ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೂಫಾನ್‌ ಕಿ ಬೇಟಿ’ ಕಂಗನಾ...!

Last Updated 2 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ADVERTISEMENT

ರಂಗೂನ್‌... ಪಟ್ಟಣವೊಂದರ ಹೆಸರೂ ಹೌದು. ಸಿನಿಮಾದ ಹೆಸರು ಕೂಡಾ.

ಯುದ್ಧ ಮತ್ತು ಪ್ರೇಮೋನ್ಮಾದವನ್ನು ಸಾರುವ ‘ರಂಗೂನ್’ ಸಿನಿಮಾದ ಪೋಸ್ಟರ್‌ ಮತ್ತು ಟ್ರೇಲರ್‌ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿವೆ. ಈ ಸಿನಿಮಾದಲ್ಲಿ ಬಾಲಿವುಡ್‌ ನಟಿ ಕಂಗನಾ ರನೌತ್ ‘ತೂಫಾನ್‌ ಕಿ ಬೇಟಿ’ಯಾಗಿ ಜೂಲಿಯಾ ಪಾತ್ರದಲ್ಲಿ ನಟಿಸಿದ್ದಾರೆ.

ಸಾಹಸ, ಸೌಂದರ್ಯ ಎರಡನ್ನೂ ಮೇಳೈಸಿಕೊಂಡಂತೆ ಇರುವ ಜೂಲಿಯಾ ಪಾತ್ರದಲ್ಲಿ ಕಂಗನಾ ಗಮನ ಸೆಳೆಯುತ್ತಾರೆ. ಆಧುನಿಕ ವಿನ್ಯಾಸದ ಉಡುಗೆಗಳು ಜತೆಗೆ ಮಿಲಿಟರಿ ಉಡುಪು ತೊಟ್ಟ ಕಂಗನಾ ಪೋಸ್ಟರ್‌ಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಿವೆ.
ಖಾಕಿ ಹಾಫ್ ಚೆಡ್ಡಿ ತೊಟ್ಟ ಕಂಗನಾ ಕೈಯಲ್ಲಿ ಚಾಟಿ ಹಿಡಿದಿರುವ ದೃಶ್ಯ ‘ಹಂಟರ್‌ವಾಲಿ’ ಫಿಯರ್‌ಲೆಸ್ ನಾಡಿಯಾಳನ್ನು ನೆನಪಿಸುತ್ತದೆ. ಅಷ್ಟೇ ಅಲ್ಲ ಚಿತ್ರದಲ್ಲಿ ಕಂಗನಾ ಸಣ್ಣಪುಟ್ಟ ಸ್ಟಂಟ್‌ಗಳನ್ನೂ ಮಾಡಿದ್ದಾರೆ.

ಸೈಫ್ ಅಲಿಖಾನ್, ಶಾಹೀದ್ ಕಪೂರ್ ಕಾಂಬಿನೇಷನ್‌ನಲ್ಲಿ ಮೊದಲ ಬಾರಿಗೆ ಕಂಗನಾ ನಟಿಸುತ್ತಿದ್ದು, ಟ್ರೇಲರ್ ನೋಡಿದವರಿಗೆ ಇದೊಂದು ತ್ರಿಕೋನ ಪ್ರೇಮಕಥೆಯಂತೆ ಭಾಸವಾಗುತ್ತದೆ. ಆದರೆ, ಸೈನಿಕನಾಗಿ ಕಾಣಿಸಿಕೊಂಡಿರುವ ಶಾಹೀದ್ ಕಪೂರ್ ಪಾತ್ರ ಮಾತ್ರ ಚಿತ್ರಕಥೆ ಬೇರೆಯದೇ ಎಂಬುದನ್ನು ಹೇಳುತ್ತದೆ.

1944ರ ಎರಡನೇ ಮಹಾಯುದ್ಧದ ದೃಶ್ಯಗಳು ಮತ್ತು ಶಾಹೀದ್–ಕಂಗನಾ ಕೆಮಿಸ್ಟ್ರಿ ‘ರಂಗೂನ್‌’ ಅನ್ನು ಮತ್ತಷ್ಟು ರಂಗಾಗಿಸಿವೆ.
12 ಹಾಡುಗಳು ರಂಗೂನ್‌ನಲ್ಲಿ ಬರೋಬ್ಬರಿ ಹನ್ನೆರೆಡು ಹಾಡುಗಳಿವೆ. ಕವಿ ಗುಲ್ಜಾರ್ ಬರೆದಿರುವ ಹಾಡುಗಳಿಗೆ ವಿಶಾಲ್ ಭಾರದ್ವಾಜ್ ಸಂಗೀತ ನೀಡಿದ್ದಾರೆ.

‘ಬ್ಲಡಿ ಹೆಲ್’ ಎನ್ನುವ ಮೊದಲ ಹಾಡಿನಲ್ಲಿ ಕಂಗನಾ ಹಸಿಬಿಸಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದುದ್ದಕ್ಕೂ ಇಂಥ ದೃಶ್ಯಗಳಿವೆ ಎಂಬ ಸುಳಿವನ್ನೂ ಟ್ರೇಲರ್ ಬಿಟ್ಟುಕೊಡುತ್ತದೆ.

‘ಓಂಕಾರ್’, ‘ಹೈದರ್‌’ನಂಥ ಚಿತ್ರಗಳನ್ನು ನೀಡಿದ್ದ ನಿರ್ದೇಶಕ ವಿಶಾಲ್‌ ಭಾರದ್ವಾಜ್ ಈ ಚಿತ್ರದ ನಿರ್ದೇಶಕ. ಚಿತ್ರದ ಎಲ್ಲಾ ಹಾಡುಗಳ ಹಕ್ಕುಗಳನ್ನು ಟೀ ಸೀರಿಸ್ ಕಂಪೆನಿ ಖರೀದಿಸಿದೆ.

ಚಿತ್ರಕ್ಕೆ ಮೊದಲು ‘ಜೂಲಿಯಾ’ ಎಂಬ ಹೆಸರು ಇಡಲಾಗಿತ್ತು. ‘ಸಾತ್ ಕೂನ್ ಮಾಫ್‌’ ಸಿನಿಮಾದ ಕಥೆ ಬರೆದಿದ್ದ ಮ್ಯಾಥ್ಯೂ ರಾಬಿನ್ಸ್‌ ಚಿತ್ರಕ್ಕೆ ಚಿತ್ರಕಥೆ ಕಟ್ಟಿಕೊಟ್ಟಿದ್ದು, ಅರುಣಾಚಲ ಪ್ರದೇಶದಲ್ಲಿ ಸಿನಿಮಾ ಚಿತ್ರೀಕರಣಗೊಂಡಿದೆ. 2015ರಲ್ಲಿ ಆರಂಭವಾದ ಸಿನಿಮಾದ ಚಿತ್ರೀಕರಣ ಬರೋಬ್ಬರಿ ಎರಡು ವರ್ಷಗಳ ಬಳಿಕ ಪೂರ್ಣಗೊಂಡಿದೆ. ‘ರಂಗೂನ್‌’ ಫೆ.24ರಂದು ತೆರೆ ಕಾಣುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT