ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿಗಳಲ್ಲಿ ನಲ್ಲಿ ಸಂಪರ್ಕ ಕಡಿತ

ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವರ್ತನೆ ವಿರುದ್ಧ ನಗರ ಸಭೆ ಸದಸ್ಯರ ಆಕ್ಷೇಪ
Last Updated 1 ಫೆಬ್ರುವರಿ 2017, 5:07 IST
ಅಕ್ಷರ ಗಾತ್ರ
ಚಿತ್ರದುರ್ಗ: ಕೊಳೆಗೇರಿ ಮತ್ತು ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಏಕಾಏಕಿ ಮನೆಗಳ ನಲ್ಲಿ ಸಂಪರ್ಕ ಕಡಿತಗೊಳಿಸುತ್ತಿರುವ ಅಧಿಕಾರಿಗಳ ನಡೆಗೆ ಬಹುತೇಕ ನಗರಸಭೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
 
ಹಳೆ ನಗರಸಭೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ನಗರದಲ್ಲಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. 
ಕೊಳೆಗೇರಿಗಳಲ್ಲಿ ಕಡು ಬಡವರಿದ್ದಾರೆ. ಅಂಥವರಿಗೆ ಕಂದಾಯ ಕಟ್ಟಲು  ಸಾಧ್ಯವಾಗುವುದಿಲ್ಲ. ಮನೆ ನಲ್ಲಿ ಸಂಪರ್ಕ ಕಡಿತಗೊಳಿಸಿದ ನಂತರ ಸಾರ್ವಜನಿಕ ನಲ್ಲಿ ಸಂಪರ್ಕ ವ್ಯವಸ್ಥೆಯಾದರೂ ಕಲ್ಪಿಸಬೇಕಿತ್ತು. ಮೊದಲೇ ನೀರಿನ ಸಮಸ್ಯೆ ಇದೆ. ಹೀಗಿರುವಾಗ ಅವರೆಲ್ಲ ನೀರಿಗಾಗಿ ಏನು ಮಾಡಬೇಕು ಹೇಳಿ ಎಂದು ಸದಸ್ಯರಾದ ಮಹಾದೇವಿ, ಮಂಜುಳಾ ಪೌರಾಯುಕ್ತರನ್ನು ಪ್ರಶ್ನಿಸಿದರು.
 
ಪೌರಾಯುಕ್ತ ಚಂದ್ರಪ್ಪ ಪ್ರತಿಕ್ರಿಯಿಸಿ, ‘ನಗರದಾದ್ಯಂತ ಮನೆ ನಲ್ಲಿಗಳ ಸಂಪರ್ಕ ಹೆಚ್ಚಿದೆ. ಅದರಲ್ಲಿ ಅನಧಿಕೃತ ಸಂಪರ್ಕಗಳೇ ಹೆಚ್ಚು. 10 ಸಾವಿರ ನಲ್ಲಿ ಸಂಪರ್ಕಕ್ಕೆ ಕೇವಲ 1 ಸಾವಿರ ಕಂದಾಯ ಮಾತ್ರ ವಸೂಲಿ ಆಗುತ್ತಿದೆ. ಈ ಕಾರಣ ದಿಂದಾಗಿ ಸಂಪರ್ಕ ಕಡಿತ ಗೊಳಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು. 
 
‘ಸಾರ್ವಜನಿಕರು ಅಕ್ರಮ ನಲ್ಲಿ ಸಂಪರ್ಕ ಹೊಂದಿದ್ದರೆ ಸಕ್ರಮಗೊಳಿಸಿ ಕೊಳ್ಳಬೇಕು. ಇಲ್ಲದಿದ್ದರೆ, ನೀರಿನ ಸಂಪರ್ಕ ಕಡಿತ ಮಾಡಲಾಗುತ್ತದೆ ಎಂದು ನೋಟಿಸ್ ನೀಡಬೇಕಿತ್ತು. ಹೀಗೆ ಮಾಡದೆ ಏಕಾಏಕಿ ಸಂಪರ್ಕ ಕಡಿತಗೊಳಿಸಿರುವ ಕ್ರಮ ಸರಿಯಲ್ಲ’ಎಂದು ಪೌರಾಯುಕ್ತರ ನಡೆ ವಿರುದ್ಧ ಸದಸ್ಯರಾದ ಛಾಯಾ, ಈರುಳ್ಳಿ ರಘು, ಭೀಮರಾಜ್, ಮಲ್ಲಿಕಾರ್ಜುನ್, ನಸ್ರುಲ್ಲಾ, ಮಹಮದ್ ಅಹಮ್ಮದ ಪಾಷಾ  ಆಕ್ಷೇಪ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷ ಎಚ್.ಎನ್.ಮಂಜುನಾಥ್ ಗೊಪ್ಪೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕ ನಲ್ಲಿ ಸಂಪರ್ಕಗಳನ್ನು ತ್ವರಿತಗತಿಯಲ್ಲಿ ಕಲ್ಪಿಸುವಂತೆ ಪೌರಾ ಯುಕ್ತರಿಗೆ ಸೂಚನೆ ನೀಡಿದ ನಂತರ ಸದಸ್ಯರು ಸಮಾಧಾನಗೊಂಡರು. 
 
ಸದಸ್ಯ ಭೀಮರಾಜ್, ‘ನನ್ನ ವಾರ್ಡಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದ ಕಾರಣ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆ ಯಡಿ ಅನುದಾನ ಮೀಸಲಿಟ್ಟು ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು’ ಎಂದು ಅಧ್ಯಕ್ಷರಲ್ಲಿ ಮನವಿ ಮಾಡಿದರು.
 
ಸದಸ್ಯ ಖಾದರ್‌ಖಾನ್ ಮಾತನಾಡಿ, ‘ನಗರದಲ್ಲಿ ಮೊದಲೇ ಅಭಿವೃದ್ಧಿ ಕುಂಠಿತವಾಗಿದೆ. ಹೀಗಿರುವಾಗ ಯೋಜನೆಯ ಅನುಷ್ಠಾನಕ್ಕಾಗಿ ಪೂರ್ತಿ ಸರ್ವೆ ಕಾರ್ಯ ಮುಗಿದ ನಂತರ ವಿಷಯ ಪ್ರಸ್ತಾಪಿಸುವುದು ಸೂಕ್ತ’ ಎಂದರು.
 
ಪೌರಾಯುಕ್ತರು ಮಾತನಾಡಿ, ‘ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಲ್ಲಿ ತಾರತಮ್ಯ ಆಗಿದೆ ಎಂಬ ದೂರುಗಳು ಕೇಳಿ ಬಂದಿದ್ದು, ಪುನರ್ ಪರಿಶೀಲಿಸುವಂತೆ ಜಿಲ್ಲಾಧಿಕಾರಿ   ಸೂಚನೆ ನೀಡಿದ್ದಾರೆ. ಅದಕ್ಕಾಗಿ ನಗರದ ಯಾವ್ಯಾವ ವಾರ್ಡ್‌ಗಳಲ್ಲಿ ಶೇ 50 ಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿದ್ದಾರೆ ಎಂಬ ಕುರಿತು ಪರಿಶೀಲನೆ ನಡೆಸುತ್ತಿದ್ದೇನೆ’  ಎಂದು ಉತ್ತರಿಸಿದರು.
 
 ಸಿಹಿನೀರು ಹೊಂಡ ಪ್ರಸ್ತಾಪ: ಸಿಹಿನೀರು ಹೊಂಡ ಹೂಳೆತ್ತುವ ಕಾರ್ಯಕ್ಕೆ ಎಷ್ಟು ಹಣ ಖರ್ಚಾಯಿತು, ಲೆಕ್ಕ ಕೊಡಬೇಕು ಎಂದು ಸದಸ್ಯ ರವಿಶಂಕರ್ ಬಾಬು ಪ್ರಶ್ನಿಸುತ್ತಿದ್ದಂತೆ  ಉಳಿದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ‘ನಗರಸಭೆಯಿಂದ ಪುಡಿಗಾಸು ನೀಡಿಲ್ಲ, ದೇಣಿಗೆ ನೀಡಿದ ಸಾರ್ವಜನಿಕರು ಇದನ್ನು ಪ್ರಶ್ನಿಸಬೇಕು. ಅದನ್ನು ಬಿಟ್ಟು ಲೆಕ್ಕ ಕೇಳಲು ನಿಮಗೇನಿದೆ ಹಕ್ಕು. ಸದಸ್ಯ ಬಿ.ಕಾಂತರಾಜ್ ನೇತೃತ್ವದಲ್ಲಿ ಸಿಹಿ ನೀರು ಹೊಂಡದ ಹೂಳೆತ್ತುವ ಕಾರ್ಯಕ್ಕೆ ಇಡೀ ದುರ್ಗದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂತೋಷ ಪಡುವ ಬದಲು ಹೊಟ್ಟೆಕಿಚ್ಚಿಗೆ ಆರೋಪ ಮಾಡುವುದು ಸರಿಯಲ್ಲ. ನಿಮಗೆ ತಾಕತ್ತು ಇದ್ದರೆ, ನಗರದಲ್ಲಿ ಸಾಕಷ್ಟು ಹೊಂಡಗಳಿವೆ ಹೂಳೆತ್ತುವ ಕಾರ್ಯ ಮಾಡಿ ತೋರಿಸಿ’ ಎಂದು ಸದಸ್ಯ ಮಲ್ಲಿಕಾರ್ಜುನ್ ಸವಾಲು ಹಾಕಿದರು.
 
ನಗರಸಭೆ ಉಪಾಧ್ಯಕ್ಷ ಮಲ್ಲೇಶಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಇತರರು ಇದ್ದರು.
 
**
ಸ್ವಚ್ಛತೆ ಮರೀಚಿಕೆ 
‘ಆದಿಶಕ್ತಿ ನಗರ ಸೇರಿದಂತೆ ನಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡುತ್ತಿಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ನಾವು ನೋಡುವ ತನಕ ನೋಡಿ ನಗರಸಭೆ ಮುಂದೆ ಕಸ ತಂದು ಸುರಿಯುತ್ತೇವೆ’ ಎಂದು ಸದಸ್ಯರಾದ ಮಹಾದೇವಿ, ಮಂಜುಳಾ ಅಧಿಕಾರಿಗಳನ್ನು ಎಚ್ಚರಿಸಿದರು. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT