ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯಾಳುಗಳ ರಕ್ಷಣೆ ಮುಖ್ಯ ಮೊಬೈಲ್‌ ಚಿತ್ರೀಕರಣ ಅಲ್ಲ

Last Updated 2 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕೊಪ್ಪಳದಲ್ಲಿ ಬುಧವಾರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಯುವಕನೊಬ್ಬ ಸಕಾಲದಲ್ಲಿ ಸಹಾಯ  ಸಿಗದೆ ಅಸುನೀಗಿದ  ಘಟನೆ ಎಲ್ಲರ ಕಣ್ಣು ತೆರೆಸಬೇಕು. ಏಕೆಂದರೆ, ಈತ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೆ ದಾರಿಹೋಕರು ನೆರವಿಗೆ ಮುಂದಾಗದೆ ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ   ಹರಿಯಬಿಡುವುದರಲ್ಲಿಯೇ ಹೆಚ್ಚು ಆಸಕ್ತರಾಗಿದ್ದರಂತೆ. ಕೆಲವೇ ದಿನಗಳ ಹಿಂದೆ ಮೈಸೂರಿನಲ್ಲಿ  ಪೊಲೀಸ್‌ ಇನ್‌ಸ್ಪೆಕ್ಟರ್‌ ಮತ್ತವರ ಜೀಪ್‌ ಚಾಲಕ ಅಪಘಾತಕ್ಕೀಡಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿಯೇ ಒದ್ದಾಡಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಅಸುನೀಗಿದ ಪ್ರಕರಣವೂ ನಡೆದಿದೆ. ಅಲ್ಲಿ ಕೂಡ ದಾರಿಹೋಕರು ಸಹಾಯ ಮಾಡುವುದು ಬಿಟ್ಟು ಮೊಬೈಲ್‌ನಲ್ಲಿ ಚಿತ್ರ ತೆಗೆಯುತ್ತಿದ್ದರಂತೆ. ಇವೆಲ್ಲ ಅಮಾನವೀಯತೆಯ ಪರಮಾವಧಿ. ಜೀವ ಉಳಿಸುವುದನ್ನು ಬಿಟ್ಟು ಚಿತ್ರ ತೆಗೆಯುವುದು, ಅದನ್ನು ದೃಶ್ಯ ಮಾಧ್ಯಮಗಳಿಗೆ ಕಳಿಸುವುದು ಇತ್ತೀಚೆಗೆ ಅನೇಕರಿಗೆ ಒಂದು ಖಯಾಲಿ ಆಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಮೊದಲ ಆದ್ಯತೆ ಗಾಯಾಳುವನ್ನು ಆದಷ್ಟು ಬೇಗ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳುವುದು ಆಗಬೇಕು. ಅದನ್ನು ಮರೆತವರನ್ನು ಕಟುಕರು, ಹೃದಯಹೀನರು ಎಂದು ಕರೆದರೂ ತಪ್ಪಿಲ್ಲ. ಇಂತಹ ಪರಿಸ್ಥಿತಿ ಅವರಿಗೆ ಅಥವಾ ಅವರಿಗೆ ಬಹಳ ಬೇಕಾದವರಿಗೆ ಬಂದಿದ್ದರೆ, ಆಗಲೂ ಹೀಗೆಯೇ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತ ಕಾಲಹರಣ ಮಾಡುತ್ತಿದ್ದರೇ? ಖಂಡಿತ ಇಲ್ಲ. ಇಂತಹ ಸಂದರ್ಭಗಳಲ್ಲಿ ಮಾನವೀಯತೆಯನ್ನು ಮರೆಯಬಾರದು.  

ಹಿಂದೆ ಒಂದು ಕಾಲ ಇತ್ತು. ಅಪಘಾತದ ಗಾಯಾಳುಗಳಿಗೆ ಸಹಾಯ ಮಾಡಲು ಹೋದರೆ ಕೆಲಸ ಬಿಟ್ಟು ಕೋರ್ಟ್, ಕಚೇರಿ ಎಂದೆಲ್ಲ ಅಲೆದಾಡಬೇಕಾಗುತ್ತಿತ್ತು. ಈ ಉಸಾಬರಿಯೇ ಬೇಡ ಎಂದು ದಾರಿಹೋಕರು ಸಹಾಯಹಸ್ತ ಚಾಚುತ್ತಿರಲಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರು ಸಹ ಎಷ್ಟೋ ಸಲ, ಪೊಲೀಸರು ಬರುವ ವರೆಗೆ ಚಿಕಿತ್ಸೆಯನ್ನೇ ಶುರು ಮಾಡುತ್ತಿರಲಿಲ್ಲ. ಇದರಿಂದ ಗಾಯಾಳುಗಳ ಸಾವಿನ ಸಂಖ್ಯೆ ಹೆಚ್ಚಿತ್ತು. ಈ ಕೆಟ್ಟ ಚಾಳಿ ನಿಲ್ಲಿಸಲೇಬೇಕು ಎಂಬ ಉದ್ದೇಶದಿಂದ ಸುಪ್ರೀಂ ಕೋರ್ಟ್‌ ಮಹತ್ವದ ನಿರ್ದೇಶನ ನೀಡಿ, ಅಪಘಾತದ ಗಾಯಾಳುಗಳಿಗೆ ಸಹಾಯ ಮಾಡುವವರಿಗೆ ಕಾನೂನಿನ ಕಿರುಕುಳ ತಪ್ಪಿಸಿ ರಕ್ಷಣೆ ಒದಗಿಸಬೇಕು ಎಂದು ಸೂಚಿಸಿತ್ತು. ಕೇಂದ್ರ ಸರ್ಕಾರ ಅದನ್ನು ಎಲ್ಲ ರಾಜ್ಯಗಳ ಗಮನಕ್ಕೆ ತಂದು ಸೂಕ್ತ ಕಾನೂನು ರೂಪಿಸಲು ತಿಳಿಸಿತ್ತು.  ಅದಕ್ಕೆ ಅನುಗುಣವಾಗಿ ನಮ್ಮ ರಾಜ್ಯದಲ್ಲಿ ‘ರಸ್ತೆ ಅಪಘಾತದ ಗಾಯಾಳುಗಳಿಗೆ ಸಹಾಯ ಮಾಡುವ ಪರೋಪಕಾರಿಗಳಿಗೆ ಎಲ್ಲ ರೀತಿಯ ರಕ್ಷಣೆ’ ಕೊಡುವ ಮಸೂದೆ ಮಂಡಿಸಿ ವಿಧಾನಸಭೆಯ ಒಪ್ಪಿಗೆ ಪಡೆಯಲಾಗಿದೆ. ಇಡೀ ದೇಶದಲ್ಲಿಯೇ ಇಂತಹ ಮಸೂದೆ ಅಂಗೀಕರಿಸಿದ ಮೊದಲ ರಾಜ್ಯ ನಮ್ಮದು. ಇದರ ಜತೆಯಲ್ಲಿಯೇ ಸುಪ್ರೀಂ ಕೋರ್ಟ್ ಮತ್ತು ಕೇಂದ್ರದ ಅಭಯವೂ ಇರುವುದರಿಂದ ಪರೋಪಕಾರಿಗಳು ನಿರ್ಭೀತಿಯಿಂದ ಗಾಯಾಳುಗಳ ರಕ್ಷಣೆಗೆ ಮುಂದಾಗಬಹುದಾಗಿದೆ. ಅವರು ಆಸ್ಪತ್ರೆಯಲ್ಲಿ ತಮ್ಮ ಹೆಸರನ್ನೂ ಹೇಳಬೇಕಾಗಿಲ್ಲ. ಪೊಲೀಸರು ಕೂಡ ಅಂತಹ ಮಾಹಿತಿಯನ್ನು ಬಲವಂತವಾಗಿ ಸಂಗ್ರಹಿಸುವಂತಿಲ್ಲ. ಅವರನ್ನು ಸಾಕ್ಷಿಯಾಗಿ ಕರೆಯುವಂತಿಲ್ಲ. ನ್ಯಾಯಾಲಯದ ಮುಂದೆ ಹಾಜರಾಗುವ ಅಗತ್ಯವೂ ಇಲ್ಲ. ಯಾವುದೇ ಆಸ್ಪತ್ರೆ ಕೂಡ ರಸ್ತೆ ಅಪಘಾತದ ಗಾಯಾಳುಗಳಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ.

ನಮ್ಮ ರಾಜ್ಯ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಪಘಾತದ ಗಾಯಾಳುಗಳಿಗೆ ಮೊದಲ 48 ತಾಸು ಸಮೀಪದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗುವಂತೆ ಮಾಡಲು ‘ಮುಖ್ಯಮಂತ್ರಿ ಸಾಂತ್ವನ ಹರೀಶ್‌ ಯೋಜನೆ’ ಜಾರಿಗೊಳಿಸಿದೆ. ಏಕೆಂದರೆ ಗಾಯಾಳುಗಳ ಜೀವ ರಕ್ಷಣೆಯಲ್ಲಿ ಮೊದಲ ಕೆಲವು ಗಂಟೆಗಳು ಅತ್ಯಂತ ಅಮೂಲ್ಯ. ಆ ಅವಧಿಯಲ್ಲಿ ಸಮರ್ಪಕ ಆರೈಕೆ ಸಿಕ್ಕಿದರೆ ಬದುಕುಳಿಯುವ ಸಾಧ್ಯತೆ ಹೆಚ್ಚು. ಆದರೆ ಈ ಯೋಜನೆ, ಕೋರ್ಟ್ ನಿರ್ದೇಶನ ಮತ್ತು ಮಸೂದೆಗೆ ಸಾಕಷ್ಟು ಪ್ರಚಾರ ಸಿಕ್ಕಿಲ್ಲ. ಹೀಗಾಗಿ ಜನರಲ್ಲಿನ ತಪ್ಪು ಗ್ರಹಿಕೆ ಪೂರ್ಣ ನಿವಾರಣೆಯಾಗಿಲ್ಲ. ಆದ್ದರಿಂದ ಇನ್ನಾದರೂ ಇದನ್ನೊಂದು ಆಂದೋಲನದ ರೂಪದಲ್ಲಿ ಹಳ್ಳಿ ಹಳ್ಳಿಗೂ ಪ್ರಚಾರ ಮಾಡಬೇಕು. ಆಗಲಾದರೂ ಜನ ನಿರ್ಭೀತಿಯಿಂದ ಅಪಘಾತದ ಗಾಯಾಳುಗಳಿಗೆ ಸಹಾಯ ಮಾಡಲು ಮುಂದೆ ಬಂದಾರು. ಅದಕ್ಕಿಂತ ಹೆಚ್ಚಾಗಿ, ಒಂದಿಷ್ಟು ಅಮೂಲ್ಯ ಜೀವಗಳು ಉಳಿದುಕೊಂಡಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT