ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಚುವಲ್‌ ರಿಯಾಲಿಟಿಯ ಹೊಸ ಆ್ಯಪ್‌ಗಳು

Last Updated 31 ಜನವರಿ 2017, 19:30 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಬೃಹತ್‌ ಪ್ರದರ್ಶನ ಮೇಳ (ಸಿಇಎಸ್‌) ಎರಡು ವಾರಗಳ ಹಿಂದೆ ಲಾಸ್‌ವೆಗಾಸ್‌ನಲ್ಲಿ ನಡೆಯಿತಷ್ಟೆ. ಭವಿಷ್ಯದ ಎಲೆಕ್ಟ್ರಾನಿಕ್ಸ್‌ ಮಾರುಕಟ್ಟೆಯ ದಿಕ್ಸೂಚಿ ಎಂದೇ ಈ ಮೇಳವನ್ನು ಬಣ್ಣಿಸಲಾಗುತ್ತದೆ. ಈ ಬಾರಿಯೂ ಮೇಳದಲ್ಲಿ  ವರ್ಚುವಲ್  ರಿಯಾಲಿಟಿ (ವಿಆರ್‌) ತಂತ್ರಜ್ಞಾನ ಆಧರಿಸಿದ ಉಪಕರಣಗಳು, ಅಪ್ಲಿಕೇಷನ್‌ಗಳು ಗಮನ ಸೆಳೆದವು. 

ವಿಆರ್‌ ತಂತ್ರಜ್ಞಾನ ಆಧರಿಸಿದ ಡಿವೈಸ್‌ಗಳನ್ನು ಸೋನಿ, ಗೂಗಲ್‌, ಎಚ್‌ಟಿಸಿ ಕಂಪೆನಿಗಳು ಹೊರತರುತ್ತಿವೆ. ಇದು ಈ ಹೊತ್ತಿನ ಬಹುನಿರೀಕ್ಷಿತ ತಂತ್ರಜ್ಞಾನ.  ವರ್ಚುವಲ್‌ ರಿಯಾಲಿಟಿ ಮುಖ್ಯವಾಹಿನಿಗೆ ಬರಲು ಇನ್ನಷ್ಟು ದಿನಗಳು ಬೇಕಾಗಬಹುದು. ಆದರೆ, ಈಗಾಗಲೇ ಈ ತಂತ್ರಜ್ಞಾನ ಆಧರಿಸಿದ ಹಲವು ಅಪ್ಲಿಕೇಷನ್‌ಗಳು ಜನಪ್ರಿಯವಾಗಿದ್ದು, ಆನ್‌ಲೈನ್‌ನಲ್ಲಿ ಸಂಚಲನ ಸೃಷ್ಟಿಸುತ್ತಿವೆ.

ವಿಆರ್‌ ತಂತ್ರಜ್ಞಾನದ  ವಿಥ್‌ಇನ್‌ (Within app) ಎಂಬ ಮೊಬೈಲ್‌ ಅಪ್ಲಿಕೇಷನ್‌ ಈಗ ಸಾಕಷ್ಟು ಸುದ್ದಿಯಲ್ಲಿದೆ. ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರು ಇದನ್ನು ಉಚಿತವಾಗಿ ಡೌನ್‌ಲೋಡ್‌  ಮಾಡಿಕೊಳ್ಳಬಹುದು. 360 ಡಿಗ್ರಿ ಕೋನದಲ್ಲಿ ವಿಡಿಯೊ ದೃಶ್ಯಗಳನ್ನು ನೋಡಬಹುದಾಗಿದ್ದು ಈ ಅಪ್ಲಿಕೇಷನ್‌ನ ವಿಶೇಷತೆ. 3ಡಿ ವಿಡಿಯೊ ಚಿತ್ರೀಕರಣ ಮತ್ತು ದೃಶ್ಯಾನುಭವದಲ್ಲಿ ಹೊಸ ಸಾಧ್ಯತೆಯನ್ನೇ ಈ ಅಪ್ಲಿಕೇಷನ್‌ ಬರೆಯಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಆ್ಯಪ್‌ ತೆರೆದು ಮೊಬೈಲ್‌ ಪರದೆ ತಿರುಗಿಸುತ್ತಾ ಹೋದಂತೆ 360 ಡಿಗ್ರಿ ಸುತ್ತಳತೆಯ ಎಲ್ಲ ದೃಶ್ಯಗಳು ಕಾಣುತ್ತವೆ. ಈ ಅಪ್ಲಿಕೇಷನ್‌ನಲ್ಲಿ 360 ಡಿಗ್ರಿ ಕೋನದಲ್ಲಿರುವ ಒಂದಿಷ್ಟು ವಿಡಿಯೊ ತುಣುಕುಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಇದರಲ್ಲಿ ಒಂದನ್ನು ತೆರೆದು ನೋಡಿದರೆ ಈ ಅಪ್ಲಿಕೇಷನ್‌ ಕಾರ್ಯನಿರ್ವಹಣೆ ಹೇಗೆ ಎನ್ನುವುದು ತಿಳಿಯಲಿದೆ.

ವರ್ಚುವಲ್‌ ರಿಯಾಲಿಟಿ ದೃಶ್ಯ ವೈಭವ ಮತ್ತು 3ಡಿ ಆಯಾಮದ ದೃಶ್ಯ ಸೊಬಗು ಸಂಪೂರ್ಣವಾಗಿ ಅನುಭವಿಸಬೇಕಾದರೆ ಇದರ ಜತೆಗೆ ಗೂಗಲ್‌ ಕಾರ್ಡ್‌ಬೋರ್ಡ್‌ ಡಿವೈಸ್‌ ಬಳಸಬಹುದು. ಇದಕ್ಕಾಗಿ (20 ಡಾಲರ್‌ ಅಂದರೆ ₹ 1,360) ಹೆಚ್ಚುವರಿ ಶುಲ್ಕ ಭರಿಸಲು ಸಿದ್ಧರಿರಬೇಕು.

ವಿಥ್‌ಇನ್‌ ಅಪ್ಲಿಕೇಷನ್‌ನಂತೆಯೇ Jaunt VR ಎನ್ನುವ ಇನ್ನೊಂದು ಅಪ್ಲಿಕೇಷನ್‌ ಇದೆ. ಇದರ ಕಾರ್ಯನಿರ್ವಹಣೆ ಕೂಡ ಹೆಚ್ಚೂ ಕಡಿಮೆ ಇದರಂತೆಯೇ ಇದೆ. ಆದರೆ, ಕೆಲವು ಸೌಲಭ್ಯಗಳು ಸೀಮಿತ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ  ಕಾರ್ಡ್‌ಬೋರ್ಡ್‌ ಕ್ಯಾಮೆರಾ (Cardboard Camera) ಎಂಬ ಅಪ್ಲಿಕೇಷನ್‌ ಇದೆ. ಇದನ್ನು ಬಳಸಿ 360 ಡಿಗ್ರಿ ಕೋನದ ಚಿತ್ರಗಳನ್ನು ಸೆರೆಹಿಡಿಯಬಹುದು. ಈಗಾಗಲೇ ಸೆರೆಹಿಡಿದಿರುವ ಚಿತ್ರಗಳನ್ನು 360 ಡಿಗ್ರಿ ಕೋನದಲ್ಲಿ ಹೊಂದಿಸಿಕೊಳ್ಳಬಹುದು. ಇದೊಂದು ಮೋಜಿನ ಅಪ್ಲಿಕೇಷನ್‌. ಇದಲ್ಲದೆ 3ಡಿ ದೃಶ್ಯ ತಂತ್ರಜ್ಞಾನ ಆಧರಿಸಿದ  InMind 2 ಎಂಬ ವರ್ಚುವಲ್‌ ರಿಯಾಲಿಟಿ ಗೇಮಿಂಗ್ ಅಪ್ಲಿಕೇಷನ್‌ ಕೂಡ ಇದೆ. 

3ಡಿ ಗೇಮ್‌ ಪ್ರಿಯರು End Space VR ಎಂಬ ಉಚಿತ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇದರ ವ್ಯಸನ ಹತ್ತಿಸಿಕೊಂಡರೆ ಹೊರಬರುವುದು ಸ್ವಲ್ಪ ಕಷ್ಟ.  ಹಿಂದೆ ವಿಆರ್‌ ತಂತ್ರಜ್ಞಾನ ಆಧರಿಸಿದ  ಪೋಕಿಮಾನ್‌  ಗೊ ಎಂಬ  ಮೊಬೈಲ್‌ ಆಪ್ಲಿಕೇಷನ್‌ ಲಕ್ಷಾಂತರ ಜನರಿಗೆ ಹುಚ್ಚು ಹಿಡಿಸಿದ್ದು ನೆನಪಿರಬಹುದು. ಇದೂ ಕೂಡ ಅದರಂತೆಯೇ ಗುಂಗು ಹಿಡಿಸಲಿದೆ.

Happiness Planner ಎಂಬ ಕ್ಯಾಲೆಂಡರ್‌ ಅಪ್ಲಿಕೇಷನ್‌ ಕೂಡ ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತದೆ. ಟು–ಡು ಲಿಸ್ಟ್‌ ಮತ್ತು ಇವೆಂಟ್‌ ಪಟ್ಟಿ ಸಿದ್ಧಪಡಿಸುವ ಜತೆಗೇ ಇದು ಧನಾತ್ಮಕವಾಗಿ ಚಿಂತಿಸಲು ಪ್ರೇರೇಪಿಸುತ್ತದೆ. ಕೆಲವು ಗುರಿಯನ್ನು ನಿಗದಿಪಡಿಸಿಕೊಳ್ಳುವುದು ಮತ್ತು ಅದನ್ನು ತಲುಪಲು ಪ್ರಯತ್ನಿಸುವುದು, ಸಂತೋಷದ ಮಟ್ಟ ಅಳೆಯುವುದು, ಮೌಲ್ಯಮಾಪನ ಮಾಡುವುದು ಸೇರಿದಂತೆ ಹಲವು ಸಕಾರಾತ್ಮಕ ಅಂಶಗಳು ಇದರಲ್ಲಿವೆ. ಐಒಎಸ್‌ ಬಳಕೆದಾರರಿಗೆ ಮೊದಲ 14 ದಿನ ಸೀಮಿತ ಸೌಲಭ್ಯಗಳೊಂದಿಗೆ ಉಚಿತ. ನಂತರ ಪ್ರತಿ ತಿಂಗಳಿಗೆ 3 ಡಾಲರ್‌ ಶುಲ್ಕ ಪಾವತಿಸಬೇಕು.

ದಿ ನ್ಯೂಯಾರ್ಕ್‌ ಟೈಮ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT