ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ:7ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು

ಗಡಿನಾಡಿನಲ್ಲಿ ಕನ್ನಡ ನುಡಿ ಜಾತ್ರೆಯ ಸಂಭ್ರಮ, ಎಲ್ಲೆಡೆ ಹಬ್ಬದ ವಾತಾವರಣ
Last Updated 2 ಫೆಬ್ರುವರಿ 2017, 7:43 IST
ಅಕ್ಷರ ಗಾತ್ರ
ಚಿಂಚೋಳಿ: ಕಲಬುರ್ಗಿ ಜಿಲ್ಲೆಯ ಹಸಿರು ನಾಡು ಎಂದೇ ಕರೆಸಿಕೊಳ್ಳುವ ಮಿನಿ ಮಲೆನಾಡಿನಲ್ಲಿ ಈಗ ಅಕ್ಷರ ಜಾತ್ರೆ ಸಂಭ್ರಮ. ಭಾಷಾ ವೈವಿಧ್ಯತೆಯ ನೆಲದಲ್ಲಿ ನುಡಿ ಜಾತ್ರೆಗಾಗಿ ಚಿಂಚೋಳಿ ಪಟ್ಟಣ ಮದುವಣಗಿತ್ತಿಯಂತೆ ಸಜ್ಜಾ ಗಿದೆ. 7ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನ ಗುರುವಾರ (ಫೆ.2) ನಡೆಯಲಿದೆ. 
 
ನೆರೆಯ ತೆಲಂಗಾಣದ ಗಡಿಗೆ ಹೊಂದಿಕೊಂಡ ಚಿಂಚೋಳಿ ತಾಲ್ಲೂಕಿನಲ್ಲಿ ಕನ್ನಡ ಭಾಷಿಕರೇ ಹೆಚ್ಚಿದ್ದಾರೆ. ಕನ್ನಡ, ತೆಲುಗು, ಹಿಂದಿ, ಉರ್ದು ಮತ್ತು ಲಂಬಾಣಿ ಭಾಷಿಕರು ಇರುವ ಕಾರಣ ಇದು ಪಂಚಭಾಷೆ ನೆಲೆಯಾಗಿದೆ. 
 
ಚಿಂಚೋಳಿ ವನ್ಯಜೀವಿ ಧಾಮ, ಚಿಂಚೋಳಿ ಪಾಪನಾಶ ಪಂಚಲಿಂಗೇಶ್ವರ ಬುಗ್ಗೆ, ಕೊರವಿ ಕೊರವಂಜೇಶ್ವರಿ ದೇವಿ ಯ ಬಾವಿ, ಮೋಘಾ ರಾಮಲಿಂಗೇಶ್ವರ ದೇವಾಲಯ, ಚಂದ್ರಂಪಳ್ಳಿ, ನಾಗರಾಳ ಜಲಾಶಯ, ಎತ್ತಿಪೋತೆ ಹಾಗೂ ಮಾಣಿಕಪುರ ಜಲಪಾತಗಳು, ಕೆರೆ ಕುಂಟೆ, ದೇವಾಲಯ ಮತ್ತು ಕೋಟೆ ಕೊತ್ತಲುಗಳಿಂದ ಖ್ಯಾತಿ ಪಡೆದ ಚಿಂಚೋಳಿ ತಾಲ್ಲೂಕಿನಲ್ಲಿ 25 ವರ್ಷ ಗಳಲ್ಲಿ ವಿಭಿನ್ನವಾಗಿ ಸಮ್ಮೇಳನಗಳು ನಡೆದಿವೆ. 
 
ಮಹಾ ಕವಿ ಕರಿಬಸವಾರ್ಯರು, ಭಕ್ತಾವರ, ಕೋಡ್ಲಿ ಕಂಟೆಪ್ಪ ಮಾಸ್ತರ್‌, ಕೆರೋಳ್ಳಿ ಗುರುನಾಥರೆಡ್ಡಿ, ಹಣಮಂತ ರಾವ್‌ ರುದ್ನೂರು ಅವರು ವಾಗ್ದೇವಿ ಮುಡಿಗೆ ಹಲವು ಕೃತಿಗಳನ್ನು ಅರ್ಪಿಸಿ ಇಹಲೋಕ ತ್ಯಜಿಸಿದರೂ ಸಾಹಿತ್ಯ ಕೃಷಿಯ ಮೂಲಕ ಅವರು ಇನ್ನೂ ನಮ್ಮ ನಡುವೆ ಜೀವಂತವಾಗಿರುವಂತೆ ಭಾಸವಾಗುತ್ತದೆ.
 
ಸಮ್ಮೇಳನದ ತಯಾರಿ: ಪ್ರಧಾನ ವೇದಿಕೆಗೆ ಮಾಜಿ ಮುಖ್ಯಮಂತ್ರಿ ದಿ.ವೀ ರೇಂದ್ರ ಪಾಟೀಲ ಹೆಸರಿಡಲಾಗಿದೆ. ಮಂಟಪಕ್ಕೆ ಹಾರಕೂಡ ಚನ್ನಬಸವೇಶ್ವರ ಹೆಸರಿಡಲಾಗಿದೆ. ಜತೆಗೆ ಕರಿಬಸವ ರಾರ್ಯರು, ಕೋಡ್ಲಿ ಕಂಟೆಪ್ಪ ಮಾಸ್ತರ್‌, ಗುರುನಾಥರೆಡ್ಡಿ ಕೆರೋಳ್ಳಿ, ರಾಮಶೆಟ್ಟಿ ಪಾಟೀಲ ಅಣವಾರ, ಬಕ್ಕಪ್ಪ ಸೂಗೂರು, ಇಕ್ಬಾಲ್‌ ಜಾನಿ ಆಲಮಿ ಹೆಸರಲ್ಲಿ ಮಹಾದ್ವಾರಗಳಿವೆ.
 
ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಸಮ್ಮೇಳನಾಧ್ಯಕ್ಷ ಡಾ. ವಿಜಯಕುಮಾರ ಪರೂತೆ ಅವರ ಮೆರವಣಿಗೆ ಬೆಳಿಗ್ಗೆ 8.30ರಿಂದ ವೀರೇಂದ್ರ ಪಾಟೀಲ ಶಾಲೆಯಿಂದ ಹಾರಕೂಡ ಚನ್ನಬಸ ವೇಶ್ವರ ಕಲ್ಯಾಣ ಮಂಟಪದವರೆಗೆ ನಡೆಯಲಿದೆ.
 
ಪುರಸಭೆ ಅಧ್ಯಕ್ಷೆ ಇಂದುಮತಿ ಮನೋಹರ ದೇಗಲಮಡಿ ಉದ್ಘಾಟಿ ಸಲಿದ್ದು, ಫರ್ಜಾನಾ ಮಸೂದ್‌ ಸೌದಾಗರ, ಪ್ರಕಾಶ ಕುದರಿ, ಅನಿಲ ರಾಠೋಡ್‌, ಜನಾರ್ದನರೆಡ್ಡಿ ಪಾಟೀಲ, ಶರಣಬಸಪ್ಪ ಕೋಡ್ಲಾ, ಮನೋಜ ಕುಮಾರ ಗುರಿಕಾರ, ರಾಚಪ್ಪ ಭದ್ರಶೆಟ್ಟಿ ಮುಖ್ಯ ಅತಿಥಿಗಳಾಗಿದ್ದಾರೆ.
 
ಉದ್ಘಾಟನಾ ಸಮಾರಂಭ: ಬೆಳಿಗ್ಗೆ 10ಕ್ಕೆ ಸಾಹಿತಿ ಡಾ. ಕುಂ. ವೀರಭದ್ರಪ್ಪ ಸಮ್ಮೇ ಳನ ಉದ್ಘಾಟಿಸಲಿದ್ದು, ಡಾ. ಚನ್ನವೀರ ಶಿವಾಚಾರ್ಯರ ಸಾನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಡಾ. ಜಿ.ಆರ್‌ ಕುಲ್ಕರ್ಣಿ ಅವರ ಜೀವನೋತ್ಸಾಹ ಕವನ ಸಂಕಲನ, ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ್‌, ಡಾ. ರಾಮಚಂದ್ರ ಗಣಾಪುರ ಅವರ ಸಾಹಿತ್ಯ ವಿಮರ್ಶೆ, ಮಾಜಿ ಸಚಿವ ವೈಜನಾಥ ಪಾಟೀಲ ಅವರು ಡಾ. ಈಶ್ವರಯ್ಯ ಕೂಡಾಂಬಲ್‌ ಸಂಪಾದಿಸಿದ (ರಾಮ ಯ್ಯ ಸ್ವಾಮಿ ಐನೋಳ್ಳಿ ಅವರ ಸ್ವರ ವಚನಗಳ) ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.  ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಆಶಯ ನುಡಿಗಳ ನ್ನಾಡಲಿದ್ದು, ವಿಶ್ರಾಂತ ಪ್ರಾಧ್ಯಾಪಕ ಎಂ.ಡಿ. ದಿಲಶಾದ್‌  ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
 
ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಸೂಗಯ್ಯ ಹಿರೇಮಠ, ಸಮ್ಮೇಳನ ಅಧ್ಯಕ್ಷ ಡಾ. ವಿಜಯಕುಮಾರ ಪರೂತೆ ಮಾತನಾಡಲಿದ್ದಾರೆ. ಕಿರುತೆರೆ ನಟಿ ಕು. ಪ್ರಿಯಾಂಕಾ ಚಿಂಚೋಳಿ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ. 
 
ಚಿಂತನ ಮಥನ: ಮಧ್ಯಾಹ್ನ 12.10ಕ್ಕೆ ಖಟ್ವಾಂಗೇಶ್ವರ ಮಠದ ಗುರುಲಿಂಗ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಯುವ ಚಿಂತನ ಮಥನ ಗೋಷ್ಠಿಯಲ್ಲಿ ಡಾ. ನಾಗೇಂದ್ರ ಮಸೂತೆ ಆಶಯ ನುಡಿ ಹೇಳುವರು. ದಲಿತ ಮತ್ತು ಬಂಡಾಯ ಸಾಹಿತ್ಯ ಕುರಿತು ಡಾ. ಜಯದೇವಿ ಗಾಯಕವಾಡ, ಚಿಂಚೋಳಿ ತಾಲ್ಲೂಕಿನ ಸಾಹಿತ್ಯ ಮತ್ತು ಸಂಸ್ಕೃತಿ ದರ್ಶನ ಕುರಿತು ಡಾ. ರಾಮಚಂದ್ರ ಗಣಾಪುರ, ಜಾನಪದ ಸಾಹಿತ್ಯ ಕುರಿತು ಡಾ. ರಾಜೇಂದ್ರ ಯರನಾಳೆ ಉಪನ್ಯಾಸ ನೀಡಲಿದ್ದಾರೆ. ಡಾ. ಎಚ್‌. ಕಾಶಿನಾಥರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ.
 
ಎರಡನೇ ಗೋಷ್ಠಿ: ಮಧ್ಯಾಹ್ನ 1.45ರಿಂದ ನಡೆಯುವ ಎರಡನೇ ಗೋಷ್ಠಿ ಯಲ್ಲಿ ಪ್ರೋ. ಸಿ.ವಿ ಕಲಬುರ್ಗಿ ಆಶಯ ನುಡಿ ಹೇಳಲಿದ್ದಾರೆ. ಚಿಂಚೋಳಿ ತಾಲ್ಲೂಕಿನ ನೋಡುವ ಬೀಡುಗಳ ಕುರಿತು ಪತ್ರಕರ್ತ ಜಗನ್ನಾಥ ಶೇರಿಕಾರ, ಸಮ್ಮೇಳನಾಧ್ಯಕ್ಷರ ಸಾಹಿತ್ಯ ಮತ್ತು ಸಂಘಟನೆ ಕುರಿತು ಡಾ. ಈಶ್ವರಯ್ಯ ಕುಡಾಂಬಲ್‌ ಉಪನ್ಯಾಸ ನೀಡುವರು. ಪ್ರಗತಿಪರ ರೈತ ಅಶೋಕ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.
 
ಕಾವ್ಯಧಾರೆ ಗೋಷ್ಠಿ: ಮಧ್ಯಾಹ್ನ 3ಕ್ಕೆ ನಡೆಯುವ ಕವಿಗೋಷ್ಠಿಯನ್ನು ಡಾ. ವಾಸುದೇವ ಅಗ್ನಿ ಹೋತ್ರಿ ಉದ್ಘಾಟಿಸು ವರು. ಶಿವಯ್ಯ ಮಠಪತಿ ಅಧ್ಯಕ್ಷತೆ ವಹಿಸಿದರೆ, 19 ಮಂದಿ ಕವಿಗಳು ತಮ್ಮ ಕವನ ವಾಚಿಸಲಿದ್ದಾರೆ. 
 
4.10ರಿಂದ ನಡೆಯುವ ಸನ್ಮಾನ ಮತ್ತು ಸಮಾರೋಪ ಸಮಾರಂಭದ ಸಾನಿಧ್ಯವನ್ನು ಚಿಕ್ಕಗುರುನಂಜೇಶ್ವರರು ವಹಿಸಲಿದ್ದಾರೆ. ರಮೇಶ ಯಾಕಾಪುರ ಆಶಯ ನುಡಿ, ಡಾ. ಶಾಂತವೀರ ಸುಂಕದ್‌ ಸಮಾರೋಪ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆ ಡಾ. ಉಮೇಶ ಜಾಧವ್‌ ವಹಿಸುವರು. ಸಮ್ಮೇಳನ ಅಧ್ಯಕ್ಷರ ನುಡಿ ಹಾಗೂ ಸಮ್ಮೇಳನದ ನಿರ್ಣಯ ಮಂಡನೆ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 26 ಸಾಧಕರಿಗೆ ಸನ್ಮಾನಿಸ ಲಾಗುತ್ತಿದೆ.
 
ಸಂಗೀತ ರಸದೌತಣ: ಪ್ರತಿ ಗೋಷ್ಠಿಯ ಮಧ್ಯೆ ರೇವಣಸಿದ್ದಯ್ಯ ಹಿರೇಮಠ, ದಯಾನಂದ ಹಿರೇಮಠ ಸಂಗೀತ ಸುಧೆ, ರಾಮಯ್ಯ ಸ್ವಾಮಿ ಐನೋಳ್ಳಿ ತುಕಾರಾಮ ಚಿಮ್ಮನಚೋಡ, ಚಂದ್ರ ಕಾಂತ ಕೊಡಂಗಲ, ಗುರುರಾಜ ಜೋಷಿ ವಚನ ಗಾಯನ, ಬಸವಂತ ರಾಯ ರೋಂಪಳ್ಳಿ, ಮುಜಾವರ ನಿಡಗುಂದಾ, ಮೆಹಮೂದ್‌ ಪರಗಿ ಅವರಿಂದ ಮೊಹರಂ ಹಾಡು, ಶಾಂತಪ್ಪ ಐನೋಳ್ಳಿ, ಕರಬಸಯ್ಯ ಯಲಮಡಗಿ ಅವರಿಂದ ತತ್ವಪದ ಗಾಯನ, ಮರಿಯಪ್ಪ ಭಜಂತ್ರಿ, ದತ್ತಾತ್ರೆಯ ಕಳಸ್ಕರ್‌ ಅವರ ಗಾಯನದ ರಸದೌತಣ ಸಭಿಕರಿಗೆ ದೊರೆಯಲಿದೆ. ಸಾಹಿತ್ಯದ ಜೊತೆಗೆ ಸಂಗೀತ ಆಸ್ವಾದಿಸಬಹುದು.
 
**
ಸಮ್ಮೇಳನದ ಅಧ್ಯಕ್ಷರು
1992.ಪ್ರಥಮ ಸಾಹಿತ್ಯ ಸಮ್ಮೇಳನ. ಪಂಚಾಕ್ಷರಿ ಪುಣ್ಯಶೆಟ್ಟಿ
2002. ಎರಡನೇ ಸಾಹಿತ್ಯ ಸಮ್ಮೇಳನ.  ಕಂಟೆಪ್ಪ ಮಾಸ್ತರ್‌ ಕೋಡ್ಲಿ
2003. ಮೂರನೇ ಸಾಹಿತ್ಯ ಸಮ್ಮೇಳನ. ಚಿತ್ರಶೇಖರ ಕಂಠಿ
2005. ನಾಲ್ಕನೇ ಸಾಹಿತ್ಯ ಸಮ್ಮೇಳನ. ಎಸ್‌.ಎನ್‌ ದಂಡಿನಕುಮಾರ
2008. ಐದನೇ ಸಾಹಿತ್ಯ ಸಮ್ಮೇಳನ ಡಾ. ವಾಸುದೇವ ಅಗ್ನಿಹೋತ್ರಿ
2013. ಆರನೇ ಸಾಹಿತ್ಯ ಸಮ್ಮೇಳನ. ಪ್ರೊ. ಸೂಗಯ್ಯ ಹಿರೇಮಠ
2017. ಏಳನೇ ಸಾಹಿತ್ಯ ಸಮ್ಮೇಳನ.ಡಾ. ವಿಜಯ ಕುಮಾರ ಪರೂತೆ
 
**
ಸಮ್ಮೇಳನಾಧ್ಯಕ್ಷರ ಸಂಕ್ಷಿಪ್ತ ಪರಿಚಯ
ಸಮ್ಮೇಳನಾಧ್ಯಕ್ಷ ಡಾ. ವಿಜಯಕುಮಾರ ಪರೂತೆ ಅವರು ವೃತ್ತಿಯಿಂದ ಹಿಂದಿ ಪ್ರಾಧ್ಯಾಪಕರು. ಅವರ ಊರು ನೆರೆಯ ಕಾಳಗಿ. ಅವರ ತಂದೆಯವರು ತಾಲ್ಲೂಕಿನ ಹೊಸಳ್ಳಿ(ಎಚ್‌) ಗ್ರಾಮದವರು. ವ್ಯಾಪಾರಕ್ಕಾಗಿ ಅವರು ಕಾಳಗಿಗೆ ಹೋಗಿ ಅಲ್ಲಿಯೇ ನೆಲೆಸಿದ್ದಾರೆ.
 
ಪ್ರಸ್ತುಕ ಕಲಬುರ್ಗಿಯ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ವಿಜಯ ಕುಮಾರ ಪರೂತೆ ಅವರು 12 ಕೃತಿಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಮಹಾತಪಸ್ವಿ, ವಚನಧಾರೆ, ಸಾಮಾನ್ಯರಲ್ಲಿ ಅಸಾಮಾನ್ಯರು ರಚಿಸಿ ಬಿಡುಗಡೆ ಆಗಿದೆ.
 
ನುಡಿ ಸಂಪದ ಬಿಡುಗಡೆ ಆಗಬೇಕಿದೆ. ಜತೆಗೆ 8 ಸಂಪಾದಿತ ಕೃತಿಗಳು ನಾಡಿಗೆ ಸರ್ಪಿಸಿದ್ದಾರೆ. ಇನ್ನೂ ಎರಡು  ಸಂಪಾದಿತ ಗ್ರಂಥಗಳು ಅಚ್ಚಿನಲ್ಲಿವೆ.
 
2001ರಿಂದ 2008ರವರೆಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯ ಪರಿಷತ್‌ ಜನರಿಗೆ ಪರಿಚಯಿಸಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT