ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ಯಾನದ ವರ್ತಮಾನ ಮತ್ತು ನೈತಿಕತೆ

Last Updated 1 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ವರ್ತಮಾನದಲ್ಲಿ ಬದುಕುವುದು ಎಂದಾಕ್ಷಣ ಅದಕ್ಕೆ ಆರೋಪಿಸಲಾಗುವ ಅರ್ಥಗಳು ಹಲವು. ಇಷ್ಟಕ್ಕೂ ವರ್ತಮಾನದಲ್ಲಿ ಬದುಕುವುದು ಎನ್ನುವುದಕ್ಕೆ ಹೆಚ್ಚಿನ ಅರ್ಥವೇನೂ ಇಲ್ಲ. ನಾವೆಲ್ಲರೂ ವರ್ತಮಾನದಲ್ಲಿಯೇ ಇರುತ್ತೇವೆ. ಹಾಗಿದ್ದರೆ ಝೆನ್ ಗುರುಗಳಿಂದ ತೊಡಗಿ ಎಲ್ಲಾ ಪಂಥಗಳ ಅನುಭಾವಿಗಳೂ ಹೇಳಿರುವ ವರ್ತಮಾನ ಯಾವುದು.

ಅದು ನಿತ್ಯದ ಬದುಕಿನಲ್ಲಿ ಹೇಗೆ ಪ್ರಯೋಜನಕ್ಕೆ ಬರುತ್ತದೆ. ಒಂದು ಸಣ್ಣ ಉದಾಹರಣೆಯೊಂದಿಗೆ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ನಮಗೆ ಅರಿವಿಲ್ಲದೆ ಮೈಗೆ ಬಿಸಿ ತಾಗಿದರೆ ನಾವು ತಕ್ಷಣ ಪ್ರತಿಕ್ರಿಯಿಸುವ ಬಗೆಯೊಂದಿದೆ. ಅದೆಷ್ಟು ವೇಗವಾಗಿರುತ್ತದೆಯೆಂದರೆ ನಾವು ಬೆಂಕಿಯ ಮೂಲದಿಂದ ಬಹುದೂರ ಸಿಡಿದಿರುತ್ತೇವೆ. ಇದರಿಂದ ಅನಾಹುತಗಳೂ ಸಂಭವಿಸುವ ಸಾಧ್ಯತೆ ಇದೆ. ಇದೇ ಪ್ರತಿಕ್ರಿಯೆಯನ್ನು ಅರಿವಿನೊಂದಿಗೆ ಮಾಡಿದರೆ ಹೇಗಿರಬಹುದೋ ಅದುವೇ ವರ್ತಮಾನದಲ್ಲಿ ಬದುಕುವ ಸಿದ್ಧಾಂತದ ತಿರುಳು.

ಇದನ್ನು ಅನೇಕ ಸಮರ ಕಲೆಗಳು ರೂಢಿಸಿಕೊಂಡಿವೆ. ಕಳರಿಯಿಂದ ತೊಡಗಿ ಕರಾಟೆಯ ತನಕದ ಎಲ್ಲಾ ಸಮರ ಕಲೆಗಳೂ ಮನಸ್ಸನ್ನು ಸಂಪೂರ್ಣ ನಿಯಂತ್ರಿಸಿಕೊಳ್ಳುವುದನ್ನು ಹೇಳುತ್ತವೆ. ಅದೇನೆಂದರೆ ನಾವು ಯಾವುದೇ ಕ್ಷಣದಲ್ಲಿ ಉದ್ವೇಗಕ್ಕೆ ಒಳಗಾಗದೆ ಇರುವ ಸ್ಥಿತಿಯೊಂದನ್ನು ಮೊದಲು ತಲುಪಬೇಕು. ಎದುರಾಳಿಯ ಮೇಲೆ ಎರಗುವ ಹೊತ್ತಿಗೆ ಸಂಪೂರ್ಣ ಶಕ್ತಿಯನ್ನು ಕೇಂದ್ರೀಕರಿಸಿಕೊಂಡು ದಾಳಿ ನಡೆಸಬೇಕು.

ಇದನ್ನೊಂದು ವ್ಯಾಯಾಮದಂತೆ ಕಲಿಯಲು ಆರಂಭಿಸಿ ಅದನ್ನು ದೇಹದ ಪರಾವರ್ತಿತ ಪ್ರತಿಕ್ರಿಯೆಯಾಗಿ ಮಾರ್ಪಡಿಸಿಕೊಳ್ಳುತ್ತಾರೆ. ಹಾಗಾಗಿಯೇ ಸಮರಕಲೆಯ ನಿಷ್ಣಾತರಿಗೆ ಇಡೀ ಮೈಯೆಲ್ಲಾ ಕಣ್ಣಿರುತ್ತದೆ. ಹಾಗೆಯೇ ಅವರಿಗೆ ಮೈಗೆ ಮೈಯೇ ಆಯುಧವಾಗಿರುತ್ತದೆ. ಆದರೆ ಅದು ಅಗತ್ಯವಿರುವಾಗ ಮಾತ್ರ ತನ್ನ ಶಕ್ತಿಯನ್ನು ತೋರಿಸುತ್ತದೆ.

ಈ ಇಡೀ ಪ್ರಕ್ರಿಯೆ ವರ್ತಮಾನದಲ್ಲಿ ಬದುಕುವುದರ ಒಂದು ಅನ್ವಯ. ಇದರ ಆಧ್ಯಾತ್ಮಿರಕ ಅರ್ಥಗಳನ್ನು ಇನ್ನಷ್ಟು ವಿಸ್ತರಿಸಬಹುದು. ನಾವೇನು ಮಾಡುತ್ತಿದ್ದೇವೆಯೋ ಅದನ್ನು ಸಂಪೂರ್ಣ ಶ್ರದ್ಧೆಯಿಂದ ಮಾಡುವುದು ಎಂಬುದು ವರ್ತಮಾನದಲ್ಲಿ ಬದುಕುವುದರ ಸರಳ ವ್ಯಾಖ್ಯಾನ. ಊಟ ಮಾಡುತ್ತಿದ್ದರೆ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು. ನಿರ್ದಿಷ್ಟ ಕ್ರಿಯೆಯಲ್ಲಿ ತಾದಾತ್ಮ್ಯ ಸಾಧಿಸುವುದು. ಭಕ್ತಿಯೂ ಇಂಥದ್ದೇ ಒಂದು ಮಾರ್ಗ. ಇದು ದೈನಂದಿನ ಕ್ರಿಯೆಯ ಭಾಗವಾಗಿಬಿಟ್ಟರೆ ನಾವು ನಮಗೆ ಅರಿವಿಲ್ಲದೆಯೇ ಕರ್ಮಯೋಗವೊಂದನ್ನು ಪಾಲಿಸುತ್ತಿರುತ್ತೇವೆ.

ಇಂಥದ್ದೊಂದು ತಾದಾತ್ಮ್ಯ ಸಾಧಿಸುವುದು ಬಹುಮುಖ್ಯವಾಗಿ ಬೇಕಿರುವುದು ನಾವು ಮಾಡುವ ಕೆಲಸ ನಮ್ಮೊಳಗೊಂದು ಅಪರಾಧ ಭಾವವನ್ನು ಹುಟ್ಟಿಸುವಂಥದ್ದಾಗಿರಬಾರದು. ಅರ್ಥಾತ್ ನೈತಿಕವಾಗಿ ಸಮರ್ಪಕವಾಗಿರುವ ಕ್ರಿಯೆಗಳಲ್ಲಿ ತೊಡಗಿದಾಗಲಷ್ಟೇ ಅದರ ವರ್ತಮಾನದಲ್ಲಿ ನಾವಿರಲು ಸಾಧ್ಯ. ಇಲ್ಲವಾದರೆ ನಮ್ಮೊಳಗಿನ ಅಪರಾಧಿ ಭಾವ ಅಥವಾ ಈ ತಪ್ಪು ಉಳಿದರ ಗಮನ ಸೆಳೆಯಬಹುದೆಂಬ ಭಯಗಳೇ ನಮ್ಮ ತಾದಾತ್ಮ್ಯವನ್ನು ಇಲ್ಲವಾಗಿಸಿಬಿಡುತ್ತದೆ.

ವರ್ತಮಾನದಲ್ಲಿ ಬದುಕುವುದರ ಸಂಕೀರ್ಣತೆ ಹೀಗೆ ಹೆಚ್ಚುತ್ತಲೇ ಹೋಗುತ್ತದೆ. ಇವುಗಳನ್ನು ಕಳಚಿಕೊಳ್ಳುವುದು ಎಂದರೆ ನಾವು ಒಳ್ಳೆಯವರಾಗುತ್ತಾ ಹೋಗುವುದು. ನಮ್ಮ ಅಹಂಕಾರಗಳನ್ನು, ಕುಟಿಲತೆಗಳನ್ನು ಕಳಚುತ್ತಾ ಹೋದಂತೆ ವರ್ತಮಾನದಲ್ಲಿ ಬದುಕುವ ದಾರಿ ಹೆಚ್ಚು ಸುಗಮವಾಗುತ್ತಾ ಹೋಗುತ್ತದೆ.

ನನಗೆ ಧ್ಯಾನಿಸಲು ಸಾಧ್ಯವಿಲ್ಲ. ಮನಸ್ಸಿನ ಹೊರೆಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಯಾರಾದರೂ ಹೇಳುತ್ತಿದ್ದರೆ ಅವರನ್ನು ನೈತಿಕ ಪ್ರಶ್ನೆಗಳು ಕಾಡುತ್ತಿವೆ ಎಂದರ್ಥ. ಇದನ್ನು ನಾವು ಒಪ್ಪಿಕೊಂಡು ಅವುಗಳು ಯಾವುವೆಂದು ಹುಡುಕಲು ಆರಂಭಿಸಿದರೆ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಇಲ್ಲವಾದರೆ ಯಾವುದಾದರೊಂದು ಮಾದಕ ವಸ್ತು ಸೇವಿಸಿ ಅದರ ಮೂಲಕ ಮನಸ್ಸನ್ನು ತಿಳಿಗೊಳಿಸಿಕೊಳ್ಳುವ ಹುಸಿ ಧ್ಯಾನದ ಹಾದಿಯಲ್ಲಿ ಸಾಗುತ್ತೇವೆ. ಇಂಥದ್ದಕ್ಕೆ ಧೈರ್ಯ ಮಾಡದೇ ಇರುವವರು ಧ್ಯಾನವನ್ನು ಬೋಧಿಸುವ ಹುಸಿ ಗುರುಗಳಿಗೆ ಲಕ್ಷಾಂತರ ಮೊತ್ತ ನೀಡುತ್ತಲೇ ಉಳಿದು ಬಿಡುತ್ತಾರೆ. ಆದರೆ ನಿಜವಾದ ಏಕಾಗ್ರತೆ ಮತ್ತು ಧ್ಯಾನಗಳೆರಡೂ ಅವರಿಗೆ ಒಲಿಯುವುದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT