ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕ ಕಬಡ್ಡಿ ತಾಯ್ನಾಡು

ರಾಣೆಬೆನ್ನೂರಿನಲ್ಲಿ ಜಿಲ್ಲಾ ಮಟ್ಟದ ಪ್ರೊ ಕಬಡ್ಡಿ; ಯುಮುಂಬಾ ಸಹಾಯಕ ಕೋಚ್ ರವಿ ಶೆಟ್ಟಿ
Last Updated 2 ಫೆಬ್ರುವರಿ 2017, 5:56 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ಉತ್ತರ ಕರ್ನಾಟಕ ಕಬಡ್ಡಿ ತಾಯ್ನಾಡು. ಆದರೆ, ಪ್ರತಿಭೆಗಳು ಮುಂದೆ ಹೋಗುತ್ತಿಲ್ಲ, ಇಲ್ಲಿನ ಪ್ರತಿಭೆಗಳಿಗೆ ರಾಷ್ಟ್ರಮಟ್ಟದಲ್ಲಿ ಅವಕಾಶ ದೊರೆಯದೇ ಇರುವುದು ವಿಷಾದಕರ ಸಂಗತಿ’ ಎಂದು ಯುಮುಂಬಾ ಸಹಾಯಕ ಕೋಚ್ ರವಿ ಶೆಟ್ಟಿ ನುಡಿದರು.

ಇಲ್ಲಿಯ ನಗರಸಭೆ ಕ್ರಿಡಾಂಗಣದಲ್ಲಿ ಚೌಡೇಶ್ವರಿ ಜಾತ್ರೆ ಅಂಗವಾಗಿ ಹಿಂದೂಸ್ತಾನ್ ಸ್ಪೋರ್ಟ್ಸ್‌ ಕ್ಲಬ್ ಹಾಗೂ ಜಿಲ್ಲಾ ಅಮೆಚೂರ ಸಂಸ್ಥೆ ಆಶ್ರಯದಲ್ಲಿ ಬುಧವಾರ ಸಂಜೆ ನಡೆದ ಜಿಲ್ಲಾ ಮಟ್ಟದ ಪ್ರೊ ಕಬಡ್ಡಿ ಲೀಗ್‌ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತ ನಾಡಿದರು.

‘ಗ್ರಾಮೀಣ ಕ್ರೀಡೆ, ಬಡವರ ಆಟವಾದ ಕಬಡ್ಡಿಗೆ ಸೂಕ್ತ ಪ್ರೋತ್ಸಾಹ ದೊರೆಯುತ್ತಿಲ್ಲ. ಸರ್ಕಾರ ಹಾಗೂ ಕ್ರೀಡಾ ಇಲಾಖೆ ಕಬಡ್ಡಿ ಕ್ರೀಡಾಪಟುಗಳನ್ನು ಮರೆತಿದೆ. ಕ್ರೀಡಾ ಪಟುಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರ ಮುಂದಾಗಬೇಕು ಎಂದರು.

ಕ್ರೀಡಾಪಟುಗಳಿಗೆ ತರಬೇತಿ ನೀಡುವ ಕೇಂದ್ರಗಳು ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಆಗಬೇಕಾಗಿದೆ. ಈಚೆಗೆ ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಡೆಯುವ ಕಬಡ್ಡಿ ಪಂದ್ಯಾವಳಿ ಇಂದು ರಾಣೆಬೆನ್ನೂರಿನಲ್ಲಿ ನಡೆಯುತ್ತಿರುವುದು ಸಂತೋಷ ತಂದಿದೆ ಎಂದರು.

ನಗರದ ದೊಡ್ಡ ಪೇಟೆ ವಿರಕ್ತಮಠದ ಗುರುಬಸವ ಸ್ವಾಮೀಜಿ ಮಾತನಾಡಿ, ಪ್ರಾಥಮಿಕ ಹಂತದಲ್ಲಿಯೇ ಕ್ರೀಡಾಭಿಮಾನ ಹೊಂದಬೇಕು. ಕಬಡ್ಡಿ, ಕುಸ್ತಿ, ಕೊಕ್ಕೊ ಆಟಗಳಿಂದ ಯುವಕರಲ್ಲಿ ಹುಮ್ಮಸ್ಸು ಮೂಡಿ ದೇಹ ಸದೃಢವಾಗಲು ಸಾಧ್ಯವಿದೆ. ಯುವಕರು ಕೆಟ್ಟ ಹವ್ಯಾಸಗಳಿಗೆ ಬಲಿಯಾಗದೇ ಉತ್ತಮ ಕ್ರೀಡಾಪಟುಗಳಾಗಿ ಹೊರ ಹೊಮ್ಮಬೇಕು. ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಆಡುವ ಕಬಡ್ಡಿ. ಒತ್ತಡದ ಬದುಕಿನಿಂದ ಪಾರಾಗಲು ಕ್ರೀಡೆ ಅವಶ್ಯಕ ಎಂದರು. ಹಿಂದೂಸ್ತಾನ್ ಸ್ಪೋರ್ಟ್ಸ್‌ ಕ್ಲಬ್ ಅಧ್ಯಕ್ಷ ಆನಂದ ಹುಲಬನ್ನಿ ಅಧ್ಯಕ್ಷತೆ ವಹಿಸಿದ್ದರು.

ಕೊಣಂದೂರು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೋಟೆ ಮಸೀದಿಯ ಮೌಲಾನಾ ಸಯ್ಯದ್ ಯಾಕೂಬ್, ಬೀರಲಿಂಗೇಶ್ವರ ದೇವಸ್ಥಾನದ ಅರ್ಚಕ ಭರಮಪ್ಪ ಪೂಜಾರ, ಗುಡ್‌ಶೆಪಡ್ ಚರ್ಚ್‌ನ ಸುರೇಶ ಕುಡಪಲಿ, ತಿರ್ಪುಗಾರರ ಮಂಡಳಿಯ ಅಧ್ಯಕ್ಷ ಸಿ.ಜಿ. ಚಕ್ರಸಾಲಿ, ಮಹಾದೇವಪ್ಪ ಖನ್ನೂರು, ಬಿಎಂಪಿ ಮಾಜಿ ಉಪಮೇಯರ್ ಆರ್.ಶಂಕರ್, ಭಾರತಿ ಜಂಬಗಿ, ಡಾ.ಪ್ರವೀಣ ಖನ್ನೂರು,  ಮತ್ತಿತರರು ಇದ್ದರು.

ಎ.ಟಿ. ಪೀಠದ, ಅನಿಲ ಹೊಸಮನಿ, ಸಿದ್ದಯ್ಯ, ಎಂ.ಆರ್‌.ಕೋಡಿಹಳ್ಳಿ, ಕುಮಾರಸ್ವಾಮಿ, ಶ್ರೀಧರ ನಾಯ್ಡು ಅವರು ನಿರ್ಣಾಯಕರಾಗಿ ಆಗಮಿಸಿದ್ದರು. ತಿಪ್ಪೇಶ ಲೆಕ್ಕಿಕೋನಿ ರೈತಗೀತೆ ಹಾಡಿದರು. ಎಚ್.ಎಸ್. ದೊಡ್ಡಬಿಲ್ಲ ಸ್ವಾಗತಿಸಿದರು. ಅಮೆಚೂರ್ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಲ್ಲನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.  ಆರ್.ಜಿ. ಮೇಟಿ ಹಾಗೂ ಗುಡ್ಡಪ್ಪ ಮಾಳಗುಡ್ಡಪ್ಪನವರ  ನಿರೂಪಿಸಿದರು. ಮೃತ್ಯುಂಜಯ ಗುದಿಗೇರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT