ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗುವ ಬುದ್ಧನ ಮೊಗದೊಳಗೆ ...

Last Updated 31 ಜನವರಿ 2017, 19:30 IST
ಅಕ್ಷರ ಗಾತ್ರ

‘ನಗುವ ಬುದ್ಧ’ನನ್ನು ನೋಡಿದ್ದೀರಲ್ಲಾ? ಬೋಳು ತಲೆ, ದೊಡ್ಡ ಹೊಟ್ಟೆಯ ಉದ್ದ ನಿಲುವಂಗಿ ಧರಿಸಿ, ಒಂದೆರಡು ಬಟ್ಟೆಯ ಗಂಟುಗಳನ್ನು ಹಿಡಿದಿರುವ ದೊಡ್ಡನಗು ಹೊಂದಿರುವ ಮನುಷ್ಯನಾತ. ಇಂದಿಗೂ ಆತನ ಪ್ರತಿಮೆ ಅದೃಷ್ಟವನ್ನು ತರುತ್ತದೆ ಎಂಬ ನಂಬಿಕೆ ಚೀನಾದಲ್ಲಿದೆ.

ಚೀನಾದಲ್ಲಿಯಷ್ಟೇ ಅಲ್ಲದೇ ಚೀನಾವನ್ನು ದಾಟಿ ಜಗತ್ತಿನ ಎಲ್ಲೆಡೆಗೂ ಹರಡಿದೆ. ಆದರೆ ನಾವು ತಲೆಕೆಡಿಸಿಕೊಳ್ಳಬೇಕಾದ್ದು ‘ನಗುವ ಬುದ್ಧ’ ನಮಗೆ ಅದೃಷ್ಟ ತರುತ್ತಾನೆಯೋ ಇಲ್ಲವೋ ಎಂಬ ಬಗ್ಗೆ ಅಲ್ಲ. ಬದಲಾಗಿ ಆತನ ಸದಾ ನಗುವ ಮುಖಭಾವದ ಹಿಂದಿರುವ ಸಂದೇಶದ ಬಗ್ಗೆ.

‘ನಗು’ ಎಂದರೆ ಏನು?!  ನಮಗೆ ‘ನಕ್ಕು ತೋರಿಸಲಷ್ಟೇ ಗೊತ್ತು, ನಗು ಎಂದರೆ ಏನು ಹೇಳಲು ಸಾಧ್ಯವಿಲ್ಲ’ ಎಂದೆನಿಸುತ್ತದೆ ಅಲ್ಲವೆ? ನಿಘಂಟಿನ ಪ್ರಕಾರ ‘ನಗು’ ಎಂದರೆ ‘ನಮಗೆ ತಮಾಷೆ ಎನಿಸುವುದಕ್ಕೆ ಪ್ರತಿಕ್ರಿಯೆಯಾಗಿ ನಾವು ದೇಹದ ಮೂಲಕ ಹೊರಹಾಕುವ ಚಲನೆ ಮತ್ತು ಶಬ್ದ’. ನಗುವಿನ ವ್ಯಾಖ್ಯೆ ನೋಡಿದರೇ ತಮಾಷೆ ಎನಿಸುತ್ತದೆ ಅಲ್ಲವೇ?

‘ನಗು’ವಿನ ಆರೋಗ್ಯದ ಲಾಭಗಳ ಬಗ್ಗೆ ಹೇಳಿದಷ್ಟೂ ಸಾಲದು. ಖಿನ್ನತೆಯಿಂದ ನರಳುವ ರೋಗಿಗಳು ಹೇಳುವುದು ‘ನಮಗೆ ನಗುವುದೇ ಮರೆತುಹೋಗಿದೆ’ ಎಂದು. ಹಲವು ಚಿಂತೆಗಳಲ್ಲಿ ಮುಳುಗಿದ ಹಿರಿಯರು ‘ಸಿಲ್ಲಿ’ ಕಾರಣಗಳಿಗಾಗಿ ಮಕ್ಕಳು ಬಾಯಿ ತುಂಬಾ ನಗುವುದನ್ನು ನೋಡಿ ನಮ್ಮ ಜೀವನದಲ್ಲಿಯೂ ‘ಹೀಗೆ ನಗಲು ಸಾಧ್ಯವಿದ್ದರೆ?’ ಎಂದು ಪೇಚಾಡುವುದು ಸಾಮಾನ್ಯ.

ಮಕ್ಕಳು ದೊಡ್ಡವರಿಗಿಂತ ಹೆಚ್ಚು ನಗುತ್ತಾರೆ. ದೊಡ್ಡವರಿಗೆ ‘ಈ ಸನ್ನಿವೇಶ ನಗುವನ್ನು ಬರಿಸಲೇ ಸಾಧ್ಯವಿಲ್ಲ’ ಎನ್ನುವಂತಹ ಕಾರಣಗಳಿಗೂ ‘ಗಲಗಲ’ ಶಬ್ದ ಮಾಡಿ ನಗುತ್ತಾರೆ ಎಂಬುದು ನಮ್ಮೆಲ್ಲರ ಅನುಭವ. ಹಾಗಾಗಿಯೇ ದಿನಕ್ಕೆ ಮುನ್ನೂರು ಬಾರಿ ನಗುವ ಮಕ್ಕಳಿಗೂ, ದಿನಕ್ಕೆ ಸರಾಸರಿ 15 ಬಾರಿಯಷ್ಟೇ ನಗುವ ದೊಡ್ಡವರಿಗೂ ವ್ಯತ್ಯಾಸವಿದೆ.

ಮಕ್ಕಳು ಬೆಳೆದಂತೆಲ್ಲಾ ನಗುವುದು ಕಡಿಮೆಯಾಗುವುದು ಏತಕ್ಕೆ? ಮಕ್ಕಳ ‘ಮುಗ್ಧ’ ನಗುವಿನ ಹಿಂದಿರುವ ಮನಸ್ಸು ಬುದ್ಧಿ-ಯೋಚನೆ-ಚಿಂತೆಗಳಿಂದ ‘ಹಿರಿಯ’ ಮನಸ್ಸಾಗಿ ಬದಲಾಗುವುದರಿಂದ.

ನಮ್ಮ ಜೀವನದಲ್ಲಿಯ ಘಟನೆಗಳು-ಅನುಭವಗಳು, ಕೆಲವು ನಗುವನ್ನು ತರಿಸಿದರೆ, ಇನ್ನು ಹಲವು ಕಣ್ಣಲ್ಲಿ ನೀರು! ಯಶಸ್ಸು, ವಿಫಲತೆ, ಕಾಯಿಲೆ, ಆರೋಗ್ಯ, ಕನಸುಗಳು-ನನಸುಗಳು, ಮಗುವಿನ ಜನನ ಇತ್ಯಾದಿ, ಇತ್ಯಾದಿ. ಆದರೆ ಬುದ್ಧನ ನಗು ಮಾತ್ರ ಇವೆಲ್ಲವನ್ನೂ ನೋಡುತ್ತಲೇ, ನಗುತ್ತಲೇ ಉಳಿಯುತ್ತದೆ.

ಇದು ಏಕೆ? ಏಕೆಂದರೆ ಬುದ್ಧನ ನಗು ಮುಗ್ಧ ಮಗುವಿನ ನಗು. ಈ ನಗುವಿನ ಹಿಂದೆ ‘ಅಹಂ’ಕಾರವಿಲ್ಲ. ಇಲ್ಲಿ ‘ ‘ನನ್ನ’ದು, ‘ನಾನು’ ಎಂಬ ಭಾವ. ‘ನನ್ನ’ ಎಂಬ ಭಾವವಿರದಾಗ ಬರುವ ಸುಖವಾಗಲೀ, ದುಃಖವಾಗಲೀ ನಮ್ಮ ನಗುವನ್ನು ಬದಲಿಸಲು ಸಾಧ್ಯವಿಲ್ಲ. ಹಾಗೆಯೇ ಮಗುವಿನಂತೆ ‘ಬುದ್ಧನ ನಗು’ವೂ ಬದುಕುವುದು ಇಂದಿನಲ್ಲಿ, ನಮ್ಮಂತೆ ನಾಳೆಗಳಲ್ಲಲ್ಲ. ಇಂದು-ಈಗ ಏನು ನಡೆಯುತ್ತಿದೆ, ಅದನ್ನು ಸಂಪೂರ್ಣವಾಗಿ ಅನುಭವಿಸು ಎನ್ನುವ ಪಾಠ ಈ ನಗುವಿನಲ್ಲಿದೆ. ಕೆಲಸ ಮಾಡುವಾಗ ಅತ್ಯಂತ ಸಂತೋಷದಿಂದ, ಹಗುರವಾಗಿ ಮಾಡಬಹುದೆಂಬ ಸಂದೇಶವೂ ಇದರಲ್ಲಿದೆ.

ಮೆದುಳಿನಲ್ಲಿ ‘ನಗು’ವನ್ನು ನಿಯಂತ್ರಿಸುವ, ನಗು ಬರುವಂತೆ ಮಾಡುವ ಒಂದು ‘ವ್ಯೂಹ’ವೇ - Circuit ಇದೆ. ಇವು ಭಾವನಾತ್ಮಕವಾಗಿ, ಯೋಚನೆಯಾಗಿ ಮತ್ತು ನಗುವಿಗೆ ಸಂಬಂಧಿಸಿದ ದೇಹದ ಚಲನೆಗಳಾಗಿ ನಗುವನ್ನು ವಿಂಗಡಿಸಿ ಹಂತಗಳಲ್ಲಿ ‘ನಗು’ವನ್ನು ಉಂಟುಮಾಡುತ್ತದೆ.

ಮಂಗಗಳಲ್ಲಿ ಮಾಡಿದ ಪ್ರಯೋಗಗಳಿಂದ ಮಾನವನ ನಗುವಿನ ರೀತಿಯಲ್ಲಿಯೇ ಮಂಗಗಳಲ್ಲಿಯೂ ನಗುವಿಗೆ ಹೋಲುವ ಮುಖಭಾವಗಳು ಕಂಡುಬರುತ್ತವೆ. ಅಷ್ಟೇ ಅಲ್ಲ, ಮುಗುಳ್ನಗು-ನಗು-ಕಚಗುಳಿಯಿಡುವುದು ಈ ಮೂರನ್ನೂ ಮಗು ಮತ್ತು ತಾಯಿಯ ನಡುವಣ ಬಾಂಧವ್ಯ ಏರ್ಪಡಲು, ಗಟ್ಟಿಯಾಗಲು ಮಂಗಗಳಲ್ಲಿ ಉಪಯುಕ್ತವಾಗುತ್ತವೆ ಎಂಬುದು ಕಂಡುಬಂದಿದೆ. ತಂದೆ-ತಾಯಿ ಮಗುವಿಗೆ ಕಚಗುಳಿಯಿಟ್ಟಾಗ, ನಗುವಿನೊಂದಿಗೆ ಮಗು ಪ್ರತಿಕ್ರಿಯಿಸುತ್ತದೆ. ಮಗುವಿನ ನಗುವಿಗೆ ಅಪ್ಪ-ಅಮ್ಮ ಮತ್ತೆ ನಗುತ್ತಾರೆ.

ಹೀಗೆ ಅಪ್ಪ-ಅಮ್ಮ ಮಗುವಿನ ನಡುವೆ ಬಾಂಧವ್ಯ ಬೆಳೆಯುತ್ತದೆ. ಮಕ್ಕಳ ಬೆಳವಣಿಗೆಗೆ ಸಂಬಂಧಿಸಿದಂತೆ ನಗುವಿನ ಪ್ರಾಮುಖ್ಯದ ಬಗ್ಗೆ ಇತ್ತೀಚೆಗೆ ಹಲವು ಸಂಶೋಧನೆಗಳು ನಡೆದಿವೆ. ‘ಆಟ’ ಮಕ್ಕಳಿಗೆ ಕಲಿಕೆಯಾದರೆ, ‘ನಗು’ ಆಟದ ಅತಿ ಮುಖ್ಯ ಅಂಗ. ಹಾಸ್ಯ-ನಗು ಮಕ್ಕಳ ಸೃಜನಶೀಲತೆ–ಕ್ರಿಯಾಶೀಲತೆಗಳನ್ನು ಬೆಳೆಸಬಲ್ಲದು ಎನ್ನುವುದಕ್ಕೆ ಇಂದು ವೈಜ್ಞಾನಿಕ ಆಧಾರವಿದೆ.

ಮಕ್ಕಳ ನಗು ಅವರು ಮಾಡುವ ಹೊಸ ಹೊಸ ‘ಪ್ರಯೋಗ’ (Experiment)ಗಳೊಂದಿಗೆ ಜೋಡಿಯಾಗಿರುತ್ತದೆ. ಹಾಗಾಗಿ ಕಾಲಿಗೆ ಹಾಕುವ ‘ಸಾಕ್ಸ್’ ಅನ್ನು ಕೈಗೆ ಹಾಕಿ ನೋಡುವ ಮಗುವಿಗೆ ಈ ಕ್ರಿಯೆಯೇ ಒಂದು ‘ತಮಾಷೆ’, ನಗು ಬರಿಸುವ ‘ವಸ್ತು’. ಆದರೆ ಇದನ್ನೇ ಹಿರಿಯರಲ್ಲಿ ಯೋಚಿಸಿ ನೋಡಿ. ನಮಗೆ ಅದು ‘ಪೆದ್ದುತನ’ ‘ಕಿರಿಕಿರಿ’ ಎನಿಸುತ್ತದೆ!  ಮಕ್ಕಳಲ್ಲಿ ‘ನಗು’ ಎನ್ನುವುದು ಹೆಚ್ಚಿನ ಸಮಯ ಅವರೇ ಮಾಡಿ ನೋಡುವ, ದೈಹಿಕವಾಗಿ ಒಳಗೊಳ್ಳುವ ಕ್ರಿಯೆಗಳಲ್ಲಿ ಉಂಟಾಗುವುದು ಸಾಮಾನ್ಯ.  ಅಂದರೆ ಮಂಡಿಯ ಮೇಲೆ ಆಡಿಸುವುದು, ಎತ್ತಿ ಹಾರಿಸುವುದು, ತಿರುಗುವುದು ಇಂಥ ಆಟಗಳು ಅವರಲ್ಲಿ ನಗೆಯುಕ್ಕಿಸುತ್ತವೆ.

ವಿವಿಧ ಶಬ್ದಗಳನ್ನು ಬಾಯಿಯಲ್ಲಿ ಹೇಳುವುದು, ಹಿರಿಯವರು ಎಲ್ಲರೆದುರು ಸಾಮಾನ್ಯವಾಗಿ ಹೇಳದ ಪದಗಳನ್ನು ಹೇಳಿ ಜೋರಾಗಿ ನಗುವುದು – ಇವು ಮಕ್ಕಳು ಸಹಜವಾಗಿ ‘ನಗು’ವ ನಡವಳಿಕೆಗಳು. ಇವಲ್ಲದೆ ಮಕ್ಕಳು ‘ಒತ್ತಡ’ವನ್ನು ಹೊರಹಾಕಲು ನಗುವನ್ನು ಬಳಸುವ ಸಂದರ್ಭಗಳನ್ನೂ ನೋಡಬಹುದು.

ತಂದೆ-ತಾಯಿ ತನ್ನನ್ನು ಬಿಟ್ಟು ಎಲ್ಲಿಯಾದರೂ ಹೋಗುತ್ತಾರೆಂದಾಗ, ಅವರಂತೆ ತಾನೂ ಅವರನ್ನು ಹೋಲುವಂತೆ ನಟಿಸುವುದು, ನಗುವುದು ಇದಕ್ಕೊಂದು ಉದಾಹರಣೆ.ಹಾಗೆಯೇ ತಾವು ‘ಅಮ್ಮ’ ಬೈಯ್ಯುವ ತಪ್ಪು ಮಾಡಿರುವಾಗ ಮುಖದಲ್ಲಿ ನಗು ತಂದುಕೊಂಡು ಅಮ್ಮನ ಬಳಿ ಅದನ್ನು ಹೇಳುವುದು ಒತ್ತಡ ಎದುರಿಸುವ ಇನ್ನೊಂದು ವಿಧಾನವೇ. ಆದರೆ ಇಂಥ ಸಮಯದಲ್ಲಿ ಮಕ್ಕಳ ಈ ನಗು ಅಪ್ಪ-ಅಮ್ಮಂದಿರಿಗೆ ಕೋಪ ತರಿಸುತ್ತದೆ.

ತಮಗೆ ಮಕ್ಕಳು ತೋರಿಸುತ್ತಿರುವ ‘ಅಗೌರವ’ವಿದು ಎಂದೇ ಅವರು ಭಾವಿಸುತ್ತಾರೆ. ಆದರೆ ತಪ್ಪಿನ ಸಮಯದಲ್ಲಿ, ಶಿಸ್ತಿನ ಸಂದರ್ಭದಲ್ಲಿ ಮಕ್ಕಳ ನಗು ಬೆಳವಣಿಗೆಯ ಒಂದು ಭಾಗ ಎಂದು ಗುರುತಿಸುವುದು ಅತ್ಯಗತ್ಯ. ಮಕ್ಕಳನ್ನು ಬೆಳೆಸುವುದೇ ‘ಒತ್ತಡ’ವಾಗಿರುವ ಇಂದಿನ ದಿನಗಳಲ್ಲಿ ‘ನಗು’ ನಿಜವಾಗಿ ನಮ್ಮ-ಮಕ್ಕಳ ಸಹಾಯಕ್ಕೆ ಬರಬಲ್ಲದು.

ಮಕ್ಕಳನ್ನು ಬೆಳೆಸುವುದಕ್ಕೆ ಸಂಬಂಧಿಸಿದಂತೆ ಎಷ್ಟೋ ಪುಸ್ತಕಗಳನ್ನು ಓದುತ್ತೇವೆ, ಉಪನ್ಯಾಸ ಕೇಳುತ್ತೇವೆ. ಆದರೆ ‘ನಗು’ವಿನ ಬಗ್ಗೆ ಅಲಕ್ಷಿಸುತ್ತೇವೆ! ನಗು ಮಕ್ಕಳನ್ನು, ಅಪ್ಪ-ಅಮ್ಮಂದಿರನ್ನು ಹತ್ತಿರ ತರಬಲ್ಲದು. ಹದಿಹರೆಯದ ಗಂಭೀರ ಸಮಸ್ಯೆ ಸಂಘರ್ಷಗಳಲ್ಲಿಯೂ ಒಂದು ಉತ್ತಮ ಔಷಧ ಎನಿಸಬಲ್ಲದು. ‘ಒಟ್ಟಿಗೆ’ ಒಂದು ಒತ್ತಡವನ್ನು ಎದುರಿಸಲು ನಮ್ಮನ್ನು ಸಜ್ಜುಗೊಳಿಸಬಲ್ಲದು.

ನಿರಾಶೆಯನ್ನು ಹಗುರಗೊಳಿಸಬಲ್ಲದು. ಮನಸ್ಸಿನ ದುಗುಡವನ್ನು ಕಡಿಮೆ ಮಾಡಿ ಸಮಾಧಾನವನ್ನೂ ಕೊಡಬಲ್ಲದು. ಮಕ್ಕಳನ್ನು ಬೆಳೆಸುವಾಗ ಗಂಭೀರ ಮುಖ-ಹೊಡೆಯುವಿಕೆ-ಬೆದರಿಸುವಿಕೆ-ಅತಿ ಶಿಸ್ತುಗಳೇ ಉಪಯುಕ್ತ ಎಂಬುದು ನಿಜವಲ್ಲ. ನಗುಮುಖದ, ತಾನೂ ಮಕ್ಕಳೊಂದಿಗೆ ಅವರ ‘ಸಿಲ್ಲಿ’ ಕಾರಣಗಳ ನಗುವಿಗೆ ನಗುವ ತಂದೆ-ತಾಯಿ, ಮಕ್ಕಳು ಪರಿಣಾಮಕಾರಿಯಾಗಿ ಶಿಸ್ತನ್ನು ಪಾಲಿಸುವಂತೆ, ಸರಿಯಾಗಿ ಬೆಳೆಯುವಂತೆ ಮಾಡಬಲ್ಲರು.

‘ಮಕ್ಕಳ ನಗು’ವನ್ನು, ‘ನಗುವ ಬುದ್ಧ’ನ ನಗುವನ್ನು ಮತ್ತೆ ಮತ್ತೆ ನೆನೆಸಿಕೊಳ್ಳಬೇಕಾದ ದಿನಗಳಲ್ಲಿ ಇಂದು ನಾವಿದ್ದೇವೆ. ಮಗುವಿನ ನಗು, ‘ನಗುವ ಬುದ್ಧ’ನ ನಗು ಎರಡೂ ನಗುವಿನ ‘ಶಕ್ತಿ’ಯನ್ನು ನೆನಪಿಸುತ್ತದೆ. ಒಬ್ಬರಿಗೆ ಸಾಧ್ಯವಿರುವುದು ಎಲ್ಲರಿಗೂ ಸಾಧ್ಯವಿರುವಂತಹದ್ದು ಎಂಬುದನ್ನು ಸೂಚಿಸುತ್ತದೆ. ಎಂತಹ ಸನ್ನಿವೇಶದಲ್ಲಿಯೂ, ಸಂಕಷ್ಟದಲ್ಲಿಯೂ ‘ನಗು’ವನ್ನು ಮರೆಯದಿರೋಣ; ಮಗುವಿನ ‘ನಗು’ವನ್ನು ಗೌರವಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT