ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಕಿಲುಬಿಗೆ ಉಪ್ಪಿನ ಹೊಳಪು

Last Updated 2 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

‘ಉಪ್ಪಿನ ಕಾಗದ’ ಮರವನ್ನು ಸಪಾಟು ಮಾಡಲು ಬಳಸುವ ಒಂದು ಒರಟಾದ ಹಾಳೆ. ಇಂಗ್ಲಿಷ್‌ನಲ್ಲಿ ಇದಕ್ಕೆ ಸ್ಯಾಂಡ್ ಪೇಪರ್ ಎನ್ನುತ್ತಾರೆ. ಮರಗಟ್ಟಿ ಹೋದ ಬದುಕನ್ನೂ ಉಪ್ಪಿನ ಕಾಗದದಿಂದ ಉಜ್ಜಿ ಸಪಾಟು ಮಾಡುವ ಅವಶ್ಯವಿದೆ ಎಂಬ ಆಶಯದಲ್ಲಿ ನಿರ್ದೇಶಕ ಬಿ. ಸುರೇಶ್ ‘ಉಪ್ಪಿನ ಕಾಗದ’ ಎಂಬ ಶೀರ್ಷಿಕೆಯಲ್ಲಿ ಸಿನಿಮಾ ಮಾಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಮುಂಬೈಗೆ ಹೋದಾಗ ಕೇಳಿದ ಕಥೆಯನ್ನು ತಲೆಯಲ್ಲಿ ಇಟ್ಟುಕೊಂಡಿದ್ದ ಸುರೇಶ್, 2008ರಲ್ಲಿ ಬಯಲುಸೀಮೆಯಲ್ಲಿ ಸುತ್ತಾಡುವಾಗ ಮತ್ತೊಂದು ಕಥೆಗೆ ಮುಖಾಮುಖಿಯಾದರು. ಈ ಎರಡೂ ಕಥೆಗಳನ್ನು ಬೆಸೆದು ಸಿನಿಮಾ ಮಾಡಲು ಮುಂದಾದಾಗ ಮೂಡಿದ್ದೇ ‘ಉಪ್ಪಿನ ಕಾಗದ’. ‘ಚಿತ್ರದಲ್ಲಿ ಮೌನವೇ ಪ್ರಮುಖ ಪಾತ್ರವಾಗಿದೆ. ಇಂಥದ್ದೊಂದು ಸಿನಿಮಾವನ್ನು ನಾನು ಜೀವಮಾನದಲ್ಲಿ ಮಾಡಿಲ್ಲ. 14 ದಿನಗಳಲ್ಲಿ ಚಿತ್ರೀಕರಣ ಮುಗಿದಿದ್ದು, ಅದಕ್ಕಾಗಿ ಆರೇಳು ವರ್ಷಗಳ ಸಿದ್ಧತೆ ಮಾಡಿದ್ದೇವೆ’ ಎಂದು ಅವರು ಹೇಳಿದರು.

ಬಡಗಿ ಪಾತ್ರದಲ್ಲಿ ನಟಿಸಿರುವ ಟಿ.ಎಸ್. ನಾಗಾಭರಣ, ‘ಇದು ಆತ್ಮಾವಲೋಕನಕ್ಕೆ ಅವಕಾಶ ಮಾಡಿಕೊಡುವಂಥ ಪಾತ್ರ. ಚಿತ್ರೀಕರಣದ ಸಮಯದಲ್ಲಿ ದಿನವೆಲ್ಲಾ ಪಾತ್ರದಲ್ಲೇ ತನ್ಮಯನಾಗಿರುತ್ತಿದ್ದೆ’ ಎಂದರು. ಯಾವುದೇ ವಿಶಿಷ್ಟ ಅನುಭವ ಪಡೆಯಲು ಬೇಕಿರುವ ಪೂರ್ವ ಸಿದ್ಧತೆಯನ್ನು ಈ ಚಿತ್ರ ಸಾಧಿಸಿದೆ ಎಂಬುದು ಅವರ ಅಭಿಪ್ರಾಯ. ಮತ್ತೊಬ್ಬ ಪಾತ್ರಧಾರಿ ಮಂಡ್ಯ ರಮೇಶ್, ‘ಇಡೀ ಚಿತ್ರವನ್ನು ಪ್ರತಿಮೆಗಳ ರೂಪಕದಲ್ಲಿ ಕಟ್ಟಲಾಗಿದೆ’ ಎಂದರು. ರುದ್ರ ರಮಣೀಯ ತಲ್ಲಣಗಳನ್ನು ಹುಟ್ಟುಹಾಕುವ ಸಿನಿಮಾ ಇದು ಎನ್ನುವ ಬಣ್ಣನೆ ಅವರದು. ಚಿತ್ರದಲ್ಲಿ ನಟಿಸಿರುವ ಅಪೂರ್ವ ಭಾರದ್ವಾಜ್, ‘ನನ್ನ ವೃತ್ತಿಜೀವನದ ಅತಿ ಚಿಕ್ಕ ಅವಧಿಯಲ್ಲಿ ಇಂಥದ್ದೊಂದು ಮಹತ್ವದ ಪಾತ್ರ ಸಿಕ್ಕಿದೆ’ ಎಂದು ಸಂಭ್ರಮಿಸಿದರು.

ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಜಯಂತ ಕಾಯ್ಕಿಣಿ, ಚೇತನಾ ತೀರ್ಥಹಳ್ಳಿ, ಬಿ. ಸುರೇಶ್ ಸಾಹಿತ್ಯಕ್ಕೆ ಫಯಾಜ್ ಖಾನ್, ಸಂಗೀತಾ ಕಟ್ಟಿ ಕಂಠವಿದೆ. ಹರಿಕೃಷ್ಣ ತಮ್ಮ ಎಂದಿನ ವ್ಯಾಪಾರಿ ಸಿನಿಮಾಗಳ ಸಂಗೀತದಿಂದ ದೂರವಾಗಿ ಕಲಾತ್ಮಕ ಚಿತ್ರ ಬೇಡುವ ಮಾದರಿಯ ಸಂಗೀತ ಸಂಯೋಜಿಸಿದ್ದಾರೆ.

‘ನೋಟುಗಳ ಅಪಮೌಲ್ಯದ ನಂತರ ನನ್ನ ಮುಖದಲ್ಲಿ ಮೊದಲ ಬಾರಿ ನಗು ಬಂದಿದ್ದು ಈ ಚಿತ್ರದ ಮೊದಲ ಪ್ರತಿ ನೋಡಿದಾಗ’ ಎಂದರು ನಿರ್ಮಾಪಕಿ ಶೈಲಜಾ ನಾಗ್. ಕಾರ್ಕಳದ ದುರ್ಗ ಎಂಬ ಸ್ಥಳದಲ್ಲಿ, ಜಲಪಾತದ ಅಂಚಿಗೆ ಚಿತ್ರೀಕರಣ ನಡೆಸಲಾಗಿದೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಪ್ರಕಾಶ ಕರಿಂಜ ಸಂಕಲನ, ಶಶಿಧರ ಅಡಪ ಕಲಾ ನಿರ್ದೇಶನ ಇದೆ. ಚಿತ್ರ ಈ ಬಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT