ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶಗಳ ಬಾಗಿಲು ಬಡಿದಾಗ

Last Updated 31 ಜನವರಿ 2017, 19:30 IST
ಅಕ್ಷರ ಗಾತ್ರ

ಮಗನಿಗೆ ಕೆಲಸ ಸಿಕ್ಕಿಲ್ಲವೆಂದು ಕೊರಗುತ್ತಿದ್ದ ಕಮಲಮ್ಮನವರಿಗೆ, ಪಕ್ಕದ ಮನೆಯ ಸುಗುಣಮ್ಮನ ಮಾತುಗಳನ್ನು ಕೇಳಿ ಸಿಹಿ ತಿಂದಷ್ಟೇ ಸಂತೋಷವಾಯಿತು. ಅವರ ಮನೆಯ ಪ್ರದೇಶದ ವ್ಯಾಪ್ತಿಯಲ್ಲಿಯೇ ಇರುವ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಅವಕಾಶವಿರುವುದಾಗಿಯೂ ಹಾಗೂ ಮೊದಲು ಬಂದವರಿಗೆ ಆದ್ಯತೆ ಎಂದೂ ತಿಳಿಸಿದರು. ನಿರಾಶೆಯಿಂದ ಕಂಗೆಟ್ಟಿದ್ದ ಕಮಲಮ್ಮನವರು ಖುಷಿಯಿಂದ ಮಗನಿಗೆ ವಿಷಯ ತಿಳಿಸಿದರು.

ಕಮಲಮ್ಮನವರ ಮಗ, ‘ಅಯ್ಯೋ ಹೋಗಮ್ಮಾ, ಅಲ್ಲಿಗೆಲ್ಲಾ ಬೆಳಗಿನ ಜಾವವೇ ಹೋಗಿ ಸರತಿಯಲ್ಲಿ ನಿಂತು ಕಾಯಬೇಕು. ಕಾದರೂ ನಮ್ಮಂತಹವರಿಗೆಲ್ಲಾ ಕೆಲಸ ಸಿಕ್ಕುವುದು ಕನಸೇ ಸರಿ’ ಎಂದು ಉಡಾಫೆಯಿಂದ ಕೈಚೆಲ್ಲಿ ಕುಳಿತನು. ಇನ್ನು ಸುಗುಣಮ್ಮನವರ ಮಗ ಬೆಳಗ್ಗೆ ಮುಂಚೆಯೇ ಹೋಗಿ ಕಾದು ಕುಳಿತು ಕೆಲಸಗಿಟ್ಟಿಸಿಕೊಂಡು ಬಂದನು.

ಮೇಲಿನ ಉದಾಹರಣೆಯಲ್ಲಿ ಕಮಲಮ್ಮನವರ ಮಗ ಬಂದ ಅವಕಾಶವನ್ನು ಉಪಯೋಗಿಸಿಕೊಳ್ಳದೆ ಅದರಿಂದ ವಂಚಿತನಾದರೆ, ಸುಗುಣಮ್ಮನವರ ಮಗ ಪ್ರಯತ್ನ ಪಟ್ಟು ಅದರ ಪ್ರಯೋಜನವನ್ನು ಪಡೆದುಕೊಂಡನು. ಪ್ರಯತ್ನಿಸಿದ ಮಾತ್ರಕ್ಕೆ ಅವಕಾಶದ ಉಪಯೋಗ ಆಗೇ ಆಗುತ್ತದೆಂದಲ್ಲ. ಆದರೆ ಪ್ರಯತ್ನವನ್ನೇ ಪಡದೆ ನಿರಾಶಾವಾದಿಗಳಾಗುವುದು ಸರಿಯಲ್ಲ. ಯಾರಾದರೂ ಒಳ್ಳೆಯ ಅವಕಾಶದ ನಿವೇದನೆ ಮಾಡಿದಲ್ಲಿ, ನಮಗೆ ನಮ್ಮಲ್ಲಿ ಭರವಸೆಯಿಲ್ಲದಿದ್ದರೂ ಅದನ್ನು ಒಪ್ಪಿಕೊಂಡರೆ ಅದನ್ನು ಕಲಿಯುವ ಅವಕಾಶ ಸಿಗುತ್ತದಲ್ಲವೇ?

ಜೀವನದಲ್ಲಿ ಅವಕಾಶಗಳು ಪ್ರತಿಯೊಬ್ಬರಿಗೂ ಸಮಾನವಾಗಿರುತ್ತವೆ. ಅದನ್ನು ಗುರುತಿಸುವ ಶಕ್ತಿ ಒಬೊಬ್ಬರಲ್ಲಿ ಒಂದೊಂದು ರೀತಿ ಇರುವುದರಿಂದ, ಕೆಲವರು ಅವಕಾಶಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ಮತ್ತೆ ಹಲವರು ಅವಕಾಶಗಳಿಂದ ವಂಚಿತರಾಗುತ್ತಾರೆ. ಕಾಲ ಯಾರಿಗೂ ಯಾವುದಕ್ಕೂ ಕಾಯುವುದಿಲ್ಲ. ಅವಕಾಶಗಳು ಬಂದಾಗ ಅಳೆದೂ ತೂಗಿ, ಯೋಚಿಸುತ್ತಾ ಕುಳಿತರೆ ಅದು ಇನ್ಯಾರದ್ದೋ ಪಾಲಾಗಿರುತ್ತದೆ. ಜೀವನದ ಪ್ರತಿಯೊಂದು ಕ್ಷಣವೂ ಬದಲಾಗುತ್ತಿರುತ್ತದೆ. ಆ ಕ್ಷಣವನ್ನು ಬಿಟ್ಟರೆ ಅದು ಮತ್ತೆ ಸಿಕ್ಕುವುದಿಲ್ಲ. ಆದರೆ ಬಿಟ್ಟ ಕ್ಷಣಕ್ಕಾಗಿ ನಿರಾಶೆಯ ಅಗತ್ಯವಿಲ್ಲ. ಹೊಸ ಕ್ಷಣ ಮತ್ತೆ ಬರುತ್ತದೆ. ಅದನ್ನು ಉಪಯೋಗಪಡಿಸಿಕೊಳ್ಳುವ ಮನಃಸ್ಥಿತಿ ಬೇಕಷ್ಟೆ.   

ಬದುಕು ಹರಿಯುವ ನೀರಿದ್ದಂತೆ. ನಿರಂತರವಾಗಿ ನಡೆಯುತ್ತಿರುತ್ತದೆ. ಪ್ರತಿಯೊಬ್ಬರೂ ಸಮಯದ ಜೊತೆ ಸಾಗಲೇಬೇಕು. ಕೆಲವರು ಅವಕಾಶ ಸಿಕ್ಕಿದಾಗ ಮಾತ್ರ ಅದರ ಸದುಪಯೋಗ ಪಡೆದರೆ, ಮತ್ತೆ ಕೆಲವರು ಎಲ್ಲ ಸಮಯವನ್ನೂ ತಮ್ಮ ಆವಶ್ಯಕತೆಗನುಗುಣವಾಗಿ ಉಪಯೋಗಿಸಿಕೊಳ್ಳುತ್ತಾರೆ. ಇಂತಹವರನ್ನು ‘ಅವಕಾಶವಾದಿಗಳು’ ಎನ್ನಬಹುದು. ಅವಕಾಶದ ಸದುಪಯೋಗಕ್ಕೂ ಹಾಗೂ ಅವಕಾಶವಾದಿಗಳಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ಅವಕಾಶಗಳು ಯಾವಾಗಲೂ ಕಠಿಣ ಪರಿಶ್ರಮವಿದ್ದಂತೆ.

ಬಹಳಷ್ಟು ಜನರು ಅದನ್ನು ಗುರುತಿಸುವುದಿಲ್ಲ. ಬದಲಿಗೆ ತಮ್ಮನ್ನು ತಾವು ದುರದೃಷ್ಟವಂತರೆಂಬ ಹಣೆಪಟ್ಟಿ ಕಟ್ಟಿಕೊಂಡು ದೂಷಿಸಿಕೊಳ್ಳುತ್ತಾರೆ. ಮತ್ತೂ ಕೆಲವರು ಹೆದರಿಕೆಯಿಂದಲೇ ಬದುಕನ್ನು ದೂಡುತ್ತಾರೆ. ಒಂದೊಂದು ಹೆಜ್ಜೆ ಇಡುವಾಗಲೂ ಭಯದಿಂದಲೇ ಇಡುತ್ತಾರೆ. ಪ್ರತಿಯೊಂದನ್ನೂ ಅನುಮಾನದ ದೃಷ್ಟಿಯಿಂದಲೇ ನೋಡುತ್ತಾರೆ. ಇಂತಹವರಿಂದ ಅವಕಾಶಗಳ ಸದುಪಯೋಗ ಸಾಧ್ಯವಿಲ್ಲ.

ಎಂತಹ ಕಷ್ಟದ ಪರಿಸ್ಥಿತಿಯೇ ಆಗಿರಲಿ, ಅವಕಾಶಗಳು ಬಂದಾಗ ಅವನ್ನು ಗುರುತಿಸಿ ಉಪಯೋಗಿಸಿಕೊಳ್ಳುವವರು ಆಶಾವಾದಿಗಳು. ಅದೇ ನಿರಾಶಾವಾದಿಗಳು ಪ್ರತಿಯೊಂದು ಅವಕಾಶವನ್ನೂ ಕಷ್ಟವೆಂದು ಭಾವಿಸಿ ಅದನ್ನು ಉಪಯೋಗಿಸದೆ ಬಿಡುತ್ತಾರೆ. ಅನುಕೂಲದ ಸಂದರ್ಭಗಳು ಸೂರ್ಯೋದಯವಿದ್ದಂತೆ. ಭಾನುವಿನ ಉದಯದ ಆಸ್ವಾದವನ್ನು ಆ ಕ್ಷಣ  ಅನುಭವಿಸದಿದ್ದರೆ ಅದು ಕಳೆದುಹೋಗುತ್ತದೆ.

ಕೆಲವು ಅವಕಾಶಗಳು ಜೀವನದಲ್ಲಿ ಒಮ್ಮೆ ಮಾತ್ರ ಬರುತ್ತವೆ.  ಅಂತಹವುಗಳನ್ನು ಗುರುತಿಸಿ ಪ್ರಯೋಜನ ಪಡೆದುಕೊಳ್ಳುವುದು ಬುದ್ಧಿವಂತರ ಲಕ್ಷಣ. ಒಬ್ಬರಿಂದ ಅದರ  ಬಳಕೆಯಾಗದಿದ್ದಾಗ ಅದು ಖಂಡಿತ ಮತ್ತೊಬ್ಬರ ಪಾಲಾಗುತ್ತದೆಯೇ ಹೊರತು ನಿರುಪಯೋಗವಾಗುವುದಿಲ್ಲ. ಹಲವು ಸಂದರ್ಭಗಳು ಮತ್ತೆ ಮತ್ತೆ ಬರುತ್ತವೆ. ಅವು ಬಂದಾಗ ನನ್ನಿಂದಾಗುವುದೇ ಎನ್ನುವ ಸಂಶಯ ಬೇಡ. ನಿಮ್ಮ  ಪರಿಮಿತಿಯನ್ನು ಮೀರಿ ಪ್ರಯತ್ನಿಸಿ, ಆದರೆ ನಿಮ್ಮ ಅವಕಾಶವನ್ನು ತಿರಸ್ಕರಿಸಬೇಡಿ. ಜೀವನದಲ್ಲಿ ಅತ್ಯದ್ಭುತವಾದ ಸಂದರ್ಭಗಳು ಬರುತ್ತವೆಂದು ಕಾಯಬೇಡಿ. ಬಂದ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಳ್ಳುವುದು ನಮ್ಮ ಕೈಯ್ಯಲ್ಲಿದೆ.

ನಿರಾಶಾವಾದಿಗಳು ಅಥವಾ ದುರ್ಬಲ ವ್ಯಕ್ತಿಗಳು ಅವಕಾಶಗಳಿಗೆ ಎದುರು ನೋಡುತ್ತಾರೆ. ಆಶಾವಾದಿಗಳು ಅಥವಾ ಪ್ರಬಲರು ಅವಕಾಶಗಳನ್ನು ಹುಟ್ಟುಹಾಕುತ್ತಾರೆ.ಅವಕಾಶ ಎನ್ನುವುದು ಉಡುಗೊರೆಯಂತೆ ಡಬ್ಬದಲ್ಲಿ ಬಂದಿಳಿಯುವ ವಸ್ತುವಲ್ಲ. ಎಷ್ಟೋ ವೇಳೆ ನಮಗರಿವಿರದಂತೆಯೇ ಸಂದರ್ಭಗಳು ಸೃಷ್ಟಿಯಾಗುತ್ತಿರುತ್ತವೆ. ಸಮಯದ ಸದುಪಯೋಗ ತಿಳಿದಿರುವ ಪ್ರತಿಯೊಬ್ಬರಿಗೂ ಅವಕಾಶದ ಲಭ್ಯವಿದೆ. ಪ್ರತಿ ದಿನವೂ ಹೊಸದಾಗಿ ಹುಟ್ಟುತ್ತದೆ. ಅದರಲ್ಲಿರುವ ಪ್ರತಿಯೊಂದು ಕ್ಷಣ ಕ್ಷಣವೂ ಹೊಸತು.

ಈ ಹೊಸ ಕ್ಷಣವನ್ನು ಹೊಸ ಅವಕಾಶವೆಂದು ಭಾವಿಸಿ, ಅನುಭವಿಸಿ, ಉಪಯೋಗಿಸಿ ಅದರ ಪ್ರಯೋಜನ ಪಡೆದರೆ ಸರಿ. ಕೆಲವೊಂದು ಸಂದರ್ಭಗಳು ಕಷ್ಟಕರವಾಗಿದ್ದರೆ ಮತ್ತೆ ಕೆಲವು ಸುಲಭವಾಗಿರುತ್ತವೆ. ಕಷ್ಟ ಬಂದಾಗ ಧೃತಿಗೆಡದೆ ಧೈರ್ಯದಿಂದ ಎದುರಿಸಿದರೆ ಆ ಸಂದರ್ಭ ನಮ್ಮ ಕೈಗೆಟುಕಿದಂತೆಯೇ.  ಹೆಲೆನ್ ಕೆಲರ್ ಹೇಳಿರುವಂತೆ, ‘ಅವಕಾಶದ ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ತೆರೆದುಕೊಳ್ಳುತ್ತದೆ.’ ಆದರೆ ನಾವು ವಿಷಾದದಿಂದ ಮುಚ್ಚಿರುವ ಬಾಗಿಲಿನೆಡೆಗೇ ನೋಡುತ್ತಾ ತೆರೆದಿರುವ ಮತ್ತೊಂದು ಬಾಗಿಲನ್ನು ನೋಡುವುದೇ ಇಲ್ಲ.

ಎಲ್ಲರೂ ಯಾವಾಗಲೂ ಗೆಲ್ಲಲು ಸಾಧ್ಯವಿಲ್ಲ. ಸೋಲಾದಾಗ ಒಪ್ಪಿಕೊಂಡು ಜೀವನವನ್ನು ಬಂದ ರೀತಿಯಲ್ಲಿ ಎದುರಿಸಬೇಕು. ಸೋಲು ಗೆಲುವಿನ ಮೆಟ್ಟಿಲೆಂದು ಮರೆಯಬಾರದು. ಸೋಲೆಂಬುದು ಗೆಲುವಿನ ಹಾದಿಯಲ್ಲಿ ಸಿಗುವ ಮತ್ತೊಂದು ಅವಕಾಶವೆಂದು ಭಾವಿಸಬೇಕು. ಆದರೆ ಈ ಬಾರಿ ವಿವೇಚನೆಯಿಂದ ಹೆಜ್ಜೆ ಇಟ್ಟಲ್ಲಿ ಗೆಲುವು ಖಚಿತ. ಜೀವನದಲ್ಲಿ ಬರುವ ಅವಕಾಶಗಳನ್ನು ಗುರುತಿಸದೆ ಕೆಲವು ಜನರು ತಾವು ಅದೃಷ್ಟಹೀನರೆಂದೋ ಅಥವಾ ಜಾತಕ ಫಲದಿಂದಲೋ ತಮಗೆ ಅನುಕೂಲವಾದ ಸಂದರ್ಭಗಳು ಒದಗುತ್ತಿಲ್ಲವೆಂದು ಕೊರಗುತ್ತಾರೆ.


ಬಹಳಷ್ಟು ಜನರು ತಮ್ಮ ಸಮಯವೇ ಸರಿಯಾಗಿಲ್ಲವೆಂದು ಕಾಲವನ್ನು ದೂಷಿಸುತ್ತಾರೆ. ಹೌದು, ಬಂದ ಸಂದರ್ಭದ ಸದುಪಯೋಗವನ್ನು ಎಚ್ಚೆತ್ತು ಮಾಡಿಕೊಳ್ಳದಿದ್ದರೆ ನಿಜವಾಗಲೂ ಅದು ಕೆಟ್ಟ ಘಳಿಗೆಯೇ! ಅವಕಾಶಗಳು ಯಾವುದಾದರೂ ಆಗಿರಬಹುದು. ಕೆಲಸದಲ್ಲಿ ಬಡ್ತಿ, ಸಂಬಳದಲ್ಲಿ ಹೆಚ್ಚಳ, ಕುಟುಂಬದೊಂದಿಗೆ ಕಳೆಯುವ ಕಾಲ, ಸತ್ಸಂಗ, ಕಲಿಕೆ – ಹೀಗೆ ಯಾವುದೇ ರೂಪದಲ್ಲಿರಬಹುದು. ಜಾಗರೂಕತೆಯಿಂದ ಅವುಗಳ ಸದುಪಯೋಗ ಪಡೆಯುವುದು ಬುದ್ಧಿವಂತರ ಲಕ್ಷಣ.

ಸುಸಂದರ್ಭ ಬಂದು ಬಾಗಿಲು ಬಡಿದಾಗ, ಎದ್ದು ಹೋಗಿ ಬಾಗಿಲು ತೆರೆದರೆ ಮಾತ್ರ ಅದು ನಮಗೆ ಸಿಗುತ್ತದೆ. ಅದೃಷ್ಟವಿದ್ದರೆ ನಮ್ಮದಾಗುತ್ತದೆಂದು ಕಾದು ಕುಳಿತರೆ ಅದು ಬೇರೆಯವರ ಪಾಲಾಗುತ್ತದೆ. ಕೆಲವರು ಕಷ್ಟಪಟ್ಟು ಕೆಲಸ ಮಾಡುವುದಲ್ಲದೇ ಬುದ್ಧಿವಂತಿಕೆಯಿಂದಲೂ ಕೆಲಸ ಮಾಡಿ ಬಂದ ಅವಕಾಶವನ್ನು ದಕ್ಕಿಸಿಕೊಳ್ಳುತ್ತಾರೆ.

ಇನ್ನು ಕೆಲವರು ಅವಕಾಶ ನಾವಿದ್ದಲ್ಲಿಗೇ ಹುಡುಕಿಕೊಂಡು ಬರುತ್ತದೆಂದು ನೋಡುತ್ತಾ, ಕಾಯುತ್ತಾ ಕುಳಿತುಕೊಳ್ಳುತ್ತಾರೆ. ಮತ್ತೂ ಕೆಲವರಿಗೆ ಏನಾಗುತ್ತಿದೆ ಎಂದು ತಿಳಿಯುವುದರಲ್ಲಿಯೇ ಅವಕಾಶಗಳು ಅವರ ಕೈ ತಪ್ಪಿ ಹೋಗಿರುತ್ತವೆ.

ಕೆಲವರು ಬುದ್ಧಿವಂತರು  ಅವಕಾಶಗಳನ್ನು ಪಡೆಯಲು ಅವರ ಬಹಳಷ್ಟು ಸಮಯವನ್ನು ಮೀಸಲಿಡುತ್ತಾರೆ. ಹೀಗೆ ಮಾಡುವುದರಿಂದ ಸರಿಯಾದ ಅವಕಾಶದಿಂದ ವಂಚಿತರಾಗುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದ ಬಂದ ಒಳ್ಳೆಯ ದೆಶೆಗಳನ್ನು ಬಂದಂತೆಯೇ ಉಪಯೋಗಿಸಿದಲ್ಲಿ, ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ.

ಅವಕಾಶವೆನ್ನುವುದು ಮಂತ್ರದಂಡವಲ್ಲ; ನಿರಂತರ ಪರಿಶ್ರಮದಿಂದ ನಮಗೆ ನಾವೇ ನಿರ್ಮಿಸಿಕೊಳ್ಳಬಹುದಾದ ಸುಸಂದರ್ಭ. ಅವಕಾಶಗಳು ತಾವಾಗೇ ನಮ್ಮನ್ನರಸಿ ಬರುತ್ತವೆಂಬ ವ್ಯರ್ಥ ಕಲ್ಪನೆ ಬೇಡ. ಬದಲಿಗೆ ಪ್ರತಿಯೊಬ್ಬರೂ ಮಾಡುವ ಕೆಲಸ ಯಾವುದೇ ಆಗಿರಲಿ ನಿಷ್ಠೆಯಿಂದ, ಏಕಾಗ್ರತೆಯಿಂದ ಮಾಡಿದಲ್ಲಿ, ನಾವೇ ಒಳ್ಳೆಯ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬಹುದು.

ಮಾಡುವ ಕೆಲಸಕ್ಕೆ ನ್ಯಾಯ ಒದಗಿಸಿ, ಕಷ್ಟಪಟ್ಟಲ್ಲಿ, ಸುಸಂದರ್ಭಗಳನ್ನು ಇಮ್ಮಡಿಯಾಗಿಸಿಕೊಳ್ಳಬಹುದು. ನಿಜವಾದ ಅವಕಾಶಗಳು ಪ್ರತಿಯೊಬ್ಬರಿಗೂ ಅವನ್ನು ಉಪಯೋಗಿಸಿಕೊಳ್ಳುವ ಅವಕಾಶವನ್ನು ನೀಡುತ್ತವೆ. ಸಂಕಲ್ಪ ಶಕ್ತಿ, ಕಠಿಣ ಪರಿಶ್ರಮ, ಸಾಮರ್ಥ್ಯ ಹಾಗೂ ನಮ್ಮಲ್ಲಿ ನಮಗೆ ಭರವಸೆಯಿದ್ದಲ್ಲಿ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಮದರ್ ಥೆರೆಸಾ ಹೇಳಿರುವಂತೆ, ‘ಬದುಕೇ ಒಂದು ಅವಕಾಶವಿದ್ದಂತೆ’. ಮೊದಲು ಅದರ ಪ್ರಯೋಜನವನ್ನು ಪಡೆದುಕೊಳ್ಳೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT