ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಗನ್ನು ಬೆಳಗಿದ ಬೆಳಕು...

Last Updated 1 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಲಿಖಿತಾ ಭಾನು
22ರ ಹರೆಯದ ಯುವತಿ ಲಿಖಿತಾ ಭಾನು ತಾಯಿಯ ನೆರವಿನೊಂದಿಗೆ ಸಾವಯವ ಕೃಷಿ ಉತ್ಪನ್ನಗಳ ಕಂಪೆನಿ ಕಟ್ಟುವ ಮೂಲಕ ಸುಮಾರು ಹತ್ತು ಸಾವಿರ ರೈತರಿಗೆ ನೆರವಾಗಿದ್ದಾರೆ. ಬಯೋಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ಲಿಖಿತಾ ಭಾನು ಅವರ ಸಾಧನೆ ಅಸಾಧಾರಣವಾದುದು.

ಲಿಖಿತಾ ಆಂಧ್ರಪ್ರದೇಶದ ವೆಲ್ಲೂರಿನವರು. ತಂದೆ ಕೇಂದ್ರ ಸರ್ಕಾರಿ ನೌಕರ. ಲಿಖಿತಾ ಹುಟ್ಟಿದ್ದು ಆಂಧ್ರಪ್ರದೇಶದಲ್ಲಾದರೂ ಓದಿ, ಬೆಳೆದದ್ದು ಅಸ್ಸಾಂ ರಾಜ್ಯದಲ್ಲಿ. ಲಿಖಿತಾ ತಂದೆ 20 ವರ್ಷ ಅಸ್ಸಾಂ ರಾಜ್ಯದಲ್ಲೇ ಸೇವೆ ಸಲ್ಲಿಸಿದ್ದರು. ಟೀ ತೋಟಗಳು, ಗುಡ್ಡಗಾಡಿನ ಹಸಿರನ್ನು ಕಣ್ತುಂಬಿಕೊಂಡು ಬೆಳೆದಿದ್ದ ಲಿಖಿತಾಗೆ ಸಹಜವಾಗಿಯೇ ಕೃಷಿಯ ಮೇಲೆ ಒಲವು ಮೂಡಿತ್ತು.

ಅಸ್ಸಾಂನಲ್ಲಿ ದಕ್ಷಿಣ ಭಾರತದ ತರಕಾರಿಗಳು ಸಿಗುತ್ತಿರಲಿಲ್ಲ. ಹಾಗಾಗಿ ಅವರು, ಮನೆಯ ಪಕ್ಕದಲ್ಲೇ ಸಣ್ಣದೊಂದು ಕೈತೋಟ ಮಾಡಿಕೊಂಡು ತರಕಾರಿಗಳನ್ನು ಬೆಳೆಸುತ್ತಿದ್ದರು. ಇದೆಲ್ಲವನ್ನು ಗಮನಿಸುತ್ತಿದ್ದ ಲಿಖಿತಾ, ಕೃಷಿ ಮಾಡುವ ಕನಸು ಕಂಡು ಅದನ್ನು ನನಸಾಗಿಸಿಕೊಂಡರು.  ಬಯೋಟೆಕ್ನಾಲಜಿ ಪದವಿಯ ಬಳಿಕ ಲಿಖಿತಾ ತಾಯಿ ಜತೆಯಲ್ಲಿ ಆಂಧ್ರಪ್ರದೇಶಕ್ಕೆ ಮರಳಿದರು.

ವೆಲ್ಲೂರಿನಲ್ಲಿ ಎರಡು ಎಕರೆ ಜಮೀನು ಖರೀದಿಸಿ ಸಾವಯವ ಕೃಷಿ ಆರಂಭಿಸಿದರು. ಅದರಲ್ಲಿ ಬೆಳೆದಿದ್ದ ತರಕಾರಿ, ದವಸ ಧಾನ್ಯಗಳನ್ನು ಪರಿಚಿತರಿಗೆ ಮಾರಾಟ ಮಾಡಲು ಆರಂಭಿಸಿದರು.

ಹೀಗೆ ಸಣ್ಣದಾಗಿ ಆರಂಭವಾದ ಲಿಖಿತಾರ ಕೃಷಿಕಾಯಕ ‘ಟೆರ್ರಾ ಗ್ರೀನ್ಸ್ ಆರ್ಗಾನಿಕ್’ ಎಂಬ ಕಂಪೆನಿ ಹುಟ್ಟಿಗೆ ಕಾರಣವಾಯಿತು. ಆಂಧ್ರ ಪ್ರದೇಶ, ರಾಜಸ್ತಾನ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ರೈತರು ಬೆಳೆದ ಸಾವಯವ ಉತ್ಪನ್ನಗಳನ್ನು ಖರೀದಿಸಿ ‘ಟೆರ್ರಾ ಗ್ರೀನ್ಸ್ ಆರ್ಗಾನಿಕ್’ ಕಂಪೆನಿ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ.

ಸಾವಯವ ಬೆಳೆಯನ್ನು ಪ್ರೋತ್ಸಾಹಿಸುವುದು ಮತ್ತು ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ನೀಡುವ ಉದ್ದೇಶದಿಂದ ಈ ಕಂಪೆನಿ ಆರಂಭಿಸಿರುವುದಾಗಿ ಲಿಖಿತಾ ಹೇಳುತ್ತಾರೆ.
www.terragreensorganic.com/

*
ಶುವಾಜಿತ್ ಪಾಯ್ನೆ
ಎಂಬಿಎ ಪದವೀಧರನ ಗ್ರಾಮೀಣಾಭಿವೃದ್ಧಿಯ ಕನಸಿನ ಕಥೆ ಇದು. ಉತ್ತರಪ್ರದೇಶದ 26ರ ಹರೆಯದ ಯುವಕ ಶುವಾಜಿತ್ ಪಾಯ್ನೆ, ಗ್ರಾಮೀಣ ಪ್ರದೇಶದಲ್ಲಿನ ಯುವಕರು ಪಟ್ಟಣಗಳಿಗೆ ವಲಸೆ ಹೋಗದೇ ತಮ್ಮ ಹಳ್ಳಿಗಳಲ್ಲೇ ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು, ಈ ದೆಸೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಎಂಬಿಎ ಪದವಿಯ ಬಳಿಕ ಶುವಾಜಿತ್ ಲಂಡನ್‌ಗೆ ಹೋಗಿ ಐಬಿಎಂ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ಎರಡು ವರ್ಷ ಕೆಲಸ ಮಾಡಿದರಾದರೂ ಮನಸ್ಸು ಮಾತ್ರ ಹಳ್ಳಿಗಳತ್ತ ಮಿಡಿಯುತ್ತಿತ್ತು. ಕೆಲಸಕ್ಕೆ ರಾಜೀನಾಮೆ ಕೊಟ್ಟು ಭಾರತಕ್ಕೆ ಮರಳಿದ ಶುವಾಜಿತ್, ಹಳ್ಳಿಗಳ ಕಡೆ ಮುಖ ಮಾಡಿದರು.

ಎಸ್‌ಬಿಐ ಬ್ಯಾಂಕ್‌ನ ಗ್ರಾಮೀಣಾಭಿವೃದ್ಧಿ ಫೆಲೋಶಿಪ್ ಪಡೆದು  ಹಳ್ಳಿಗಳಲ್ಲಿನ ಯುವಕರಿಗೆ ಸ್ವಾವಲಂಬನೆ ಪಾಠ ಮಾಡಲು ಮುಂದಾದರು. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಧ್ಯಪ್ರದೇಶ, ಒಡಿಶಾ ಸೇರಿದಂತೆ ಹತ್ತು ರಾಜ್ಯಗಳನ್ನು ಸುತ್ತಿ ಸಾವಿರಾರು ಯುವಕರಿಗೆ ಬದುಕು ರೂಪಿಸಿಕೊಳ್ಳಲು ನೆರವಾಗಿದ್ದಾರೆ.

ಯುವಕರಲ್ಲಿ ಹುದುಗಿರುವ ಕೌಶಲವನ್ನು ಗುರುತಿಸಿ ಅವರು ಮಾಡಬಹುದಾದ ಸ್ವಯಂ ಉದ್ಯೋಗವನ್ನು ಶುವಾಜಿತ್ ಗುರುತಿಸುತ್ತಿದ್ದರು. ನಂತರ ಎಸ್‌ಬಿಐ ಬ್ಯಾಂಕ್‌ನ ಗ್ರಾಮೀಣಾಭಿವೃದ್ಧಿ ಯೋಜನೆ ಅಡಿಯಲ್ಲಿ ಹಣಕಾಸು ನೆರವು ಕೊಡಿಸುವ ಮೂಲಕ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡುತ್ತಾರೆ. ಇಲ್ಲಿಯವರೆಗೂ ಹತ್ತು ಸಾವಿರಕ್ಕೂ ಹೆಚ್ಚು ಯುವಕರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವು ನೀಡಿದ್ದಾರೆ.

ಉದ್ಯೋಗ ಮಾತ್ರವಲ್ಲದೆ ಪರಿಸರ, ಶುಚಿತ್ವ, ಆರೋಗ್ಯ, ನೈರ್ಮಲ್ಯದ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ತಾವು ಉಳಿದುಕೊಂಡಿರುವ ಹಳ್ಳಿಯಲ್ಲಿ ರಾತ್ರಿ ಮಕ್ಕಳಿಗೆ ಇಂಗ್ಲಿಷ್ ಮತ್ತು ಗಣಿತ ಪಾಠವನ್ನು ಶುವಾಜಿತ್ ಹೇಳಿಕೊಡುತ್ತಾರೆ. ‘ನಗರಗಳ ಅಭಿವೃದ್ಧಿ ಮತ್ತು ಕೈಗಾರೀಕರಣದಿಂದ ದೇಶ ಅಭಿವೃದ್ಧಿಯಾಗುತ್ತದೆ ಎಂಬುದು ತಪ್ಪು ಕಲ್ಪನೆ. ಹಳ್ಳಿಗಳು ಉದ್ಧಾರವಾದಾಗ ಮಾತ್ರ ದೇಶ ಬೆಳವಣಿಗೆ ಕಾಣುತ್ತದೆ’ ಎನ್ನುತ್ತಾರೆ ಶುವಾಜಿತ್.
shuvajit@youthforindia.org

*
ಹರೀಶ್  ಶ್ರೀನಿವಾಸನ್ 
ಈ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಯುವಕರು ಉದ್ಯೋಗ ಹುಡುಕಿಕೊಂಡು  ಪಟ್ಟಣಗಳತ್ತ ವಲಸೆ ಬರುತ್ತಿರುವುದು ಸಾಮಾನ್ಯವಾಗಿದೆ. ಹೀಗಾಗಿ ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರು ಮತ್ತು ಕೂಲಿಕಾರ್ಮಿಕರು ಸಿಗದೆ ರೈತರು ಪರದಾಡುವ ಪರಿಸ್ಥಿತಿ ಇದೆ. ಕೃಷಿ ಕಾರ್ಮಿಕರು ಸಿಗದೇ ಇರುವುದರ ಸಲುವಾಗಿಯೇ ಕೆಲ ರೈತರು ಕೃಷಿ ಮಾಡುವುದನ್ನೇ ನಿಲ್ಲಿಸಿರುವ ಉದಾಹರಣೆಗಳು ನಮ್ಮ ಮುಂದಿವೆ.

ಇದಕ್ಕೆಂದೇ ತಮಿಳುನಾಡಿನ 29ರ ಹರೆಯದ ಯುವಕ ಹರೀಶ್ ಶ್ರೀನಿವಾಸನ್ ಎಂಬುವರು ‘ವಾರಾಂತ್ಯದ ಒಕ್ಕಲು ತಂಡ’ (theweekendagriculturist)ವನ್ನು ಕಟ್ಟಿಕೊಂಡು ರೈತರಿಗೆ ನೆರವು ನೀಡುತ್ತಿದ್ದಾರೆ. ವಾರಪೂರ್ತಿ ಕೆಲಸ ಮಾಡಿ  ವಾರಾಂತ್ಯದಲ್ಲಿ  ರೈತರ ಜಮೀನುಗಳಲ್ಲಿ ಉಚಿತವಾಗಿ ದುಡಿಯುವುದು ಈ ತಂಡದ ಉದ್ದೇಶ. ಕಳೆದ ಮೂರು ವರ್ಷಗಳಿಂದ ಹರೀಶ್ ಮತ್ತವರ ಗೆಳೆಯರ ತಂಡ ಜಮೀನುಗಳಲ್ಲಿ ಕೆಲಸ ಮಾಡುತ್ತಿದೆ.

ವಾರಾಂತ್ಯದ ಒಕ್ಕಲು  ಎಂಬ ಫೇಸ್‌ಬುಕ್‌ ಪುಟ ಆರಂಭಿಸಿರುವ ಹರೀಶ್, 5 ಸಾವಿರ ಕಾರ್ಯಕರ್ತರನ್ನು ಸಂಘಟಿಸಿದ್ದಾರೆ. ‘ಪ್ರತಿ ವಾರಾಂತ್ಯದಲ್ಲಿ 10-20 ಜನರಿರುವ ಹಲವಾರು ಗುಂಪುಗಳನ್ನು ರಚಿಸಿಕೊಂಡು ಗ್ರಾಮೀಣ ಪ್ರದೇಶಗಳತ್ತ ತೆರಳಿ ರೈತರಿಗೆ ಸಹಾಯ ಮಾಡಿ ಬರುತ್ತೇವೆ’ ಎನ್ನುತ್ತಾರೆ ಹರೀಶ್.

ವೈದ್ಯರು, ವಿದ್ಯಾರ್ಥಿಗಳು, ವಕೀಲರು, ಶಿಕ್ಷಕರು, ಸಮಾಜ ಸೇವಕರು, ಐಟಿ ಉದ್ಯೋಗಿಗಳು ಈ ತಂಡದಲ್ಲಿರುವುದು ವಿಶೇಷ. ಜಮೀನಿನಲ್ಲಿ ಫಸಲಿಗೆ ನೀರು ಹಾಯಿಸುವುದು, ಕಳೆ ಕೀಳುವುದು, ಉಳುಮೆ ಮಾಡುವುದು, ಬಿತ್ತನೆ, ಕಟಾವು ಹೀಗೆ ಕೃಷಿಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಮಾಡುತ್ತಾರೆ.

ಇದರಿಂದ ರೈತರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ವಾರಾಂತ್ಯ ಒಕ್ಕಲು ತಂಡದ ಮತ್ತೊಬ್ಬ ಸದಸ್ಯ ಸತೀಶ್. ತಮಿಳಿನ ಕಥೆಗಾರ ವೈರಮುತ್ತು ಅವರ ‘ಮೂರನೇ ಪ್ರಪಂಚ ಯುದ್ಧ’ ಎಂಬ ಕಾದಂಬರಿಯ ಪ್ರಭಾವದಿಂದ ಈ ತಂಡ ಕಟ್ಟಿದೆ ಎಂದು ಹರೀಶ್ ಹೇಳುತ್ತಾರೆ.

‘ರೈತರ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲುವ ಆ ಕಾದಂಬರಿಯನ್ನು ಓದಿದ ಬಳಿಕ ರೈತರಿಗೆ ಹೇಗಾದರೂ ನೆರವು ನೀಡಬೇಕು ಎಂಬ ಉತ್ಕಟ ಆಕಾಂಕ್ಷೆ ಮೂಡಿತು. ಈ ನಿಟ್ಟಿನಲ್ಲಿ ಯೋಚಿಸಿದಾಗ ಹೊಳೆದದ್ದು ವಾರಾಂತ್ಯದ ಒಕ್ಕಲು ಪರಿಕಲ್ಪನೆ’ ಎನ್ನುತ್ತಾರೆ.   www.facebook.com/groups/theweekendagriculturist/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT