ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ನಿರೀಕ್ಷೆ, ನೀರಸ ಬಜೆಟ್ ಡಿಜಿಟಲ್ ಆರ್ಥಿಕತೆಗೆ ಒತ್ತು

Last Updated 1 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಅಧಿಕ ಮೌಲ್ಯದ ನೋಟುಗಳ ರದ್ದತಿ ನಂತರ ಮಂಡಿಸಲಾದ 2017–18ರ ಕೇಂದ್ರ ಬಜೆಟ್ ಬಗ್ಗೆ ಜನರಿಗೆ ಅಪಾರ ನಿರೀಕ್ಷೆಗಳಿದ್ದವು.  ಯಾವುದಾದರೂ ರೀತಿಯ ಪರಿಹಾರ ಕ್ರಮಗಳು ಇರಬಹುದೆಂಬ ನಿರೀಕ್ಷೆ ಜನರದಾಗಿತ್ತು. ಆದರೆ ಏಷ್ಯಾದ ಮೂರನೇ ಅತಿದೊಡ್ಡ ಅರ್ಥ ವ್ಯವಸ್ಥೆ, ಚೇತರಿಕೆ ಹಾದಿಗೆ ಮರಳಲು ಅನಿವಾರ್ಯವಾಗಿದ್ದ  ವ್ಯಾಪಕ ಸ್ವರೂಪದ ಸುಧಾರಣಾ ಕ್ರಮಗಳು ಬಜೆಟ್‌ನಲ್ಲಿ ಇಲ್ಲದೆ ನಿರಾಶೆ ಮೂಡಿಸಿದೆ.

ಯೋಜನೆ ಹಾಗೂ ಯೋಜನೇತರ ವೆಚ್ಚ ರದ್ದು ಮಾಡಿ ರೈಲು ಹಾಗೂ ಕೇಂದ್ರ ಬಜೆಟ್ ವಿಲೀನಗೊಳಿಸಿದ ನಂತರ ಮಂಡನೆಯಾದ ಮೊದಲ ಬಜೆಟ್ ಇದು. ಹಾಗೆಯೇ ಐದು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಂಡನೆಯಾದ ಈ ಬಜೆಟ್‌ನಲ್ಲಿ ಜನಪ್ರಿಯ ಕಾರ್ಯಕ್ರಮಗಳ ಘೋಷಣೆಯೂ ಇಲ್ಲ.

ಆರ್ಥಿಕ ಬೆಳವಣಿಗೆಗೆ ಅದರಲ್ಲೂ ಗ್ರಾಮೀಣ ಆರ್ಥಿಕತೆಗೆ ಹೆಚ್ಚು ಒತ್ತು ನೀಡಿರುವ ಈ ಬಜೆಟ್  ಮಧ್ಯಮ ವರ್ಗಕ್ಕೆ ಒಂದಿಷ್ಟು ಸಮಾಧಾನ ತಂದಿದೆ.  ಮಧ್ಯಮ ವರ್ಗದವರಿಗೆ  ಆದಾಯ ತೆರಿಗೆಯಲ್ಲಿ ಕೆಲಮಟ್ಟಿಗೆ ರಿಯಾಯ್ತಿ ನೀಡಿ ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡಲಾಗಿದೆ. ನಗದುರಹಿತ ವ್ಯವಸ್ಥೆಗೆ ಉತ್ತೇಜನ ನೀಡುವ, ರಾಜಕೀಯ ಪಕ್ಷಗಳ ದೇಣಿಗೆಯಲ್ಲಿ ಪಾರದರ್ಶಕತೆ ತರುವ ಮತ್ತು ತೆರಿಗೆ ಆಡಳಿತದಲ್ಲಿ ಸುಧಾರಣೆ ತರುವ ಉದ್ದೇಶವನ್ನು  ಹೊಂದಲಾಗಿದ್ದರೂ, ಬಹುತೇಕ  ನಿರ್ಧಾರಗಳಲ್ಲಿ  ಹೆಚ್ಚಿನ ಸ್ಪಷ್ಟತೆ ಕಂಡು ಬರದಿರುವುದು ಈ ಬಜೆಟ್‌ನ ಮಿತಿಯಾಗಿದೆ.

ಅರ್ಥ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಇಡಲು ಸಾಧಾರಣ ಮಟ್ಟದ ಸುಧಾರಣಾ ಕ್ರಮಗಳನ್ನಷ್ಟೇ ಜೇಟ್ಲಿ  ಪ್ರಕಟಿಸಿದ್ದಾರೆ. ಕಪ್ಪುಹಣ ಚಲಾವಣೆಗೆ ಕಡಿವಾಣ ಹಾಕುವ ಉದ್ದೇಶವನ್ನು  ಈ ಬಜೆಟ್‌ನಲ್ಲಿ  ಮತ್ತೆ ವ್ಯಕ್ತಪಡಿಸಲಾಗಿದೆ. ಹೀಗಾಗಿಯೇ  ಡಿಜಿಟಲ್ ಆರ್ಥಿಕತೆಯತ್ತ ಚಲಿಸುವುದಕ್ಕೆ ಒತ್ತು ನೀಡಲಾಗಿದೆ.

₹3 ಲಕ್ಷಕ್ಕಿಂತ ಹೆಚ್ಚಿನ  ನಗದು ವಹಿವಾಟಿಗೆ ಇನ್ನು ಮುಂದೆ ಅವಕಾಶವಿರುವುದಿಲ್ಲ.  ಐಆರ್‌ಸಿಟಿಸಿ ಮೂಲಕ  ರೈಲ್ವೆ ಪ್ರಯಾಣಕ್ಕೆ  ಮುಂಗಡ ಕಾಯ್ದಿರಿಸುವ  ಇ– ಟಿಕೆಟ್‌ಗಳಿಗೆ ಸೇವಾ ಶುಲ್ಕ ಇರುವುದಿಲ್ಲ. ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆ ಮಿತಿಯನ್ನು ₹2 ಸಾವಿರಕ್ಕೆ ಮಿತಿಗೊಳಿಸ ಲಾಗಿದೆ. ಆದರೆ, ಇದು ರಾಜಕೀಯ ಪಕ್ಷಗಳ ಹಣಕಾಸು ವಹಿವಾಟಿನಲ್ಲಿ  ಸಂಪೂರ್ಣ ಪಾರದರ್ಶಕತೆ ತರಲು ನೆರವಾಗಲಾರದು.

ರಾಜಕೀಯ ಪಕ್ಷದ ವೆಚ್ಚದ ವಿವರ ಬಹಿರಂಗಪಡಿಸಲು ಅವಕಾಶ ಇಲ್ಲದಿರುವುದರಿಂದ ಇದರ ಯಶಸ್ಸು ಪ್ರಶ್ನಾರ್ಹ. ಆದರೆ  ರಾಜಕೀಯ ಪಕ್ಷಗಳ ದೇಣಿಗೆ ವ್ಯವಸ್ಥೆ ಸ್ವಚ್ಛಗೊಳಿಸಲು ಚುನಾವಣಾ ಬಾಂಡ್‌ ಪರಿಚಯಿಸಿರುವುದು ವಿನೂತನ ಪರಿಕಲ್ಪನೆ. ಹಾಗೆಯೇ ಹಣಕಾಸು ಸುಧಾರಣಾ ಕ್ರಮದ ಅಂಗ ವಾಗಿ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ ರದ್ದುಪಡಿಸಿರುವುದು ದಿಟ್ಟ ನಿರ್ಧಾರ.

ರೈಲ್ವೆ ಪ್ರಯಾಣಿಕರ ಸುರಕ್ಷತೆ ಉದ್ದೇಶಕ್ಕೆ ₹1 ಲಕ್ಷ ಕೋಟಿ ನಿಧಿ ಸ್ಥಾಪನೆ, ಸ್ವಚ್ಛತೆ, ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಜೊತೆಗೆ, ಹಣಕಾಸು ವಲಯದ ಸುಧಾರಣಾ ಕ್ರಮಗಳ ಅಂಗವಾಗಿ, ಸರ್ಕಾರಿ ಸ್ವಾಮ್ಯದ ರೈಲ್ವೆ ಉದ್ಯಮಗಳಾದ
ಐಆರ್‌ಸಿಟಿಸಿ, ಐಆರ್‌ಸಿಒಎನ್‌, ಐಆರ್‌ಎಫ್‌ಸಿಗಳು ಷೇರುಪೇಟೆಯಲ್ಲಿ ವಹಿವಾಟು ನಡೆಸುವುದಕ್ಕೆ ಅವಕಾಶ ಕಲ್ಪಿಸಿರುವುದು  ಸಕಾರಾತ್ಮಕ.

ಮೂಲ ಸೌಕರ್ಯ ವಲಯಕ್ಕೆ ದಾಖಲೆ ಎನ್ನಬಹುದಾದ ₹3.64 ಲಕ್ಷ ಕೋಟಿಗಳನ್ನು ಹಂಚಿಕೆ ಮಾಡಲು ನಿರ್ಧರಿಸಿರುವುದು ಆರ್ಥಿಕತೆ ಮೇಲೆ ದೂರಗಾಮಿ ಪರಿಣಾಮ ಬೀರಲಿದೆ.

ಕಡಿಮೆ ವೆಚ್ಚದ ವಸತಿ ವಲಯಕ್ಕೆ ಮೂಲಸೌಕರ್ಯ ಸ್ಥಾನಮಾನ ನೀಡಿರುವುದು ಮುಖ್ಯವಾದದ್ದು. ಈ ಕುರಿತು ಬಹಳ ದಿನಗಳಿಂದ ಇದ್ದ ಬೇಡಿಕೆ ಈಗ ಈಡೇರಿದೆ. ಈ ಕ್ರಮ ಹೂಡಿಕೆದಾರರಿಗೆ ಆಕರ್ಷಣೀಯವಾಗಲಿದೆ. ಇದರಿಂದಾಗಿ 2020ರೊಳಗೆ ಭಾರತದಾದ್ಯಂತ 2 ಕೋಟಿ ಮನೆಗಳನ್ನು ಒದಗಿಸುವ ಪ್ರಧಾನಿಯವರ ಪ್ರಿಯ  ಯೋಜನೆಗೆ ಒತ್ತು ನೀಡಿದಂತಾಗಿದೆ.

ಈ ವಲಯಕ್ಕೆ ಸಂಪನ್ಮೂಲ ಹಂಚಿಕೆ ಹೆಚ್ಚಲಿದೆ.  ಆದರೆ ಈ ಕಡಿಮೆ ವೆಚ್ಚದ ಮನೆ ಎಂದರೆ ಏನು ಎಂಬುದನ್ನು ಸ್ಪಷ್ಟವಾಗಿ ವಿವರಿಸಬೇಕಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲಿನ ಕಂಪೆನಿ ತೆರಿಗೆಯಲ್ಲಿ ಕಡಿತಗೊಳಿಸಿರುವುದು ಉತ್ತಮ ನಿರ್ಧಾರ. ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್‌ಟಿ) ಸಂಬಂಧಿಸಿದ  ತೆರಿಗೆಗಳ ಬಗ್ಗೆ ಚಕಾರ ಎತ್ತದೆ ಮೌನಕ್ಕೆ ಶರಣಾಗಿರುವುದು ಜೇಟ್ಲಿ ನಡೆ ಬಗ್ಗೆ ಅನುಮಾನ ಮೂಡಿಸುತ್ತದೆ.

ಜುಲೈನಿಂದ ಜಾರಿಗೆ ಬರಲಿರುವ  ಜಿಎಸ್‌ಟಿ  ವ್ಯವಸ್ಥೆಯಲ್ಲಿನ ತೆರಿಗೆ ಹೊರೆ ಬಗ್ಗೆ ಯಾವುದೇ ಮುನ್ಸೂ ಚನೆ ನೀಡಿಲ್ಲ.  ನರೇಗಾ ಯೋಜನೆಗೆ  ₹48,000 ಕೋಟಿಗಳಷ್ಟು ಹಣ ಹಂಚಿಕೆ ಮಾಡ ಲಾಗಿದೆ. ಈ ಯೋಜನೆ ಅಡಿ ಉದ್ಯೋಗಕ್ಕಿರುವ ಬೇಡಿಕೆ ನೋಡಿದರೆ ಇದೂ ಕೂಡ ಕಡಿಮೆಯೇ. ಒಟ್ಟಾರೆ ವೆಚ್ಚ ಬೆಳವಣಿಗೆ ಕೇವಲ ಶೇ 10ರಷ್ಟಿದೆ. ಇದರಿಂದ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ಯಾವುದೇ ನಾಟಕೀಯ ಏರಿಕೆ ಸಾಧ್ಯವಾಗುವುದು ಅಸಾಧ್ಯ.

ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 3.2ರಷ್ಟಕ್ಕೆ ಮಿತಿಗೊಳಿಸಲು ಹೊರಟಿರುವ ಜೇಟ್ಲಿ ಅವರು ವಿತ್ತೀಯ ನಿರ್ವಹಣೆ ಮತ್ತು ಸರ್ಕಾರಿ ವೆಚ್ಚದ ಮಧ್ಯೆ ಸಮತೋಲನ ಸಾಧಿಸಲು ಹೆಣಗಿರುವುದು ವೇದ್ಯವಾಗುತ್ತದೆ.

ನೋಟು ರದ್ದತಿಯಿಂದ ತತ್ತರಿಸಿರುವ ಅರ್ಥ ವ್ಯವಸ್ಥೆ ಹಾಗೂ ಜಾಗತಿಕ ಅನಿಶ್ಚಿತತೆಯಂತಹ ತಮ್ಮೆದುರಿಗಿನ ಬಹುದೊಡ್ಡ ಸವಾಲುಗಳನ್ನು ಮೆಟ್ಟಿನಿಲ್ಲಲು ಜೇಟ್ಲಿ ಭಾರಿ ಕಸರತ್ತು ಮಾಡಿದ್ದರೂ ಜನಸಾಮಾನ್ಯರು ಮತ್ತು ತೆರಿಗೆದಾರರಿಗೆ ಹಿತಾನುಭವವೇನೂ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT