ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧೀಕರಣಕ್ಕೆ ನಿರ್ಣಾಯಕ ಕ್ರಮ ನಿರೀಕ್ಷೆಯ ಮಹಾಪೂರ

Last Updated 31 ಜನವರಿ 2017, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಕ್ರಿಕೆಟ್‌ ಆಡಳಿತದ ಸುಧಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಇದೀಗ ಮಹತ್ವದ ದಾಪುಗಾಲು ಇಟ್ಟಿದೆ. ನ್ಯಾಯಮೂರ್ತಿ ಆರ್‌.ಎಂ.ಲೋಧಾ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೋರ್ಟ್‌ ದಿಟ್ಟತನ ತೋರಿದೆ.

ಲೋಧಾ ಶಿಫಾರಸುಗಳನ್ನು ಜಾರಿಗೊಳಿಸುವಲ್ಲಿ  ನಿರೀಕ್ಷಿತ ಪ್ರಯತ್ನ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಬಿಸಿಸಿಐ ಅಧ್ಯಕ್ಷ ಅನುರಾಗ್‌ ಠಾಕೂರ್‌ ಮತ್ತು ಕಾರ್ಯದರ್ಶಿ ಅಜಯ್‌ ಶಿರ್ಕೆ ಅವರನ್ನು ಆ ಸ್ಥಾನಗಳಿಂದಲೇ ಕೋರ್ಟ್‌ ಕಿತ್ತು ಹಾಕಿತು.

ಇದೀಗ ಬಿಸಿಸಿಐ ಆಡಳಿತದ ಉಸ್ತುವಾರಿ ನೋಡಿಕೊಳ್ಳಲು ಭಾರತದ ಮಾಜಿ ಮಹಾಲೇಖಪಾಲ ವಿನೋದ್‌ ರಾಯ್‌, ಇತಿಹಾಸಕಾರ ರಾಮಚಂದ್ರ ಗುಹಾ, ಮಾಜಿ ಅಂತರರಾಷ್ಟ್ರೀಯ ಕ್ರಿಕೆಟ್‌ ಆಟಗಾರ್ತಿ ಡಯಾನಾ ಎಡುಲ್ಜಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಹಣಕಾಸು ನಿಗಮದ ಆಡಳಿತ ನಿರ್ದೇಶಕ ವಿಕ್ರಮ್‌ ಲಿಮಯೆ ಅವರನ್ನು ನೇಮಿಸಲಾಗಿದೆ. ಇದಲ್ಲದೆ ಈ ಆಡಳಿತಗಾರರಿಗೆ ಸಂಪೂರ್ಣ ಸಹಕಾರ ನೀಡುವಂತೆ ಬಿಸಿಸಿಐನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಕೋರ್ಟ್‌ ಆದೇಶ ನೀಡಿದೆ.

ವಿನೋದ್‌ ರಾಯ್‌ ಅವರು ಈಚೆಗೆ ಭ್ರಷ್ಟಾಚಾರ ವಿರೋಧಿ ಚಟುವಟಿಕೆಯಲ್ಲಿ ಸಂಚಲನ ಉಂಟು ಮಾಡಿದವರು. 2ಜಿ ಸ್ಪೆಕ್ಟ್ರಮ್‌ ಹರಾಜು ಪ್ರಕ್ರಿಯೆಯಲ್ಲಿ ನಡೆದಿದ್ದ ಅವ್ಯವಹಾರ, ದೆಹಲಿ ಕಾಮನ್‌ವೆಲ್ತ್‌  ಕ್ರೀಡಾಕೂಟದ ಸಿದ್ಧತೆಗೆ ಸಂಬಂಧಿಸಿದ ಕಾಮಗಾರಿಯಲ್ಲಿ ನಡೆದಿದ್ದ ಭಾರಿ ಭ್ರಷ್ಟಾಚಾರ ಮುಂತಾದ ಪ್ರಕರಣಗಳನ್ನು ವಿನೋದ್‌ ರಾಯ್‌ ಪತ್ತೆ ಹಚ್ಚಿದ್ದರು. ಹೀಗಾಗಿ ದೇಶದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ  ಇವರು ಸ್ಫೂರ್ತಿಯ ಸಿಂಚನದಂತಿದ್ದಾರೆ. 

ಭಾರತದ ಕ್ರಿಕೆಟ್‌ ಕುರಿತು ಆಳವಾದ ಅಧ್ಯಯನ ನಡೆಸಿ ಇದಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಅತ್ಯುತ್ತಮ ಸಂಶೋಧನಾ ಕೃತಿ ನೀಡಿದ ಹೆಗ್ಗಳಿಕೆ ಗುಹಾ ಅವರದಾಗಿದೆ. ಗುಹಾ ಬಾಲ್ಯದಲ್ಲಿ ಸಾಕಷ್ಟು ಕ್ರಿಕೆಟ್‌ ಆಡಿದವರು. ಈ ನಾಡಿನಲ್ಲಿ ಕ್ರಿಕೆಟ್‌ ಆಡಳಿತ ಶುದ್ಧೀಕರಣಗೊಳ್ಳಬೇಕೆಂದು ತಮ್ಮ ಅಂಕಣಗಳ ಮೂಲಕ ಜನಾಭಿಪ್ರಾಯ ಮೂಡಿಸಿದವರಲ್ಲಿ ಗುಹಾ ಪ್ರಮುಖರು.

ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ 1978ರಿಂದ 93ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿರುವ ಡಯಾನಾ  ಅವರು ಕ್ರಿಕೆಟ್‌ನ ಏಳುಬೀಳುಗಳ ನಡುವೆಯೇ ಸುಮಾರು ಅರ್ಧ ಶತಮಾನ ಕಳೆದವರು. ಮೂಲಸೌಲಭ್ಯ ಅಭಿವೃದ್ಧಿ ಹಣಕಾಸು ನಿಗಮದ ಆಡಳಿತ ನಿರ್ದೇಶಕರಾಗಿರುವ ವಿಕ್ರಮ್‌ ಅವರು ಅಮೆರಿಕ ಮತ್ತು ಭಾರತದ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರಲ್ಲದೆ, ದೇಶದ ಪ್ರಮುಖ ಹಣಕಾಸು ವಹಿವಾಟು ತಜ್ಞರಲ್ಲಿ ಒಬ್ಬರಾಗಿದ್ದಾರೆ.

ಇದೀಗ ಇವರೆಲ್ಲರೂ ಒಗ್ಗೂಡಿ ಬಿಸಿಸಿಐ ಆಡಳಿತ ವ್ಯವಸ್ಥೆಯನ್ನು ಶುದ್ಧೀಕರಿಸಿ ಜಗತ್ತಿಗೇ ಮಾದರಿ ಸಂಸ್ಥೆಯನ್ನಾಗಿ ರೂಪಿಸುವ ಮಹತ್ತರ ಉದ್ದೇಶ ಹೊಂದಿದ್ದಾರೆ. ಸುಪ್ರೀಂ ಕೋರ್ಟ್‌ ಮಟ್ಟಿಗಂತೂ ಇದೊಂದು ಮಹತ್ವಾಕಾಂಕ್ಷೆಯ ದಾಪುಗಾಲು.

ಬಿಸಿಸಿಐಯ ಹಣಕಾಸು ವಹಿವಾಟು ಪಾರದರ್ಶಕವಾಗಿಲ್ಲದಿರುವ ಬಗ್ಗೆ ಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಒಂದಾಗಿರುವ ಇದರ ಅಡಿಯಲ್ಲಿಯೇ ನಡೆದ ಐಪಿಎಲ್‌ ಚುಟುಕು ಕ್ರಿಕೆಟ್‌, ‘ಫಿಕ್ಸಿಂಗ್‌’ ಹಗರಣದಲ್ಲಿ ಸಿಲುಕಿಕೊಂಡಿತ್ತು. ಹೀಗಾಗಿ ಸಜ್ಜನರ ಕ್ರೀಡೆಗೆ ಕಳಂಕ ಮೆತ್ತಿಕೊಂಡಿತು. ಅಂತಹ ಸಂದಿಗ್ಧದಲ್ಲಿ ಸುಪ್ರೀಂ ಕೋರ್ಟ್‌ ಕ್ರಿಕೆಟ್‌ ಆಡಳಿತದ ಶುದ್ಧೀಕರಣದತ್ತ ಆಸಕ್ತಿ ವಹಿಸಿತು.

ಲೋಧಾ ಸಮಿತಿಯನ್ನು ನೇಮಿಸಿತ್ತು. ಈ ಸಮಿತಿಯು ಇಲ್ಲಿನ ಕ್ರಿಕೆಟ್‌ ಆಡಳಿತದ ಬಗ್ಗೆ ವ್ಯಾಪಕ ಅಧ್ಯಯನ ನಡೆಸಿದ್ದಲ್ಲದೆ, ನೂರಾರು ಮಾಜಿ ಮತ್ತು ಹಾಲಿ ಕ್ರಿಕೆಟಿಗರೊಡನೆ ಚರ್ಚಿಸಿತು. ಅನೇಕ ಮೌಲಿಕ ಶಿಫಾರಸುಗಳನ್ನು ಒಳಗೊಂಡ ತನ್ನ ವರದಿಯನ್ನು ಈ ಸಮಿತಿಯು ಒಂದು ವರ್ಷದ ಹಿಂದೆ ಕೋರ್ಟ್‌ಗೆ ಸಲ್ಲಿಸಿತು.  ಕೋರ್ಟ್‌ ಈ ವರದಿಯನ್ನು ಅಂಗೀಕರಿಸಿತಲ್ಲದೆ, ಈ ಶಿಫಾರಸುಗಳನ್ನು ಜಾರಿಗೊಳಿಸಬೇಕೆಂದು ಬಿಸಿಸಿಐಗೆ ತಾಕೀತು ಮಾಡಿತು.

ಎಪ್ಪತ್ತು ವರ್ಷ ವಯಸ್ಸು ದಾಟಿದವರು ಕ್ರಿಕೆಟ್ ಮಂಡಳಿಯಲ್ಲಿ ಪದಾಧಿಕಾರಿಗಳಾಗಿರಬಾರದು ಎಂಬ ಅಂಶವೂ ಸೇರಿದಂತೆ ಹಲವು ಶಿಫಾರಸುಗಳನ್ನು ಜಾರಿಗೆ ತರುವುದಕ್ಕೆ ಕೋರ್ಟ್‌ ನೀಡಿದ್ದ ಗಡುವೂ ಮುಗಿದಾಗ, ಅನುರಾಗ್‌ ಮತ್ತು ಅಜಯ್‌ ಅವರ ಸ್ಥಾನಕ್ಕೇ ಚ್ಯುತಿ ಉಂಟಾಯಿತು. ಇದೀಗ  ನೇಮಿಸಲಾಗಿರುವ ನಾಲ್ಕು ಮಂದಿ ಗಣ್ಯರ ಸಮಿತಿಯ ಮೇಲೆ ನಿರೀಕ್ಷೆಯ ಭಾರವಿದೆ. 

ಟೀಕೆ ಮತ್ತು ಆರೋಪಗಳ ಪ್ರವಾಹದೊಳಗೆ ಸಿಲುಕಿ ತತ್ತರಿಸಿ ಹೋಗಿರುವ ಬಿಸಿಸಿಐನಲ್ಲಿ ವೃತ್ತಿಪರತೆಯ ಮೆರುಗು ತರುವ ಜವಾಬ್ದಾರಿ ಈ ಸಮಿತಿಯ ಮೇಲಿದೆ. ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ಅತ್ಯಂತ ಪಾರದರ್ಶಕವಾದ ಶಾಶ್ವತ ವ್ಯವಸ್ಥೆಯೊಂದನ್ನು ರೂಪಿಸಬೇಕಿದೆ. ಮುಂದಿನ ದಿನಗಳಲ್ಲಿ ಚುನಾಯಿತ ಆಡಳಿತಗಾರರೂ ಈ ಮಾದರಿಯನ್ನೇ ಮುಂದುವರಿಸಿಕೊಂಡು ಹೋಗುವಂತಾಗಬೇಕಿದೆ.

ಆಡಳಿತಕ್ಕೆ ಸಂಬಂಧಿಸಿದಂತೆ ಹೊಸ ಸಂಸ್ಕೃತಿಯೊಂದಕ್ಕೆ ಈ ನಾಲ್ವರ ಸಮಿತಿಯು ಅಡಿಪಾಯ ಹಾಕಬೇಕಿದೆ. ಈ ಪ್ರಯೋಗ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ದೇಶದ ಇತರ ಕ್ರೀಡಾ ಸಂಸ್ಥೆಗಳೂ ಇದೇ ‘ಕ್ರೀಡಾಡಳಿತ ಮಾದರಿ’ಯನ್ನು ಆಳವಡಿಸಿಕೊಳ್ಳಲು ಸರ್ಕಾರವೇ ಕ್ರಮ ಕೈಗೊಳ್ಳಬಹುದಾಗಿದೆ.

ಇದು ಈ ದೇಶದಲ್ಲಿ ಹೊಸತೊಂದು ಕ್ರೀಡಾ ಸಂಸ್ಕೃತಿಯು ಪ್ರವರ್ಧಮಾನಕ್ಕೆ ಬರಲು ಪೂರಕವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT