ಬಿಂಬದ ದಾಖಲೆ

ಮನದೊಳಗಣ ಮನೆಯ ಅಮೂರ್ತ ಬಿಂಬಗಳು

‘ಅಮೂರ್ತ ಛಾಯಾಗ್ರಹಣ’ ನಮ್ಮಲ್ಲಿ ಅಷ್ಟೊಂದು ಜನಪ್ರಿಯವಲ್ಲದ ಛಾಯಾಗ್ರಹಣ ಪ್ರಕಾರ. ಇದನ್ನು ಟೆಕ್ಸ್‌ಚರ್‌ ಫೋಟೊಗ್ರಫಿ ಎಂದೂ ಕರೆಯಲಾಗುತ್ತದೆ. ಛಾಯಾಗ್ರಹಣದ ಕುರಿತಾಗಿ ‘ವಸ್ತುವಿನ ಬಿಂಬದ ದಾಖಲೆ ಮಾಡುವುದೇ ಛಾಯಾಗ್ರಹಣ’ ಎಂಬ ಸೀಮಿತ ವ್ಯಾಖ್ಯಾನವನ್ನು ಅಮೂರ್ತ ಪ್ರಕಾರ ವಿಸ್ತರಿಸುತ್ತದೆ. 

ಮನದೊಳಗಣ ಮನೆಯ ಅಮೂರ್ತ ಬಿಂಬಗಳು

ಈ ಅಮೂರ್ತ ಛಾಯಾಗ್ರಹಣ ಸಂಕೀರ್ಣ ಅನುಭಗಳ ಅಭಿವ್ಯಕ್ತಿಗೆ ಒದಗಿಬಂದ ಅನುಭವ ಕಥನವನ್ನು ಕನ್ನಡದ ಮುಖ್ಯ ಯುವಛಾಯಾಗ್ರಾಹಕರಲ್ಲಿ ಒಬ್ಬರಾದ ದಿನೇಶ್‌ ಇಲ್ಲಿ ಹಂಚಿಕೊಂಡಿದ್ದಾರೆ. ಅಮೂರ್ತ ಛಾಯಾಗ್ರಹಣದ ಕುರಿತಾಗಿ ಮಾಹಿತಿ ನೀಡುತ್ತಲೇ ಯುವ ಛಾಯಾಗ್ರಾಹಕರಿಗೆ ಈ ಪ್ರಕಾರದ ಸಾಧ್ಯತೆಗಳನ್ನು ಪರಿಚಯಿಸುವುದು ಈ ಬರಹದ ಉದ್ದೇಶ.

ಉತ್ತರಕನ್ನಡ ಜಿಲ್ಲೆಯ ಮಾನೀರು ನನ್ನ ಚಿಕ್ಕ ಊರು. ಅಲ್ಲಿರುವ ನಮ್ಮ 50  ವರ್ಷಗಳಷ್ಟು ಹಳೆಯದಾದ ಮನೆಯನ್ನು ಕೊನೆಗೂ  ಬೀಳಿಸಲೇಬೇಕಾದ ಹಂತ ಕಳೆದ ವರ್ಷವೇ ಬಂದಿತ್ತು. ಅಂತೂ ಈಗ ಬೀಳಿಸಿ, ಕಟ್ಟುವ ಕೆಲಸ ಪ್ರಾರಂಭವಾಗಿದೆ. ಬೀಳಿಸುವ ಕೆಲವು ತಿಂಗಳ ಮುನ್ನ ಮನೆಯಲ್ಲಿ ಇದ್ದಾಗೆಲ್ಲಾ ಏನೋ ಒಂದು ತರಹದ ಕಾಡುವ ಭಾವನೆ. ಆ ಭಾವದ ಮೂಲ ನನಗೆ ಅರ್ಥವಾಗಲಿಕ್ಕೆ ಕೆಲ ಸಮಯ ತೆಗೆದುಕೊಂಡಿತು.

ಆ ಮನೆಯ ಪ್ರತಿ ಅಂಶದೊಂದಿಗೆ ನನ್ನ ಮನಸ್ಸು ಹೊಂದಿರುವ ಅತ್ಯಾಪ್ತ ಸಂಬಂಧ ಮತ್ತು ಆ ಸಂಬಂಧ ಮುಗಿದುಹೋಗುವ ಸಂಕಟವೇ ನನ್ನ ಮನಸ್ಸಿನಲ್ಲಿನ ತಳಮಳದ ಮೂಲಕಾರಣವಾಗಿತ್ತು. ಅಲ್ಲಿಯ ಪ್ರತಿ ವಿನ್ಯಾಸ–ವಸ್ತು, ಅದು ತುಕ್ಕು ಹಿಡಿದ ಕಬ್ಬಿಣದ ಪೆಟ್ಟಿಗೆಯಾಗಲಿ, ಕಿತ್ತು ಕಿತ್ತು ಬಿದಿರುವ ಮಣ್ಣಿನ ಗೋಡೆಯಾಗಲಿ, ಗೆದ್ದಲು ತಿಂದಿರುವ ಮರದ ತುಂಡಾಗಲಿ,

ಮಸಿಹಿಡಿದು ಹಿಡಿದು ಸೋತುಹೋಗಿರುವ ಗೋಡೆಯ ಮೇಲಿನ ಮೂಲೆಯಲ್ಲಿ ಕಟ್ಟಿರುವ ಜೇಡರ ಬಲೆಗಳ ಸಾಲು ಸಾಲಾಗಲಿ,  ಅಪ್ಪ ತಂದಿಟ್ಟ, ಕಿತ್ತು ಹೋಗಿರುವ ಸೋಫಾದ ಮೇಲಿನ ನಮೂನೆಗಳಾಗಲಿ– ಇವುಗಳೆಲ್ಲ ನನ್ನ ಸುಪ್ತ  ಮನಸ್ಸಿನೊಡನೆ ಏನೋ ಸಂಬಂಧ ಹೊಂದಿವೆ ಎಂದು ಮನವರಿಕೆಯಾಗತೊಡಗಿತು. ಎಚ್ಚರದಿಂದಲೇ ಅವುಗಳನ್ನೆಲ್ಲ ವಿವಿಧ ಕೋನಗಳಿಂದ ನೋಡತೊಡಗಿದಾಗ ಹೊಸ ಕಲ್ಪನೆಗಳು ಮೂಡತೊಡಗಿದವು.

ಇನ್ನು ಕೆಲವೇ ದಿನಗಳಲ್ಲಿ ನನ್ನ ಬದುಕು–ಭಾವದ ಒಂದು ಭಾಗವೇ ಆಗಿದ್ದ ಈ ಮನೆ ಭೌತಿಕವಾಗಿ ನಾಶವಾಗಿಬಿಡುತ್ತದೆ ಎಂಬ ಯೋಚನೆಯೇ ಅದನ್ನು ಹೇಗಾದರೂ ನನ್ನೊಳಗೆ ಉಳಿಸಿಕೊಳ್ಳಬೇಕು ಎಂದೂ ಮನಸ್ಸು ಹಟ ಹಿಡಿಯತೊಡಗಿತು. ಛಾಯಾಗ್ರಹಣ ನನ್ನ ಅಭಿವ್ಯಕ್ತಿಯ ಮುಖ್ಯ ಮಾಧ್ಯಮವಾದ್ದರಿಂದ ಅದನ್ನು ಬಳಸಿಕೊಂಡೇ ಸದ್ಯದಲ್ಲಿ ನಾಶವಾಗಲಿರುವ ಈ ಮನೆಯ ವಿವರಗಳನ್ನು ಶಾಶ್ವತಗೊಳಿಸಬಹುದು ಅನ್ನಿಸಿತು.

ತಕ್ಷಣವೇ ಕಾರ್ಯೋನ್ಮುಖನಾಗಿ ಮನೆಯ ಹಲವು ವಿನ್ಯಾಸಗಳನ್ನು (texture) ಉಪಯೋಗಿಸಿ ಅಮೂರ್ತ (abstract)  ಛಾಯಾಗ್ರಹಣದ ಭಾಷೆಯಲ್ಲಿ ಕೆಲವು ಅಂಶಗಳನ್ನು ಸೆರೆಹಿಡಿದೆ. ಈ ಹಂತದಲ್ಲಿ ಛಾಯಾಗ್ರಹಣದ ಒಂದು ಮುಖ್ಯ ಪ್ರಕಾರವಾಗಿರುವ ಅಮೂರ್ತ ಛಾಯಾಗ್ರಹಣದ ಬಗ್ಗೆ ತಿಳಿದುಕೊಳ್ಳುವ ಕುತೂಹಲವೂ ನನಗೆ ಹುಟ್ಟಿತು. ಈ ಅಮೂರ್ತ  ಛಾಯಾಗ್ರಹಣವಾಗಲಿ ಅಥವಾ ಕಲಾಕೃತಿ ರಚನೆಯಾಗಲಿ ಅಷ್ಟು ಸುಲಭ ಅಲ್ಲ.

ನೋಡಲು ಕೆಲವೊಂದು ಸಲ ಸರಳ ಅನ್ನಿಸುವ ಈ ಚಿತ್ರಗಳು ಅತಿ ಕ್ಲಿಷ್ಟಕರವಾದ ಭಾವನೆಗಳನ್ನು ಕಲಾವಿದ ವ್ಯಕ್ತಪಡಿಸಲು ಸಹಾಯ ಮಾಡುತ್ತವೆ. ಕುಂಚವನ್ನು ಬಳಸುವ ಬದಲು ಇಲ್ಲಿ ಕಲಾವಿದ ಕ್ಯಾಮೆರಾ ಬಳಸುತ್ತಾನೆ. ಬಣ್ಣಗಳ ಬದಲು ಸುತ್ತಮುತ್ತ ಸಿಗುವ ರೂಪಗಳು (form), ಆಕಾರಗಳು (shapes), ನಮೂನೆಗಳು (patterns),  ಸೂಕ್ಷ್ಮ ವಿವರಗಳು (details) ಇತ್ಯಾದಿಗಳನ್ನು ಕಲಾವಿದ ಬಳಸಿಕೊಳ್ಳುತ್ತಾನೆ.

ಉದಾಹರಣೆಯಾಗಿ ಇಲ್ಲಿ ಕಾಣಿಸಿರುವ ಚಿತ್ರಗಳ ಮೂಲಕ ಅಹಿತಕರ ವಸ್ತುಗಳು ಅನ್ನಿಸುವಂಥ ಹಳೆ ಸೋಫಾ, ತುಕ್ಕು ಹಿಡಿದ ವಸ್ತುಗಳು, ಹಳೆ ಗೋಡೆ ಇತ್ಯಾದಿಗಳನ್ನು ಆಕರ್ಷಕವಾಗಿ ಕಾಣಿಸುವ ಪ್ರಯತ್ನ ಮಾಡಿದ್ದೇನೆ. ನನ್ನ ಮತ್ತು ಅವುಗಳ ಸಂಬಂಧಗಳು ಈ ಚಿತ್ರಗಳ ಮೂಲಕ ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿವೆ. 

ಅಮೂರ್ತ ಛಾಯಾಗ್ರಹಣದಲ್ಲಿ ವಿಶೇಷ ಹೆಸರು ಮಾಡಿದ ಅಮೆರಿಕದ ಹೆಸರಾಂತ ಕಲಾವಿದ ವಿನ್ ಬುಲ್ಲೋಕ್ ಅವರ ಕಲಾಪಯಣ ಕುತೂಹಲಕರವಾದದ್ದು. ಪ್ರಯೋಗಶೀಲ ಮತ್ತು ವಾಣಿಜ್ಯ ಛಾಯಾಗ್ರಹಣ ಮಾತ್ರ ಮಾಡುತ್ತಿದ್ದ ಅವರು 45ನೇ ವಯಸ್ಸಿನವರೆಗೂ ತನ್ನ ಒಳಧ್ವನಿಯನ್ನು ತಮ್ಮ ಕಲೆಯ ಮೂಲಕ  ವ್ಯಕ್ತಪಡಿಸಲಾಗದೆ ತೊಳಲಾಡುತ್ತಿದ್ದರು.

ತಾವು ತೆಗೆಯುತ್ತಿರುವ ಚಿತ್ರಗಳು ತಮ್ಮ ಮನಸ್ಸಿನ ಧ್ವನಿಯನ್ನು ಅಭಿವ್ಯಕ್ತಿಸುವಂತೆ ಮಾಡುವುದು ಹೇಗೆ ಎಂದು ತೊಳಲಾಡುತ್ತಿರುವಾಗಲೇ ಅವರ ಸಮಕಾಲೀನ ಖ್ಯಾತ ಛಾಯಾಗ್ರಾಹಕ ಎಡ್ವರ್ಡ್ ವೆಸ್ಟನ್‌ರನ್ನು ಭೇಟಿ ಮಾಡುತ್ತಾರೆ. ನಂತರದ ಅವರಿಬ್ಬರ ಸಂಬಂಧ ವಿನ್ ಅವರ ಛಾಯಾಗ್ರಹಣದ ಶೈಲಿಯನ್ನೇ ಸಂಪೂರ್ಣ ಬದಲಾಯಿಸುತ್ತದೆ.

ತನ್ನ 50ನೇ ಮತ್ತು 60ನೇ ವಯಸ್ಸಿನ ನಡುವೆ, ಅಂದರೆ ಸುಮಾರು 1948 ಮತ್ತು 1958ರ ನಡುವೆ,  ಗಾಜಿನ ತುಂಡುಗಳನ್ನು ಉಪಯೋಗಿಸಿ ಬೆಳಕನ್ನು ಬೇರೆ ಬೇರೆ ಕೋನಗಳಿಂದ ಹಾಯಿಸಿ ವಿಶಿಷ್ಟ ವಿನ್ಯಾಸಗಳನ್ನು ಸೆರೆಹಿಡಿಯುತ್ತಾರೆ. ಆದರೆ ಆಗಿದ್ದ ಬಣ್ಣದ ಚಿತ್ರಗಳ ಮುದ್ರಣ ಸಾಮರ್ಥ್ಯದ ಕೊರತೆಯಿಂದ ಆ  ಚಿತ್ರಗಳನ್ನು ಮುದ್ರಿಸಲು ಸಾಧ್ಯವಾಗುವುದಿಲ್ಲ.

ನೆನಪಿಡಿ, ಅದು ಅದು ಫಿಲಂ ಯುಗ – ಡಿಜಿಟಲ್ ಅಲ್ಲ. ಆಗ ಛಾಯಾಚಿತ್ರಗಳನ್ನು ನೋಡುವುದಾದರೆ ಮುದ್ರಣವನ್ನೇ ಅವಲಂಬಿಸಬೇಕಿತ್ತು. ಇದರಿಂದ ಹತಾಶರಾಗಿ ವಿನ್ ಅವರು ಕಪ್ಪು ಬಿಳುಪು ಚಿತ್ರಗಳನ್ನೇ ಮತ್ತೆ ತಮ್ಮ ಮಾಧ್ಯಮವನ್ನಾಗಿ ಮಾಡಿಕೊಂಡು ತಮ್ಮ ಚಟುವಟಿಕೆಯನ್ನು ಮುಂದುವರಿಸುತ್ತಾರೆ. 1975ರಲ್ಲಿ ಕ್ಯಾನ್ಸರ್‌ಗೆ ತುತ್ತಾಗಿ ವಿಧಿವಶರಾಗುವವರೆಗೂ ಮುಂದುವರೆಸುತ್ತಾರೆ.

ಆದರೆ ಅವರ ಪ್ರಯತ್ನ, ಅದರ ಫಲಗಳು ತುಂಬ ಸಮಯದವರೆಗೂ ಜಗತ್ತಿಗೆ ತಿಳಿದೇ ಇರಲಿಲ್ಲ. 2008ರಲ್ಲಿ ಅವರ ಕುಟುಂಬ, ವಿನ್‌ರ ಅಮೂರ್ತ ಚಿತ್ರಗಳನ್ನು ಮುದ್ರಣಮಾಡಿ ಹೊರತಂದಾಗಲೇ ಅವರ ಅಗಾಧ ಯೋಚನಾ ಶಕ್ತಿ ಹೊರ ಜಗತ್ತಿಗೆ ಪರಿಚಯವಾಯಿತು. ‘ಈ ಅವಧಿಯಲ್ಲಿ ಅವರು ತೆಗೆದಿರುವ ಚಿತ್ರಗಳು ಅವರ ಜೀವನದ ಅರ್ಥವನ್ನು ಹುಡುಕುವ ಪ್ರಯತ್ನಗಳು’ ಎಂದು ಖ್ಯಾತ ವಿಮರ್ಶಕರು ವಿಶ್ಲೇಷಿಸಿದ್ದಾರೆ. ಈಗಲೂ ಅವರ ಈ ಚಿತ್ರಗಳನ್ನು ಶ್ರೇಷ್ಠ ಕಲಾಕೃತಿಗಳು ಎಂದೇ ಪರಿಗಣಿಸಲಾಗುತ್ತದೆ.

ಈ ಅಮೂರ್ತ ಛಾಯಾಗ್ರಹಣದ ಅವಸಾನ ಆರಂಭವಾದುದು ಕಂಪ್ಯೂಟರ್‌ಗಳು ಬಳಕೆಗೆ ಬಂದಾಗ. ತಂತ್ರಜ್ಞಾನವನ್ನು ಬಳಸಿಅರ್ಥವಿಲ್ಲದ, ಆಳವಿಲ್ಲದ, ಉದ್ದೇಶವಿಲ್ಲದ ಚಿತ್ರಗಳನ್ನು ಅತಿ ಸುಲಭವಾಗಿ ಸೃಷ್ಟಿಮಾಡತೊಡಗಿದ್ದರಿಂದಾಗಿ ಅಮೂರ್ತ ಚಿತ್ರಗಳಿಗಿರುವ ಘನತೆಯೇ ನಾಶವಾಗಿಬಿಟ್ಟಿತು. ಹೊಸ ಮಾಧ್ಯಮಗಳ ಅಬ್ಬರದಲ್ಲಿ ಉತ್ತಮ ಅಮೂರ್ತ ಚಿತ್ರಗಳು ಧ್ವನಿ ಕಳೆದುಕೊಂಡು ಕಳೆದುಹೋಗತೊಡಗಿದವು. ಈ ನಡುವೆ ಅಮೂರ್ತ ಛಾಯಾಗ್ರಹಣವನ್ನು ‘ಸಾಂಪ್ರದಾಯಿಕ’ ಎಂಬ ಹಣೆಪಟ್ಟಿ ಲಗತ್ತಿಸಿ ಪಕ್ಕಕ್ಕೆ ಸರಿಸಿಡುವ ಪ್ರಯತ್ನವೂ ನಡೆಯಿತು.

ಈ ಎಲ್ಲ ಕಾರಣಗಳಿಂದ ಒಂದು ಉಜ್ವಲ ಛಾಯಾಗ್ರಹಣ ಪ್ರಕಾರವಾದ ಅಮೂರ್ತ ಛಾಯಾಗ್ರಹಣ ಕೊಂಚ ಹಿನ್ನೆಲೆಗೆ ಸರಿದಂತೆ ಕಂಡರೂ ಅದು ಸಂಪೂರ್ಣ ನಾಶವಾಗಲಿಲ್ಲ. ಈಗಿನ ಎಷ್ಟೋ ಹೆಸರಾಂತ ಛಾಯಾಗ್ರಾಹಕರು ಇದನ್ನು ಇನ್ನೂ ಆಚರಣೆಯಲ್ಲಿಟ್ಟಿದ್ದಾರೆ ಮತ್ತು ಪುನಶ್ಚೇತನ ಮಾಡಲು  ಪ್ರಯತ್ನಿಸುತ್ತಿದ್ದಾರೆ.

ಅಮೂರ್ತ ಛಾಯಾಗ್ರಹಣದ ಕುರಿತು ಇಷ್ಟೆಲ್ಲ ಮಾಹಿತಿ ತಿಳಿದುಕೊಂಡ ಮೇಲೆ ಈ ಮಾಧ್ಯಮದ ಕುರಿತಾದ ನನ್ನ ಶ್ರದ್ಧೆ ಇನ್ನಷ್ಟು ಹೆಚ್ಚಿತು. ಕ್ಯಾಮೆರಾ ಮಸೂರದಲ್ಲಿ ನೋಡತೊಡಗಿದಾಗ ನನ್ನದೇ ಮನೆಯ ಸೂಕ್ಷ್ಮ ಚಹರೆಗಳು ಬೇರೆಯದೇ ಭಾವವನ್ನು ಹೊಮ್ಮಿಸತೊಡಗಿದವು. ಭಿನ್ನವಾದ ಅರ್ಥಸಾಧ್ಯತೆಗಳೂ ತೆರೆದುಕೊಳ್ಳತೊಡಗಿದವು.

ಚಿಕ್ಕ ಚಿಕ್ಕ ತೂತುಗಳಿರುವ  ಗೋಡೆಯ ವಿನ್ಯಾಸ ತೋರಿಸುವ ಚಿತ್ರ ಆಕಾಶ ಮತ್ತು ನಕ್ಷತ್ರಗಳನ್ನು ಹೋಲುತ್ತವೆ. ಮುಖದ ಹೋಲಿಕೆಯ ಬುಟ್ಟಿ ಮತ್ತು ಅದರಲ್ಲಿನ ಹಳೆಯ ಸಾಮಾನುಗಳ ಚಿತ್ರದಲ್ಲಿ ನನಗೆ ಬಾಲ್ಯದಲ್ಲಿ ಮಾಳಿಗೆಯ ಕತ್ತಲಿನ ಬಗ್ಗೆ ಇದ್ದ ಭಯ ಬಿಂಬಿತವಾಯಿತು. ಗೆದ್ದಲು ತಿಂದು ತಿಂದು ಒಂದು ಕಲಾಕೃತಿಯ ರೂಪ ಪಡೆದ ಹಳೆ ಕಟ್ಟಿಗೆಯ ಚಿತ್ರ ನನ್ನ ಅಜ್ಜಿಯ ಅಗಾಧವಾದ ಮಮತೆಯನ್ನು ಸಮರ್ಥ ರೂಪಕದಂತೇ ಕಾಣಲಾರಂಭಿಸಿತು.

ಹೀಗೆ ವಿಧವಿಧವಾದ ಚಿತ್ರಗಳು ಹೆಣೆದು ಒಂದಕ್ಕೊಂದು ಹೊಂದಿ ನನ್ನ ಮನೆಯ ಕುರಿತಾಗಿ ಮನದಲ್ಲಿ ಒಂದು ವಿಶಿಷ್ಟ ಭಾವಲೋಕವನ್ನು ಹೆಣೆಯಿತು. ಅಲ್ಲಿ ಮನೆಯೆಂದರೆ ಮನೆಯಷ್ಟೇ ಅಲ್ಲ, ಮನುಷ್ಯರೂ ಹೌದು. ಇಲ್ಲಿನ ಚಿತ್ರಗಳು ಕೇವಲ ಆ ಹಳೆಯ ಮನೆಯ ಭೌತಿಕ ಚಹರೆಗಳಷ್ಟೇ ಅಲ್ಲವೇ ಅಲ್ಲ. ಅವುಗಳಲ್ಲಿ ನಾನು ಎಂದೋ ಕಂಡುಂಡ ಮಮತೆಯ ಬಿಂಬಗಳಿವೆ.

ಬಾಲ್ಯದಲ್ಲಿ ಹಿತ್ತಿಲಲ್ಲಿ ಕಂಡ ಯಾವುದೋ ಆಕೃತಿ ಕಂಡು ಬೆಚ್ಚಿದ ಕಂಪನದ ರೂಹು ಇದೆ. ಸಂಭ್ರಮಾಚರಣೆಗೆ ಕಾರಣವಾದ ಯಾವುದೋ ಕಾರ್ಯಕ್ರಮ, ನೋವಿನ ನೆನಪಾಗಿ ಉಳಿದ ಸಾವು, ಸಣ್ಣ ಜಗಳ, ಅಗಾಧ ಪ್ರೀತಿ, ತುಸುವೇ ಮುನಿಸು, ವಿಶಾಲ ಮನಸ್ಸು ಎಷ್ಟೆಲ್ಲ ಭಾವಕೋಶಗಳನ್ನು ಪೋಷಿಸಿ ನನ್ನ ವ್ಯಕ್ತಿತ್ವವನ್ನು ರೂಪಿಸಿದ ಆ ಮನೆಯನ್ನು ಬರೀ ‘ಭೌತಿಕ ಆಕೃತಿ’ ಎಂದು ಸರಿಸಿಬಿಡಲಾದೀತೆ?

ಅಲ್ಲಿನ ಪ್ರತಿ ಚಹರೆಗಳೂ ನನ್ನ ಪಾಲಿಗೆ ಮಂಡಿಗಾಯದ ಗುರುತಿನಂತೆ. ಬಾಲ್ಯದಲ್ಲಿ ಬಿದ್ದು ಮಾಡಿಕೊಂಡ ಗಾಯವೇನೋ ಮಾಯ್ದಿದೆ. ಆದರೆ ಅದರ ಗುರುತು ಇನ್ನೂ ಮಂಡಿಯಲ್ಲಿದೆ. ಆ ಗುರುತನ್ನು ನೇವರಿಸಿಕೊಂಡಾಗೆಲ್ಲ ಬಾಲ್ಯದ ಲೋಕಕ್ಕೆ ಜೀಕಿ ಬಂದಂಥ ಅನುಭವ.

ಇಲ್ಲಿನ ಅಮೂರ್ತ ಚಿತ್ರಗಳೂ ನನ್ನ ಮಂಡಿಗಾಯದ ಗುರುತಿನಂತೆ. ಮೂರ್ತ ಚಿತ್ರ ವರದಿಯಂತೆ. ಅಲ್ಲಿ ಏನಿದೆಯೋ ಅಷ್ಟನ್ನು ಮಾತ್ರ ಹೇಳುತ್ತಿರುತ್ತದೆ. ಆದರೆ ಈ ಅಮೂರ್ತ ಚಿತ್ರಗಳು ಹಾಗಲ್ಲ, ಅವು ಕಾವ್ಯದಂತೆ. ಇಲ್ಲಿ ಚಿತ್ರದಲ್ಲಿ ಇರುವ ಚಹರೆಗಳೆಲ್ಲ ಸಂಕೇತಗಳಾಗಿ ಇರುವುದರ ಮೂಲಕ ಇರದಿರುವುದನ್ನು ಕಾಣಿಸಲು ತವಕಿಸುತ್ತಿರುತ್ತವೆ. ಇಲ್ಲಿನ ಎಲ್ಲ ಚಿತ್ರಗಳೂ ಛಾಯಾಚಿತ್ರವಾಗುವುದರ ಜತೆಗೇ ನನ್ನ ಭಾವಕೋಶದ ಭಾಗಗಳೂ ಹೌದು.

ಹೀಗೆ ಸ್ವಲ್ಪದರಲ್ಲಿಯೇ ಭೌತಿಕವಾಗಿ ನಾಶವಾಗಿ ಹೋಗಲಿರುವ ಮನೆಯ ಚಹರೆಗಳನ್ನು– ಆ ಮನೆಯೊಟ್ಟಿಗೆ ಬೆಸೆದುಕೊಂಡಿರುವ ನನ್ನ ಭಾವಲೋಕವನ್ನು ಶಾಶ್ವತಗೊಳಿಸಿಕೊಳ್ಳುವ ಸಾಧ್ಯತೆಯನ್ನು ತೋರಿಸಿದ ‘ಅಮೂರ್ತ ಛಾಯಾಗ್ರಹಣ’ಕ್ಕೆ ನಾನು ಕೃತಜ್ಞ. 

*
ಅಮೂರ್ತ ಚಿತ್ರಗಳನ್ನು ಸೆರೆ ಹಿಡಿಯಲು ‘ಡಿಎಸ್‌ಎಲ್‌ಆರ್‌’ ಕ್ಯಾಮೆರಾಗಳ ಅವಶ್ಯಕತೆ ಇಲ್ಲ. ನಿಮ್ಮ ಫೋನ್ ಕ್ಯಾಮೆರಾ ಸಾಕು. ಆದರೆ ಒಳ್ಳೆಯ ಬೆಳಕು ಮಾತ್ರ ಬೇಕು. ಇಲ್ಲಿ ಕಾಣಿಸಿರುವ ಚಿತ್ರಗಳನ್ನು ನಾನು ನನ್ನ ಫೋನ್ ಕ್ಯಾಮೆರಾದಲ್ಲಿಯೇ ಸೆರೆ ಹಿಡಿದಿದ್ದೇನೆ. ಬೆಳಗಿನ ಮತ್ತು ಸಂಜೆಯ ಬೆಳಕಿನಲ್ಲಿ ತೆಗೆದಿದ್ದೇನೆ. ಕೆಲವೊಂದನ್ನು ಮಧ್ಯಾಹ್ನದ ಬೆಳಕಿನಲ್ಲಿ ತೆಗೆದದ್ದೂ ಉಂಟು. ಅಡ್ಡ ಬೆಳಕು ನೆರಳನ್ನು ಹೆಚ್ಚು ತೋರಿಸುವುದರಿಂದ ಚಿತ್ರ ಸುಂದರವಾಗಿ ಕಾಣುವ ಸಾಧ್ಯತೆಗಳು ಹೆಚ್ಚು. 

ಇನ್ನು ಕೃತಕ ಬೆಳಕನ್ನು ಉಪಯೋಗಿಸಿದರೆ ಚಿತ್ರವನ್ನು ಹೇಗೆ ಬೇಕೋ ಹಾಗೆ ಸೆರೆಹಿಡಿಯಬಹುದು. ಎಲ್ಲದಕ್ಕಿಂತ ಮುಖ್ಯವಾದದ್ದು ನಾವು ಫೋಟೊ ತೆಗೆಯುವುದು ಏಕೆ ಎನ್ನುವುದು ಛಾಯಾಗ್ರಾಹಕನಿಗೆ ಸ್ಪಷ್ಟವಿರಬೇಕು. ಚಿತ್ರಗಳನ್ನು ಒಂದರ ಪಕ್ಕಕ್ಕೆ ಇನ್ನೊಂದು ಹೊಂದಿಸಿದಾಗ ಸಿಗುವ ಅರ್ಥವು, ಅವುಗಳಲ್ಲಿ ಹೆಣೆಯಬಹುದಾದ ಕಥೆಗಳು ಮತ್ತು ಅವು ಉದ್ದೀಪಿಸಬಹುದಾದ ನೆನಪುಗಳೇ ನಮ್ಮ ಕಲಾ ಅನುಭೂತಿಗೆ  ಕಾರಣವಾಗುತ್ತವೆ.

Comments
ಈ ವಿಭಾಗದಿಂದ ಇನ್ನಷ್ಟು
ಬುಟ್ಟಿಯು ಬರಿದಾಗಿತ್ತು ಹರಕೆ ಮನತುಂಬಿತ್ತು!

ಒಡಲಾಳ
ಬುಟ್ಟಿಯು ಬರಿದಾಗಿತ್ತು ಹರಕೆ ಮನತುಂಬಿತ್ತು!

19 Apr, 2018

ಬೆಳದಿಂಗಳು
ಸಂಸ್ಕೃತಿಯ ಮಾಲೆ

ನಮ್ಮ ಇಂದಿನ ಸಮಾಜಕ್ಕೂ ಕುಟುಂಬಗಳಿಗೂ ಖಂಡಿತವಾಗಿಯೂ ಬೇಕಾಗಿರುವ ವಿವೇಕವನ್ನು ಸೊಗಸಾದ ರೀತಿಯಲ್ಲಿ ಈ ಪದ್ಯ ವಿವರಿಸಿದೆ.‌

19 Apr, 2018
ಮೋರೇರ ಅಂಗಳದಲ್ಲೊಂದು ದಿನ

ವಿದ್ಯಾರ್ಥಿಗಳ ಪ್ರವಾಸ
ಮೋರೇರ ಅಂಗಳದಲ್ಲೊಂದು ದಿನ

19 Apr, 2018
ನಾನಿದ್ದಲ್ಲೇ ನಾದಲೀಲೆ!

ಸಂಗೀತ
ನಾನಿದ್ದಲ್ಲೇ ನಾದಲೀಲೆ!

19 Apr, 2018
ಯಾರು ಚಾಲನೆ ಮಾಡಿದರೆ ನಿಮ್ಮ ಪ್ರವಾಸ ಸುರಕ್ಷಿತ?

ಕಾಮನಬಿಲ್ಲು
ಯಾರು ಚಾಲನೆ ಮಾಡಿದರೆ ನಿಮ್ಮ ಪ್ರವಾಸ ಸುರಕ್ಷಿತ?

19 Apr, 2018