಡಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ನಮ್ಮದು ಕುಂಭಕರ್ಣ ಪ್ರಜಾಪ್ರಭುತ್ವವಾಗಿದೆ. ಡೆಮಾಕ್ರಸಿ ಹೋಗಿ ದಮನಕ್ರಸಿ ಆಗಿದೆ. ಇಂದಿನ ರಾಜಕಾರಣಿಗಳು ಜನರ ಪ್ರತಿನಿಧಿಗಳಾಗಿ ಉಳಿದಿಲ್ಲ. ಕೇವಲ ಪಕ್ಷಗಳ ಉಳಿವಿಗಾಗಿ ದುಡಿಯುತ್ತಿದ್ದಾರೆ. ಮೇಲು–ಕೀಳು, ಬಡವರು–ಶ್ರೀಮಂತರು, ಕೂಲಿಗಳು–ಉದ್ಯಮಿಗಳು ಎಂದು ಸಮಾಜವನ್ನು ಇಬ್ಭಾಗ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಂಬ್‌ ಮತ್ತು ಶಾಂತಿ: ಬಾಂಬ್‌ ಇಟ್ಟುಕೊಂಡು ವಿಶ್ವದಲ್ಲಿ ಶಾಂತಿ ಮೂಡಿಸುವುದು ಅಸಾಧ್ಯ. ಸರ್ವನಾಶ ಹಾಗೂ ಸರ್ವಶಾಂತಿ ಒಟ್ಟಿಗೆ ಸಾಗಲು ಆಗುವುದಿಲ್ಲ. ಪೈಪೋಟಿ ಯಿಂದ ವಿಶ್ವಶಾಂತಿ ಸಾಧಿಸುವುದು ಕಷ್ಟ ಎಂದರು.

‘ದೇಶದಲ್ಲಿ ಸರ್ವೋದಯ ದಿನವನ್ನಾಗಿ ಆಚರಿಸಿದರೆ ಬೇರೆಡೆ ವಿಶ್ವಶಾಂತಿ ದಿನವಾಗಿ ಆಚರಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ಮೈಸೂರು ವಿ.ವಿ ಪ್ರಭಾರ ಕುಲಪತಿ ಪ್ರೊ.ಯಶವಂತ ಡೋಂಗ್ರೆ, ಕುಲಸಚಿವ ಪ್ರೊ.ಆರ್‌.ರಾಜಣ್ಣ, ಕುಲಸಚಿವ (ಪರೀಕ್ಷಾಂಗ) ಪ್ರೊ.ಜೆ.ಸೋಮಶೇಖರ್‌, ಹಾರ್ಟ್‌ಫುಲ್‌ನೆಸ್‌ ಇನ್‌ಸ್ಟಿಟ್ಯೂಟ್‌ ಸಂಯೋಜನಾಧಿಕಾರಿ ಕೆ.ಮಧುಸೂದನ್‌, ಗಾಂಧಿ ಭವನದ ನಿರ್ದೇಶಕ ಪ್ರೊ.ಎಸ್‌.ಶಿವರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT