ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನ್ನ ಶಾಲೆ, ನನ್ನ ಜವಾಬ್ದಾರಿ’ಗೆ ಚಾಲನೆ

ಎಂಪ್ರೆಸ್‌ ಕಾಲೇಜು ಸುಧಾರಣೆಗೆ ಕೂಡಿ ಬಂದ ಕಾಲ
Last Updated 31 ಜನವರಿ 2017, 7:57 IST
ಅಕ್ಷರ ಗಾತ್ರ
ತುಮಕೂರು: ಮಧ್ಯಾಹ್ನದ ಬಿಸಿಯೂಟ ಮಾಡದವರು ಕೈ ಎತ್ತಿ ಎಂಬ ಮಾತಿಗೆ ಆ ಕೊಠಡಿಯಲ್ಲಿದ್ದ ಅರ್ಧದಷ್ಟು ಮಕ್ಕಳು ಕೈಎತ್ತಿದರು.
 
ಸರ್ಕಾರ ನೀಡುವ ಮಧ್ಯಾಹ್ನದ ಬಿಸಿಯೂಟ ಏಕೆ ಮಾಡುತ್ತಿಲ್ಲ ಎಂಬ ‘ಪ್ರಜಾವಾಣಿ’ ಪ್ರಶ್ನೆಗೆ ಒಬ್ಬಳು ಹುಡುಗಿ ತಲೆ ಕೆಳಗೆ ಹಾಕಿದಳು.
 
ನಿಧಾನವಾಗಿ ಹೇಳ ತೊಡಗಿದಳು. ‘ಅನ್ನದಲ್ಲಿ ಹುಳು, ಸಾಂಬಾರಿನಲ್ಲಿ ಉಪ್ಪೇ ಇರುವುದಿಲ್ಲ’ 
 
ಸುಮಾರು 900 ಮಕ್ಕಳಿರುವ ಎಂಪ್ರೆಸ್‌ ಹೈಸ್ಕೂಲ್‌ನ ಸ್ಥಿತಿ ಇದು. ಬಿಸಿಯೂಟಕ್ಕೆ ಸಂಬಂಧಿಸಿದಂತೆ ಒಂಬತ್ತನೇ ತರಗತಿಯ ರಾಧಾ (ಹೆಸರು ಬದಲಿಸಲಾಗಿದೆ) ಮಾತ್ರ ತಲೆ ಕೆಳಗೆ ಹಾಕಿ ಮೆದುದ್ವನಿಯ ಉತ್ತರ ಹೇಳಿದ್ದಲ್ಲ.  ನಾಲ್ಕು ನೂರ ವಿದ್ಯಾರ್ಥಿನಿಯರ ಕಥೆಯೂ ಇದೇ ಆಗಿತ್ತು. 
 
‘925 ಮಕ್ಕಳಲ್ಲಿ ಸುಮಾರು 500 ಮಕ್ಕಳು ಮಾತ್ರ ಬಿಸಿಯೂಟ ಮಾಡುತ್ತಾರೆ. ಉಳಿದವರು ಮಾಡುವುದಿಲ್ಲ. ಸರ್ಕಾರ ಪೂರೈಕೆ ಮಾಡುವ ಅಕ್ಕಿಯಲ್ಲಿ ಬಿಳಿ, ಕಪ್ಪು ಹುಳು, ಕಲ್ಲು ತುಂಬಿರುತ್ತವೆ. ಬೇಳೆಗೂ ಹುಳು ಬಿದ್ದಿರುತ್ತವೆ.  ಹೀಗಾಗಿ ಅನ್ನ, ಸಾರಿನಲ್ಲಿ ಹುಳು ಇರುವುದು ಸಾಮಾನ್ಯ. ನಾವು ಸಾಧ್ಯವಾದಷ್ಟು ಹುಳು ಆಯ್ದು ಆಚೆ ಹಾಕುತ್ತೇವೆ. ಆದರೂ ಏನು ಮಾಡಲು ಸಾಧ್ಯವಿಲ್ಲ. ಹೀಗಾಗಿ ಮಕ್ಕಳು ಊಟ ತಿನ್ನುವುದಿಲ್ಲ. ಮನೆಯಿಂದಲೇ ತರುತ್ತಾರೆ’ ಎಂದು ಮಧ್ಯಾಹ್ನದ ಬಿಸಿಯೂಟದ ಉಸ್ತುವಾರಿ ವಹಿಸಿಕೊಂಡಿರುವ ಶಿಕ್ಷಕರು ಹೇಳಿದರು.
 
ಬಿಸಿಯೂಟದ ಕಥೆ ಇರಲಿ. ವಾರದಲ್ಲಿ ಮೂರು ದಿನ ನೀಡುವ ಕ್ಷೀರ ಭಾಗ್ಯದ ಕಥೆ ಇನ್ನೂ ವಿಭಿನ್ನವಾಗಿದೆ.  ಇಪ್ಪತ್ತರಿಂದ–ಮೂವತ್ತು  ಮಕ್ಕಳು ಹಾಲು ಕುಡಿದರೆ ಅದು ಹೆಚ್ಚೆ ಎಂಬಂಥ ಸ್ಥಿತಿ ಇಲ್ಲಿಯದು. ಸರ್ಕಾರ ಪೂರೈಸಿರುವ ಹಾಲಿನ ಪಾಕೇಟ್‌ಗಳು ಬಿಸಿಯೂಟದ ಕೋಣೆಯಲ್ಲಿ ಕೊಳೆಯುತ್ತಿವೆ.
 
‘ಕಾಲೇಜಿಗೆ ನೀರಿನ ಪೂರೈಕೆಗಾಗಿ ಕೊಳವೆ ಬಾವಿ ಕೊರೆಸಿಕೊಳ್ಳಲಾಗಿದೆ.  ಈ ನೀರಿನಲ್ಲಿ ಅತಿಯಾದ ಉಪ್ಪು ಹಾಗೂ ಫ್ಲೋರೈಡ್‌  ತುಂಬಿರುವುದರಿಂದ ಹಾಲು ಕಾಯಿಸುತ್ತಿದ್ದಂತೆ  ಒಡೆದು ಹೋಗುತ್ತದೆ. ಮಕ್ಕಳು ಕುಡಿಯುವುದಿಲ್ಲ. ಹೀಗಾಗಿ ಎಲ್ಲ ಮಕ್ಕಳಿಗೆ ಹಾಲು ಕಾಯುಸಿ ಕೊಡುವುದಿಲ್ಲ. ದಾಖಲೆಗಾಗಿ ಹಾಲು ಕಾಯಿಸುತ್ತೇವೆ’ ಎಂದು ಉಪನ್ಯಾಸಕರೊಬ್ಬರು ಹಾಲಿನ ಹಿಂದಿನ ಕಥೆ ಬಿಚ್ಚಿಟ್ಟರು.
 
ಶಾಸಕ ರಫೀಕ್‌ ಅಹಮ್ಮದ್‌ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದಾರೆ. ಡಿಡಿಪಿಐ, ಡಿಡಿಪಿಯು ಉಪ ನಿರ್ದೇಶಕರ ಕಚೇರಿಗೆ ಕೈತಾಕುವಂತಿರುವ ಎಂಪ್ರೆಸ್‌ ಕಾಲೇಜಿನ ಈ ‘ಒಳಮುಖ’ಗಳು ಬೆಳಕಿಗೆ ಬರಲು ‘ತುಮಕೂರು ಕ್ಲೀನ್ ಸಿಟಿ ಅಸೋಸಿಯೇಷನ್’ ಕಾರಣವಾಯಿತು.
 
ಕಾಲೇಜಿನ ಸ್ವಚ್ಛತೆಯ ಕ್ರಮಗಳನ್ನು ತೋರಿಸಲು ‘ಪ್ರಜಾವಾಣಿ’ ಪ್ರತಿನಿಧಿಯನ್ನು ಆಹ್ವಾನಿಸಿದ್ದರು. ಆಗ ಕಾಲೇಜಿನ ಮುಖಗಳು ಗೋಚರಕ್ಕೆ ಬಂದವು.
 
ಒಂದು ತಿಂಗಳ ಹಿಂದೆಯಷ್ಟೆ ಅಸೋಸಿಯೇಷನ್‌ನ ಅಧ್ಯಕ್ಷೆ ಜ್ಯೋತಿ ಸುಧೀಂದ್ರ,  ‘ನನ್ನ ಶಾಲೆ, ನನ್ನ ಜವಾಬ್ದಾರಿ’ ಯೋಜನೆಯ ಉಸ್ತುವಾರಿ ಸುನೀತಾ ಮತ್ತವರ ತಂಡ ಎಂಪ್ರೆಸ್‌ ಶಾಲೆ ಸುಧಾರಣೆಗೆ ಅಡಿ ಇಟ್ಟಿದ್ದಾರೆ. ಅಲ್ಲಿಂದ ಈವರೆಗೆ ಅನೇಕ ಬದಲಾವಣೆಗಳು ಕಾಲೇಜಿನಲ್ಲಿ ಕಾಣಿಸಿಕೊಂಡಿವೆ.
 
‘ಈ ಕಾಲೇಜು ಸುಧಾರಣೆಗೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅಧಿಕಾರಿಗಳು ಸ್ಪಂದಿಸಿದರು. ಪಿಯು ಇಲಾಖೆ ನಿರ್ದೇಶಕಿ ಶಿಖಾ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್‌ ಅವರ ಗಮನಕ್ಕೆ ತಂದಾಗ ಅವರು ಸ್ಪಂದಿಸಿದರು. ಒಂದು ತಿಂಗಳಿಂದ ಶಾಲೆಯ ಸ್ವಚ್ಛತೆಯ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ’ ಎನ್ನುತ್ತಾರೆ ಸುನಿತಾ. 
 
‘ಕಾಲೇಜಿನ ಪ್ರತಿ ಕೊಠಡಿಯ ಚಾವಣೆಯ ಸೀಲಿಂಗ್‌ ಕಿತ್ತು ಕೆಳಗೆ ಬೀಳುತ್ತಿದೆ. ಅಲ್ಲಲ್ಲಿ ಗೋಡೆ ಕಿತ್ತಿದೆ. ಕಿಟಕಿಗಳು ಒಡೆದು ನಿಂತಿವೆ. ಎಂಪ್ರೆಸ್‌ ಕಾಲೇಜಿನ ಸುಧಾರಣೆಗೆ ಸಾಕಷ್ಟು ಶ್ರಮಿಸಬೇಕಾಗಿದೆ’ ಎನ್ನುತ್ತಾರೆ ಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ.
 
ಕ್ಲೀನ್ ಸಿಟಿ ಅಸೋಸಿಯೇಷನ್‌ ವತಿಯಿಂದ ವಿದ್ಯಾರ್ಥಿನಿಯರು, ಶಿಕ್ಷಕರು, ಉಪನ್ಯಾಸಕರ ಮನವೊಲಿಸಿದ ಬಳಿಕ ಕಾಲೇಜಿನ ಕ್ಯಾಂಪಸ್‌ನಲ್ಲಿ ಬದಲಾವಣೆ ಕಾಣ ತೊಡಗಿದೆ. ಶಿಕ್ಷಕರು, ಉಪನ್ಯಾಸಕರು ಕೂರುವ ಕೊಠಡಿಗಳಿಗೆ ಒಂದು ಅಂದ ಬಂದಿದೆ. 
 
ಶಾಲೆಯ ಕೊಠಡಿಗಳಲ್ಲಿ  ಅನುಪಯುಕ್ತ ಬಿದ್ದಿದ್ದ ಸುಮಾರು ಒಂದು ಲಾರಿಯಷ್ಟಿದ್ದ ಸಾಮಗ್ರಿಗಳನ್ನು ಕೊಠಡಿಯೊಂದಕ್ಕೆ ಸಾಗಿಸಿ ತುಂಬಲಾಗಿದೆ.
 
ಕಾಲೇಜಿಗೆ ನೀಡಲಾಗಿದ್ದ ತುಕ್ಕು ಹಿಡಿದಿದ್ದ 9 ಹೊಲಿಗೆ ಯಂತ್ರಗಳನ್ನು ಮಕ್ಕಳು ಪಾಠ ಕೇಳುವ ಕೊಠಡಿಯಿಂದ ಆಚೆ ಸಾಗಿಸಲಾಗಿದೆ. ಶಾಲೆಯ ಕಿಟಕಿಯ ದೂಳು, ಗೋಡೆಯಲ್ಲಿ ಕಟ್ಟಿದ ಜೇಡವನ್ನು ತೆಗೆಯಲಾಗಿದೆ. ಶಾಲಾ ಕೊಠಡಿಗಳನ್ನು ತೊಳೆಯಲಾಗಿದೆ. ಎಲ್ಲ ಕಿಟಕಿಗಳಿಗೂ ಕರ್ಟನ್ ಹಾಕಲಾಗಿದೆ. 
 
‘ಮೊದಲೆಲ್ಲ ಕೊಠಡಿಗಳ ತುಂಬಾ ಕಸ ತುಂಬಿರುತ್ತಿತ್ತು. ವಾಸನೆ ಬಡಿಯುತ್ತಿತ್ತು. ‘ಕ್ಲೀನ್ ಸಿಟಿ ಅಸೋಸಿಯೇಷನ್’ ಪ್ರವೇಶದ ನಂತರ ನಾವುಗಳೇ ಕೊಠಡಿ ಸ್ವಚ್ಛ ಮಾಡಿಕೊಳ್ಳುತ್ತಿದ್ದೇವೆ. ಈಗ ಪಾಠ ಕೇಳಲು ಖುಷಿಯಾಗುತ್ತಿದೆ’ ಎನ್ನುತ್ತಾರೆ ಇಲ್ಲಿನ ಮಕ್ಕಳು.
 
ಕಾಲೇಜಿಗೆ ಕುಡಿಯುವ ನೀರಿನ ವ್ಯವಸ್ಥೆ, ಹಳೆಯ ಕಟ್ಟಡಕ್ಕೆ ಸುಣ್ಣ, ಬಣ್ಣ, ಕಿತ್ತು ಹೋಗಿರುವ ಕಡೆ ದುರಸ್ತಿ ಕಾಣಬೇಕಾಗಿದೆ.
 
21 ಕೊಠಡಿ ಬೇಕು: ಪ್ರೌಢಶಾಲೆ ಮತ್ತು ಕಾಲೇಜು ಸೇರಿ ಸುಮಾರು 2500ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಈಗ 20 ಕೊಠಡಿಗಳಿವೆ. ಇನ್ನೂ 21 ಕೊಠಡಿ ಬೇಕು ಎನ್ನುತ್ತಾರೆ ಪ್ರಾಂಶುಪಾಲ ಮಹಾದೇವಪ್ಪ.
 
ಕೊಠಡಿ ಕೊರತೆಯ ಕಾರಣ ಪ್ರೌಢಶಾಲೆ ಮತ್ತು ಕಾಲೇಜು ತರಗತಿಯನ್ನು ಪಾಳಿ ಆಧಾರದಲ್ಲಿ ನಡೆಸಲಾಗುತ್ತಿದೆ.
 
ಐದು ಗಂಟೆ ಕಾಲ ಪಿಯು ಕಾಲೇಜು ನಡೆಯಬೇಕು ಎಂಬ ನಿಯಮ ಇದ್ದರೂ ಇಲ್ಲಿ ಕೇವಲ 3ರಿಂದ 4 ಗಂಟೆ ಕಾಲ ಕಾಲೇಜು ನಡೆಯುತ್ತಿದೆ. ಬೆಳಿಗ್ಗೆ 8ಕ್ಕೆ ಆರಂಭವಾಗುವ ಕಾಲೇಜು ಬೆಳಿಗ್ಗೆ 11ಕ್ಕೆಲ್ಲ ಮುಗಿಯಲಿದೆ. ನಂತರ ಹೈಸ್ಕೂಲು ತರಗತಿಗಳು ಆರಂಭವಾಗಲಿವೆ.
 
ಸುಸ್ತಾಗುವ ಉಪನ್ಯಾಸಕರು!: ಇಲ್ಲಿನ ಉಪನ್ಯಾಸಕರಿಗೆ ಒಂದು ತರಗತಿ ತೆಗೆದುಕೊಂಡರೆ ಸುಸ್ತಾಗುತ್ತದೆ ಅಂತೆ. ನನಗೆ ಸುಸ್ತು. ಕ್ಲಾಸ್‌ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕೆಲವು ಉಪನ್ಯಾಸಕರು ಯಾವಾಗಲೂ ಹೇಳುತ್ತಾರೆ ಎಂಬುದು ಇಲ್ಲಿನ ವಿದ್ಯಾರ್ಥಿನಿಯರ ದೂರು!
 
ಸರಿಯಾದ ಸಮಯಕ್ಕೆ ಕಾಲೇಜಿಗೆ ಬಾರದೆ ಇರುವುದು, ಮಕ್ಕಳಿಗೆ ನೋಟ್‌ ಪುಸ್ತಕ ಮಾರುವುದು, ಪಾಠ ಮಾಡದೇ ಇರುವುದು ಮತ್ತಿತರ ಆರೋಪಗಳು ಇಲ್ಲಿನ ಕೆಲವು ಉಪನ್ಯಾಸಕರ ಮೇಲಿವೆ.
 
*
 
**
ಇಂಥವರು ಇದ್ದಾರೆ
ಕಂಪ್ಯೂಟರ್‌ ಸೈನ್ಸ್‌ನ ಉಪನ್ಯಾಸಕ ರಾಜಪ್ಪ ಅವರದು ವಿಭಿನ್ನ ದಾರಿ. ಕಂಪ್ಯೂಟರ್‌ ಕೊಠಡಿಗೆ ತಾವೇ ಹಣ ಹಾಕಿ ಪ್ರೊಜೆಕ್ಟರ್‌ ತಂದು ಹಾಕಿಸಿದ್ದಾರೆ. ವಾರಕ್ಕೊಮ್ಮೆ ತಮ್ಮ ಪತ್ನಿ ಶೈಲಜಾ ಅವರನ್ನು ಕರೆ ತಂದು ಕೊಠಡಿ ಸ್ವಚ್ಛ ಮಾಡುತ್ತಾರೆ.
 
**
ಭಲೇ ಹುಡುಗಿಯರು
‘ತುಮಕೂರು ಕ್ಲೀನ್ ಸಿಟಿ ಅಸೋಸಿಯೇಷನ್’ ಅವರು ಕಾಲೇಜಿನ ಸ್ಚಚ್ಛತೆಯ ನೇತೃತ್ವ ವಹಿಸಿಕೊಳ್ಳುವ ಮುನ್ನ ಶಾಲೆಯ ತಮ್ಮ ಕೊಠಡಿಗಳನ್ನು ಸ್ವಚ್ಛ ಮಾಡುವ ಕೆಲಸವನ್ನು  9ನೇ ತಗರತಿಯ ಚಿನ್ಮಯಿ ಮತ್ತು ಅನುಶ್ರೀ ಮಾಡುತ್ತಿದ್ದರು.
 
‘ಪಾಠ ಕೇಳುವ ಕೊಠಡಿ ಸ್ವಚ್ಛವಾಗಿರಬೇಕು ಎಂದು ಮೊದಲಿನಿಂದಲೂ ಅನ್ನಿಸುತ್ತಿತ್ತು. ಅದಕ್ಕಾಗಿ ಪ್ರತಿ ದಿನ ನಾವಿಬ್ಬರು ನಮ್ಮ ಕೊಠಡಿ ಕಸ ಗುಡಿಸಿಕೊಳ್ಳುತ್ತಿದ್ದೆವು. ಈಗ ಎಲ್ಲರೂ ಕೈ ಜೋಡಿಸುತ್ತಿದ್ದಾರೆ. ಕಾಲೇಜಿನ ಈಗಿನ ಸ್ವಚ್ಛತೆ ಕಂಡು ಖುಷಿಯಾಗುತ್ತಿದೆ’ ಎಂದು ಈ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಸಂತಸ ಹಂಚಿಕೊಂಡರು.
 
**
ಅಭಿವೃದ್ಧಿಪಡಿಸುವ ಕನಸು ಇದು ಎರಡು ವರ್ಷದ ಯೋಜನೆ. ಎಂಪ್ರೆಸ್‌ ಕಾಲೇಜನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕನಸು ಕಂಡಿದ್ದೇವೆ.
ಸುನೀತಾ, ಯೋಜನಾ ನಿರ್ದೇಶಕಿ, ನಮ್ಮ ಶಾಲೆ ನಮ್ಮ ಅಭಿವೃದ್ಧಿ
 
**
ನಮ್ಮೊಂದಿಗೆ ಕೈಜೋಡಿಸಿ
ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿ,  ಕಾಲೇಜಿನ ಸಿಬ್ಬಂದಿ ವರ್ಗ ಸಹಕಾರ ಕೊಟ್ಟಿದೆ. ಸಂಘ ಸಂಸ್ಥೆಗಳು, ಪೋಷಕರು ನಮ್ಮೊಂದಿಗೆ ಕೈಜೋಡಿಸಬೇಕು. 
–ಜ್ಯೋತಿ ಸುಧೀಂದ್ರ, ‘ತುಮಕೂರು ಕ್ಲೀನ್ ಸಿಟಿ ಅಸೋಸಿಯೇಷನ್’ ಅಧ್ಯಕ್ಷೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT