ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟ ಕಂಪ್ಲೆಂಟ್ ಕಸದ ಬುಟ್ಟಿಗೆ ಎಸೆದರು!

ಪುನಾ ದೂರು ನೀಡುವಂತೆ ದೂರುದಾರರಿಗೆ ದುಂಬಾಲು ಬಿದ್ದ ಅಧಿಕಾರಿಗಳು
Last Updated 2 ಫೆಬ್ರುವರಿ 2017, 6:44 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸರಹಳ್ಳಿಯಲ್ಲಿರುವ ತೋಟ ಗಾರಿಕೆ ಇಲಾಖೆಯ ಗೇರು ಹಣ್ಣಿನ ತೋಟಗಾರಿಕೆ ಕ್ಷೇತ್ರದಲ್ಲಿ ಹಾಡುಹಗಲೇ ರಾಜಾರೋಷವಾಗಿ ಮರಗಳನ್ನು ಕತ್ತರಿಸಿ ಹಾಕಿದ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಆರೋಪಿಗಳ ರಕ್ಷಣೆ ನಿಂತು, ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದಂತೆ 28 ದಿನಗಳ ಬಳಿಕ ಎಚ್ಚೆತ್ತುಕೊಂಡ ಸ್ಥಳೀಯ ಅಧಿಕಾರಿಗಳು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ಮುಂದಾಗಿದ್ದಾರೆ. 
 
ಈ ಪ್ರಕರಣ ಕುರಿತಂತೆ ‘ಪ್ರಜಾವಾಣಿ’ ಬುಧವಾರದ ಸಂಚಿಕೆಯಲ್ಲಿ  ‘ಪ್ರಕರಣ ಮುಚ್ಚಿ ಹಾಕಲು ಪೊಲೀಸರ ಯತ್ನ?’ ಶೀರ್ಷಿಕೆಯಡಿ ಪ್ರಕಟವಾದ ವರದಿ ಗಮನಿಸಿದ ಜಿಲ್ಲಾ ಪ್ರಭಾರ ಎಸ್ಪಿ ಬಿ.ಎಸ್.ಲೋಕೇಶ್‌ಕುಮಾರ್‌ ಅವರು ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಎಸ್‌ಐ ಪ್ರದೀಪ್ ಪೂಜಾರಿ ಅವರಿಗೆ ಕರೆ ಮಾಡಿ ಕೂಡಲೇ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ವರದಿ ನೀಡುವಂತೆ ತಾಕೀತು ಮಾಡಿದ್ದರು ಎಂದು ತಿಳಿದು ಬಂದಿದೆ. 
 
ಆ ಬಳಿಕವಷ್ಟೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸ್ಥಳೀಯ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಗ್ರಾಮಾಂತರ ಠಾಣೆಯಲ್ಲಿ ತೋಟಗಾರಿಕೆ ಇಲಾಖೆಯ (ರಾಜ್ಯವಲಯ) ಸಹಾಯಕ ನಿರ್ದೇಶಕರು ನೀಡಿದ ದೂರಿನ ಪ್ರತಿ ಹುಡುಕಲು ಆರಂಭಿಸಿದವರಿಗೆ ದೂರಿ ಪ್ರತಿ ಪತ್ತೆಯಾಗಿಲ್ಲ.
 
ಹೀಗಾಗಿ ಪುನಃ ದೂರು ನೀಡಲು ಬರುವಂತೆ ಎಸ್‌ಐ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಕೋರಿದ್ದಾರೆ. ಅವರು ಬೆಂಗಳೂರಿಗೆ ಹೋದ ಕಾರಣ ಚಿಕ್ಕದಾಸರಹಳ್ಳಿಯ ಕಚೇರಿಯಲ್ಲಿರುವ ಕೆಳ ಹಂತದ ಅಧಿಕಾರಿಗಳನ್ನು ಬುಧವಾರ ಸಂಜೆ ವೇಳೆಗೆ ಠಾಣೆಗೆ ಕರೆಯಿಸಿಕೊಂಡಿದ್ದಾರೆ. ಆದರೆ ಆ ಅಧಿಕಾರಿಗಳು ದೂರು ನೀಡಲು ಒಪ್ಪಿಲ್ಲ ಎಂದು ಮೂಲಗಳು ತಿಳಿಸಿವೆ. 
 
ದೂರು ಕೊಟ್ಟವರ ದೂರೇನು?: ‘ಜನವರಿ 4 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಶಿಡ್ಲಘಟ್ಟದ ನಿವಾಸಿ ರಾಮಚಂದ್ರಪ್ಪ ಅವರು ಹತ್ತು ಜನರ ಗುಂಪಿನ ವಿರುದ್ಧ ತೋಟಗಾರಿಕೆ ಇಲಾಖೆಯ (ರಾಜ್ಯ ವಲಯ) ಸಹಾಯಕ ನಿರ್ದೇಶಕ ರವಿಬಾಬು ಅವರು ದೂರ ನೀಡಲು ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಿಂದ ಹಿಡಿದು ಜಿಲ್ಲಾಧಿಕಾರಿವರೆಗೆ  ಅಲೆದಿದ್ದಾರೆ. ಈ ವೇಳೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಸಿಬ್ಬಂದಿ ರವಿಬಾಬು ಅವರಿಂದ ದೂರಿನ ಪ್ರತಿ ಪಡೆದ ಸಿಬ್ಬಂದಿ ಮೇಲಾಧಿಕಾರಿ ಸೂಚನೆ ಇಲ್ಲದೆ ಎಫ್‌ಐಆರ್‌ ದಾಖಲಿಸುವುದಿಲ್ಲ ಎಂದು ಹೇಳಿ, ಸ್ವೀಕೃತಿಪತ್ರವನ್ನು ಕೂಡ ನೀಡದೆ ಅವರನ್ನು ವಾಪಸ್‌ ಕಳುಹಿಸಿದ್ದಾರೆ. 
 
ಇದೀಗ ಆ ಠಾಣೆಯಲ್ಲಿ ರವಿಬಾಬು ಅವರು ನೀಡಿದ ದೂರಿನ ಪ್ರತಿಯೇ ಕಾಣೆಯಾಗಿದೆ. 
 
**
ದೂರು ನೀಡಲು ನಿರಾಕರಣೆ
ಪ್ರಾಣ ಬೆದರಿಕೆ ಒಡ್ಡಿ ಮರ ಕಡಿದವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಫೋಟೊ, ವಿಡಿಯೊ ದಾಖಲೆ ಸಮೇತ ನಾಲ್ಕಾರು ಕಚೇರಿ ಅಲೆದಾಡಿ ಬೇಸತ್ತು, ರೋಸಿ ಹೋಗಿರುವ ಸಹಾಯಕ ನಿರ್ದೇಶಕ ರವಿಬಾಬು ಅವರು ಇದೀಗ ಹೊಸದಾಗಿ ದೂರು ನೀಡಲು ಒಪ್ಪುತ್ತಿಲ್ಲ. ಈ ಹಿಂದೆ ನೀಡಿರುವ ದೂರನ್ನೇ ಆಧಾರವಾಗಿಟ್ಟುಕೊಂಡು ಎಫ್‌ಐಆರ್‌ ದಾಖಲಿಸಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ಪೊಲೀಸರು ಹೊಸದಾಗಿ ದೂರು ನೀಡಿ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ. 
 
**
ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರಿನ ಪ್ರತಿ ಇಲ್ಲಾ ಅನ್ನಿಸುತ್ತದೆ. ಹೊಸದಾಗಿ ದೂರು ನೀಡಲಿ. ಫ್‌ಐಆರ್‌ ದಾಖಲಿಸಿ, ಕ್ರಮ ಕೈಗೊಳ್ಳುತ್ತೇವೆ.
-ಬಿ.ಎಸ್.ಲೋಕೇಶ್‌ಕುಮಾರ್‌, ಜಿಲ್ಲಾ ಪ್ರಭಾರ ಎಸ್ಪಿ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT