ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ವೇರಿಯಂ ಕಥನ

Last Updated 1 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಆಲಂಕಾರಿಕ ವಸ್ತುವಾಗಿ ಮಾರ್ಪಟ್ಟಿರುವ ಅಕ್ವೇರಿಯಂನ ಚರಿತ್ರೆ ಬಲ್ಲವರು ವಿರಳ. ಮನೆಗಳಲ್ಲಿ, ವಾಣಿಜ್ಯ ಉದ್ದೇಶದ ಕಟ್ಟಡಗಳಲ್ಲಿ ಕಾಣುವ ಅಕ್ವೇರಿಯಂಗಳು ಆಕರ್ಷಕ ಮೀನುಗಳನ್ನು ಸಂಗ್ರಹಿಸಿಡುವ ತೊಟ್ಟಿಗಳಲ್ಲದೇ ಬೇರೇನೂ ಅಲ್ಲ. ಹಾಗಾಗಿ, ಅಕ್ವೇರಿಯಂ ಎಂದರೆ ಪಾರದರ್ಶಕ ಮೀನಿನ ತೊಟ್ಟಿ ಎಂಬ ತಿಳಿವಳಿಕೆ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ.

ಒಂದರ್ಥದಲ್ಲಿ ಅದು ನಿಜವೇ. ಆದರೆ, ವಾಸ್ತವದಲ್ಲಿ ಅದರ ಅರ್ಥವೇ ಬೇರೆ. ಅದೊಂದು ಜಲಚರ ತೊಟ್ಟಿ. ಮೀನುಗಳಲ್ಲದೇ ನೀರಿನಲ್ಲಿ ವಾಸಿಸುವ ಇತರ ಜೀವಿಗಳನ್ನು ಮತ್ತು ಸಸ್ಯಗಳನ್ನು ಇಡುವ ನೀರಿನ ತೊಟ್ಟಿ. ಬಹುತೇಕ ಸಂದರ್ಭ ಇದು ಪಾರದರ್ಶಕವಾಗಿರುತ್ತದೆ. ಗಾಜಿನಿಂದಲೇ ಮಾಡಿರುತ್ತಾರೆ.

ಅಕ್ವೇರಿಯಂ ಕೌತುಕದ ಇತಿಹಾಸ. ಆರಂಭದಲ್ಲಿ ಆಲಂಕಾರಿಕ ಉದ್ದೇಶಕ್ಕೆ ಅಕ್ವೇರಿಯಂ ಪರಿಕಲ್ಪನೆ ಮೊಳಕೆಯೊಡೆದರೂ, ನಂತರ ಅದರ ಉದ್ದೇಶ ಜಲಚರಗಳ, ಜಲ ಸಸ್ಯಗಳ ಅಧ್ಯಯನ ಮಾಡುವುದಾಗಿತ್ತು. ಒಂದರ್ಥದಲ್ಲಿ ಅದು ಸಣ್ಣ ಪ್ರಯೋಗಾಲಯ. 1850ನೇ ಇಸವಿಗೂ ಮೊದಲು ಅಕ್ವೇರಿಯಂ ಎಂಬುದು ಪ್ರಾಣಿ ಶಾಸ್ತ್ರಕ್ಕೆ ಸಂಬಂಧಿಸಿದ ಪದವಾಗಿತ್ತು.

ಅಧ್ಯಯನಕ್ಕಾಗಿ ಜಲಸಸ್ಯಗಳನ್ನು ಬೆಳೆಸುವ ತೊಟ್ಟಿಗೆ ಅಕ್ವೇರಿಯಂ ಎಂದು ಹೇಳಲಾಗುತ್ತಿತ್ತು. ನಂತರ ಅದರ ವ್ಯಾಖ್ಯಾನ ಬದಲಾಯಿತು. ಅಧ್ಯಯನದ ಜೊತೆಗೆ ವಾಣಿಜ್ಯ ಉದ್ದೇಶಕ್ಕೂ ಅಕ್ವೇರಿಯಂ ಬಳಕೆಯಾಯಿತು. ಈಗ ಪ್ರವಾಸಿಗರನ್ನು ಸೆಳೆಯುವುದಕ್ಕಾಗಿ ಜಗತ್ತಿನ ಹಲವು ದೇಶಗಳಲ್ಲಿ ಬೃಹತ್‌ ಅಕ್ವೇರಿಯಂಗಳು ನಿರ್ಮಾಣವಾಗಿವೆ.

ಅಕ್ವೇರಿಯಂ ಎಂಬ ಪದ ಹೆಚ್ಚು ಚಾಲ್ತಿಗೆ ಬಂದಿದ್ದು 19ನೇ ಶತಮಾನದಲ್ಲಿ. ಅದಕ್ಕಿಂತಲೂ ಮೊದಲೇ ತೊಟ್ಟಿಯಲ್ಲಿ ಜಲಜೀವಿಗಳನ್ನು ಸಂಗ್ರಹಿಸುವ ಪದ್ಧತಿ ಇತ್ತು. ತಮ್ಮ ಅಗತ್ಯಕ್ಕೆ ಬೇಕಾಗಿ ಚಲಚರಗಳನ್ನು ಸಾಕುವ ಸಂಪ್ರದಾಯ ಪುರಾತನ ಕಾಲದಲ್ಲಿ ಇತ್ತು. ಮೊಟ್ಟ ಮೊದಲು ಈ ಪದ್ಧತಿಯನ್ನು ಹುಟ್ಟುಹಾಕಿದವರು ಸುಮೇರಿಯನ್ನರು ಎಂದು ಹೇಳಲಾಗುತ್ತಿದೆ.

4,500 ವರ್ಷಗಳ ಹಿಂದೆಯೇ, ಕೃತಕ ಹೊಂಡಗಳನ್ನು ನಿರ್ಮಾಣ ಮಾಡಿ ಅವುಗಳಲ್ಲಿ ಮೀನುಗಳನ್ನು ಸಂಗ್ರಹಿಸಲಾಗುತ್ತಿತ್ತಂತೆ. ಇದಕ್ಕೆ ನೈಸರ್ಗಿಕವಾಗಿದ್ದ ಸಣ್ಣ ನೀರಿನ ಕೊಳಗಳು ಅವರಿಗೆ ಪ್ರೇರಣೆ ನೀಡಿರಬಹುದು ಎಂದು ಇತಿಹಾಸ ತಜ್ಞರು ವಾದಿಸುತ್ತಾರೆ.

ಪುರಾತನ ಈಜಿಪ್ಟ್‌ ಮತ್ತು ಅಸ್ಸೀರಿಯಾಗಳಲ್ಲೂ ಮೀನುಗಳ ಸಂಗ್ರಹಣೆ ಮಾಡಲಾಗುತ್ತಿತ್ತು ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ. ಕ್ರಿ.ಪೂ 1000ದ ಅವಧಿಯಲ್ಲಿ ಚೀನೀಯರು ಆಹಾರಕ್ಕಾಗಿ ಮೀನುಗಳನ್ನು ಸಾಕಲು ಆರಂಭಿಸಿದ್ದರು. ಸಿಹಿನೀರಿನಲ್ಲಿ ಸಿಗುವ ಸಾಮಾನ್ಯ ಮೀನು (ಕಾರ್ಪ್‌), ಗೋಲ್ಡ್‌ಫಿಶ್‌ (ಸಿಹಿನೀರಿನ ಕೆಂಪುಬಣ್ಣದ ಆಕರ್ಷಕ ಮೀನು) ಅನ್ನು ಅವರು ಹೆಚ್ಚಾಗಿ ಸಾಕುತ್ತಿದ್ದರು. ಇದರ ಉದ್ದೇಶ ಅಲಂಕಾರವೇ ಆಗಿತ್ತು. ನಂತರ ಜಪಾನಿಗೂ ಇದರ ಪರಿಚಯ ಆಯಿತು. ಸಾಮಾನ್ಯ ಮೀನುಗಳ ಸಾಕಣೆಯಲ್ಲಿ ಜಪಾನಿಯರು ಪರಿಣತಿಯನ್ನೂ ಪಡೆದರು.

ಮೀನುಗಳ ಸಂಗ್ರಹದ ಕಲ್ಪನೆಯನ್ನು ಮನೆಯೊಳಕ್ಕೆ ತಂದಿದ್ದು ರೋಮನ್‌ ಸಾಮ್ರಾಜ್ಯ (ಕ್ರಿ.ಪೂ 27-ಕ್ರಿ.ಶ 395). ಅವರಿಗೆ ಮೀನುಗಳೆಂದರೆ ಆಹಾರ ಮತ್ತು ಮನರಂಜನೆಯ ಸಾಧನವಾಗಿತ್ತು. ಉಪ್ಪು ನೀರಿನಲ್ಲಿ, ಅಂದರೆ ಸಮುದ್ರ, ಸಾಗರಗಳಲ್ಲಿ ಜೀವಿಸುತ್ತಿದ್ದ ಮೀನುಗಳನ್ನು ತಂದು ಸಂಗ್ರಹಿಸಲು/ಸಾಕಲು ರೋಮನ್‌ ಆಡಳಿತಗಾರರು ಆರಂಭಿಸಿದರು.

ಅವರು ಮೊದಲು ಸಾಕಲು ಆರಂಭಿಸಿದ ಮೀನು ಎಂದರೆ ಸಮುದ್ರದ ಬಾರ್ಬಲ್‌. ಅಮೃತಶಿಲೆಯಿಂದ ಮಾಡಿದ ತೊಟ್ಟಿಯಲ್ಲಿ ಈ ಮೀನುಗಳನ್ನು ಹಾಕುತ್ತಿದ್ದರು. ಈ ತೊಟ್ಟಿಗಳನ್ನು ಅತಿಥಿಗಳಿಗಾಗಿ ಮೀಸಲಿಟ್ಟಿದ್ದ ಮಂಚದ ಅಡಿ ಇಡುತ್ತಿದ್ದರಂತೆ.

ಅಷ್ಟೊತ್ತಿಗಾಗಲೇ (ಸುಮಾರು ಕ್ರಿ.ಶ 50ರ ಅವಧಿ) ಗಾಜಿನ ಬಳಕೆ ಆರಂಭವಾಗಿತ್ತು. ಅಮೃತಶಿಲೆಗಳ ನೀರಿನ ತೊಟ್ಟಿಯ ಒಂದು ಭಾಗಕ್ಕೆ ಗಾಜಿನ ಫಲಕ ಅಳವಡಿಸಲು ರೋಮನ್ನರು ಆರಂಭಿಸಿದರು. ಇದರಿಂದ ತೊಟ್ಟಿಯ ಒಳಗಿದ್ದ ಮೀನುಗಳನ್ನು ಹೊರಗಡೆಯಿಂದಲೇ ನೋಡಲು ಸಾಧ್ಯವಾಯಿತು. ಅತ್ತ ಚೀನಾದಲ್ಲಿ 14ನೇ ಶತಮಾನದಲ್ಲಿ ಮೀನುಗಳನ್ನು ಅದರಲ್ಲೂ ಮುಖ್ಯವಾಗಿ ಗೋಲ್ಡ್‌ಫಿಶ್‌ಗಳನ್ನು ಹಾಕುವುದಕ್ಕಾಗಿ ಆಕರ್ಷಕ ಪೋರ್ಸೆಲಿನ್‌ ದಾನಿಗಳ ತಯಾರಿಕೆ ಆರಂಭವಾಯಿತು.

ನಂತರದಲ್ಲಿ ಜನರು ಈಗಿನ ಮೀನಿನ ಬೋಗುಣಿಗಳನ್ನು (ಬೌಲ್‌) ಹೋಲುವ ದಾನಿಗಳನ್ನು ತಯಾರಿಸಿದರು. 18ನೇ ಶತಮಾನದಲ್ಲಿ ನೀರಿನ ತೊಟ್ಟಿ ತಯಾರಿಸಲು ಸಂಪೂರ್ಣವಾಗಿ ಗಾಜು ಬಳಸುವ ಸಂಪ್ರದಾಯ ರೂಢಿಗೆ ಬಂತು. ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಸಂಪೂರ್ಣ ಪಾರದರ್ಶಕ ಜಲಚರಗಳ ಸಂಗ್ರಹ ಪಾತ್ರೆ ತಯಾರಾಯಿತು.

ಆಮ್ಲಜನಕ, ಪ್ರಾಣಿಗಳು ಮತ್ತು ಸಸ್ಯಗಳ ನಡುವಣ ಸಂಬಂಧದ ಬಗ್ಗೆ ಸ್ಪಷ್ಟ ತಿಳಿವಳಿಕೆ ಬರುವವರೆಗೂ ಅಕ್ವೇರಿಯಂನ ಪರಿಕಲ್ಪನೆ ಜನಪ್ರಿಯತೆ ಗಳಿಸಲಿಲ್ಲ. 19ನೇ ಶತಮಾನದಲ್ಲಿ ಅಕ್ವೇರಿಯಂಗೆ ಹೊಸ ದಿಶೆ ಸಿಕ್ಕಿತು. 1832ರಲ್ಲಿ ಫ್ರಾನ್ಸ್‌ ಮೂಲದ ಜಲ ಜೀವವಿಜ್ಞಾನಿ ಜೀನ್‌ ವಿಲ್ಲೆಪ್ರೆಕ್ಸ್‌ ಪೊವರ್‌ ಎಂಬುವವರು ಮೊದಲ ಸುಧಾರಿತ ಗಾಜಿನ ಅಕ್ವೇರಿಯಂ ಅಭಿವೃದ್ಧಿಪಡಿಸಿದರು. ಅದರಲ್ಲಿ ಜಲಚರಗಳ ಜೊತೆಗೆ ಸಸ್ಯಗಳನ್ನು ಇಡಬಹುದಿತ್ತು. 1836ರಲ್ಲಿ ಡಾ. ನಾಥಾನೀಲ್ ಬಾಗ್ಶಾ ವಾರ್ಡ್‌ ಎಂಬುವವರು ‘ವಾರ್ಡಿಯನ್‌ ಕೇಸ್‌’ ಎಂಬ ಪೆಟ್ಟಿಗೆಯನ್ನು ರೂಪಿಸಿದರು.

ಉಷ್ಣವಲಯದ ನೀರಿನಲ್ಲಿ ವಾಸಿಸುವ ಪ್ರಾಣಿಗಳನ್ನು ಇದರಲ್ಲಿ ಇಡಬಹುದಿತ್ತು. ಇವರಲ್ಲದೇ ಇತರ ಹಲವು ಜಲಜೀವಿ, ಸಸ್ಯ ವಿಜ್ಞಾನಿಗಳ ಪ್ರಯತ್ನದಿಂದಾಗಿ ಅಕ್ವೇರಿಯಂ ಪ್ರಸಿದ್ಧಿಗೆ ಬಂತು. 1850ರ ವೇಳೆಗೆ ಈ ಅಕ್ವೇರಿಯಂಗಳು ಪರಸರದ ಅಧ್ಯಯನಕ್ಕಾಗಿ ಮೀನುಗಳನ್ನು, ಉಭಯವಾಸಿಗಳನ್ನು, ಸರೀಸೃಪಗಳನ್ನು ಸಂಗ್ರಹಿಸಿಡಲು ನೆರವಾಯಿತು.

1853ರಲ್ಲಿ ಲಂಡನ್ನಿನ ರಿಜೆಂಟ್ ಪಾರ್ಕ್‌ನಲ್ಲಿ ಅಕ್ವೇರಿಯಂ ಅನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಯಿತು. ಇದನ್ನು ಆಧರಿಸಿ ಬರ್ಲಿನ್‌, ಪ್ಯಾರಿಸ್‌ ಸೇರಿದಂತೆ ಹಲವು ನಗರಗಳಲ್ಲಿ ಅಕ್ವೇರಿಯಂಗಳ ಪ್ರದರ್ಶನ ಆರಂಭವಾಯಿತು. ಅಕ್ವೇರಿಯಂನಲ್ಲಿ ಜಲಚರ ಜೀವಿಗಳನ್ನು ತೋರಿಸಿ ಹಣವನ್ನು ಗಳಿಸಬಹುದು ಎಂಬ ಯೋಚನೆಯೂ ಜನರಲ್ಲಿ ಮೂಡಿತು.

ಪಿ.ಟಿ. ಬರ್ನಮ್‌ ಎಂಬ ಸರ್ಕಸ್‌ ಪ್ರವರ್ತಕ 1856ರಲ್ಲಿ ನ್ಯೂಯಾರ್ಕ್‌ ಸಿಟಿಯ ಅಮೆರಿಕನ್‌ ಮ್ಯೂಸಿಯಂನಲ್ಲಿ ಅಕ್ವೇರಿಯಂ ಪ್ರದರ್ಶನ ಏರ್ಪಡಿಸಿದರು. 20ನೇ ಶತಮಾನದ ಆರಂಭದ ಹೊತ್ತಿಗೆ ಜಗತ್ತಿನ ವಿವಿಧ ಕಡೆಗಳಲ್ಲಿ ಬೃಹತ್‌ ಅಕ್ವೇರಿಯಂಗಳು ತಲೆ ಎತ್ತಿದವು. ಎರಡನೇ ವಿಶ್ವ ಯುದ್ಧದ ನಂತರ ಈ ಸಂಖ್ಯೆ ಇನ್ನಷ್ಟು ಹೆಚ್ಚಾಯಿತು.

ಈಗ ಜಗತ್ತಿನ ಬಹುತೇಕ ಪ್ರಮುಖ ನಗರಗಳಲ್ಲಿ ಬೃಹತ್‌ ಅಕ್ವೇರಿಯಂಗಳಿವೆ. ವಾಣಿಜ್ಯ ಉದ್ದೇಶ ಮತ್ತು ಅಧ್ಯಯನದ ಉದ್ದೇಶಕ್ಕೂ ಅವುಗಳನ್ನು ಬಳಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT