ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ಮನವಿ ಸಲ್ಲಿಸಲು ಸರ್ವ ಪಕ್ಷಗಳ ನಿರ್ಧಾರ

ವಿಜಯಪುರ ತಾಲ್ಲೂಕು ಕೇಂದ್ರಕ್ಕೆ ಆಗ್ರಹಿಸಿ ನಿಲ್ಲದ ಹೋರಾಟ
Last Updated 31 ಜನವರಿ 2017, 9:27 IST
ಅಕ್ಷರ ಗಾತ್ರ
ವಿಜಯಪುರ: ನಿರಂತರವಾಗಿ ಮಳೆಯ ಅಭಾವದಿಂದ ತೀವ್ರ ಬರಗಾಲಕ್ಕೆ ತುತ್ತಾಗಿ ಅಭಿವೃದ್ಧಿಯಿಂದ ಹಿಂದುಳಿದಿರುವ ಗ್ರಾಮಾಂತರ ಜಿಲ್ಲೆ ವಿಜಯಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆನ್ನುವ ಒತ್ತಾಯ ಮಂಡಿಸಲು ಸಂಸದರು ಸೇರಿದಂತೆ ಗ್ರಾಮ ಪಂಚಾಯಿತಿ ಮಟ್ಟದವರೆಗೂ ವಿಜಯಪುರ ಹೋಬಳಿ, ಚನ್ನರಾಯಪಟ್ಟಣ ಹೋಬಳಿಯ ಎಲ್ಲಾ ಜನಪ್ರತಿನಿಧಿಗಳ ಸಭೆಯನ್ನು ಕರೆದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
 
ಪಟ್ಟಣದ ಪ್ರವಾಸಿಮಂದಿರದಲ್ಲಿ ಸೋಮವಾರ ವಿಜಯಪುರ ತಾಲ್ಲೂಕು ಹೋರಾಟ ಸಮಿತಿಯ ವತಿಯಿಂದ ಆಯೋಜನೆ ಮಾಡಲಾಗಿದ್ದ ವಿಜಯಪುರ, ಚನ್ನರಾಯಪಟ್ಟಣ ಹೋಬಳಿಗಳ ಮುಖಂಡರ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
 
ಕಳೆದ ನಾಲ್ಕು ದಶಕಗಳಿಂದ ವಿಜಯಪುರವನ್ನು ತಾಲ್ಲೂಕನ್ನಾಗಿ ಘೋಷಣೆ ಮಾಡಬೇಕೆನ್ನುವ ಒತ್ತಾಯವನ್ನು ಸರ್ಕಾರಕ್ಕೆ ಮಾಡಿಕೊಂಡು ಬರಲಾಗುತ್ತಿದೆ. ಆದರೆ ರಾಜಕೀಯ ಪಕ್ಷಗಳ ಇಚ್ಛಾಶಕ್ತಿಯ ಕೊರತೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ  ತಾಲ್ಲೂಕು ರಚನೆಗಾಗಿ ಸಮೀಕ್ಷೆ ನಡೆಸಿದ್ದ ಸಮಿತಿಗಳ ವರದಿಗಳನ್ವಯ ತಾಲ್ಲೂಕು ರಚನೆ ಸಾಧ್ಯವಾಗಿಲ್ಲ.
 
ವಿಜಯಪುರ ಪಟ್ಟಣದಲ್ಲಿನ ಜನಸಂಖ್ಯೆ ₹ 50 ಸಾವಿರವಾಗಿದೆ. ಹೋಬಳಿ ವಿವಿಧ ಗ್ರಾಮಗಳಿಂದ ಸಾವಿರಾರು ಮಂದಿ ನಾಗರಿಕರು ಬಂದು ವ್ಯವಹರಿಸುವ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ದಿನನಿತ್ಯ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಯುತ್ತಿರುವುದರಿಂದ ಸರ್ಕಾರಕ್ಕೂ ತೆರಿಗೆ ರೂಪದಲ್ಲಿ ಲಕ್ಷಾಂತರ ರೂಪಾಯಿಗಳ ವರಮಾನವಿದೆ. 
 
ರೇಷ್ಮೆಗೂಡು ಮಾರುಕಟ್ಟೆಯಿಂದ ದಿನಕ್ಕೆ ₹ 50 ರಿಂದ ₹ 60 ಸಾವಿರ ವರಮಾನವಿದೆ. ಇಲ್ಲಿನ ಜನರು ತಾಲ್ಲೂಕು ಕಚೇರಿಗೆ ಹೋಗಬೇಕಾದರೆ ದೇವನಹಳ್ಳಿಗೆ ಹೋಗಬೇಕು. ಅಲ್ಲಿ ಜನಸಂದಣಿ ಹೆಚ್ಚಾಗಿರುವ ಕಾರಣದಿಂದಾಗಿ ಒಂದು ದಿನದಲ್ಲಿ ಆಗಬೇಕಾದಂತಹ ಕೆಲಸಗಳು ಮೂರ್ನಾಲ್ಕು ದಿನಗಳ ಕಳೆದರೂ ಆಗುತ್ತಿಲ್ಲ.
 
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರು ಸೇರಿದಂತೆ ಎಲ್ಲ  ಹೋಬಳಿಗಳ ನಾಗರಿಕರು ತಾಲ್ಲೂಕು ಕೇಂದ್ರ ರಚನೆಗೆ ಪಕ್ಷಾತೀತವಾಗಿ ಶ್ರಮಿಸಬೇಕು. ಮುಖ್ಯಮಂತ್ರಿಗಳು, ಕಂದಾಯ ಮಂತ್ರಿಗಳು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌್ ಸೇರಿದಂತೆ ಎಲ್ಲರಿಗೆ ಮನವಿ ಪತ್ರವನ್ನು ಸಲ್ಲಿಸುವ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಗುತ್ತದೆ. 
 
ಸರ್ಕಾರ ಅಧಿವೇಶನದಲ್ಲಿ 33 ಹೊಸ ತಾಲ್ಲೂಕುಗಳ ರಚನೆಯ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆಯಿದ್ದು ಬಜೆಟ್‌ನಲ್ಲಿಯೆ ವಿಜಯಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು. ಒಂದು ವೇಳೆ ಸರ್ಕಾರ ನಿರ್ಲಕ್ಷ್ಯ ತೋರಿದಲ್ಲಿ ವಿಜಯಪುರದಲ್ಲಿ ತಾಲ್ಲೂಕು ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
 
ಬಸವ ಕಲ್ಯಾಣಮಠದ ಅಧ್ಯಕ್ಷ ಮಹದೇವಸ್ವಾಮೀಜಿ, ಪುರಸಭಾ ಮಾಜಿ ಅಧ್ಯಕ್ಷ ಎಂ.ಸತೀಶ್ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚೀ.ಮಾ.ಸುಧಾಕರ್, ತಾ.ಪಂ. ಮಾಜಿ  ಅಧ್ಯಕ್ಷ ಬೀಡಿಗಾನಹಳ್ಳಿ ಶಿವಪ್ಪ, ಬೈರಾಪುರ ರಾಜಣ್ಣ,  ಪುರಸಭಾ ಸದಸ್ಯರಾದ ಎಸ್. ಭಾಸ್ಕರ್, ವರದರಾಜು, ಬಲಮುರಿ ಶ್ರೀನಿವಾಸ್, ಎಂ.ನಾಗರಾಜ್, ಮುಖಂಡರಾದ ಚಿಕ್ಕನಹಳ್ಳಿ ಸುಬ್ಬಣ್ಣ, ವಿ.ನಾ.ರಮೇಶ್, ಕೋರಮಂಗಲ ವೀರಪ್ಪ, ಕಲ್ಯಾಣ್ ಕುಮಾರ್ ಬಾಬು, ಎಸ್.ಆರ್.ಎಸ್. ಬಸವರಾಜ್, ಜಿ.ಸತೀಶ್‌ಕುಮಾರ್, ಕರವೇ, ಜಯ ಕರ್ನಾಟಕ ಪದಾಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT