ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರೇಶ್ವರ: ನಕಲಿ ರಶೀದಿ ಹಾವಳಿ

ಅಕ್ರಮದಲ್ಲಿ ಮುಜರಾಯಿ ಇಲಾಖೆಯ ಸಿಬ್ಬಂದಿ ಭಾಗಿಯಾಗಿರುವ ಶಂಕೆ
ಅಕ್ಷರ ಗಾತ್ರ
ಲಿಂಗಸುಗೂರು: ಮುಜರಾಯಿ ಇಲಾ ಖೆಗೆ ಸೇರಿದ ತಾಲ್ಲೂಕಿನ ಅಮರೇಶ್ವರ ದೇವಸ್ಥಾನದಲ್ಲಿ ನಕಲಿ ರಶೀದಿ ಪುಸ್ತಕ ತಯಾರಿಸಿ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ತಹಶೀಲ್ದಾರ್‌ ತನಿಖೆಗೆ ಆದೇಶಿಸಿದ್ದಾರೆ.
 
‘ಮುಜರಾಯಿ ಇಲಾಖೆಯ ನೌಕರರೇ ನಕಲಿ ರಸೀದಿ ಸಿದ್ಧಪಡಿಸಿ ನಷ್ಟ ಉಂಟು ಮಾಡುತ್ತಿದ್ದಾರೆ’ ಎಂದು ಭಕ್ತರೊಬ್ಬರು ದಾಖಲೆ ಸಮೇತ ಉಪ ವಿಭಾಗಾಧಿಕಾರಿ ದಿವ್ಯಾ ಪ್ರಭು ಅವರಿಗೆ ಇತ್ತೀಚೆಗೆ ದೂರು ಸಲ್ಲಿಸಿದ್ದರು. ಈ ದೂರು ಆಧರಿಸಿ ತನಿಖೆ ನಡೆಯುತ್ತಿದೆ.
 
‘ಅಮರೇಶ್ವರ ದೇವಸ್ಥಾನದಲ್ಲಿ ನಕಲಿ ರಸೀದಿ ಬಳಕೆಯಲ್ಲಿರುವ ಸಂಗತಿ ಗಮನಕ್ಕೆ ಬಂದಿದೆ. ಮಾಹಿತಿ ನೀಡು ವಂತೆ ಸಿಬ್ಬಂದಿಗೆ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದು ತಹಶೀಲ್ದಾರ್‌ ಶಿವಾನಂದ ಸಾಗರ್‌ ‘ಪ್ರಜಾವಾಣಿ’ಗೆ ತಿಳಿಸಿದರು.
 
ಉತ್ತರ ಕರ್ನಾಟಕ ಭಾಗದಲ್ಲಿ ಗುರುಗುಂಟಾದ ಅಮರೇಶ್ವರ ಕ್ಷೇತ್ರ ಹೆಸರುವಾಸಿ. ರಾಜ್ಯವೂ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಭಕ್ತರು ಬರುತ್ತಾರೆ. ದೇವಸ್ಥಾನಕ್ಕೆ ಬರುವ ಭಕ್ತರು ಹರಕೆ ಹಣ, ಕೊಠಡಿ ಬಳಕೆ, ವಿವಿಧ ಪೂಜೆಗಳಿಗೆ ಹಣ ನೀಡಿ ರಸೀದಿ ಪಡೆಯುವುದು ವಾಡಿಕೆಯಿದೆ. 
 
ರುದ್ರಾಭಿಷೇಕ, ಎಲೆಚಟ್ಟು, ಜವಳ, ದೀರ್ಘದಂಡ ನಮಸ್ಕಾರ, ಮಂಗಳಾರತಿ, ಮದುವೆ, ವಾಹನಗಳ ಪೂಜೆ, ಕಲ್ಯಾಣ ಮಂಟಪ ಬಾಡಿಗೆ, ಕೊಠಡಿಗಳ ಬಾಡಿಗೆ ಸೇರಿದಂತೆ ವಿವಿಧ ಸೇವೆಗಳಿಗೆ ಭಕ್ತರು ಹಣ, ಬೆಳ್ಳಿ, ಬಂಗಾರದ ಒಡವೆಗಳನ್ನು ದೇವಸ್ಥಾನಕ್ಕೆ ಸಲ್ಲಿಸುತ್ತಾರೆ. 
 
ಈ ಕಾಣಿಕೆಗೆ ಪ್ರತಿಯಾಗಿ ರಸೀದಿ ನೀಡಲಾಗುತ್ತಿದೆ. ಆದರೆ, ಸಿಬ್ಬಂದಿ ಭಕ್ತರಿಗೆ ನೀಡುವ ರಸೀದಿ ಹಾಗೂ ಮುಜರಾಯಿ ಇಲಾಖೆಗೆ ತೋರಿಸುವ ರಸೀದಿ ಬೇರೆ ಬೇರೆ ಎಂಬ ಸಂಗತಿ ಬಹಿರಂಗಗೊಂಡಿದೆ. 
 
ನಕಲಿ ಬಿಲ್‌ ನೀಡಲು ರಸೀದಿಗಳ ಪುಸ್ತಕಗಳನ್ನು ಮುದ್ರಿಸಲಾಗಿದೆ. ಕಾಣಿಕೆ ಪಡೆದ ನಂತರ ದೇವಸ್ಥಾನದ ಅಸಲಿ ರಸೀದಿಯಲ್ಲಿ ಇಷ್ಟಬಂದಂತೆ ನಗ, ನಗದು ನಮೂದಿಸಲಾಗುತ್ತಿದೆ.
 
‘ಭಕ್ತರಿಂದ ಸಲ್ಲಿಕೆ ಆಗುವ ಹಣ ಮತ್ತು ಆಭರಣಗಳಿಗೆ ನಕಲಿ ರಸೀದಿ ನೀಡುವುದು ಭಕ್ತರ ಭಾವನೆಗಳಿಗೆ ಧಕ್ಕೆ ಮಾಡಿದಂತೆ. ಅಂಥವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಭಕ್ತರೊಬ್ಬರು ಒತ್ತಾಯಿ ಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT