ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7ರಿಂದ 28ರವರೆಗೆ ಮೀಸಲ್ಸ್ ರುಬೆಲ್ಲಾ ಲಸಿಕೆ

ದಡಾರ–ರುಬೆಲ್ಲಾ ಲಸಿಕಾ ಅಭಿಯಾನದ ಸಭೆಯಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ್‌ರಿಂದ ಮಾಹಿತಿ ಪ್ರತಿ ಬಿಡುಗಡೆ
Last Updated 2 ಫೆಬ್ರುವರಿ 2017, 6:20 IST
ಅಕ್ಷರ ಗಾತ್ರ
ಚಿತ್ರದುರ್ಗ: ‘ಒಂಬತ್ತು ವಿವಿಧ ರೋಗಗಳ ವಿರುದ್ಧ 9 ತಿಂಗಳಿನಿಂದ 15 ವರ್ಷದ ಮಕ್ಕಳಿಗೆ ಫೆ. 7ರಿಂದ 28 ರವರೆಗೆ ಮೀಸಲ್ಸ್ ರುಬೆಲ್ಲಾ ಲಸಿಕೆ ಹಾಕಲಾಗುತ್ತದೆ’ ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ್ ತಿಳಿಸಿದರು.
 
ದಡಾರ–ರುಬೆಲ್ಲಾ ಲಸಿಕೆ ಕುರಿತು ತಾಲ್ಲೂಕು ಕಚೇರಿಯಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 
‘ಈ ಹಿಂದೆ ನೀಡುತ್ತಿದ್ದ ಕೆಲ ಲಸಿಕೆಗಳು ಹನಿಯ ರೂಪದಲ್ಲಿ  ಇರುತ್ತಿದ್ದವು. ಆದರೆ, ಈಗ ಇದನ್ನು ಚುಚ್ಚು ಮದ್ದು  (ಇಂಜೆಕ್ಷನ್) ಮೂಲಕ ನೀಡಲಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದನ್ನು ನೀಡಲಾಗುತ್ತಿದೆ. ಅಲ್ಲದೆ, ಇದು ಹೆಚ್ಚುವರಿ ಲಸಿಕೆಯಾಗಿದೆ. ಪೋಷಕರು ಮಕ್ಕಳಿಗೆ ಹಿಂದೆ ಯಾವುದೇ ಲಸಿಕೆ ಹಾಕಿಸಿದ್ದರೂ  ಇದನ್ನು ಹಾಕಿಸಬೇಕು’ ಎಂದು ಸಲಹೆ ಕೊಟ್ಟರು.
 
‘ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಬೇಕು. ಅಧಿಕಾರಿಗಳು ಪ್ರತಿ ಶಾಲೆಗೆ ತೆರಳಿ ಮಕ್ಕಳಿಗೆ ಲಸಿಕೆ ಹಾಕಲಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೂಡ ಈ ಲಸಿಕೆ ಹಾಕಲಾಗುತ್ತದೆ’ ಎಂದರು. 
 
‘ದಡಾರ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು ಕೆಮ್ಮು, ಸೀನುವುದರ ಮೂಲಕ ಇತರರಿಗೆ ಹರಡುತ್ತದೆ. ದಡಾರ ಮಗುವನ್ನು ನ್ಯುಮೋನಿಯಾ, ಅತಿಸಾರ ಭೇದಿ, ಮೆದುಳಿನ ಸೋಂಕಿನಂತಹ ಕಾಯಿಲೆಗಳಿಗೆ ತುತ್ತಾಗಿಸಬಹುದು. ತುರಿಕೆ, ವಿಪರೀತ ಜ್ವರ, ಕೆಮ್ಮು, ನೆಗಡಿ ಮತ್ತು ಕೆಂಗಣ್ಣು ದಡಾರದ ಮುಖ್ಯ ಲಕ್ಷಣಗಳಾಗಿವೆ’ ಎಂದರು. 
 
‘ರುಬೆಲ್ಲಾ ರೋಗವು ಗರ್ಭಿಣಿ ಯರಲ್ಲಿ ಕಾಣಿಸಿಕೊಂಡಾಗ ಹುಟ್ಟುವ ಮಕ್ಕಳಲ್ಲಿ ಗ್ಲುಕೋಮಾ, ಕಣ್ಣಿನಪೊರೆ, ಶ್ರವಣದೋಷ, ಮೆದುಳು ಜ್ವರ, ಮಾನಸಿಕ ಅಸ್ವಾಸ್ಥ್ಯ, ಬುದ್ಧಿಮಾಂದ್ಯ ಸ್ಥಿತಿ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಈಡಾಗಬಹುದು. ರುಬೆಲ್ಲಾ ವೈರಸ್ ಗರ್ಭಪಾತಕ್ಕೂ  ಕಾರಣ ಆಗಬಹುದು’ ಎಂದು ತಿಳಿಸಿದರು. 
 
‘ದಡಾರ ಮತ್ತು ರುಬೆಲ್ಲಾ ವಿರುದ್ಧ ಲಸಿಕೆ ಹಾಕುವುದರಿಂದ ಇವೆಲ್ಲಾ ಕಾಯಿಲೆಗಳಿಂದ ಮುಕ್ತಿ ಪಡೆಯ ಬಹುದಾಗಿದೆ. ಆದ್ದರಿಂದ ಇದನ್ನೊಂದು ಆಂದೋಲನವನ್ನಾಗಿ ಮಾಡುವ ಮೂಲಕ ಇಂತಹ ಕಾಯಿಲೆ ಗಳು ಬಾರದ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆಯನ್ನು ಎಲ್ಲಾ ಮಕ್ಕಳಿಗೆ ಹಾಕಿಸಬೇಕಾಗಿದೆ. ಆದ್ದರಿಂದ ಎಲ್ಲಾ ಶಾಲೆ, ಅಂಗನವಾಡಿಗಳಲ್ಲಿ ಲಸಿಕೆಯ ಚುಚ್ಚು ಮದ್ದನ್ನು ಫೆ.28ರವರೆಗೆ ಹಾಕಲಾಗುತ್ತಿದೆ’ ಎಂದರು.
 
ಆರೋಗ್ಯ ಇಲಾಖೆ ಸೇರಿದಂತೆ ಸ್ಥಳೀಯ ಸಂಘ, ಸಂಸ್ಥೆಗಳು, ಗ್ರಾಮ ಪಂಚಾಯ್ತಿಗಳು, ರೋಟರಿ, ಲಯನ್ಸ್ ಕ್ಲಬ್‌ನವರು ಇದರಲ್ಲಿ ಪಾಲ್ಗೊಳ್ಳ ಬೇಕಾಗಿದೆ. ಸಹಕಾರ ಸಂಘಗಳು ಸೇರಿದಂತೆ ಎಲ್ಲಾ ವಿದ್ಯಾಸಂಸ್ಥೆಗಳು ಸಹ ಇದಕ್ಕೆ ಶ್ರಮಿಸಬೇಕಾಗಿದೆ. ಶಾಲೆಯಲ್ಲಿ ಲಸಿಕೆ ಹಾಕಲು ಪ್ರತ್ಯೇಕವಾದ ಕೊಠಡಿ  ವ್ಯವಸ್ಥೆ ಮಾಡಿಕೊಂಡು ಮಕ್ಕಳಿಗೆ ಯಾವುದೇ ತೊಂದರೆ ಯಾಗ ದಂತೆ ಲಸಿಕೆ ಹಾಕಬೇಕು ಎಂದು ಸೂಚಿಸಿದರು. 
 
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಫಾಲಾಕ್ಷ, ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್‌ರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕಿನ ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು. 
 
**
ತಾಲ್ಲೂಕಿನಲ್ಲಿ 1,11,391 ಮಕ್ಕಳಿಗೆ ಎಂಆರ್ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಯಾವ ಮಗುವೂ ಇದರಿಂದ ಹೊರಗುಳಿಯದಂತೆ ಅಧಿಕಾರಿಗಳು ಎಚ್ಚರವಹಿಸಬೇಕು.
– ಮಲ್ಲಿಕಾರ್ಜುನ್, ತಹಶೀಲ್ದಾರ್

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT