ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹದಾನ: ಏಕೆ ಉದಾಸೀನ?

Last Updated 2 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕಳೆದ ವಾರ ನಮ್ಮ ತಾಯಿ ಇಹಲೋಕ ತ್ಯಜಿಸಿದರು. ಅವರ ಇಚ್ಛೆಯಂತೆ ‘ದೇಹದಾನ’ ಮಾಡಬೇಕಿತ್ತು. ನಮ್ಮ ತಾಯಿ ಅನಕ್ಷರಸ್ಥರಾದರೂ ದೃಶ್ಯಮಾಧ್ಯಮಗಳಲ್ಲಿನ ಮಾಹಿತಿಯನ್ನು ಅರಿತು, ನಿಧನಾನಂತರ ತನ್ನ ದೇಹವನ್ನು ಯಾವುದಾದರೂ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನ ಮಾಡಿ, ವೈದ್ಯ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲ ಮಾಡಿಕೊಡಬೇಕೆಂದು ಬಯಸಿದ್ದರು.  ಅಂತೆಯೇ ತಮ್ಮ ಅಂತಿಮ ಇಚ್ಛೆಯನ್ನು ಸಾಯುವ ಕೆಲವೇ ಗಂಟೆಗಳ ಮೊದಲು ಪುನರುಚ್ಚರಿಸಿದ್ದರು.  ಅಲ್ಲದೆ ತತ್ಸಂಬಂಧ ದಾವಣಗೆರೆಯ ವೈದ್ಯಕೀಯ ಮಹಾವಿದ್ಯಾಲಯವೊಂದಕ್ಕೆ ಲಿಖಿತ ರೂಪದಲ್ಲಿ ಮನವಿಯನ್ನೂ ಸಲ್ಲಿಸಿ, 8 ವರ್ಷಗಳ ಹಿಂದೆಯೇ ನೋಂದಣಿ ಮಾಡಿಸಲಾಗಿತ್ತು. ನಮ್ಮವ್ವ ಸತ್ತಿದ್ದು ಮಧ್ಯರಾತ್ರಿ 1.30 ಗಂಟೆಗೆ. 2 ಗಂಟೆಗೆ ಆ  ಆಸ್ಪತ್ರೆಗೆ ದೂರವಾಣಿ ಕರೆ ಮಾಡಿ, ಕಣ್ಣುಗಳು ಹಾಗೂ ದೇಹವನ್ನು ತೆಗೆದುಕೊಂಡು ಹೋಗುವಂತೆ ವಿನಂತಿಸಿದೆವು.

ಅಪರಾತ್ರಿಯಲ್ಲೂ ಕರೆ ಸ್ವೀಕರಿಸಿದ ಮಹಿಳಾ ವೈದ್ಯರು, ‘ಕಣ್ಣುಗಳನ್ನು ಮೃತರಾದ 2-3 ಗಂಟೆಗಳೊಳಗೆ ತೆಗೆಯಬೇಕು. ಆದರೆ ಇಷ್ಟೊತ್ತಿನಲ್ಲಿ ಯಾವ ನೇತ್ರತಜ್ಞರೂ ದೊರೆಯುವುದಿಲ್ಲ. ಅಲ್ಲದೆ ನೀವು ನಮ್ಮ ಆಸ್ಪತ್ರೆಯಿಂದ ದೂರದಲ್ಲಿ ಬೇರೆ ಇದ್ದೀರಿ. ಹೀಗಾಗಿ ಕಣ್ಣುಗಳನ್ನು ಬಳಸಲು ಸಾಧ್ಯವಿಲ್ಲ. ನಿಮಗೆ ಇಷ್ಟವಿದ್ದರೆ ಮುಂಜಾನೆ 6 ಗಂಟೆಯ ಒಳಗಾಗಿ ಮೃತದೇಹವನ್ನು ನಿಮ್ಮ ಖರ್ಚಿನಲ್ಲಿಯೇ ನಮ್ಮ ಮಹಾವಿದ್ಯಾಲಯಕ್ಕೆ ತಂದರೆ ಮಾತ್ರ ಮೃತ ಶರೀರವು ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲಕರವಾಗಿರುತ್ತದೆ. ಇಲ್ಲದಿದ್ದರೆ ಪ್ರಯೋಜನವಾಗುವುದಿಲ್ಲ’ ಎಂದು ಹೇಳಿದರು.

‘ಹಾಗಲ್ಲ ಮೇಡಂ, ಎಷ್ಟೇ ಅವಸರಿಸಿದರೂ ಬಂಧುಮಿತ್ರರು ಬರುವಷ್ಟರಲ್ಲಿ ಕನಿಷ್ಠ ಬೆಳಗಿನ 8 ಗಂಟೆಯಾಗುತ್ತದೆ. 6 ಗಂಟೆಯ ಒಳಗೆ ಶರೀರವನ್ನು ಹೇಗೆ ತಲುಪಿಸಲು ಸಾಧ್ಯ?’ ಎಂಬ ಪ್ರಶ್ನೆಗೆ ‘ಅದು ನಿಮಗೆ ಬಿಟ್ಟಿದ್ದು!’ ಎಂದು ದೂರವಾಣಿ ಕರೆ ಸ್ಥಗಿತಗೊಳಿಸಿದರು.

ಇದು ಆಗದ ಮಾತೆಂದುಕೊಂಡು ನಾವು ಮುಂದಿನ ವ್ಯವಸ್ಥೆಗೆ ಅಣಿ ಮಾಡಿಕೊಳ್ಳಲು ನಿರ್ಧರಿಸಿದೆವು. ಅಷ್ಟರಲ್ಲಿ ಬೈಲಹೊಂಗಲದ ಡಾ. ರಾಮಣ್ಣನವರ ಚಾರಿಟಬಲ್ ಟ್ರಸ್ಟ್ ಈ ದೇಹದಾನದ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವ ವಿಷಯ ನೆನಪಿಗೆ ಬಂತು. ತಮ್ಮ ತಂದೆಯ ಮೃತದೇಹವನ್ನೇ ವೈದ್ಯ ವಿದ್ಯಾರ್ಥಿಗಳಿಗಾಗಿ ಸ್ವತಃ ವಿಚ್ಛೇದಿಸಿ, ವಿಶ್ವದಾಖಲೆ ಮಾಡಿರುವ ಡಾ. ಮಹಾಂತೇಶ ರಾಮಣ್ಣನವರ ಅವರಿಗೆ ರಾತ್ರಿ 2.30ಕ್ಕೇ ಕರೆ ಮಾಡಿದೆ. ಅವರು ಅತ್ಯಂತ ಕಳಕಳಿಯಿಂದ ಸಮಗ್ರ ಮಾಹಿತಿಯನ್ನು ಪಡೆದು, ‘ದೇಹವನ್ನು ಶೀತಲಪೆಟ್ಟಿಗೆಯೊಳಗೆ ಇರಿಸಿ, ನಂತರ ನಿಮ್ಮ ಬಂಧುಮಿತ್ರರ ಆಗಮನವಾದ ಮೇಲೆ, ನಿಮ್ಮ ಇಷ್ಟಾನುಸಾರ ವಿಧಿವಿಧಾನಗಳನ್ನು ಆಚರಿಸಿ, ಆಮೇಲೆ ಸಾಧ್ಯವಾದಷ್ಟು ಶೀಘ್ರವಾಗಿ ಮೃತದೇಹವನ್ನು ಸಾಗಿಸಲು ಯೋಜಿಸಿ, ಶರೀರಕ್ಕೆ ಏನೂ ಆಗುವುದಿಲ್ಲ’ ಎಂದು ಭರವಸೆ ನೀಡಿ, ನೈತಿಕ ಸ್ಥೈರ್ಯವನ್ನು ತುಂಬಿದ್ದಷ್ಟೇ ಅಲ್ಲದೆ, ಮೃತದೇಹವನ್ನು ಇರಿಸಬೇಕಾದ ವಿಧಾನ, ಅದರ ಸ್ಥಿತಿ ಇತ್ಯಾದಿ ಕುರಿತು ನಿರಂತರವಾಗಿ ಕರೆ ಮಾಡುತ್ತ, ಪ್ರತಿ ಕ್ಷಣದ ಮಾಹಿತಿಯನ್ನು ಪಡೆಯುತ್ತ, ಅವರದೇ ಆಂಬುಲೆನ್ಸ್‌ನಲ್ಲಿ ಉಚಿತವಾಗಿ ಮೃತದೇಹವನ್ನು ಸಾಗಿಸಲು ಸಂಪೂರ್ಣ ವ್ಯವಸ್ಥೆ ಕಲ್ಪಿಸಿಕೊಟ್ಟರು.

ಅವರ ಆಸ್ಪತ್ರೆಯಲ್ಲಿ ಶರೀರವನ್ನು ಹಸ್ತಾಂತರಿಸಿದ ಮೇಲೆ, ನಮ್ಮ ತಾಯಿಯ ದೇಹವನ್ನು ಕೇವಲ ‘ಮೃತಶರೀರ’ವನ್ನಾಗಿ ಪರಿಗಣಿಸದೆ, ವೈದ್ಯ ವಿದ್ಯಾರ್ಥಿಗಳ ಜ್ಞಾನಭಂಡಾರವೆಂಬಂತೆ ಅತ್ಯಂತ ಪೂಜನೀಯ ಭಾವದಿಂದ, ಭಕ್ತಿಪೂರ್ವಕ ಸ್ವೀಕರಿಸಿ, ವಿದ್ಯಾರ್ಥಿ ಸಮೂಹದೊಂದಿಗೆ ಒಂದು ಶ್ರದ್ಧಾಂಜಲಿ ಕಾರ್ಯಕ್ರಮವನ್ನೂ ಮಾಡಿ, ನಮ್ಮನ್ನು ಆದರದಿಂದ ಬೀಳ್ಕೊಟ್ಟರು.

ನಮ್ಮ ತಾಯಿಯ ನಿಧನಾನಂತರ ಕೆಲವೇ ದಿನಗಳ ಅಂತರದಲ್ಲಿ ನಮ್ಮ ಸನಿಹದ ಬಂಧುವೊಬ್ಬರು ಹುಬ್ಬಳ್ಳಿಯಲ್ಲಿ ಅಸುನೀಗಿದರು. ಅದೂ ರಾತ್ರಿ 2.15ರ ಸುಮಾರಿಗೆ.  ಹುಬ್ಬಳ್ಳಿಯ ಅತೀ ಹಳೆಯ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದೂರವಾಣಿ ಕರೆ ಮಾಡಿ ದೇಹದಾನದ ಕುರಿತು ಹೇಳಿದಾಗ, ಮೃತಶರೀರವನ್ನು ಕೂಡಲೇ ತಂದು ಕೊಡಬೇಕೆಂದೂ, ಸಾಧ್ಯವಾಗದಿದ್ದಲ್ಲಿ ದಫನ್ ಮಾಡುವಂತೆ ಉಪದೇಶಿಸಿದರು!  ‘ಬಂಧು ಬಳಗ ಬರಬೇಕಲ್ಲವೇ’ ಎಂಬ ಪ್ರಶ್ನೆಗೆ ‘ಅದನ್ನೆಲ್ಲ ನೀವು ಮೊದಲೇ ಆಲೋಚಿಸಿ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಬೋಧಿಸಿದರು! ಅಂದರೆ ಸಾಯುವವರು ವೈದ್ಯರ ಸಮಯಾವಕಾಶವನ್ನು ಮೊದಲೇ ಕೇಳಿಕೊಂಡು ಸಾಯಬೇಕು! ದುರದೃಷ್ಟವಶಾತ್ ಅವರ ಕುಟುಂಬದ ಹಲವು ಜನರು ದೇಹದಾನಕ್ಕಾಗಿ ಸಿದ್ಧವಾಗಿದ್ದವರು, ವೈದ್ಯರ ಈ ಉದಾಸೀನ ಪ್ರವೃತ್ತಿಯನ್ನು ನೋಡಿ, ‘ದಫನ್ ಮಾಡಿದರೂ, ದಹನ ಮಾಡಿದರೂ ನಡೆಯುತ್ತದೆ. ಈ ದೇಹದಾನ ಮಾತ್ರ ಬೇಡ’ ಎಂಬ ನಿಲುವಿಗೆ ಬಂದಿದ್ದಾರೆ.

ವೈದ್ಯರು ಮಾನವೀಯತೆಯ ಮೇರುಪರ್ವತವೆಂಬ ಭಾವ ಜನಸಾಮಾನ್ಯರಲ್ಲಿದೆ.  ಒಬ್ಬ ಮೃತವ್ಯಕ್ತಿಯ ಕಣ್ಣುಗಳು ಇಬ್ಬರು ಕುರುಡರಿಗೆ ಬೆಳಕು ಕರುಣಿಸಬಲ್ಲವು.  ನತದೃಷ್ಟ ಅಂಧರಿಗೆ ಅನಾಯಾಸವಾಗಿ ನಯನಗಳೆರಡು ದೊರೆತರೆ ಅವರಿಗಾಗುವ ಆನಂದ ಅನನ್ಯ. ನೇತ್ರದಾನ ಮಾಡುವವರು ಇದ್ದರೂ, ವೈದ್ಯರು ಸಮಯಾನುಸಾರವಾಗಿ ಸ್ಪಂದಿಸದೇ ಇದ್ದರೆ ಏನು ಪ್ರಯೋಜನ?  ಅವಕಾಶಗಳಿದ್ದರೂ ಅನ್ಯಾಯವಾಗಿ ಅಂಧರು ವೈದ್ಯರ ಈ ಉದಾಸೀನ ಪ್ರವೃತ್ತಿಯಿಂದ ಅನವರತವೂ ಪರದಾಡ ಬೇಕಾಗುತ್ತದಲ್ಲ? ನಮ್ಮಂತೆ ಅವರೂ ಮನುಷ್ಯರು, ದುರ್ದೈವಕ್ಕೆ ಅವರಿಗೆ ಕುರುಡುತನ ಆವರಿಸಿದೆ ಎಂಬ ಭಾವನೆ ಇಂತಹ ವೈದ್ಯರಲ್ಲಿ ಏಕೆ ಉದಿಸುವುದಿಲ್ಲ? ವೈದ್ಯರ ಸಮಯೋಚಿತ ಸಹಾಯವು ಮಾನವೀಯತೆಯಿಂದ ದಾನ ಮಾಡುವವರ ಆತ್ಮಕ್ಕೆ ಶಾಂತಿ ದೊರಕಿಸಿ ಕೊಡುತ್ತದೆ. ಮಿಗಿಲಾಗಿ ಇಬ್ಬರು ಅಂಧರು ಅನುದಿನವೂ ನಯನ ಮನೋಹರವಾದ ಸೃಷ್ಟಿಯನ್ನು ಸವಿಯುವ, ಅಂಧಕಾರವನ್ನು ಅಳಿಸಿ, ಆನಂದವನ್ನು ಅನುಭವಿಸುವ ಸದವಕಾಶವನ್ನು ಒದಗಿಸಿಕೊಡುತ್ತದೆ. ಕಣ್ಣಿಲ್ಲದವರ ಕಷ್ಟಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುವವರಿಗೇಕೆ ಅರ್ಥವಾಗುವುದಿಲ್ಲ? 

ಭೌಗೋಳಿಕ ಸ್ಥಿತಿಗನುಗುಣವಾಗಿ, ಮೃತದೇಹಗಳು ವೈದ್ಯ ವಿದ್ಯಾರ್ಥಿಗಳಿಗೆ ನಿರಂತರವಾಗಿ ಹಾಗೂ ಹೇರಳವಾಗಿ ದೊರೆಯುವುದು ಕಷ್ಟ. ಶವಚ್ಛೇದ ಮಾಡಿ ಶರೀರದ ಬಗ್ಗೆ ಅರಿಯುವುದು ವೈದ್ಯ ವಿದ್ಯಾರ್ಥಿಗಳಿಗೆ ಅತ್ಯವಶ್ಯಕ. ಈಗ  ಅಧ್ಯಯನಕ್ಕಾಗಿ ಶವ ಸಿಗುವುದು ವಿರಳ. ಈ ಹಿನ್ನೆಲೆಯಲ್ಲಿ ಮೃತದೇಹಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಇಂಥ ಸನ್ನಿವೇಶದಲ್ಲಿ, ಇಷ್ಟಪಟ್ಟು ದೇಹದಾನ ಮಾಡಿದಾಗಲೂ ಸಂಬಂಧಪಟ್ಟವರು ಸರಿಯಾಗಿ  ಸ್ಪಂದಿಸದಿದ್ದರೆ ಹೇಗೆ?

ನಮ್ಮವ್ವ ಸಾಕಿದ ನಾಯಿ ತನ್ನ ಒಡತಿ ಇನ್ನಿಲ್ಲವೆಂದು ಅರಿತು ಎರಡು ದಿನ ಅನ್ನ ನೀರನ್ನೇ ಮುಟ್ಟಲಿಲ್ಲ. ಅದಕ್ಕೆ ಮುದ್ದುಗರೆದು, ಮೈಮರೆಸಿ ಅನ್ನ ತಿನ್ನಿಸಬೇಕಾದರೆ ಮನೆಯವರೆಲ್ಲರೂ ಸುಸ್ತು ಹೊಡೆದರು. ಬುದ್ಧಿ, ವಿವೇಚನೆ, ಆಲೋಚನೆ ಎಲ್ಲವನ್ನೂ ಮೈಗೂಡಿಸಿಕೊಂಡ ಮನುಷ್ಯನಿಗೆ ಮಾನವೀಯತೆ, ಸಹೃದಯತೆ ಇಲ್ಲವೆಂದರೆ ‘ಅಂಧತ್ವ ನಿವಾರಣೆ ಯೋಜನೆ’, ‘ದೇಹದಾನ ಅಭಿಯಾನ’ ಇತ್ಯಾದಿ ಕ್ಲೀಷೆ ಎನಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT