ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟ ಆ್ಯಪ್‌?; ಬೇಗ ಹೊರಬನ್ನಿ

Last Updated 31 ಜನವರಿ 2017, 19:30 IST
ಅಕ್ಷರ ಗಾತ್ರ

ಮೊಬೈಲ್‌ ಕಿರುತಂತ್ರಾಂಶಗಳ (ಆ್ಯಪ್‌ಗಳ) ವಿಷಯದಲ್ಲಿ ಬಹುಶಃ ಎಲ್ಲರ ಅನುಭವವೂ ಒಂದೇ. ಒಂದು ಕಾಲಕ್ಕೆ ನೀವು ಬಹಳ ಇಷ್ಟಪಟ್ಟ ಆ್ಯಪ್‌ ಕ್ರಮೇಣ ನಿಮಗೆ ಬೇಸರ ತರಿಸಬಹುದು. ಅದರಿಂದ ಹೊರಬರಲು ಚಡಪಡಿಸುವ ಸ್ಥಿತಿಯೂ ಒದಗಬಹುದು.  ವರ್ಷಗಳ ಕಾಲ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡ ಈ ಆ್ಯಪ್‌ನಿಂದ ಹೊರಬರುವುದು ಭಾವನಾತ್ಮಕವಾಗಿಯೂ ನಿಮಗೆ ಕಷ್ಟಕರವಾಗಿರಬಹುದು.

ಅದೇ ಕಾರಣಕ್ಕೆ ಹಳೆಯ ಆ್ಯಪ್‌ ಅನ್ನು  ಬದಲಿಸದೆ ಹಳಸಿದ ಸಂಬಂಧವನ್ನು ಮುಂದುವರಿಸುವ ತೀರ್ಮಾನಕ್ಕೂ ಬಂದಿರಬಹುದು. ಆದರೆ, ಹೊಸತನ್ನು ಒಮ್ಮೆ ಹುಡುಕಿನೋಡಿ, ಹಳೆ ಆ್ಯಪ್‌ನಿಂದ ಹೊರಬರುವುದು ಒಂದು ಸಂತಸದಾಯಕ ವಿಷಯವಾಗಿ ಕಾಣಿಸುತ್ತದೆ.

ಟಿಪ್ಪಣಿ ಮಾಡಿಕೊಳ್ಳುವ ‘ಎವರ್‌ನೋಟ್‌’ ಆ್ಯಪ್‌ ಅನ್ನೇ ನಾವಿಲ್ಲಿ ಉಲ್ಲೇಖಿಸಬೇಕು. ದಶಕಗಳ ಕಾಲ ಕೋಟ್ಯಂತರ ಜನರನ್ನು ಸೆಳೆದಿದ್ದ ಈ ಆ್ಯಪ್‌ ಇಂದು ಕ್ಲಿಷ್ಟಕರವಾಗಿಬಿಟ್ಟಿದೆ. ಈ ಆ್ಯಪ್‌ ಅನ್ನು ಹುಟ್ಟುಹಾಕಿದ ಕಂಪೆನಿ ತನ್ನ ಸಾಫ್ಟ್‌ವೇರ್‌ನ ಉಚಿತ ಬಳಕೆಗೆ ಕಳೆದ ವರ್ಷವೇ ತೀವ್ರ ಮಿತಿ ಹಾಕಿದೆ ಹಾಗೂ ಬಳಕೆಯ ಶುಲ್ಕವನ್ನು ಶೇ 40ರಷ್ಟು ಹೆಚ್ಚಿಸಿದೆ.

ಈ ತಿಂಗಳು ಕಂಪೆನಿ ಮೊಬೈಲ್ ಬಳಕೆಯ ಆ್ಯಪ್‌ ಅನ್ನು ಮರುವಿನ್ಯಾಸಗೊಳಿಸಿದ್ದು,  ಇದು ಇನ್ನಷ್ಟು ಸಂಕೀರ್ಣಗೊಂಡು ಬಳಕೆದಾರರಿಗೆ ಅನಗತ್ಯ ಕಷ್ಟ ಒದಗಿಸಿದೆ ಎಂಬ ದೂರು ಕೇಳಿಬಂದಿದೆ. ಹೀಗಿದ್ದರೂ ಜನ ಇನ್ನೂ ಎವರ್‌ನೋಟ್‌ಗೇ ಬಹುತೇಕ ಅವಲಂಬಿಸಿದ್ದಾರೆ. ಏಕೆಂದರೆ ಅವರ ಟಿಪ್ಪಣಿಯನ್ನು ಬೇರೆಡೆ ಬರೆದುಕೊಳ್ಳುವುದು ಅಷ್ಟು ಸುಲಭವಲ್ಲ.

‘ಇಂತಹ ಬದಲಾವಣೆಗಳಿಂದ ಜನರೆಲ್ಲ ಖುಷಿಗೊಳ್ಳುವುದಿಲ್ಲ ಎಂಬ ಅರಿವು ನಮಗಿದೆ. ಆದರೂ ಎರಡು ವರ್ಷಗಳಿಂದೀಚೆಗೆ ಹಣ ನೀಡುವ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವನ್ನೇ ನೋಡುತ್ತಿದ್ದೇವೆ’ ಎಂದು ಎವರ್‌ನೋಟ್‌ ಕಂಪೆನಿಯ ವಕ್ತಾರ ಗ್ರೆಗ್‌ ಚೈಮಿಂಗೊ ಹೇಳುತ್ತಾರೆ.

ಆದರೆ, ವಾಸ್ತವವಾಗಿ ಜನರಿಗೆ ಇದಕ್ಕಿಂತ ಉತ್ತಮ ಆ್ಯಪ್‌ ದೊರೆಯುವ ಅಗತ್ಯವಿದೆ. ಪ್ರತಿದಿನ ನೀವು ಕೆಟ್ಟ ಆ್ಯಪ್‌ ಜತೆ ಉಳಿದುಕೊಂಡಿದ್ದೀರಿ ಎಂದಾದರೆ, ನಿಮ್ಮ ಜೀವನವನ್ನು ಇನ್ನಷ್ಟು ಉತ್ತಮಗೊಳಿಸಬಲ್ಲ ಉತ್ತಮ ಉತ್ಪನ್ನದಿಂದ ನೀವು ದೂರವಾಗಿದ್ಧೀರಿ ಎಂದೇ ಅರ್ಥ. 

ಯಾವ ಆ್ಯಪ್‌ ಸಹ ಪರಿಪೂರ್ಣ ಅಲ್ಲ. ನೀವು ಮಾಡಬೇಕಿರುವುದು ಮಾತ್ರ ಎಲ್ಲೋ ಒಂದು ಕಡೆ ಗೆರೆ ಎಳೆದು ನಿಮಗೆ ಬೇಕಾಗಿದ್ದನ್ನು ಆಯ್ಕೆ ಮಾಡುವುದು. ಆದರೆ, ಅದು ನಡೆಯುವುದಿಲ್ಲ. ಕೆಲವೊಮ್ಮೆ ಎಚ್ಚರಿಕೆಯ ಸಂದೇಶಗಳನ್ನು ಗಮನಿಸುವುದಕ್ಕೂ ಹೋಗದ ನೀವು ಸಂಕಷ್ಟದಲ್ಲಿ ಸಿಲುಕ ಬೇಕಾಗುತ್ತದೆ.

ನೋಟ್‌ ಟೇಕಿಂಗ್‌, ಫೊಟೊ ಮ್ಯಾನೇಜ್‌ಮೆಂಟ್‌, ವರ್ಡ್‌ ಪ್ರೊಸೆಸಿಂಗ್‌ನಂತಹ ಜನಪ್ರಿಯ ಆ್ಯಪ್‌ಗಳು ಸಾಮಾಜಿಕ ಜಾಲತಾಣಗಳೊಂದಿಗೆ ಸಂಪರ್ಕ ಹೊಂದಿರುತ್ತವೆ ಅಥವಾ ನೀವು ನಿಮ್ಮ ಮಾಹಿತಿಗಳನ್ನು ಹಂಚಿಕೊಳ್ಳುವ ಜನರೊಂದಿಗೆ ಸಂಪರ್ಕ ಹೊಂದಿರುತ್ತವೆ. ಸಹಜವಾಗಿಯೇ ನಿಮ್ಮ ಖಾಸಗಿತನಕ್ಕೆ ಪೆಟ್ಟು ಬರುತ್ತದೆ. ಯಾಹೂ ಕಂಪೆನಿಯ ಫ್ಲಿಕರ್‌ ಆ್ಯಪ್‌ ಇದಕ್ಕೆ ಒಂದು ನಿದರ್ಶನ. ಇನ್‌ಸ್ಟಾಗ್ರಾಂನಂತಹ ಫೋಟೊ ಹಂಚಿಕೊಳ್ಳುವ ಮೊಬೈಲ್‌ ಸೇವೆ ಆರಂಭವಾದ ಬಳಿಕ ಫ್ಲಿಕರ್‌ನ ಜನಪ್ರಿಯತೆ ಕಡಿಮೆಯಾಯಿತು.

ಒಂದು ಆ್ಯಪ್‌ನಿಂದ ಬೇರ್ಪಡುವಾಗ ಎದುರಾಗುವ ಕಷ್ಟಕರ ಸನ್ನಿವೇಶವೆಂದರೆ ನಿಮ್ಮ ಮಾಹಿತಿಗಳನ್ನು ಇನ್ನೊಂದಕ್ಕೆ ವರ್ಗಾಯಿಸುವ ತಲೆನೋವು ಎದುರಾಗುತ್ತದೆ.ಅದಕ್ಕಾಗಿಯೇ ನೀವು ಬ್ಯಾಕ್‌ಅಪ್‌ ಪ್ರತಿಯೊಂದನ್ನು ಸಿದ್ಧಪಡಿಸಿ ಇಡಬೇಕು. ಬಳಿಕ ಸೂಕ್ಷ್ಮವಾಗಿ ಪರಿಶೀಲಿಸಿ ನಿಮಗೆ ತಕ್ಕಂತಹ ಸೂಕ್ತ ಆ್ಯಪ್‌ ದೊರೆತಾಗ ಹೊಸ ಆ್ಯಪ್‌ಗೆ ವರ್ಗಾವಣೆ ಮಾಡಿಕೊಳ್ಳಬಹುದು. ಆದರೆ, ಮುಖ್ಯ ವಿಷಯವೆಂದರೆ, ನೀವು ಡ್ರಾಪ್‌ಬಾಕ್ಸ್‌ನಂತಹ ಕ್ಲೌಡ್‌ ಆಧಾರಿತ ಸೇವೆಯಲ್ಲಿ ಅಥವಾ ಭೌತಿಕ ಹಾರ್ಡ್‌ ಡ್ರೈವ್‌ನಲ್ಲಿ ನಿಮ್ಮ ಮಾಹಿತಿಗಳನ್ನು ಸಂರಕ್ಷಿಸಿ ಇಟ್ಟುಕೊಳ್ಳಬೇಕು.

ಕೆಲವು ಕಂಪೆನಿಗಳು ನಿಮ್ಮ ಮಾಹಿತಿಯನ್ನು ಬೇರೆಡೆಗೆ ವರ್ಗಾಯಿಸುವುದು ಕಷ್ಟಕರವಾಗುವಂತೆ ಮಾಡಿಬಿಡುತ್ತವೆ. ಯಾಕೆಂದರೆ ನೀವು ಅಂತಹ ಆ್ಯಪ್‌ಗಳನ್ನು ಬಿಟ್ಟುಬಿಡುವುದು ಅವುಗಳಿಗೆ ಇಷ್ಟ ಇರುವುದಿಲ್ಲ.

‘ಇದು ಎಂತಹ ಪರಿಸ್ಥಿತಿ ಎಂದರೆ, ನೀವು ವಾಸಿಸುತ್ತಿರುವ ಅಪಾರ್ಟ್‌ಮೆಂಟ್‌ನ ಭೋಗ್ಯದ ಅವಧಿ ಕೊನೆಗೊಂಡ ನಂತರ ಅಪಾರ್ಟ್‌ಮೆಂಟ್‌ ಬಿಡುವ ಹಂತದಲ್ಲಿ ನಿಮ್ಮ ಪೀಠೋಪಕರಣಗಳನ್ನು ಮತ್ತು ಪುಸ್ತಕಗಳನ್ನು ನಿಮ್ಮ ಜತೆ ಕೊಂಡೊಯ್ಯಲು ಆಗದ ಸ್ಥಿತಿ’ ಎಂದು ಗೂಗಲ್ ಸಂಸ್ಥೆಯ ಮಾಜಿ ವ್ಯವಸ್ಥಾಪಕ ಬ್ರಿಯಾನ್‌ ಫಿಟ್ಜ್‌ಪ್ಯಾಟ್ರಿಕ್‌ ಅವರು ಬಣ್ಣಿಸುತ್ತಾರೆ.

ಇಂತಹ ಸನ್ನಿವೇಶಕ್ಕೆ ಉತ್ತಮ ನಿದರ್ಶನ ‘ಎವರ್‌ನೋಟ್‌’ ಆ್ಯಪ್‌ನದು. ಇದರಲ್ಲಿ ‘ಎಕ್ಸ್‌ಪೋರ್ಟ್‌ ನೋಟ್‌್ಸ’ ಸೌಲಭ್ಯ ಇದ್ದರೂ, ಅದು ಕೆಲವೇ ಕೆಲವು ಆ್ಯಪ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ.

ಮೈಕ್ರೊಸಾಫ್ಟ್‌ನ ಟಿಪ್ಪಣಿ ಮಾಡಿಕೊಳ್ಳುವ ‘ಒನ್‌ನೋಟ್’ ಮತ್ತು ಆ್ಯಪಲ್‌ನ ‘ನೋಟ್‌ ಆ್ಯಪ್‌’ಗೆ ಎವರ್‌ನೋಟ್‌ನ ದಾಖಲೆಗಳನ್ನು ಸುಲಭವಾಗಿ ವರ್ಗಾಯಿಸಬಹುದು.ಆದರೆ, ‘ಗೂಗಲ್ ಕೀಪ್‌’ ನಂತಹ  ಆ್ಯಪ್ ಅನ್ನು ನೀವು ಆಯ್ಕೆ ಮಾಡಿಕೊಂಡರೆ ನೀವು ಕೈಯಿಂದಲೇ ಹೊಸ ನೋಟ್‌ಗೆ ಮಾಹಿತಿಯನ್ನು ಅಂಟಿಸಬೇಕಾಗುತ್ತದೆ. ಫ್ಲಿಕರ್‌ನಿಂದ ಹೊರಬರುವುದು ಸಹ ಕಷ್ಟದ ಸಂಗತಿ. ನಿಮ್ಮ ಫೋಟೊವನ್ನು ಪಡೆಯಬೇಕಾದರೆ ಅಧಿಕ ಶ್ರಮ ಪಡಬೇಕು. ಅಧಿಕ ರೆಸಲೂಷನ್‌ ಇರುವ ಫೋಟೊಗಳ ಸಹಿತ ಎಲ್ಲ ಫೋಟೊಗಳನ್ನು ನೀವು ಡೌನ್‌ಲೋಡ್‌ ಮಾಡಿಕೊಂಡು ಬಳಿಕ ಹೊಸ ಫೊಟೊ ಸೇವೆಯ ಆ್ಯಪ್‌ಗೆ ಅಪ್‌ಲೋಡ್‌ ಮಾಡಬೇಕಾಗುತ್ತದೆ.

ನಿಮ್ಮ ಮಾಹಿತಿಗಳನ್ನು ಇತರ ಆ್ಯಪ್‌ಗಳಿಗೆ ವರ್ಗಾಯಿಸುವುದಕ್ಕೆ ಕಂಪೆನಿಗಳು ಸೂಕ್ತ ಸಲಕರಣೆಗಳನ್ನು ನೀಡಿಲ್ಲಎಂದಾದರೆ, ಅದರ ಪರಿಹಾರಕ್ಕಾಗಿ ನೀವು ಅಂತರ್ಜಾಲ ತಾಣದಲ್ಲಿ ತ್ವರಿತವಾಗಿ ಹುಡುಕಾಟ ನಡೆಸಲೇಬೇಕು. ನಿಮ್ಮಂತೆ ಇನ್ನೂ ಹಲವರು ಇಂತಹ ಪ್ರಯತ್ನದಲ್ಲಿ ಇರಬಹುದು. ಅದರಿಂದಲೂ ನಿಮಗೆ ಸಹಾಯ ಸಿಗಬಹುದು.

ಹಾಲಿ ಆ್ಯಪ್‌ನಿಂದ ಹೊರ ನಡೆಯುವುದು ಸ್ವಲ್ಪ ಕಷ್ಟಕರವಾಗಿ ತೋರಿದರೂ, ಬದಲಿ ಆ್ಯಪ್‌ಗೆ ಹುಡುಕಾಟ ನಡೆಸುವಾಗ ಇದು ಬಹಳ ಮಟ್ಟಿಗೆ ನೆರವಿಗೆ ಬರುತ್ತದೆ. ಹಲವಾರು ಫಾರ್ಮ್ಯಾಟ್‌ಗಳ ನೆರವು ನಿಮ್ಮ ಮುಂದಿನ ಆ್ಯಪ್‌ ಆಯ್ಕೆಯಲ್ಲಿ ಉಪಕಾರಿಯಾಗುತ್ತದೆ. ಹೊಸ ಆ್ಯಪ್‌ಗೆ ಹೋಗುವಾಗ ಎಷ್ಟು ಸುಲಭವಾಗಿ ಅದನ್ನು ಪಡೆಯುತ್ತೀರೋ, ಅಷ್ಟೇ ಸುಲಭವಾಗಿ ಅದರಿಂದ ಹೊರಬರುವುದೂ ಸಾಧ್ಯವಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು.

ಆ್ಯಪಲ್‌ ಕ್ಯಾಲೆಂಡರ್‌ ಆ್ಯಪ್‌ನಲ್ಲಿ ಎದುರಾದ ಸಮಸ್ಯೆಗೆ ನಾನು ಫೆಂಟಾಸ್ಟಿಕಲ್‌ 2 ಆ್ಯಪ್‌ನಲ್ಲಿ ಪರಿಹಾರ ಕಂಡುಕೊಂಡೆ. ಗೂಗಲ್‌, ಮೈಕ್ರೊಸಾಫ್ಟ್‌ ಮತ್ತು ಫೇಸ್‌ಬುಕ್‌ಗಳ ಆನ್‌ಲೈನ್‌ ಸೇವೆಗಳನ್ನು ಪಡೆದ ಕಾರಣ ಆ್ಯಪಲ್‌ ಕ್ಯಾಲೆಂಡರ್‌ ಆ್ಯಪ್‌ನಿಂದ ಹೊಸ ಆ್ಯಪ್‌ಗೆ ವರ್ಗಾವಣೆಗೊಳ್ಳುವುದು ನನಗೆ ಸುಲಭವಾಯಿತು.

ಫಿಟ್ಸ್‌ಪ್ಯಾಟ್ರಿಕ್‌ ಅವರು ಈಚೆಗೆ ಗೂಗಲ್‌ ವಾಯ್ಸ್‌ನೊಂದಿಗಿನ ಸಖ್ಯವನ್ನು ತೊರೆಯುವಾಗಲೂ ಇಂತಹದೇ ಪ್ರಸಂಗ ನಡೆಯಿತು. ಹಲವು ವರ್ಷಗಳಿಂದಲೂ ಕಾಲಿಂಗ್‌ ಮತ್ತು ಟೆಕ್ಸ್ಟಿಂಗ್‌ ಸೇವೆ ಸಲ್ಲಿಸುತ್ತಿರುವ ಗೂಗಲ್‌ ವಾಯ್ಸ್‌ ತನ್ನ ಕಾರ್ಯಕ್ಷಮತೆಯನ್ನು ಬದಲಿಸದೆ ಹಾಗೆಯೇ ಉಳಿದಿತ್ತು. ತಾವೇ ಅಭಿವೃದ್ಧಿಪಡಿಸಲು ನೆರವಾದಂತಹ ಗೂಗಲ್‌ ಟೇಕ್‌ಔಟ್‌ ಅನ್ನು ಬಳಸಿಕೊಂಡು ಕಾಲಿಂಗ್‌ ಹಿಸ್ಟರಿ, ಮೆಸೇಜಿಂಗ್‌ ಮತ್ತು ಅಡ್ರೆಸ್‌ ಬುಕ್‌ಗಳನ್ನು ಡೌನ್‌ಲೋಡ್‌ ಮಾಡಿ ‘ಸಿಗ್ನಲ್‌’ಗೆ ವರ್ಗಾವಣೆ ಮಾಡಿಸಿಕೊಂಡರು.

ಗೂಗಲ್‌ ವಾಯ್ಸ್‌ಗೆ ಹೋಲಿಸಿದರೆ ಸಿಗ್ನಲ್‌ನಲ್ಲಿ ಸಂದೇಶ ರವಾನೆ ಮತ್ತು ಫೋನ್‌ ಕರೆ ವಿಚಾರದಲ್ಲಿ ಹಲವಾರು ಸೌಲಭ್ಯಗಳಿವೆ. ಅದಕ್ಕಾಗಿಯೇ ಸಿಗ್ನಲ್‌ನ ಆಯ್ಕೆಯನ್ನು ಫಿಟ್ಸ್‌ಪ್ಯಾಟ್ರಿಕ್‌ ಮಾಡಿದ್ದರು. ಬಹುಶಃ ಇದನ್ನು ತಿಳಿದೋ ಏನೋ, ಗೂಗಲ್‌ ವಾಯ್ಸ್‌ ಇದೀಗ ತನ್ನ ಫೋಟೊ ಶೇರಿಂಗ್‌ ಮತ್ತು ಗ್ರೂಪ್‌ ಮೆಸೇಜಿಂಗ್‌ ವ್ಯವಸ್ಥೆಯನ್ನು ಪರಿಷ್ಕರಿಸಿದೆ. ತನ್ನ ವಿಳಂಬ ನೀತಿಯಿಂದಾಗಿ ಗೂಗಲ್‌ ವಾಯ್ಸ್‌ ಫಿಟ್ಸ್‌ಪ್ಯಾಟ್ರಿಕ್‌ ಅವರಂತಹ ವ್ಯಕ್ತಿಗಳನ್ನು ಕಳೆದುಕೊಳ್ಳುವಂತಾಗಿದೆ.

ಇದೆಲ್ಲ ಕೆಲವು ನಿದರ್ಶನ ಮಾತ್ರ. ನಿಮಗೆ ಬೇಡವಾದ ಆ್ಯಪ್‌ ಬದಲಾಯಿಸಿಕೊಳ್ಳುವುದಕ್ಕೆ ನಿಮ್ಮ ಮುಂದೆ ಸಾಕಷ್ಟು ಅವಕಾಶ ಇದೆ. ಇವುಗಳನ್ನು ಬದಲಿಸಿಕೊಳ್ಳಲು ನೀವು ಎಷ್ಟು ಆಸಕ್ತರಾಗಿದ್ದೀರಿ ಎಂಬುದಷ್ಟೇ ಮುಖ್ಯ ವಿಚಾರ.

(ಬ್ರಿಯಾನ್‌ ಎಕ್ಸ್ ಚೆನ್‌, ನ್ಯೂಯಾರ್ಕ್‌ ಟೈಮ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT