ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದ ಅಂಚಿನ ಪುರುಷ ಸಾಹಸಗಳು

ಜನ ಸಮೂಹದ ಮನಸ್ಸು, ನ್ಯಾಯಾಲಯದ ತೀರ್ಪು ಸರಳವೂ ಅಲ್ಲ, ನೇರವೂ ಅಲ್ಲ, ಪ್ರಾಯೋಗಿಕವೂ ಅಲ್ಲ
Last Updated 1 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮನುಷ್ಯ ಮಾತ್ರರ ಪರಾಕ್ರಮ ಪ್ರದರ್ಶನಕ್ಕೆ ಬಹಳ ಸಂದರ್ಭಗಳಲ್ಲಿ ಪರಂಪರೆಯ ರಕ್ಷಣೆಯೂ, ದೈವದ ಆಶೀರ್ವಾದವೂ ಇರುತ್ತದೆ. ವಚನಕಾರರು ಮೇಲಿಂದ ಮೇಲೆ ಹೇಳಿದ ‘ಅರಿವು’ ಮಾತ್ರ ಇರುವುದಿಲ್ಲ. ಪ್ರಾಣಿ ಹಿಂಸೆಯ ವಿರುದ್ಧ ಹೋದರೂ ಕೋರ್ಟು ಅದಕ್ಕೆ ಅನುಮತಿ ಕೊಡುತ್ತದೆ. ಇಲ್ಲ ಇದು ಪರಂಪರಾನುಗತವಾದುದು, ತಪ್ಪಿದರೆ ದೈವನಿಷ್ಠಾಭಂಗ ಸಂಗತಿಯಾಗುತ್ತದೆ ಎಂದರೂ ನ್ಯಾಯಾಲಯ ‘ಹೌದು’ ಎನ್ನುತ್ತದೆ.

ಹಳೆಯ ಚಿನ್ನದ ಚೂರಿ ಎಂದು ಮೈಮೂತಿಯ ಮೇಲೆ ಹರಿದಾಡಿಸಿಕೊಳ್ಳಲು ಸಾಧ್ಯವೇ? ಪ್ರಾಚೀನ ಕಾಲದಿಂದಲೂ ನರಮಾನವನಿಗೆ ತನ್ನನ್ನು ಪ್ರಾಣಿಗಳೊಂದಿಗೆ ಸಮೀಕರಿಸಿಕೊಳ್ಳುವುದು, ಅವುಗಳೊಡನೆ ಕಾದಾಡಿ ಗೆಲ್ಲುವುದು ಇಲ್ಲವೇ ಹಿಂಸೆಯಿಂದ ಕೊಲ್ಲುವುದು ತತ್ಸಂಬಂಧದಲ್ಲಿ ಮೀಸೆಯನ್ನು ಹುರಿಗೊಳಿಸಿಕೊಂಡು ಸತ್ತದಕ್ಕೆ, ಬದುಕಿದ್ದಕ್ಕೆ ಅಸಂಖ್ಯಾತ ಶಿಲಾ ದಾಖಲೆಗಳಿವೆ. ಆದರೆ ನಮ್ಮ ಪರಂಪರೆಯಲ್ಲಿ ಅಹಿಂಸೆಯನ್ನು ಕುರಿತಾಗಿ ಅಪಾರ ಹೇಳಿಕೆಗಳಿದ್ದರೂ, ಕಾವ್ಯ ಕಥನಗಳಿದ್ದರೂ ಅವು ಜನಸಮೂಹದ ಗಮನಕ್ಕೂ, ಜೀವನರೂಢಿಗೂ ಬಂದಂತಿಲ್ಲ.

ಏಳನೆಯ ಶತಮಾನದ ಕನ್ನಡದ ಆರಂಭಿಕ ಶಾಸನವೇ ಒಬ್ಬ ಸಿಂಹ ಪರಾಕ್ರಮಿಯನ್ನು ಕುರಿತದ್ದು. ಅವನು ಒಳ್ಳೆಯವರಿಗೆ ಒಳ್ಳೆಯವನು, ಕೆಟ್ಟವರಿಗೆ ಕೆಟ್ಟವನು! ಒಳ್ಳೆಯವರನ್ನೂ ಕೆಟ್ಟವರನ್ನೂ ವಿಂಗಡಿಸಿ ನೋಡುವ ಬಗೆ ಯಾವುದು. ಯಾವುದು ಕುರೂಪ, ಯಾವುದು ಸುಂದರ? ಏಳನೆಯ ಶತಮಾನದ ಕಪ್ಪೆ ಅರಭಟ್ಟನೆಂಬ ಸಾಹಸ ಸಿಂಹನ ಈ ವಿವರದ ಮೂಲಕವೇ ಕನ್ನಡ ಓದುವ ವಿದ್ಯಾರ್ಥಿಗಳು ಸಾಹಿತ್ಯ ಜಗತ್ತಿಗೆ ಪ್ರವೇಶಿಸಬೇಕು.

ಇದನ್ನೊಂದು ದಾಖಲೆಯಾಗಿ ಪರಿಗಣಿಸಬೇಕಿದೆಯೇ ಶಿವಾಯಿ ಪರಮ ಸತ್ಯವೆಂದೇ ಗ್ರಹಿಸಿ  ಓದಬೇಕಾದ ಅಗತ್ಯವಿದೆಯೇ ಎನ್ನಿಸುತ್ತದೆ. ಯಾವುದೇ ಪ್ರಾಂತೀಯ ಭಾಷೆಗಳ ಈ ಬಗೆಯ ದಾಖಲೆಗಳಲ್ಲಿ ಈ ಹೊತ್ತಿನವರೆಗೆ ಪುರುಷ ಸಾಹಸಿಗಳು ಕುಟುಂಬ ಮತ್ತು ಜೀವನದ ಪರಿವೆಯೇ ಇಲ್ಲದಂತೆ ಹೋರಾಡಿದ್ದನ್ನು ಗಮನಿಸಿದರೆ ದಿಗ್ಭ್ರಮೆಯಾಗುತ್ತದೆ.

ಕನ್ನಡದ ಆದಿಕವಿಗಳಾದ ಪಂಪ, ರನ್ನರು ರಾಜಾಶ್ರಯದಲ್ಲಿದ್ದುದರಿಂದ ಯುದ್ಧ ಮತ್ತು ಪರಾಕ್ರಮವನ್ನು ವಿಜೃಂಭಿಸಿಯೇ ಹೇಳುತ್ತಾರೆ. ಶಸ್ತ್ರದಿಂದಾದ ಗಾಯಗಳು ದೇಹಕ್ಕೆ ಭೂಷಣವೆಂಬುದು ಇಬ್ಬರೂ ಕವಿಗಳ ಅಭಿಪ್ರಾಯ. ಪಂಪನ ‘ವಿಕ್ರಮಾರ್ಜುನ ವಿಜಯ’ ಕಾವ್ಯದಲ್ಲಿ ಸೈನಿಕನ ಹೆಂಡತಿಯೊಬ್ಬಳು ಯುದ್ಧರಂಗದ ಬಿಡಾರದಲ್ಲಿ ರಾತ್ರಿ ಗಂಡನ ಮುಂದೆ ಕುಳಿತು ‘ನೀನು ನಾಳಿನ ಯುದ್ಧದಲ್ಲಿ ಸತ್ತರೆ ನಾನೂ ಆಗಲೇ ಬೆಂಕಿಗೆ ಬಿದ್ದು ಮೊದಲೇ ಸ್ವರ್ಗಮುಟ್ಟಿ ಅಲ್ಲಿ ನಿನ್ನನ್ನು ಸ್ವಾಗತಿಸುವೆ’ ಎನ್ನುತ್ತಾಳೆ. 

‘ಬದುಕಿ ಬಂದರೆ, ನನಗಾಗಿ ಗಜಮಸ್ತಕದ ನವ ಮೌಕ್ತಿಕ ಮಣಿಗಳನ್ನು ತರಬೇಕು’ ಎಂದು ಬಿನ್ನವಿಸಿಕೊಳ್ಳುವ ರೋಚಕ ಸಂಗತಿಯಿದೆ. ಇದಕ್ಕೆ ಆಳುವ ಅರಸರ ಪ್ರೇರಣೆಯೇ ಮುಖ್ಯವಾಗಿದ್ದು ಯುದ್ಧವೇ, ಸಾಹಸದ ಮಾತೇ, ರಕ್ತ ಸುರಿಸುವುದೇ ಗಂಡಸಿನ ಗಂತವ್ಯ ಸಂಗತಿಯಾಗಿ, ಅದರಿಂದಲೇ ಸಿಂಹಾಸನದ ವೈಭವ ಮತ್ತು ಸ್ವರ್ಗ ಎನ್ನುವಂತಾಯಿತು.

ಅಂದರೆ ಅರಮನೆಯ ಪಕ್ಕದ ಗರಡಿ ಮನೆಗಳಲ್ಲೋ, ಗ್ರಾಮೀಣ ಜಾತ್ರೆಗಳಲ್ಲೋ ಪುರುಷರು ಹೊಟ್ಟೆಗಿಲ್ಲದಿದ್ದರೂ ಸಾಹಸ ಪ್ರದರ್ಶನ ಮಾಡುತ್ತಲೇ ಇರಬೇಕು. ರಕ್ತಕ್ಕೂ, ಸಾವಿಗೂ ಹೆದರಬಾರದೆಂಬ ಉಪಾಯಕ್ಕೆ ಆರಾಧನೆಯೂ, ಭಕ್ತಿಯೂ, ದೈವವೂ, ಸ್ವರ್ಗವೂ ಸೇರಿಕೊಂಡದ್ದು ಶತಮಾನದ ಪರಾಕ್ರಮಿಗಳ ಸುದೈವವೋ, ದುರ್ದೈವವೋ ಈ ಹೊತ್ತಿನ ವಿಚಾರವಂತ ಜಗತ್ತು ಹೇಳಬೇಕು. ಈಗಲೂ ಅದರ ಪಳೆಯುಳಿಕೆಗಳು ಸಾಂಸ್ಕೃತಿಕ ಪರಿವೇಷದಲ್ಲಿ ನಂಬಿಕೆಗಳ ಬಲದಲ್ಲಿ ಉಳಿದುಕೊಂಡಿವೆ.

ಪರಾಕ್ರಮವನ್ನೂ, ಸಾವನ್ನೂ ರೋಚಕವಾಗಿ ವಿವರಿಸುವ ಪಂಪ ಅದೇ ತನ್ನ ‘ಆದಿಪುರಾಣ’ದಲ್ಲಿ ಒಂದು ಅಹಿಂಸಾ ಪ್ರಕರಣವನ್ನು ಹೇಳುತ್ತಾನೆ. ಭರತ ಚಕ್ರವರ್ತಿ, ತನ್ನ ಅರಮನೆಯೆದುರು ಚಿಗುರು, ಹೂವು, ಮೊಳೆತ ಧಾನ್ಯವನ್ನು ಚೆಲ್ಲಿಸಿ ತಾನು ಮಾಡುವ ಸತ್ಕರ್ಮಕ್ಕಾಗಿ ಸಜ್ಜನ ಸಮೂಹವು ಆ ಮಾರ್ಗವಾಗಿ ಬರಬಹುದು ಎಂದನಂತೆ. 

ಆದರೆ ಕೆಲವು ಪ್ರಾಜ್ಞರು ಚಿಗುರು, ಹೂವು, ಧಾನ್ಯಗಳನ್ನು ತುಳಿಯಲಾರದೆ ಹೊರಗೇ ನಿಂತರು. ಭರತ ಅವರನ್ನು ಮಹಾಪ್ರಾಜ್ಞರೆಂದು, ಅಹಿಂಸಾವೃತಿಗಳೆಂದೂ ಗೌರವಿಸಿದ. ಹಿಂಸೆ, ಅಹಿಂಸೆಯ ಎರಡು ಉದಾಹರಣೆಗಳನ್ನು ತನ್ನ ಕೃತಿಗಳಲ್ಲಿ ಕಾಣಿಸುವ ಪಂಪ, ಸ್ವತಃ ದಂಡನಾಯಕನಾಗಿದ್ದರೂ ಅಹಿಂಸಾವಾದಿ ಜೈನ ಕವಿಯೇ.

1940ರ ಸುಮಾರಿನಲ್ಲಿಯೇ ಕುವೆಂಪು ಅವರು ‘ಕಾನೂನು ಹೆಗ್ಗಡಿತಿ’ ಕಾದಂಬರಿಯನ್ನು ಬರೆದು ಅದರೊಳಗೆ ಗ್ರಾಮಜೀವನದ ಎಲ್ಲ ವಿಷಮತೆಗಳನ್ನೂ ಹೇಳುವಲ್ಲಿ ಪ್ರಾಣಿಬೇಟೆಯ ಉತ್ಸಾಹದೊಂದಿಗೆ  ಮೌಢ್ಯತೆಯ ವ್ಯಾಪ್ತಿಯನ್ನೂ ಚಿತ್ರಿಸುತ್ತಾರೆ. ಮೇಕೆಯ ಕತ್ತು ಕತ್ತರಿಸಿದರೆ ದೇವತೆಗೆ ತೃಪ್ತಿಯಾಗದೆಂದು ಭಕ್ತನೊಬ್ಬ ಒನಕೆಯಿಂದ ಬಡಿದು ಬಲಿ ನೀಡಿದನಂತೆ.

ಆ ನಡುವೆ ತಪ್ಪಿಸಿಕೊಂಡ ಹೋತವೊಂದು (ಬಲೀಂದ್ರ) ಹೂವಯ್ಯನ ಆಶ್ರಯ ಪಡೆದರೆ, ಬದುಕಿದ ಆ ಪ್ರಾಣಿಗೂ ಕಾನೂರಿನ ರೈತಾಪಿಗಳು ಅನೇಕ ಅಪಶಕುನಗಳನ್ನು ತಗುಲಿಸಿ, ಅರ್ಧರಾತ್ರಿಯ ಹೊತ್ತು ಹೂವಯ್ಯನ ನಿದ್ದೆಯ ವೇಳೆ ಅದನ್ನು ಹಿಡಿತಂದು ದೇವತೆಗೆ ಬಲಿಕೊಟ್ಟರೆ ಗ್ರಾಮ ಸುಕ್ಷೇಮವಾಗಬಹುದೆಂದು ಬಾಡುಗಳ್ಳ ಸೋಮನೊಡನೆ ವ್ಯೂಹ ರಚಿಸುತ್ತಾರೆ.

ಆದರೆ ಗ್ರಾಮಕ್ಷೇಮದ ನಿಮಿತ್ತ ಹೋತದ ಕಳ್ಳತನಕ್ಕೆ ಹೋದ ಸೋಮನು ತಾನೇ ದುರಂತಕ್ಕೊಳಗಾಗಿ ತಿಪ್ಪೆಗೆ ಬಿದ್ದು, ಕಡೆಗೆ ಹೂವಯ್ಯನ ತಿಳಿವಳಿಕೆಯ ಬೋಧನೆಗೆ ಒಳಗಾಗುವ ಸೂಕ್ಷ್ಮ ವಿವರಗಳು ಕಾದಂಬರಿಯಲ್ಲಿ ಕಾಣಿಸಿಕೊಳ್ಳುತ್ತವೆ. ಗಮನಿಸಬೇಕಾದ ಸಂಗತಿಯೆಂದರೆ ಕುವೆಂಪು ಮಾಂಸಾಹಾರವನ್ನೂ, ಹಿಂಸಾತ್ಮಕ ಪ್ರಾಣಿವಧೆಯನ್ನೂ ಪ್ರತ್ಯೇಕಿಸಿಯೇ ನೋಡುತ್ತಾರೆ.

ಎಲ್ಲ ಆಧುನಿಕತೆಯನ್ನು ಸ್ವೀಕರಿಸುತ್ತಲೇ ಯಾವುದೋ ಒಂದು ಪರಂಪರಾನುಗತ ಅಪಾಯಕಾರಿ ನಂಬಿಕೆ, ಆಚರಣೆ ಎದುರು ನಿಂತರೆ ನ್ಯಾಯಾಲಯದಾದಿಯಾಗಿ ಎಲ್ಲರೂ ಅದರ ಸಾಧಕ ಬಾಧಕಗಳನ್ನು ಮರೆತು ಒಪ್ಪಿಗೆ ಸೂಚಿಸಿಬಿಡುವಂತೆ ಕಾಣುತ್ತದೆ. ಆದರೆ ಪ್ರಜ್ಞಾವಂತರು ಜಲ್ಲಿಕಟ್ಟು ಆಡಲು, ಕಂಬಳ ಓಡಿಸಲು, ಕೋಳಿ ಅಂಕ ಆಡಲು, ವಜ್ರಮುಷ್ಟಿ ಕಾಳಗ ಮಾಡಲು, ಜಾತ್ರೆಗೆ ಕುರಿ, ಕೋಳಿ ಕೊಂಡೊಯ್ದು ಬಯಲಲ್ಲೇ ಬಲಿಕೊಟ್ಟು ಅಡುಗೆ ಮಾಡಿ ಉಣ್ಣಲು ಸಾಧ್ಯವೇ?

ಮಧ್ಯಕರ್ನಾಟಕದಲ್ಲಿ ಕಂಡ ಸಣ್ಣ ಪ್ರಮಾಣದ ಜಾತ್ರೆಯ ದೃಶ್ಯವಿದು. ಅದು ಮಾಂಸಾಹಾರಿ ಮೇಳವಾದುದರಿಂದ ಜನರಿಗಿಂತ ಮೊದಲೇ ಅಪಾರ ಸಂಖ್ಯೆಯಲ್ಲಿ ನಾಯಿಗಳು ನೆರೆದಿದ್ದವು. ಅವು ಬಯಲಲ್ಲಿ ಉಣ್ಣುವ ಜನರ ಸುತ್ತಲೇ ಇದ್ದವು. ಸ್ವಲ್ಪ ಗಾಳಿ ಬೀಸಿದರೂ ಉಂಡು ಬಿಸಾಡಿದವರ ಎಲೆಗಳು ಉಣ್ಣುತ್ತ ಕೂತವರ ಮೂತಿಗೆ ಬಡಿಯುತ್ತಿದ್ದವು. ನೀರಿನ ಸೌಕರ್ಯವಿಲ್ಲ. ಅರೆಬರೆ ಬೆಂದ ಮಾಂಸ.

ಮಿಕ್ಕ ಮಾಂಸದ ಸಾರನ್ನು ತಪ್ಪಲೆಗೆ ತುಂಬಿ ಮನೆಗೆ ಸಾಗಿಸಲು ಹೋದರೆ ಅದು ಬಸ್ಸಲ್ಲೇ ಚೆಲ್ಲಿಹೋಯಿತು. ಅದಲ್ಲದೆ ಬರುತ್ತ ಅದದೇ ಬಸ್ಸುಗಳಲ್ಲಿ ಕುರಿ, ಕೋಳಿ ಸಾಗಿಸಿ ಅವುಗಳು ಸುರಿಸಿದ್ದ ಹಿಕ್ಕೆಪಿಕ್ಕೆ, ಗಂಜಲದೊಡನೆ ಮಾಂಸದ ಸಾರು ಮಿಕ್ಸಾಯಿತು. ಬಸ್ಸೊಳಗೇ ಹೊಡೆದಾಟ. ಹೆಂಗಸರಿಗೆ ತಂತಮ್ಮ ಕಂಕುಳ ಮಕ್ಕಳೊಡನೆ ಕುಡಿದು ಮತ್ತೇರಿದ ಗಂಡಂದಿರನ್ನು ಬಸ್ಸಿಗೆ ಹತ್ತಿಸುವುದೇ ಹರಸಾಹಸ. ಬೇಗ ಬೇಗ ಟ್ರಿಪ್ಪು ಹೊಡೆದು ಕಾಸು ಮಾಡಬೇಕೆಂಬ ಡ್ರೈವರ್, ಕಂಡಕ್ಟರ್‌ಗಳೊಂದಿಗೆ ಜಗಳ. ನಂಬಿಕೆ, ಆಚರಣೆ, ದೈವಕ್ಕಿಂತ ಗ್ರಾಮೀಣ ವಾತಾವರಣದ ಸಾಂಸಾರಿಕ ಸಂಕಷ್ಟಗಳು ದೊಡ್ಡವು.

ಇಲ್ಲಿ ಪ್ರಾಣಿದಯಾ ಸಂಘದವರಿಗಿಂತ, ದೈವಾಚರಣೆಯಲ್ಲಿ ಪ್ರಾಣಿಬಲಿ ಇರಬೇಕೆಂಬುದಕ್ಕಿಂತ ಜಾತ್ರೆಗಳಿಗೆ ಬರುವ ಗ್ರಾಮೀಣರಿಗೆ ಒದಗಿಸಬೇಕಾದ ಸೂಕ್ತ ರಕ್ಷಣೆ ಮತ್ತು ಸಲಕರಣೆಗಳ ಬಗ್ಗೆ ಸರ್ಕಾರ ಮತ್ತು ಪ್ರಜ್ಞಾವಂತರು ಯೋಚಿಸಬೇಕಾಗಿದೆ. ಅಥವಾ ಗ್ರಾಮಸ್ಥರೇ ಎಚ್ಚರ ವಹಿಸಬೇಕಾಗುತ್ತದೆ. ಭಾರತದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಜನ ಭಾಗವಹಿಸುವ ಮೇಳಗಳಿಗೆಲ್ಲ ಈ ಮಾತು ಅನ್ವಯಿಸುತ್ತದೆ.

1935–40ರ ಸುಮಾರು ಇರಬಹುದು. ಮಲೆಮಹದೇಶ್ವರನ ಬೆಟ್ಟದ ದೀಪಾವಳಿ ಸಮಯದ ಜಾತ್ರೆಯಲ್ಲಿ ಯಥಾವಿಧಿಯಾಗಿ ಲಕ್ಷಾಂತರ ಜನ ಸೇರಿದ್ದರು. ಆಗ ಬಸ್ಸಿನ ಅನುಕೂಲವೇನೂ ಇರಲಿಲ್ಲ. ಸರ್ಕಾರಿ ಬಸ್ಸಿನ  ಅನುಕೂಲ ಇಲ್ಲವೇ ಇಲ್ಲ. ತಲೆಯ ಮೇಲೆ ಹಸಿಬೇ ಚೀಲದ ಬುತ್ತಿ ಹೊತ್ತು ಕಾಲು ನಡಿಗೆಯಲ್ಲೇ ದಟ್ಟ ಅರಣ್ಯ ಹಾಯಬೇಕು. ಒಂಬತ್ತು ದಿನದ ಜಾತ್ರೆ.

ಅಕಸ್ಮಾತಾಗಿ ಮುಗಿಲು ಹರಿಯುವ ಮಳೆ ಸುರಿದು ಸೇರಿದ್ದ ಬಯಲು ಬೆಟ್ಟದ ಅಶೌಚ ನೀರೆಲ್ಲ ಕಾರಯ್ಯ, ಬಿಲ್ಲಯ್ಯನ ಕೆರೆಗೆ ತುಂಬಿಕೊಂಡಿತು. ರಕ್ಷಣೆಯೇ ಇಲ್ಲದೆ ಬಯಲಲ್ಲೇ ಬಿಡಾರ ಹೂಡಿ ತೊಯ್ದು ತೊಪ್ಪೆಯಾಗಿದ್ದ ಜನ ಅದೇ ನೀರನ್ನು ಅಡುಗೆಗೋ, ಕುಡಿಯಲೋ ಬಳಸಿದ್ದರ ಎರಡು ಮೂರು ದಿನಗಳಲ್ಲಿ ವಾಂತಿಭೇದಿ ಹತ್ತಿಕೊಂಡು ಸತ್ತವರ ಸಂಖ್ಯೆ ಸಾವಿರ-ಸಾವಿರವನ್ನು ದಾಟಿಬಿಟ್ಟಿತು.

ಪ್ರಾಣ ಕಳೆದುಕೊಂಡವರನ್ನು ಸಮಾಧಿ ಮಾಡಲಾಗದೆ ಅಲ್ಲಲ್ಲೇ ಎತ್ತಿಹಾಕಿ ಕಲ್ಲುಮಲ್ಲಯ್ಯನ ಸೇವೆ ಮಾಡಲಾಯಿತು. ಬಾಯಿ ಬಡಿದುಕೊಂಡು ಅವರವರ ಗ್ರಾಮಗಳನ್ನು ಸೇರಿದ ಭಕ್ತ ಸಮೂಹದಲ್ಲಿ ಗಂಡನಿದ್ದರೆ ಹೆಂಡತಿಯಿಲ್ಲ. ಹೆಂಡತಿಯಿದ್ದರೆ ಗಂಡನಿಲ್ಲ. ಗಂಡ ಹೆಂಡತಿಯರು ಉಳಿದರೆ ಮಕ್ಕಳು ಕಾಣೆಯಾದವು, ಅಪ್ಪ ಅವ್ವಂದಿರು ಸತ್ತರು.

ಈ ಭಯಂಕರ ದುರಂತದ ಸಾವಿಗೂ ಜನರು ಕೊಟ್ಟ ಪ್ರಬಲ ನಂಬಿಕೆಯೆಂದರೆ ಅದೇ ವರ್ಷ ಮೈಸೂರಿನಿಂದ ಮಾಡಿಸಿ ಸಾಗಿಸಿದ್ದ ಬೆಳ್ಳಿಯ ಹುಲಿಯ ವಾಹನದ ಕೆಂಪು ಗೋಲಿಕಣ್ಣಿನ ಏರುದೃಷ್ಟಿಯೇ ಕಾರಣ, ಕಣ್ಣನ್ನು ಕೆಳದೃಷ್ಟಿಗೆ ಇಳಿಸಿದ್ದರೆ ಅದರ ಕ್ರೂರ ದೃಷ್ಟಿಗೆ ಭಕ್ತರು ಬೀಳುತ್ತಿರಲಿಲ್ಲ ಎಂದರು. ಈ ಘಟನೆ ಜರುಗಿ ಆಗಲೇ ಎಂಬತ್ತು ವರ್ಷಗಳಾಗಿವೆ.

ಈಗ ಸರ್ಕಾರ ಮತ್ತು ಜನಸಮೂಹದ ಎಚ್ಚರಿಕೆಯಿಂದಾಗಿ ಮಹದೇಶ್ವರನ ಬೆಟ್ಟದ ವಾತಾವರಣ ಬದಲಾಗಿದೆ. ಅಂದರೆ ಪ್ರಾಕೃತಿಕ ಇಲ್ಲವೇ ಶೂನ್ಯ ಬಯಲಲ್ಲಿ ನೆಲೆಸಿರುವ ಇನ್ನೂ ಅನೇಕ ಸಂತರ ಆವರಣದಲ್ಲಿ ಸೂಕ್ತ ಅನುಕೂಲಗಳನ್ನು ಏರ್ಪಡಿಸದೇ, ಯಾವುದಾದರೂ ಆಕಸ್ಮಿಕ ಅವಘಡಗಳು ಜರುಗಿಬಿಟ್ಟರೆ ಎಲ್ಲರೂ ಜಿಲ್ಲಾಡಳಿತವನ್ನು, ಪೊಲೀಸರನ್ನು, ಸರ್ಕಾರವನ್ನು ದೂರುತ್ತ ದೂರವಾಗುತ್ತಾರೆ ಅಥವಾ ಅಸಹಾಯಕರಾಗುತ್ತಾರೆ.

ಸೂಕ್ತ ಸಂರಕ್ಷಣೆಯ ವಾತಾವರಣ ಅನೇಕ ಜಾತ್ರೆಯ ಮೇಳಗಳಲ್ಲಿರುವುದಿಲ್ಲ ಎಂಬುದನ್ನು ಗಮನಿಸಬೇಕು. ಜನ ಸಮೂಹದ ಮನಸ್ಸು, ನ್ಯಾಯಾಲಯದ ತೀರ್ಪು ಸರಳವೂ ಅಲ್ಲ, ನೇರವೂ ಅಲ್ಲ, ಪ್ರಾಯೋಗಿಕವೂ ಅಲ್ಲ.

ಗ್ರಾಮ ಜೀವನದ ಸಮಸ್ಯೆ ಅನೇಕ. ಪಂಚಾಯಿತಿ ಕಟ್ಟೆಯಲ್ಲಿ ನ್ಯಾಯವೊಂದು ನಡೆಯುತ್ತಿತ್ತು. ಅಲ್ಲೇ ಮನೆ ಯೊಂದರ ಜಗುಲಿಯ ಮೇಲೆ ಸೊರಗಿ ಸೊಪ್ಪಾದ 30 ವರ್ಷ ಆಜೂಬಾಜಿನ ಹೆಂಗಸು ಗರ್ಭಪಾತ ಮಾಡಿಸಿ ಕೊಂಡು ಆಗಲೋ, ಈಗಲೋ ಎಂಬಂತಿದ್ದಳು. ಆ ವಿಧವೆ ನೆರೆಯೂರಿನ ಪುರುಷನೊಂದಿಗೆ ಸಂಬಂಧ ಬೆಳೆಸಿದ್ದು, ಪಂಚಾಯಿತಿಯ ವಿಷಯವಾಗಿತ್ತು.

ಅದೇ ಗ್ರಾಮದ ಪುರುಷರಿಗೆ ಅವಳ ಮೇಲಿನ ಮೋಹ, ಆಸ್ತಿಯ ಮೇಲಿದ್ದ ಕಣ್ಣು ಗುಟ್ಟಿನ ವಿಷಯವಾಗಿದ್ದಿತು. ಸತ್ಯ ಅಥವಾ ವಾಸ್ತ ವವು ನ್ಯಾಯದ ಮುಖ್ಯ ವಿಷಯವಾಗಿರಲಿಲ್ಲ. ನ್ಯಾಯ ಬಗೆಹರಿಯದೆ ಎರಡೂ ಗ್ರಾಮದವರು ಹೊಡೆದಾಟಕ್ಕೆ ಸಿದ್ಧರಾಗುತ್ತಿದ್ದರು. ಈ ನ್ಯಾಯ ಪಂಚಾಯಿತಿ ಹಾಗಿರಲಿ, ಜಲ್ಲಿಕಟ್ಟುವಿನ ಅಪಾಯಗಳಿರಲಿ, ಕಂಬಳವಿರಲಿ, ಅದನ್ನೆಲ್ಲ ಗೆದ್ದಮೇಲೆ ಪುರುಷರು ಮೀಸೆ ತಿರಿಯುವುದಿರಲಿ, ತಮಿಳುನಾಡಿನ ಒಂದು ಭಾಗದಲ್ಲಿ ಯುವಕರು ಮದುವೆಯಾಗಲು ಕನ್ಯಾಪಿತೃಗಳಿಗೆ ತಾವು ಒಳರೋಗ ಪೀಡಿತರಲ್ಲ ಎಂಬುದನ್ನು ಸಾಬೀತುಗೊಳಿಸಬೇಕಾದುದು ವಿಪರ್ಯಾಸದ ವಿಚಾರ.

ಯಾಕೆಂದರೆ ಆ ಪ್ರದೇಶದಿಂದ ಅಸಂಖ್ಯಾತ ಲಾರಿಗಳು ಭಾರತದಾದ್ಯಂತ ಸರಕು ಹೊತ್ತುಕೊಂಡು ಪ್ರಯಾಣ ಹೊರಟರೆ ವಾಪಸಾಗುವುದು ತದನಂತರ ಮೂರು–ನಾಲ್ಕು ತಿಂಗಳಿಗೆ! ಕರ್ನಾಟಕದಲ್ಲಿಯೂ ಸಣ್ಣಸಣ್ಣ ನಗರದೊತ್ತಿನ ಗ್ರಾಮಗಳ ಕಡೆ ಕೇಳಿ ಬಂದದ್ದು ಇದೇ ಬಗೆಯ ಪುರುಷ ಪರಾಕ್ರಮ ವಿವರಗಳು! 

800 ವರ್ಷಗಳ ಹಿಂದೆಯೇ ಅಲ್ಲಮ, ‘ಊರದ ಚೇಳಿನ ಏರದ ಬೇನೆಯಲ್ಲಿ ಮೂರು ಲೋಕವೆಲ್ಲಾ ನರಳಿತ್ತು’ ಎಂದ. ಅಷ್ಟೇ ಅಲ್ಲ ‘...ಏನೆಂದರಿಯರು ಎಂತೆಂದರಿಯರು, ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ಏನೇನೂ ಕಾಣದೆ ಲಯಕ್ಕೊಳಗಾಗಿ ಹೋದರು ನೋಡಾ ಗುಹೇಶ್ವರಾ...’ ಎಂತಲೂ ಸಾರಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT