ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೌಕ’ದ ನಾಲ್ಕು ಅಂಚುಗಳು...

Last Updated 2 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕಲಾವಿದನ ಮಗನಾಗಿದ್ದ ನಿಮ್ಮೊಳಗೆ ನಿರ್ದೇಶಕ ಇರುವುದು ಅರಿವಿಗೆ ಬಂದಿದ್ದು ಹೇಗೆ?
ನನ್ನ ತಂದೆ ಸುಧೀರ್‌ ಅವರ ನಾಟಕ ತಂಡವಿತ್ತು. ನಾನು ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಇಂಥದ್ದೇ ಅಂತಿಲ್ಲ. ನಟನೆಯಿಂದ ಹಿಡಿದು, ಕಂಪೆನಿ ನಿರ್ವಹಣೆಯವರೆಗೆ ಎಲ್ಲ ಕೆಲಸವನ್ನೂ ಮಾಡುತ್ತಿದ್ದೆ. ಶಾಲೆಗಳಲ್ಲಿಯೂ ನಾಟಕ ಮಾಡಿಸುತ್ತಿದ್ದೆ. ಮುಂದೆ ಸಿನಿಮಾ ನಟನೆಯ ಅವಕಾಶಗಳು ಬಂದವು. ನಟಿಸಿದೆ. ಆಗ ನಾನು ನಟಿಸುವ ಚಿತ್ರಗಳಲ್ಲಿಯೂ ಎಲ್ಲ ವಿಭಾಗಗಳಲ್ಲಿಯೂ ಆಸಕ್ತಿ ವಹಿಸಿ ತೊಡಗಿಕೊಳ್ಳುತ್ತಿದ್ದೆ. ಶರಣ್‌ ನನಗೆ ಯಾವಾಗಲೂ ‘ನಿನಗೆ ಸೃಜನಶೀಲ ಶಕ್ತಿಯಿದೆ. ಸಿನಿಮಾ ನಿರ್ದೇಶಿಸು’ ಎಂದು ಹೇಳುತ್ತಿದ್ದರು. ‘ರ್‍ಯಾಂಬೋ’ ಸಿನಿಮಾ ನಿರ್ದೇಶಿಸುವ ಅವಕಾಶವೂ ಬಂತು. ಆದರೆ ಕಥೆ ನನ್ನದಾಗಿರಲಿಲ್ಲ. ಆದ್ದರಿಂದ ನಿರ್ದೆಶನ ಮಾಡಲು ಮುಂದಾಗಲಿಲ್ಲ. ಚಿತ್ರಕಥೆ ಮಾಡಿಕೊಟ್ಟೆ. ನಂತರ ‘ವಿಕ್ಟರಿ’, ‘ಅಧ್ಯಕ್ಷ’, ‘ರನ್ನ’, ‘ಗಜಕೇಸರಿ’ ಹೀಗೆ ಹಲವು ಸಿನಿಮಾಗಳಲ್ಲಿ ಸಹನಿರ್ದೇಶಕನಾಗಿ, ಚಿತ್ರಕಥೆ ಬರಹಗಾರನಾಗಿ ಕೆಲಸ ಮಾಡಿದೆ. ಆದ್ದರಿಂದ ನಿರ್ದೇಶನದ ವಿವಿಧ ಆಯಾಮಗಳು ನನಗೆ ಅರಿವಾಗುತ್ತಾ ಬಂದವು.

‘ಚೌಕ’ ಕಥೆ ಹೊಳೆದಿದ್ದು ಯಾವಾಗ?
ತುಂಬ ಹಿಂದೆಯೇ ನನಗೆ ‘ಚೌಕ’ದ ಕಥಾ ಎಳೆ ಹೊಳೆದಿತ್ತು. ನಾಲ್ಕು ಜನ ಸೇರಿಕೊಂಡು ಮಾಡಿದರೆ ಚೆನ್ನಾಗಿರುತ್ತದೆ ಎಂದುಕೊಂಡಿದ್ದೆ. ನಂತರ ‘ರ್‍ಯಾಂಬೋ’ ಸಿನಿಮಾ ಮಾಡುವಾಗ ಸರಿಯಾದ ರೂಪುರೇಷೆ ಮನಸ್ಸಲ್ಲಿ ಮೂಡಿತು. ಆದರೆ ಎಲ್ಲರೂ ‘ಇದು ತುಂಬ ಸಂಕೀರ್ಣ ಕಥೆ. ಮೊದಲ ಸಿನಿಮಾಕ್ಕೆ ಇಂಥ ಕಥೆ ಇಟ್ಕೋಬೇಡ’ ಎನ್ನುತ್ತಿದ್ದರು. ನನಗೆ ಮಾತ್ರ ನನ್ನ ಮೊದಲ ಸಿನಿಮಾ ಹೀಗೇ ಇರಬೇಕು ಎಂದಿತ್ತು. ಆದ್ದರಿಂದಲೇ ಇದೇ ವಸ್ತುವನ್ನು ಕೈಗೆತ್ತಿಕೊಂಡೆ.

ಸಂಗೀತ ಸಂಯೋಜನೆ, ಗೀತರಚನೆ, ಛಾಯಾಗ್ರಹಣ ಹೀಗೆ ಸಿನಿಮಾದ ಹಲವು ವಿಭಾಗಗಳಲ್ಲಿ ಚಿತ್ರರಂಗದ ಘಟಾನುಘಟಿಗಳನ್ನು ಸೇರಿಸಿದ್ದೀರಲ್ಲ. ಈ ಆಲೋಚನೆ ಹೇಗೆ ಬಂತು?
ನನಗೆ ಚಿತ್ರರಂಗದ ಬಹುತೇಕ ಎಲ್ಲರೂ ತುಂಬ ಆಪ್ತರು. ಈ ಚಿತ್ರದಲ್ಲಿ ನಾಲ್ಕು ಭಿನ್ನ ಎಳೆಗಳಿವೆ. ಆದ್ದರಿಂದ ಅವುಗಳಿಗೆ ಬೇರೆ ಬೇರೆ ಛಾಯಾಗ್ರಾಹಕರು ಕೆಲಸ ಮಾಡಿದರೆ ಚೆನ್ನಾಗಿರುತ್ತದೆ ಎಂದು ಅಂದುಕೊಂಡೆ. ಹಾಗೆಯೇ ಅವರೆಲ್ಲರ ಜತೆ ಕೆಲಸ ಮಾಡಿದ ಅನುಭವವೂ ನನಗಾಗುತ್ತದೆ ಎಂಬ ಕಾರಣವೂ ಇತ್ತು. ಎಲ್ಲರೂ ಜನಪ್ರಿಯರೇ. ತುಂಬ ಬಿಜಿ ಇರುವಂಥವರು. ಒಪ್ಪಿಕೊಳ್ಳುತ್ತಾರೋ ಇಲ್ಲವೋ ಅಂತ ಅನುಮಾನ ಇತ್ತು. ಆದರೆ ಎಲ್ಲರೂ ಖುಷಿಯಿಂದ ಒಪ್ಪಿಕೊಂಡರು. ಹಾಗಾಗಿ ಪ್ರತಿ ಎಳೆಗೂ ಪ್ರತ್ಯೇಕ ಛಾಯಾಗ್ರಾಹಕ,  ಕಲಾ ನಿರ್ದೇಶಕ, ಸಂಗೀತ ನಿರ್ದೇಶಕ, ಸಂಭಾಷಣೆಕಾರ ಎಂದು ವಿಭಾಗಿಸಿಕೊಂಡೆವು.

ಬಹುತಾರಾಗಣವನ್ನು ನಿರ್ವಹಿಸುವುದು ಕಷ್ಟವಾಗಲಿಲ್ಲವೇ?
ನಾನು ಎಲ್ಲರಿಗೂ ಪರಿಚಿತನೇ ಆಗಿದ್ದರಿಂದ ಯಾವುದೇ ತೊಂದರೆ ಆಗಲಿಲ್ಲ. ಅಲ್ಲದೇ ಎಲ್ಲರೂ ಸಮಕಾಲೀನರು, ಸಮಾನ ಮನಸ್ಥಿತಿಯವರು. ಯಾರಿಗೂ ಅಹಂಕಾರ ಇಲ್ಲ. ಸ್ನೇಹಪೂರ್ವಕವಾಗಿ, ಸರಳವಾಗಿಯೇ ಎಲ್ಲವೂ ಮುಗಿದೇ ಹೋಯಿತು.

ನಿರ್ದೇಶಕನಾಗಿ ಈ ಸಿನಿಮಾ ನಿಮಗೆ ಏನೇನು ಕಲಿಸಿದೆ?
‘ಚೌಕ’ ಸಿನಿಮಾದಿಂದ ತಾಂತ್ರಿಕವಾಗಿ ತುಂಬ ಕಲಿತುಕೊಂಡಿದ್ದೇನೆ. ಒಂದೊಂದು ಸಿನಿಮಾದಲ್ಲಿ ಒಬ್ಬೊಬ್ಬರು ಛಾಯಾಗ್ರಾಹಕರ ಜತೆ ಕೆಲಸ ಮಾಡಿದ್ದರೆ ಐದು ಸಿನಿಮಾ ಮಾಡಬೇಕಾಗಿತ್ತು. ಆದರೆ ಐದು ಸಿನಿಮಾ ಮಾಡಿದ ಅನುಭವ ಒಂದೇ ಸಿನಿಮಾದಲ್ಲಿ ದಕ್ಕಿದೆ. ಚಿತ್ರಕಥೆಯನ್ನು ಪ್ರಬುದ್ಧವಾಗಿ ಮಾಡುವ ತಿಳಿವಳಿಕೆ ಬಂದಿದೆ.



ಹಾಡುಗಳು ಜನಪ್ರಿಯವಾಗಿವೆ. ಅದು ಸಿನಿಮಾ ಯಶಸ್ಸಿಗೆ ಪೂರಕ ಆಗುತ್ತವೆಯೇ?
ಖಂಡಿತ ಪೂರಕವಾಗಲಿವೆ. ‘ಲವ್‌ ಯೂ ಪಾ...’  ಹಾಡಂತೂ ನಮ್ಮ ಸಿನಿಮಾದ ಆತ್ಮ. ಅದಕ್ಕಾಗಿಯೇ ಆ ಹಾಡಿನ ದೃಶ್ಯಗಳನ್ನು ಬಿಡುಗಡೆ ಮಾಡಲಿಲ್ಲ. ಉಳಿದ ಹಾಡುಗಳೂ ಹಾಗೆಯೇ. ಸಿನಿಮಾದ ಕಥೆಗೆ ಹೊಂದಿಕೊಂಡೇ ಹಾಡುಗಳು ಬರುತ್ತವೆ.

ಮುಂದೆ ನಿರ್ದೇಶನದಲ್ಲಿಯೇ ಮುಂದುವರಿಯುತ್ತೀರಾ?
ಸದ್ಯಕ್ಕಂತೂ ನಿರ್ದೇಶನದಲ್ಲಿಯೇ ಮುಂದುವರಿಯುವ ನಿರ್ಧಾರ ಮಾಡಿದ್ದೇನೆ. ಒಮ್ಮೆ ಸೃಜನಶೀಲ ಚಟುವಟಿಕೆಯಲ್ಲಿ ತೊಡಗಿಕೊಂಡಮೇಲೆ ಬೇರೆ ಕಡೆಗೆ ಮನಸ್ಸು ವಾಲುವುದು ಕಷ್ಟ.

ಮುಂದೆ ಯಾವ ರೀತಿ ಚಿತ್ರಗಳನ್ನು ಮಾಡಬೇಕೆಂದುಕೊಂಡಿದ್ದೀರಿ?
ಈಗಾಗಲೇ ಕೆಲವು ಚಿತ್ರಕಥೆಗಳು ತಯಾರಾಗುತ್ತಿವೆ. ಇಂಥದ್ದೇ ಸಿನಿಮಾ ಎಂದು ನನಗೆ ನಾನು ಯಾವತ್ತೂ ಗಡಿ ಹಾಕಿಕೊಂಡಿಲ್ಲ. ಸಾಮಾನ್ಯವಾಗಿ ಎಲ್ಲರೂ ಮಾಡುವ ದಾರಿಯಿಂದ ಕೊಂಚ ಭಿನ್ನವಾಗಿ ಯೋಚಿಸುವುದು ನನಗಿಷ್ಟ. ನನಗೆ ನಾನೇ ಹಾಕಿಕೊಂಡಿರುವ ಒಂದೇ ಒಂದು ನಿಯಮ ಏನೆಂದರೆ – ಎರಡೂವರೆ ಗಂಟೆಯಲ್ಲಿ ಮನರಂಜನೆಗಾಗಿ ಏನು ಬೇಕಾದರೂ ಮಾಡಿ. ಆದರೆ ಕನಿಷ್ಠ ಹತ್ತು ನಿಮಿಷ ಒಂದು ಒಳ್ಳೆಯ ಸಂದೇಶವನ್ನು ನೀಡಲು ಮೀಸಲಿಡಬೇಕು. ಯಾಕೆಂದರೆ ಸಿನಿಮಾ, ರೇಡಿಯೊ, ಪತ್ರಿಕೆ, ಟೀವಿ ಈ ನಾಲ್ಕು, ಜನರಿಗೆ ತಲುಪುವ ಅತ್ಯಂತ ಪ್ರಬಲ ಮಾಧ್ಯಮಗಳು. ಹಾಡು, ನೃತ್ಯ, ಸಾಹಸ, ಫೈಟಿಂಗ್‌ ಏನು ಬೇಕಾದರೂ ಇರಲಿ, ಕೊನೆಗೆ ಒಂದು ಒಳ್ಳೆಯ ಸಂದೇಶ ನೀಡಬೇಕು ಎಂಬ ಜಬಾಬ್ದಾರಿಯೂ ನಮಗಿರಬೇಕಲ್ಲವೇ? ಚೌಕ ಸಿನಿಮಾಕ್ಕೆ ಸಿಗುವ ಸ್ಪಂದನದ ಮೇಲೆ ನನ್ನ ಉಳಿದ ಸಿನಿಮಾಗಳೂ ಸಿದ್ಧವಾಗುತ್ತವೆ.

‘ಚೌಕ’ ಸಿನಿಮಾದ ವಿಶೇಷತೆ ಏನು?
ಕನ್ನಡದಲ್ಲಿ ಈ ಮಾದರಿಯ ಸಿನಿಮಾ ಆಗಿಲ್ಲ. ಪೂರ್ತಿ ಕಲಾತ್ಮಕವೂ ಅಲ್ಲದ, ಬರೀ ಮನರಂಜನೆಯಷ್ಟೇ ಉದ್ದೇಶವೂ ಆಗಿರದ ಮಧ್ಯಮ ಮಾರ್ಗ ಇಲ್ಲಿದೆ. ಚೌಕ ವಾಣಿಜ್ಯಾತ್ಮಕ ಬಂಧವುಳ್ಳ ಕಲಾತ್ಮಕ ಪ್ರಯತ್ನ. ಈ ಸಿನಿಮಾ ನೋಡಲು ಬಂದ ಪ್ರೇಕ್ಷಕ ಚಿತ್ರಮಂದಿರದಿಂದ ಹೊರಗೆ ಬಂದಾಗ ಒಂದು ಮಹತ್ವದ ವಿಚಾರವನ್ನಂತೂ ಖಂಡಿತ ತೆಗೆದುಕೊಂಡು ಹೋಗುತ್ತಾರೆ.                                          v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT