ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ತೊಂಬತ್ತು ವರ್ಷವಾದರೂ ಜನ ನನ್ನನ್ನು ನೋಡುತ್ತಾರೆ...

Last Updated 2 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಜಗ್ಗೇಶ್‌ ಎಂದರೆ ನಗೆಹೊನಲು, ಉತ್ಸಾಹದ ಚಿಲುಮೆ. ‘ಮೇಲುಕೋಟೆ ಮಂಜ’ ಚಿತ್ರದ ಮೂಲಕ ಅವರೀಗ ಅಧಿಕೃತ ನಿರ್ದೇಶಕ! ಮಂಜ ತೆರೆಕಾಣಲು ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ, ಜಗ್ಗೇಶ್‌ ‘ಚಂದನವನ’ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

‘ಮೇಲುಕೋಟೆ ಮಂಜ’ ಹುಟ್ಟಿದ್ದು ಹೇಗೆ?
ಚೀಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಿ ಓಡಿಹೋಗುವವನ ಕಥೆ ಇದು. ಇಂತಹ ವಂಚನೆ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಆಗಾಗ ನೋಡುತ್ತಿರುತ್ತೇವೆ. ಇಂತಹ ಘಟನೆಗಳ ಎಳೆಯನ್ನಿಟ್ಟುಕೊಂಡು ಯಾಕೆ ಒಂದು ಹಾಸ್ಯಮಿಶ್ರಿತ ಸಂದೇಶವಿರುವ ಚಿತ್ರ ಮಾಡಬಾರದು ಎನಿಸಿತು. ಆಗ ಹೊಳೆದಿದ್ದೆ ‘ಮೇಲುಕೋಟೆ ಮಂಜ’ನ ಕಥೆ. ನಿರ್ದೇಶನದ ಜೊತೆಗೆ ಮುಖ್ಯಪಾತ್ರದಲ್ಲಿ ನಾನೇ ಕಾಣಿಸಿಕೊಂಡಿದ್ದೇನೆ. ಒಂದೂವರೆ ವರ್ಷದ ಹಿಂದೆ ಆರಂಭವಾಗಿದ್ದ ಚಿತ್ರವೀಗ ಪೂರ್ಣಗೊಂಡಿದೆ.

ಮಂಜನ ವೃತ್ತಾಂತವೇನು?
ಅನೇಕ ಮಂದಿ ಕನಸಿನಲ್ಲೇ ಬದುಕುತ್ತಾರೆ. ದೊಡ್ಡ ಉದ್ಯಮಿ ಆಗ್ಬೇಕು, ಸ್ಟಾರ್ ಆಗ್ಬೇಕು, ಊರೆಲ್ಲ ಹೊಗಳುವಂತಹ ವ್ಯಕ್ತಿಯಾಗಬೇಕು. ಹೀಗೆ ಅವರ ಕನಸುಗಳಿಗೆ ಎಲ್ಲೆ ಇರುವುದಿಲ್ಲ. ನನ್ನ ಚಿತ್ರದ ಕಥಾನಾಯಕ ಮಧ್ಯಮವರ್ಗದ ಮಂಜ ಕೂಡ ಇದೇ ಕೆಟಗರಿಯವನು. ಅದಕ್ಕಾಗಿ ಅವನು ಆಯ್ದುಕೊಳ್ಳುವ ಮಾರ್ಗ ಚೀಟಿ ವ್ಯವಹಾರ. ಜನರಿಂದ ಸಂಗ್ರಹಿಸಿದ ಹಣದಿಂದ ಶೋಕಿ ಮಾಡುವ ಆತ, ಒಂದು ಸಾಲ ತೀರಿಸಲು ಮತ್ತೊಂದು ಸಾಲ ಮಾಡುತ್ತಾ ಹೋಗುತ್ತಾನೆ. ಈತನಿಗೆ ಗೊತ್ತಿರುವ ಮಿಮಿಕ್ರಿಯೂ ಅದಕ್ಕೆ ನೆರವಾಗುತ್ತಿರುತ್ತದೆ. ಈ ಮಧ್ಯೆ ಅಪರಾಧ ಪ್ರಕರಣವೊಂದರಲ್ಲೂ ತಗುಲಿ ಹಾಕಿಕೊಳ್ಳುತ್ತಾನೆ. ತಿಳಿಹಾಸ್ಯದೊಂದಿಗೆ ಕಣ್ಣಾಮುಚ್ಚಾಲೆ ಆಟದಂತೆ ಸಾಗುವ ಕಥೆಯಲ್ಲಿ ಲವ್ ಸ್ಟೋರಿ ಜತೆಗೆ, ಸೆಂಟಿಮೆಂಟ್ ಕೂಡ ಇದೆ.

ಚಿತ್ರರಂಗದ ಬದಲಾದ ಗತಿಯನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ?
ಪ್ರೇಕ್ಷಕರು ವೈಭವೀಕರಣಕ್ಕೆ ಬದಲಾಗಿ ನ್ಯಾಚುರಾಲಿಟಿಯನ್ನು (ಕಥೆ ಮತ್ತು ಪಾತ್ರಗಳಲ್ಲೂ ವಾಸ್ತವಕ್ಕೆ ಹತ್ತಿರವಿರುವ) ಇಷ್ಟಪಡುತ್ತಿದ್ದಾರೆ. ಹಿಂದೆ ಇಂತಹ ಚಿತ್ರಗಳನ್ನು ಕಲಾತ್ಮಕ ಸಿನಿಮಾ ಪ್ರಕಾರಕ್ಕೆ ಸೇರಿಸುತ್ತಿದ್ದರು. ಈಗ ಜನ ಎಲ್ಲವನ್ನೂ ಗಮನಿಸುತ್ತಿರುತ್ತಾರೆ. ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಬೇಕೆಂದೇನಿಲ್ಲ. ಅದಕ್ಕೆ ನೂರೆಂಟು ಮಾರ್ಗಗಳಿವೆ. ಪ್ರಪಂಚದಾದ್ಯಂತ ಇರುವ ಟಿ.ವಿ ಚಾನೆಲ್‌ಗಳಲ್ಲಿ ನಿತ್ಯ 110 ಸಿನಿಮಾಗಳು, 280 ಧಾರಾವಾಹಿಗಳು, 60–70 ರಿಯಾಲಿಟಿ ಷೋಗಳು ನಿತ್ಯ ಪ್ರಸಾರವಾಗುತ್ತವೆ. ಇಂತಹ ಸ್ಥಿತಿಯಲ್ಲಿ ಎಲ್ಲವನ್ನೂ ಮೀರಿ ಜನರನ್ನು ತಲುಪಬೇಕಾದರೆ ದೊಡ್ಡ ಬಜೆಟ್‌ನ ಚಿತ್ರ ಮಾಡಬೇಕಾಗುತ್ತದೆ. ಪ್ರಾದೇಶಿಕ ಭಾಷೆಯ ಚಿತ್ರರಂಗಗಳು ದೊಡ್ಡ ಬಜೆಟ್‌ಗೆ ತೆರೆದುಕೊಳ್ಳಲಾಗದಿದ್ದರೆ, ಸಹಜತೆಗೆ ಹತ್ತಿರವಾಗಿರುವ ಚಿತ್ರಗಳನ್ನು ನೀಡುವ ಮೂಲಕ ಚಿತ್ರರಂಗವನ್ನು ಉಳಿಸಿಕೊಂಡು ಹೋಗಬೇಕಾಗುತ್ತದೆ. ಸಮೀಕ್ಷೆಯೊಂದರ ಪ್ರಕಾರ, ಆರು ಕೋಟಿ ಜನರಿರುವ ಕರ್ನಾಟಕದಲ್ಲಿ ಕೇವಲ

30 ಲಕ್ಷ ಮಂದಿ ಸಿನಿಮಾ ವೀಕ್ಷಿಸುತ್ತಾರೆ. ಅದರಲ್ಲಿ ಕನ್ನಡ ಚಿತ್ರ ನೋಡುವವರು ಕೇವಲ ಏಳೇ ಲಕ್ಷ! ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಸಿನಿಮಾ ವೀಕ್ಷಿಸುತ್ತಾರೆ. ಅವರ ಪ್ರಥಮ ಆದ್ಯತೆ ಮಾತೃಭಾಷೆಗೆ. ನಮ್ಮಲ್ಲಿರುವ ಸುಮಾರು 700 ಥಿಯೇಟರ್‌ಗಳಲ್ಲಿ ಮೊದಲ ಆದ್ಯತೆ ಇರುವುದು ಪರಭಾಷಾ ಚಿತ್ರಗಳಿಗೆ. ಮಂಗಳೂರಲ್ಲಿ ಮಲಯಾಳಂ ಚಿತ್ರಗಳು ನೂರು ದಿನ ಓಡುತ್ತವೆ. ಪಕ್ಕದ ಕೋಲಾರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ತೆಲುಗು ಚಿತ್ರಗಳದ್ದೇ ಅಬ್ಬರ. ಇನ್ನು ಬೆಂಗಳೂರು, ಮೈಸೂರಿನಲ್ಲಿ ಎಲ್ಲಾ ಭಾಷೆಯ ಚಿತ್ರಗಳೂ ಓಡುತ್ತವೆ. ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಕೆಲವೇ ಭಾಗಗಳಲ್ಲಿ ಮಾತ್ರ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಇದೆ. ತೊಡಕುಗಳನ್ನು ನಿವಾರಿಸಿಕೊಂಡು ಕನ್ನಡಕ್ಕೆ ಮೊದಲ ಆದ್ಯತೆ ನೀಡದಿದ್ದರೆ ನಮಗೆ ಉಳಿಗಾಲವಿಲ್ಲ.

ಸ್ಲಿಮ್‌ ಆಗಿದ್ದೀರಿ. ನಿಮ್ಮ ಸಪೂರ ದೇಹದ ಗುಟ್ಟೇನು?
ಹಾಸ್ಯ ಕಲಾವಿದರು ಸೇರಿದಂತೆ ಒಂದು ಕಾಲದಲ್ಲಿ ದೊಡ್ಡ ಕಲಾವಿದರೆನಿಸಿಕೊಂಡವರೆಲ್ಲ ಕಾಲಮಿತಿಯೊಳಗೆ ಮಿಂಚಿ ಮರೆಯಾದರು. ಚಿತ್ರರಂಗದಲ್ಲಿ ಕಡೆಯವರೆಗೆ ಉಳಿದುಕೊಳ್ಳಬೇಕಾದರೆ, ಆರೋಗ್ಯವನ್ನೂ ಕಾಪಾಡಿಕೊಂಡು ಬರಬೇಕು. ಆರೋಗ್ಯದ ಬಗ್ಗೆ ಹೆಚ್ಚು ಆಸ್ಥೆ ವಹಿಸಿದ್ದ ಅಣ್ಣಾವ್ರು (ರಾಜಕುಮಾರ್), ಆ ಕುರಿತು ಎಲ್ಲರಿಗೂ ಕಿವಿಮಾತು ಹೇಳುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಸೇರಿದಂತೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡೆ. ಫಿಟ್‌ನೆಸ್‌ಗೆ ಗಮನ ಕೊಡದಿದ್ದರಿಂದಾಗಿ ದಪ್ಪವಾಗಿಬಿಟ್ಟಿದ್ದೆ. ಆರೋಗ್ಯ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಹಾಗಾಗಿ, ತಜ್ಞರ ಸಲಹೆ ಮೇರೆಗೆ ಕಳೆದ ಎರಡು ವರ್ಷದಿಂದ ದೇಹ ದಂಡಿಸಿ 24 ಕೆ.ಜಿ ಕಡಿಮೆಯಾದೆ. ನನಗೆ 90 ವರ್ಷವಾದರೂ ಜನ ನನ್ನನ್ನು ನೋಡುತ್ತಾರೆ. ಆ ರೀತಿಯ ಪ್ರೇಕ್ಷಕ ವಲಯವನ್ನು ನಾನು ಸೃಷ್ಟಿಸಿಕೊಂಡಿದ್ದೇನೆ.

ನಟ ಮತ್ತು ನಿರ್ದೇಶಕನಾಗಿ ನೀವು ಚಿತ್ರರಂಗದಲ್ಲಿ ಇದುವರೆಗೆ ಕಂಡುಕೊಂಡಿದ್ದೇನು?
ನಾನು ಕಚ್ಚಾ ಚಿನ್ನವಿದ್ದಂತೆ. ಪ್ರತಿಭೆ ಇರುವವರು ತನಗಿಷ್ಟ ಬಂದಂತೆ ಆ ಚಿನ್ನಕ್ಕೊಂದು ರೂಪ ಕೊಡಬಹುದು. ನಾನು ಕಥೆಯೊಂದನ್ನು ಕೇಳಿದಾಗ, ನನ್ನ ಪಾತ್ರದ ಕುರಿತು ಅಧ್ಯಯನ ನಡೆಸುತ್ತೇನೆ. ಅದರೊಳಗೆ ನಾನು ಪರಕಾಯ ಪ್ರವೇಶ ಮಾಡಬಲ್ಲೆ ಎನಿಸಿದಾಗಷ್ಟೇ ನಟಿಸಲು ಒಪ್ಪಿಕೊಳ್ಳುತ್ತೇನೆ. ನಾನು ಚಿತ್ರರಂಗಕ್ಕೆ 80ರ ದಶಕದಲ್ಲೇ ಕಾಲಿಟ್ಟರೂ ಜನರು ನನ್ನನ್ನು ಗುರುತಿಸಿದ್ದು 1987ರಲ್ಲಿ ತೆರೆಕಂಡ ‘ಸಂಗ್ರಾಮ’ ಚಿತ್ರದ ನಂತರ. ಘಟಾನುಘಟಿಗಳ ಗರಡಿಯಲ್ಲಿ ಪಳಗಿ ನನ್ನದೇ ಒಂದು ಹೆಸರು ಗಳಿಸಲು ಏಳೆಂಟು ವರ್ಷ ಬೇಕಾಯಿತು. ನಟನೆ ಜತೆಗೆ, ಇತರ ವಿಭಾಗಗಳಿಗೂ ಮಣ್ಣು ಹೊತ್ತಿದ್ದೇನೆ. ಹಾಗಾಗಿಯೇ ಇನ್ನೂ ಚಿತ್ರರಂಗದಲ್ಲಿ ಉಳಿದುಕೊಂಡಿರುವುದು. ಆದರೀಗ ಕಾಲ ಬದಲಾಗಿದೆ. ಸಿನಿಮಾ ಮುಹೂರ್ತ ಮುಗಿದ ಕೂಡಲೇ ಕಲಾವಿದರು ನಾನೊಬ್ಬ ಸ್ಟಾರ್ ಎಂಬ ಭ್ರಮೆಯಲ್ಲಿ ಮುಳುಗುತ್ತಾರೆ. ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ಮಾರ್ಕೆಟ್ ಮಾಡಿಕೊಳ್ಳುತ್ತಾರೆ. ಭವಿಷ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಸತತ ಪರಿಶ್ರಮವೇ ಯಶಸ್ಸಿನ ಮೂಲ ಎಂಬುದನ್ನು ಮರೆಯಬಾರದು.

ಮೂವತ್ತಾರು ವರ್ಷದ ನಿಮ್ಮ ಸಿನಿಹಾದಿಯನ್ನು ಹಿಂತಿರುಗಿ ನೋಡಿದರೆ ಏನೆನ್ನಿಸುತ್ತದೆ?
ಭಯದ ಜೊತೆಗೆ ಆಶ್ಚರ್ಯವೂ ಆಗುತ್ತದೆ. ಇಪ್ಪತ್ತು ರೂಪಾಯಿಗಾಗಿ ಕೂಲಿ ಕೆಲಸ ಮಾಡುತ್ತಿದ್ದವನು ನಾನು. ತಿಂಗಳಿಗೆ ನನಗೆ ಅಗತ್ಯವಿದ್ದದ್ದು ಕೇವಲ 180 ರೂಪಾಯಿ. ಊಟ, ಮನೆಬಾಡಿಗೆಗೆ ಅಷ್ಟು ಸಾಕಿತ್ತು. ಆಟೊ ಓಡಿಸಿಕೊಂಡು ಹೇಗೋ ಪಿಕ್ಚರ್ ಮಾಡಿಕೊಂಡಿರೋಣ ಎಂಬುದು ನನ್ನ ಕನಸಾಗಿತ್ತು. ಆಗ ಕಂಡಿದ್ದ ಕನಸು ಹಾಗೂ ಈಗ ಬೆಳೆದಿರುವುದನ್ನು ನೆನೆಸಿಕೊಂಡರೆ ಸೋಜಿಗವೆನಿಸುತ್ತದೆ. ನನ್ನ ಈ ಬೆಳವಣಿಗೆಗೆ ಶ್ರಮದ ಜತೆಗೆ, ದೇವರ ಆಶೀರ್ವಾದ ಕಾರಣ. ಇಷ್ಟು ವರ್ಷದ ಜರ್ನಿಯಲ್ಲಿ 29 ಚಿತ್ರಗಳನ್ನು ನಿರ್ಮಿಸಿದ್ದೇನೆ. 37 ಚಿತ್ರಗಳನ್ನು ವಿತರಣೆ ಮಾಡಿದ್ದೇನೆ. ಅನೇಕ ಚಿತ್ರಮಂದಿರಗಳನ್ನು ನಡೆಸಿದ್ದೇನೆ. ಮ್ಯೂಸಿಕ್, ಎಡಿಟಿಂಗ್ ಬಿಟ್ಟು ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಿದ್ದೇನೆ. ಕಲಿಯುವುದು ಇನ್ನೂ ಇದೆ. ಶ್ರಮದಲ್ಲಿ ನಂಬಿಕೆ ಇಡಬೇಕೇ ಹೊರತು. ಅವರಿವರ ಹೊಗಳಿಕೆಯಲ್ಲಲ್ಲ ಎಂಬುದು ಇಷ್ಟು ವರ್ಷದ ಅನುಭವದಲ್ಲಿ ನಾನು ಕಂಡುಕೊಂಡ ಸತ್ಯ.

ಕಿರುತೆರೆಯ ‘ಕಾಮಿಡಿ ಕಿಲಾಡಿಗಳು’ ಪಯಣ ಹೇಗಿದೆ? ಮುಂದಿನ ಪ್ರಾಜೆಕ್ಟ್‌ಗಳು?
ಆ ಷೋನ ಕಾನ್ಸೆಪ್ಟ್ ನನಗೆ ಇಷ್ಟವಾಗಿದ್ದರಿಂದ ಒಪ್ಪಿಕೊಂಡೆ. ಇಲ್ಲಿ ಯಾವುದೂ ಕೃತ್ರಿಮವಲ್ಲ. ನನ್ನ ಮನಸ್ಸಿನ ಭಾವನೆ ಹಾಗೂ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡಾಗ ಎಲ್ಲರೂ ಇಷ್ಟಪಟ್ಟರು. ಟಿ.ವಿ. ಷೋಗಳ ಇತಿಹಾಸದಲ್ಲಿ ದಾಖಲೆಯ ಟಿ.ಆರ್‌.ಪಿ.ಯನ್ನು ‘ಕಾಮಿಡಿ ಕಿಲಾಡಿಗಳು’ ಗಳಿಸಿದೆ. ಪ್ರತಿಭೆಯ ಅನಾವರಣಕ್ಕೂ ಷೋ ವೇದಿಕೆಯಾಗಿದೆ.
‘ನೀರ್‌ ದೋಸೆ’ ಬಳಿಕ ನಾಲ್ಕು ಸ್ಕ್ರಿಪ್ಟ್‌ಗಳು ಬಂದವು. ಯಾವುದೂ ನನಗೆ ಒಗ್ಗುತ್ತಿರಲಿಲ್ಲ. ಸ್ವಂತ ಬ್ಯಾನರ್‌ನಿಂದಲೇ ನನ್ನ ತಮ್ಮ ಕೋಮಲ್ ಮತ್ತು ನನ್ನಿಬ್ಬರು ಮಕ್ಕಳನ್ನು ಹಾಕಿಕೊಂಡು ಒಂದು ಸಿನಿಮಾ ಮಾಡುವ ಯೋಜನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT