ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಬಂಧ ಪಟ್ಟಿಯಲ್ಲಿ ಉಗ್ರ ಹಫೀಜ್

ದೇಶ ತೊರೆಯದಿರಲು ಸಯೀದ್‌ ಸೇರಿ 38 ಮಂದಿ ಸಹಚರರಿಗೆ ಸೂಚನೆ
Last Updated 1 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಗೃಹಬಂಧನದಲ್ಲಿರುವ ಜಮಾತ್‌ ಉದ್ ದವಾ ಮುಖ್ಯಸ್ಥ ಹಾಗೂ ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ಮತ್ತು ಈತನ ನಾಲ್ವರು ಸಹಚರರನ್ನು ದೇಶ ತೊರೆಯದಂತೆ ನಿರ್ಬಂಧ ಹೇರಿರುವವವರ ಪಟ್ಟಿಯಲ್ಲಿ ಸೇರಿಸಲಾಗಿದೆ.

ಎಲ್ಲ ಪ್ರಾಂತೀಯ ಸರ್ಕಾರ ಮತ್ತು ಫೆಡರಲ್‌ ತನಿಖಾ ಸಂಸ್ಥೆಗಳಿಗೆ ಪತ್ರ ಬರೆದಿರುವ ಒಳಾಡಳಿತ ಸಚಿವಾಲಯ, 38 ಜನರ ಹೆಸರನ್ನು ಸೇರಿಸಿದೆ. ಈ ಎಲ್ಲರೂ ದೇಶ ಬಿಟ್ಟು ಹೋಗದಂತೆ ನಿರ್ಬಂಧ ಹೇರಲಾಗಿದೆ. ಇವರೆಲ್ಲರೂ ಜೆಯುಡಿ ಮತ್ತು ಲಷ್ಕರ್‌ ಎ ತಯಬಾ ಉಗ್ರ ಸಂಘಟನೆಗಳಿಗೆ ಸೇರಿದವರಾಗಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267ರ ನಿರ್ಬಂಧಗಳ ಪ್ರಕಾರ ಫಲಾ ಎ ಇನ್ಸಾನಿಯೇತ್‌ (ಎಫ್‌ಐಎಫ್‌) ಮತ್ತು ಜಮಾತ್ ಉದ್‌ ದವಾ ಸಂಘಟನೆ ಗಳನ್ನೂ ಪಟ್ಟಿಯಲ್ಲಿ ಸೇರಿಸಲಾಗಿದೆ.

ಬಲವಾದ ಸಾಕ್ಷ್ಯ ತೋರಿಸಲಿ: ಹಫೀಜ್‌ ಸಯೀದ್ ವಿರುದ್ಧ ಭಾರತ ಬಲವಾದ ಸಾಕ್ಷ್ಯ ತೋರಿಸಲಿ ಎಂದು ಪಾಕಿಸ್ತಾನ ಭಾರತಕ್ಕೆ ತಿರುಗೇಟು ನೀಡಿದೆ.
‘ಮುಂಬೈ ದಾಳಿಯ ಸಂಚುಕೋರನನ್ನು ಬಂಧಿಸುವಲ್ಲಿ ಪಾಕಿಸ್ತಾನ ಪ್ರಾಮಾಣಿಕ ತೋರಿಸಲಿ’ ಎಂದು ಭಾರತ  ಹೇಳಿದ್ದಕ್ಕೆ ಪಾಕ್‌  ಪ್ರತಿಕ್ರಿಯೆ ನೀಡಿದೆ.

‘ಹಫೀಜ್‌ ವಿರುದ್ಧ ಕ್ರಮ ಕೈಗೊಂಡಿದ್ದಕ್ಕೆ ಪಾಕಿಸ್ತಾನಕ್ಕೆ ಭಾರತ ಯಾವುದೇ ಪ್ರಮಾಣಪತ್ರ ನೀಡಬೇಕಾಗಿಲ್ಲ’ ಎಂದು ಒಳಾಡಳಿತ ಸಚಿವಾಲಯದ ವಕ್ತಾರ ರೊಬ್ಬರು ಹೇಳಿದ್ದಾರೆ.

ಶೀಘ್ರವೇ ಎಫ್‌ಐಆರ್ (ಲಾಹೋರ್‌ ವರದಿ): ‘ಜೆಯುಡಿ  ಮುಖ್ಯಸ್ಥ ಹಫೀಜ್ ಸಯೀದ್‌ ವಿರುದ್ಧ ಸದ್ಯದಲ್ಲೇ ಎಫ್‌ಐಆರ್‌ ದಾಖಲಿಸಲಾಗುವುದು’ ಎಂದು ಪಾಕಿಸ್ತಾನದ ವಾಣಿಜ್ಯ ಸಚಿವ ಖುರ್ರಂ ದಸ್ತಗೀರ್‌ ಹೇಳಿದ್ದಾರೆ.

ಮುಂಬೈ ದಾಳಿಯ ಸಂಚುಕೋರನಾದ ಸಯೀದ್‌ ವಿರುದ್ಧ ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿಲ್ಲ. ‘ಹಫೀಜ್‌ ಸಯೀದ್‌ ಸದ್ಯ ಗೃಹಬಂಧನದಲ್ಲಿದ್ದು, ಆತನ ವಿರುದ್ಧ   ಎಫ್‌ಐಆರ್ ದಾಖಲಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ. 

ಯಾವ ಪ್ರಕರಣಕ್ಕೆ ಸಂಬಂಧಿಸಿ  ಹಫೀಜ್‌ನನ್ನು ಬಂಧಿಸಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ದಸ್ತಗೀರ್‌, ‘ಕೆಲವೇ ದಿನಗಳಲ್ಲಿ ಅದು ಗೊತ್ತಾಗಲಿದೆ’ ಎಂದು ಹೇಳಿದ್ದಾರೆ. 

‘ಮುಂದಿನ ದಿನಗಳಲ್ಲಿ ಜೆಯುಡಿ ಮತ್ತು  ಫಾಲಾಹಿ ಇನ್ಸಾನಿಯತ್ (ಎಫ್‌ಐಎಫ್‌) ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗುವುದು’ ಎಂದು ಪಂಜಾಬ್‌   ಪ್ರಾಂತ್ಯದ ಕಾನೂನು ಸಚಿವ ರಾಣಾ ಸನಾವುಲ್ಲಾ ತಿಳಿಸಿದ್ದಾರೆ.

‘ಈ ಸಂಘಟನೆಗಳ ಚಟುವಟಿಕೆಗಳ ಮೇಲೆ ಸರ್ಕಾರ ನಿಗಾ ಇರಿಸಿದ್ದು, ಭಯೋತ್ಪಾದನೆ ನಿಗ್ರಹ ಕಾಯ್ದೆ ಅನ್ವಯ  ಇವುಗಳ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗುವುದು’ ಎಂದು ಅವರು ಹೇಳಿದ್ದಾರೆ.

‘ರಾಷ್ಟ್ರದ ಹಿತಾಸಕ್ತಿಯ ವಿಷಯದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಕಾಶ್ಮೀರ ವಿಷಯದಲ್ಲಿ ನಮ್ಮ ನಿಲುವು ಜೆಯುಡಿಗಿಂತ ಭಿನ್ನವಾಗಿದೆ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಕ್ರಮ ಅಗತ್ಯ: ‘ಎಲ್ಲಾ ಭಯೋತ್ಪಾದಕ ಸಂಘಟನೆಗಳ  ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನಕ್ಕೆ  ಗೆಲುವು ಲಭಿಸದು’ ಎಂದು  ಪಾಕಿಸ್ತಾನದ ಪತ್ರಿಕೆಯೊಂದು ಹಫೀಜ್‌ ಬಂಧನಕ್ಕೆ ಸಂಬಂಧಿಸಿದಂತೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT