ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್‌, ಇಲಾಖೆ ಸಿಬ್ಬಂದಿ ಪ್ರತಿಭಟನೆ

ಸರ್ಕಾರಿ ಒತ್ತುವರಿ ಭೂಮಿ ತೆರವು ಮಾಡದಂತೆ ಜನಪ್ರತಿನಿಧಿಗಳ ಹಸ್ತಕ್ಷೇಪ
Last Updated 31 ಜನವರಿ 2017, 9:36 IST
ಅಕ್ಷರ ಗಾತ್ರ
ಆನೇಕಲ್‌ : ‘ಕಂದಾಯ ಇಲಾಖೆಯ ಸಿಬ್ಬಂದಿಗೆ ರಕ್ಷಣೆ ಇಲ್ಲದಂತಾಗಿದೆ. ಒತ್ತಡದಿಂದ ಕೆಲಸ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಿತ್ಯದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು ಕಷ್ಟವಾಗಿದೆ. ಕಚೇರಿ ಕೆಲಸಗಳನ್ನು ಸುಗಮವಾಗಿ ನಡೆಸಲು ಅನುವು ಮಾಡಿಕೊಡಬೇಕು’ ಎಂದು ಒತ್ತಾಯಿಸಿ ಕಂದಾಯ ಇಲಾಖೆಯ ಸಿಬ್ಬಂದಿ ತಹಶೀಲ್ದಾರ್‌ ಆಶಾ ಪರ್ವೀನ್ ನೇತೃತ್ವದಲ್ಲಿ ಕಪ್ಪು ಪಟ್ಟಿ ಧರಿಸಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು. 
 
ಆಶಾ ಪರ್ವೀನ್ ಸುದ್ದಿಗಾರರೊಂದಿಗೆ ಮಾತನಾಡಿ, ತಾಲ್ಲೂಕಿನಲ್ಲಿ 130 ಎಕರೆ ಸರ್ಕಾರಿ ಜಮೀನು ಹಾಗೂ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಭಾವಿಗಳು, ಜನಪ್ರತಿನಿಧಿಗಳ ಮೂಲಕ ಪ್ರಭಾವ ಬೀರಿಸಿ ಪಾರದರ್ಶಕವಾಗಿ ಕೆಲಸ ನಿರ್ವಹಿಸಲು ಅಡ್ಡಿ ಪಡಿಸಲಾಗಿದೆ. ಕಾನೂನು ರೀತಿಯ ಕ್ರಮ ಕೈಗೊಂಡರೆ ಇಲ್ಲದ ಆರೋಪಗಳನ್ನು ಹೊರಿಸಿ ಸುಳ್ಳು ಪ್ರಚಾರ ಮಾಡಿ ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸಲಾಗುತ್ತಿದೆ. ಕಚೇರಿಯಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ರೈತರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ವ್ಯವಸ್ಥೆ ಮಾಡಲಾಗಿದೆ. ತಾಲ್ಲೂಕಿನ ಲಕ್ಷ್ಮೀಸಾಗರ ಸರ್ವೆ ನಂ. 120 ಹಾಗೂ 121ರಲ್ಲಿ ವೆಂಕಟಸ್ವಾಮಿ ರೆಡ್ಡಿ ಎಂಬ ರೈತರು ಫಾರ್ಮ್ ಹೌಸ್‌ಗೆ ಅನುಮತಿ ಪಡೆದಿದ್ದರು. ಈ ಅನುಮತಿ ಪತ್ರದ ಆಧಾರದ ಮೇಲೆ ಹಸಿರು ವಲಯದಲ್ಲಿ ಬೇರೊಂದು ಜಾಗದಲ್ಲಿ ಸುಮಾರು 20ಕ್ಕೂ ಹೆಚ್ಚು ಬಾಡಿಗೆ ಮನೆಗಳನ್ನು ನಿರ್ಮಿಸಿದ್ದಾರೆ ಎಂದು ರಾಜಸ್ವ ನಿರೀಕ್ಷಕರು ವರದಿ ನೀಡಿದ್ದರು. ಸರ್ವೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಅಡ್ಡಿ ಪಡಿಸಿದರು. 
 
ಈ ಸ್ಥಳದಲ್ಲಿ ಕಾಲುದಾರಿ ಹಾಗೂ ರಾಜಕಾಲುವೆ ಇರುವುದು ಕಂಡುಬಂದಿದೆ. ಆದ್ದರಿಂದ ಸರ್ವೆ ಕಾರ್ಯ ಮುಗಿಯುವವರೆಗೂ ಕಾಮಗಾರಿ ನಡೆಸಬಾರದು ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಲಂಚದ ಆರೋಪವನ್ನು ವೆಂಕಟಸ್ವಾಮಿರೆಡ್ಡಿ ಅವರು ಮಾಡಿದ್ದಾರೆ. ಇಂತಹ ನಿರಾಧಾರ ಆರೋಪಗಳ ಮೂಲಕ ಅಧಿಕಾರಿಗಳಲ್ಲಿ ಭಯಹುಟ್ಟಿಸಿ ತಮ್ಮ ಕೆಲಸ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ತಿಳಿಸಿದರು. 
 
ರಾಜಸ್ವ ನಿರೀಕ್ಷಕ ಮಂಜುನಾಥ ರೆಡ್ಡಿ ಮಾತನಾಡಿ, ಒತ್ತುವರಿ ತೆರವು ಕಾರ್ಯ ಕೈಗೊಂಡ ಸಂದರ್ಭದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಮುಂದಾದ ಘಟನೆಗಳು ನಡೆದಿವೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಹ ನೀಡಲಾಗಿದೆ ಎಂದರು. 
 
ವಿಶೇಷ ತಹಶೀಲ್ದಾರ್ ಮಂಜುನಾಥ್, ಗ್ರೇಡ್‌ 2ತಹಶೀಲ್ದಾರ್ ಮಂಜುನಾಥ್, ಉಪತಹಶೀಲ್ದಾರ್‌  ಶೇಖರಪ್ಪ, ಕೃಷ್ಣಯ್ಯ, ರಾಜಸ್ವ ನಿರೀಕ್ಷಕ ಚಂದ್ರು ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.       
 
**
ಸರ್ಕಾರಿ ಕೆಲಸ ಕಾರ್ಯಗಳನ್ನು ಸುಗಮವಾಗಿ ನಡೆಸಲು ಅಡ್ಡಿ ಪಡಿಸುವ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು
-ಕಂದಾಯ ನೌಕರರು, ಪ್ರತಿಭಟನಾಕಾರರು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT