ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿ ಪರ ಬಜೆಟ್‌: ಶಿಕ್ಷಣಕ್ಕೆ ಸಿಗದ ಆದ್ಯತೆ

2017–18 ನೇ ಸಾಲಿನ ಕೇಂದ್ರ ಬಜೆಟ್‌: ಮಿಶ್ರ ಪ್ರತಿಕ್ರಿಯೆ
Last Updated 2 ಫೆಬ್ರುವರಿ 2017, 7:49 IST
ಅಕ್ಷರ ಗಾತ್ರ
ಕಲಬುರ್ಗಿ: ದೇಶದ ಅಭಿವೃದ್ಧಿ ಹೆಚ್ಚಿಸುವ ನಿಟ್ಟಿನಲ್ಲಿ 2017–18 ನೇ ಸಾಲಿನ ಕೇಂದ್ರ ಬಜೆಟ್ ವಿವಿಧ ಯೋಜನೆಗಳಿಗೆ ಸಾಕಷ್ಟು ಅನುದಾನ ಹಂಚಿಕೆ ಮಾಡಿದೆ. ಆದರೆ ಶಿಕ್ಷಣ ಹಾಗೂ ಕೃಷಿ ಕ್ಷೇತ್ರಗಳ ಬೆಳವಣಿಗೆಗೆ ನಿರೀಕ್ಷೆಯಂತೆ ಆದ್ಯತೆ ಸಿಕ್ಕಿಲ್ಲ ಎಂದು ವಿವಿಧ ಕ್ಷೇತ್ರಗಳ ಪರಿಣಿತರು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
 
ಬಜೆಟ್‌ ಪರವಾಗಿಲ್ಲ
ಕೇಂದ್ರ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಮಹತ್ವ ನೀಡಿರುವುದು ಒಳ್ಳೆಯ ಬೆಳವಣಿಗೆ. ನಗದು ರಹಿತ ಆಡಳಿತದಿಂದ ಕೈಗಾರಿಕೆಗಳಿಗೆ ಅನುಕೂಲವಾಗುತ್ತದೆ. ಆದರೆ ತೆರಿಗೆ ವಿಷಯದಲ್ಲಿ ಕೈಗಾರಿಕೆಗಳಿಗೆ ಅಷ್ಟೊಂದು ಅನುಕೂಲವಾಗುವ ಯೋಜನೆಗಳನ್ನು ಘೋಷಿಸಿಲ್ಲ. ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ಯಾವ ಬೇಡಿಕೆಗಳು ಉಲ್ಲೇಖವಾಗಿಲ್ಲ. ರೈಲ್ವೆ ಸುರಕ್ಷತೆಗೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ. ಒಟ್ಟಾರೆ ಬಜೆಟ್‌ ಪರವಾಗಿಲ್ಲ ಎನ್ನುವ ರೀತಿಯಲ್ಲಿದೆ ಎಂದು ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಸ್ಥೆಯ ಸೋಮಶೇಖರ್‌ ಟೆಂಗಳಿ ಹೇಳಿದರು.
 
**
ಉದ್ಯೋಗ ಸೃಷ್ಟಿ
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ತ್ರೀ ಶಕ್ತಿ ಕೇಂದ್ರ ಸ್ಥಾಪಿಸಿ ಕೌಶಲ ತರಬೇತಿ ನೀಡುವುದು ಹಾಗೂ ದೇಶದಲ್ಲಿ ಪ್ರಧಾನ ಮಂತ್ರಿ ಕೌಶಲ ಕೇಂದ್ರಗಳನ್ನು ಹೆಚ್ಚಿಸುವುದರಿಂದ ನಿರುದ್ಯೋಗಿಗಳಿಗೆ ಅನುಕೂಲವಾಗುತ್ತದೆ. ಗ್ರಾಮೀಣಾಭಿವೃದ್ಧಿ, ಮತ್ತು ಕೃಷಿಗೆ ಹೆಚ್ಚು ಅನುದಾನ ಕೊಟ್ಟು ರೈತರ ಆದಾಯ ಹೆಚ್ಚಿಸಲು ಕ್ರಮ ಕೈಗೊಂಡಿದ್ದಾರೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಉತ್ತೇಜಿಸಿದ್ದಾರೆ. ಶಿಶು ಮರಣ ಮತ್ತು ತಾಯಿ ಮರಣ ತಡೆಗಟ್ಟುವುದು, ವೈದ್ಯರ ಸಂಖ್ಯೆ ಹೆಚ್ಚಳ ಮಾಡುವುದಕ್ಕೆ ಅನುದಾನ ಹಂಚಿಕೆಯಾಗಿದೆ. ಆದರೆ ಶಿಕ್ಷಣವನ್ನು ಜಾಗತಿಕ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲು ಸಾಕಷ್ಟು ಅನುದಾನ ಕೊಟ್ಟಿಲ್ಲ ಎನ್ನುವ ಅಂಶ ಕಂಡುಬಂದಿದೆ. ಒಟ್ಟಾರೆ ಇದು ಪ್ರಗತಿಪರ ಬಜೆಟ್‌ ಆಗಿದೆ ಎಂದು ಆರ್ಥಿಕ ತಜ್ಞೆ ಡಾ.ಸಂಗೀತಾ ಕಟ್ಟಿಮನಿ ತಿಳಿಸಿದರು.
 
**
‘ಭವಿಷ್ಯ ದೃಷ್ಟಿಯ ಬಜೆಟ್’
‘ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿರುವ ಕೇಂದ್ರ ಬಜೆಟ್ ದೇಶದ ಭವಿಷ್ಯದ ದೃಷ್ಟಿಯಿಂದ ಕೂಡಿದೆ’ ಎಂದು ಬಿಜೆಪಿ ರಾಜ್ಯ ಸಹ ವಕ್ತಾರ ಶಶೀಲ್ ಜಿ. ನಮೋಶಿ ತಿಳಿಸಿದ್ದಾರೆ.
 
‘ಸ್ನಾತಕೋತ್ತರ ವೈದ್ಯಕೀಯದ 5 ಸಾವಿರ ಸೀಟು ಹೆಚ್ಚಳ ಸೇರಿದಂತೆ ವೈದ್ಯಕೀಯ ಕ್ಷೇತ್ರದಲ್ಲಿ 25 ಸಾವಿರ ಸೀಟುಗಳ ಹೆಚ್ಚಳ, ಮಹಿಳಾ ಶಕ್ತಿ ಕೇಂದ್ರಗಳ ಸ್ಥಾಪನೆ, 2020ರ ವೇಳೆಗೆ ಎಲ್ಲ ರೈಲುಗಳಲ್ಲಿ ಬಯೋ ಟಾಯ್ಲೆಟ್, ರೈಲ್ವೆ ರಕ್ಷಾ ಕೋಶ ಸ್ಥಾಪನೆ, ಡಿಜಿಟಲ್ ವ್ಯವಹಾರಕ್ಕೆ ಪ್ರಾಶಸ್ತ್ಯ ನೀಡಿರುವುದು ಸ್ವಾಗತಾರ್ಹ’ ಎಂದು ತಿಳಿಸಿದ್ದಾರೆ.
 
**
ಸಾಲ ಮನ್ನಾ  ಇಲ್ಲ
‘ಕೇಂದ್ರ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಮಾಡದೇ ಇರುವುದು ಅತ್ಯಂತ ನೋವಿನ ಸಂಗತಿಯಾಗಿದೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ಪಾಟೀಲ ರಾಜಾಪುರ ತಿಳಿಸಿದ್ದಾರೆ.
 
‘ಒಟ್ಟಾರೆ ಬಜೆಟ್ ಜನಪ್ರಿಯವಾಗಿದ್ದರೂ, ರೈತರ ಸಾಲದ ಬಡ್ಡಿ ಮನ್ನಾ ಮಾಡದಿರುವುದು ರೈತರಿಗೆ ನೋವಾಗಿದೆ. ರೈತರ ಹಿತದೃಷ್ಟಿಯಿಂದ ಹೆಚ್ಚುವರಿ ಅನುದಾನದಲ್ಲಿ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.
 
**
ಪ್ರಗತಿಪರ ಬಜೆಟ್
‘ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಕೇಂದ್ರ ವಿತ್ತ ಸಚಿವರು ಒತ್ತು ಕೊಟ್ಟಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ರೈತರಿಗೆ ಅನುಕೂಲ ಒದಗಿಸಲು ಶೇ 30 ರಷ್ಟು ಹೆಚ್ಚು ಅನುದಾನ ಹಂಚಿಕೆಯಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ತೆರಿಗೆಯನ್ನು ಶೇ 30 ರಿಂದ ಶೇ 25 ಕ್ಕೆ ಇಳಿಕೆ ಮಾಡಿದ್ದಾರೆ. ನೂತನ ಕೈಗಾರಿಕೆಗಳಿಗೆ ತೆರಿಗೆ ವಿನಾಯಿತಿಯನ್ನು ಐದರಿಂದ ಏಳು ವರ್ಷಕ್ಕೆ ಹೆಚ್ಚಿಸುವುದು ಒಳ್ಳೆಯ ಸಂಗತಿ. 
 
ಹಳೇ ನೋಟುಗಳ ರದ್ದತಿಯಿಂದ ಉಂಟಾಗಿದ್ದ ನಷ್ಟ ಸರಿದೂಗಿಸಲು ರಿಯಲ್‌ ಎಸ್ಟೇಟ್‌ ವಲಯವನ್ನು ಪ್ರೋತ್ಸಾಹಿಸಿದ್ದಾರೆ’ ಎಂದು ಎಫ್‌ಕೆಸಿಸಿಐ ಉತ್ತರ ಕರ್ನಾಟಕ ವಲಯದ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ತಿಳಿಸಿದರು.
 
**
ಬಜೆಟ್‌ನಲ್ಲಿ ರೈತರ ಕಡೆಗಣನೆ
ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮಾತ್ರ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ರೈತರ ಸಾಲ ಮನ್ನಾ ಮತ್ತು ಸ್ವಾಮಿನಾಥನ್‌ ಆಯೋಗದ ವರದಿ ಅನುಷ್ಠಾನಗೊಳಿಸಬೇಕೆನ್ನುವ ಕೃಷಿ ಕ್ಷೇತ್ರದ ಬೇಡಿಕೆಗಳ ಬಗ್ಗೆ ಮೌನ ವಹಿಸಲಾಗಿದೆ. ಹೀಗಾಗಿ ಈ ಬಜೆಟ್‌ ಸಂಪೂರ್ಣ ರೈತ ವಿರೋಧಿಯಾಗಿದೆ.
 
ಅನುದಾನ ಹೆಚ್ಚಳದಿಂದ ಗುತ್ತಿಗೆದಾರರಿಗೆ ಹಾಗೂ ಕೃಷಿ ಆಧಾರಿತ ಕಂಪೆನಿಗಳಿಗೆ ಲಾಭ ಮಾಡಿಕೊಡಲಾಗಿದೆ. 
 
ರೈತರ ಜ್ವಲಂತ ಸಮಸ್ಯೆಗಳಿಗೆ ಈ ಬಜೆಟ್‌ನಲ್ಲಿ ಉತ್ತರವಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಬೇಸರ ವ್ಯಕ್ತಪಡಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT