ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಚಲ ಮನಸ್ಸಿನ ಬೆನ್ನತ್ತಿ...

Last Updated 1 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕಪ್ಪು ಗೆರೆಗಳಲ್ಲಿ ಮೂಡಿದ್ದ ಗೋಸುಂಬೆಯ ಚಿತ್ರ ‘ಎ+’ ಎಂಬ ಶೀರ್ಷಿಕೆಯ ಮೇಲೇರಿ ಕುಳಿತಿತ್ತು. ಇದೇನು, ‘ಎ’ ಚಿತ್ರದ ಮುಂದುವರಿದ ಭಾಗವೇ ಎಂಬ ಆಲೋಚನೆ ಅಲ್ಲಿದ್ದವರಲ್ಲಿ ಮೂಡಿತು. ಯಾಕೆಂದರೆ, ಉಪೇಂದ್ರ ಅವರ ಶಿಷ್ಯ ವಿಜಯ್ ಸೂರ್ಯ ಸ್ವತಂತ್ರವಾಗಿ ನಿರ್ದೇಶನ ಮಾಡಲು ಸಜ್ಜಾಗಿರುವ ಚಿತ್ರವಿದು. ಈ ಗೊಂದಲಕ್ಕೆ ತೆರೆ ಎಳೆದ ವಿಜಯ್, ‘ಅಯ್ಯೋ, ಗುರುಗಳ ಹಿಟ್ ಚಿತ್ರದ ಮುಂದುವರಿದ ಭಾಗವಾಗಿ ಸಿನಿಮಾ ಮಾಡಲು ಸಾಧ್ಯವೇ?’ ಎಂದು ಉದ್ಗಾರವೆತ್ತಿ ಅಲ್ಲಿದ್ದವರ ಕುತೂಹಲಕ್ಕೆ ತೆರೆ ಎಳೆದರು.

ಗಾಂಧಿನಗರದಲ್ಲಿ ಕೆಲ ವರ್ಷ ಸೈಕಲ್ ಹೊಡೆದಿರುವ ವಿಜಯ್ ಸೂರ್ಯ, ‘ಒರಟ ಐ ಲವ್ ಯೂ’, ‘ಧೀರ’, ‘ಶಕ್ತಿ’ ಸೇರಿದಂತೆ ಕೆಲ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಉಪೇಂದ್ರ ಅವರ ಗರಡಿಯಲ್ಲಿ ಪಳಗಿ, ಇದೀಗ ಸ್ವಂತ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

‘ಸಮಯಕ್ಕೆ ತಕ್ಕಂತೆ ಮನಸು ಹೇಗೆ ಬದಲಾಗುತ್ತದೆ ಎಂಬುದೇ ಚಿತ್ರ. ಕಥೆಗೆ ಪೂರಕವಾಗಿ ‘ಎ+’ ಎಂಬ ಶೀರ್ಷಿಕೆಯನ್ನು ಅಂತಿಮಗೊಳಿಸಿ, ನಾನೇ ವಿನ್ಯಾಸವನ್ನೂ ಮಾಡಿದ್ದೇನೆ’ ಎಂದ ನಿರ್ದೇಶಕರು – ಕಥೆಯ ಎಳೆಗಳನ್ನು ಬಿಟ್ಟುಕೊಡಲು ಒಲ್ಲೆ ಎಂದರು. ಸುದ್ದಿಗಾರರು ಕೆದಕಿದಾಗ, ‘ಇದು ಲವ್ ಮತ್ತು ಸಸ್ಪೆನ್ಸ್‌ ಚಿತ್ರ. ಶೀರ್ಷಿಕೆ ಮೇಲಿರುವ ಗೋಸುಂಬೆಯಂತೆ ಚಿತ್ರದಲ್ಲಿರುವ ಪಾತ್ರಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ’ ಎಂದು ಸುಮ್ಮನಾದರು.

ಅನಿಲ್ ಸಿದ್ದು ಮತ್ತು ಸಂಗೀತಾ ಚಿತ್ರದ ನಾಯಕ–ನಾಯಕಿ. ಕಿರುತೆರೆ ಅಭಿನಯದ ಜತೆಗೆ, ಕೆಲ ಚಿತ್ರಗಳಲ್ಲಿ ಖಳನಾಗಿ ನಟಿಸಿರುವ ಅನಿಲ್‌, ಮೊದಲ ಸಲ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಹರ ಹರ ಮಹದೇವ’ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ಪರಿಚಿತರಾಗಿರುವ ಸಂಗೀತಾ ಕೂಡ ಮೊದಲ ಸಲ ಸಿನಿಮಾ ಕ್ಯಾಮೆರಾ ಎದುರಿಸುತ್ತಿದ್ದಾರೆ.

‘ಗುರಿಯ ಬೆನ್ನತ್ತುವ ಮಧ್ಯಮ ವರ್ಗದ ಹುಡುಗನಾಗಿ ನಟಿಸುತ್ತಿದ್ದೇನೆ’ ಎಂದು  ಅನಿಲ್ ಪಾತ್ರವನ್ನು ಪರಿಚಯಿಸಿಕೊಂಡರೆ, ‘ಉಪೇಂದ್ರ ಅವರ ಅಭಿಮಾನಿಯಾದ ನನಗೆ, ಅವರ ಶಿಷ್ಯನ ಚಿತ್ರದಲ್ಲಿ ನಟಿಸಲು ಖುಷಿಯಾಗುತ್ತಿದೆ. ಮೂರು ಶೇಡ್ ಇರುವ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ಮಾತು ಮುಗಿಸಿದರು.

‘ಕಥೆಯನ್ನು ಮೆಚ್ಚಿ ಬಂಡವಾಳ ಹಾಕಲು ಮುಂದಾಗಿದ್ದೇನೆ’ ಎಂದು ನಿರ್ಮಾಪಕ ಪ್ರಭುಕುಮಾರ್ ಹೇಳಿದರು. ಭೂಪಿಂದರ್ ಸಿಂಗ್ ರೈನಾ ಛಾಯಾಗ್ರಹಣ ಹಾಗೂ ರಾಜು ಸಂಕಲನದ ಹೊಣೆ ಹೊತ್ತಿದ್ದಾರೆ. ಪದ್ಮನಾಭನಗರದ ಬನಗಿರಿ ವಿನಾಯಕ ದೇವಸ್ಥಾನದಲ್ಲಿ ನಡೆದ ಚಿತ್ರದ ಮುಹೂರ್ತದಲ್ಲಿ ಪಾಲ್ಗೊಂಡಿದ್ದ ಉಪೇಂದ್ರ, ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನವೇ ಚಿತ್ರತಂಡಕ್ಕೆ ಶುಭ ಕೋರಿ  ನಿರ್ಗಮಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT