ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆಗಳ ಆಗರ ಮೊರಾರ್ಜಿ ವಸತಿ ಶಾಲೆ

ಕನ್ನನಾಯಕನಹಳ್ಳಿ: ಊಟವಿಲ್ಲದೇ ತಲೆಸುತ್ತಿ ಬಿದ್ದ ಮಕ್ಕಳು, ತಿನ್ನಲು ಯೋಗ್ಯವಲ್ಲದ ಆಹಾರ
Last Updated 3 ಫೆಬ್ರುವರಿ 2017, 5:17 IST
ಅಕ್ಷರ ಗಾತ್ರ

ಹರಪನಹಳ್ಳಿ: ತಾಲ್ಲೂಕಿನ ಕನ್ನನಾಯಕನಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಸರಿಯಾದ ಊಟವಿಲ್ಲದೇ ಐದು ಮಕ್ಕಳು ತಲೆಸುತ್ತಿ ಬಿದ್ದ ಘಟನೆ ಸೋಮವಾರ ನಡೆದಿದೆ. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣಮ್ಮ ಹಾಗೂ ಉಪಾಧ್ಯಕ್ಷ ಮಂಜ್ಯಾ ನಾಯ್ಕ್ ಅವರು ಈ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲೇ ಘಟನೆ ನಡೆದಿದೆ.

ವಸತಿ ಶಾಲೆಯ ಅವ್ಯವಸ್ಥೆಯಿಂದ ಅಧ್ಯಕ್ಷ, ಉಪಾಧ್ಯಕ್ಷರು ಚಕಿತರಾದರು. ಮಕ್ಕಳ ಯಾತನೆ ಕಂಡು ರಾತ್ರಿಯವರೆಗೂ ಅಲ್ಲೇ ಉಳಿದುಕೊಂಡಿದ್ದರು.
ನಾರಾಯಣ, ಗಣೇಶ್, ಸಾಗರ್‌, ಹೇಮಂತ, ಯುವರಾಜ ಎಂಬ ವಿದ್ಯಾರ್ಥಿಗಳು ಊಟವಿಲ್ಲದೇ ನಿತ್ರಾಣಗೊಂಡವರು. ಅವರಿಗೆ ತಕ್ಷಣ ಉಪಚಾರ ನೀಡಲಾಯಿತು. ಉಪವಾಸದಲ್ಲಿದ್ದ ಮಕ್ಕಳಿಗೆ ಬಾಳೆ ಹಣ್ಣು ವ್ಯವಸ್ಥೆ ಮಾಡಲಾಯಿತು.

ಪಡಿತರ ತರಲೆಂದು ಶಾಲೆ ಪ್ರಾಚಾರ್ಯ ಹಾಗೂ ವಾರ್ಡನ್‌ ಬೆಳಿಗ್ಗೆ ಶಾಲೆಯಿಂದ ಹೋದವರು ಸಂಜೆಯಾದರೂ ವಾಪಸ್ ಬಂದಿರಲಿಲ್ಲ. ಎಂಟು ಮಂದಿ ಅಡುಗೆಯವರಿದ್ದು, ಅವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ತಿನ್ನಲು ಯೋಗ್ಯವಾಗಿಲ್ಲವೆಂಬ ಕಾರಣಕ್ಕೆ ಮಕ್ಕಳು ರಾಗಿಮುದ್ದೆ ತಿಂದಿರಲಿಲ್ಲ. ಸಾಂಬಾರಿನಲ್ಲಿ ತರಕಾರಿಯನ್ನಾಗಲೀ ಸೊಪ್ಪನ್ನಾಗಲೀ ಬಳಸಿರಲಿಲ್ಲ. ಹೀಗಾಗಿ ಮಕ್ಕಳು ತಿನ್ನಲು ನಿರಾಕರಿಸಿದ್ದರು ಎಂದು ಹೇಳಲಾಗಿದೆ.

ಹಾರಕನಾಳು ಗ್ರಾಮ ಇಲ್ಲಿಗೆ ಸುಮಾರು ಮೂರು ಕಿ.ಮೀ. ದೂರದಲ್ಲಿದ್ದು, ಅಲ್ಲಿ ವಾರಕ್ಕೆ ಮೂರು ದಿನ ಸಂತೆ ನಡೆಯುತ್ತದೆ. ಆದರೂ ತಾಜಾ ತರಕಾರಿ ಇಲ್ಲಿ ಬರುತ್ತಿಲ್ಲ ಎಂಬ ದೂರುಗಳು ಕೇಳಿಬಂದವು.

ವಿದ್ಯಾರ್ಥಿಗಳ ಗೋಳು:
ವಸತಿ ನಿಲಯದ ಆಹಾರ ದಾಸ್ತಾನು ಕೊಠಡಿಯಲ್ಲಿ ನಾಯಿಗಳು ಓಡಾಡುತ್ತಿವೆ. ಕೊಳೆತ ತರಕಾರಿ, ಕಸ ಕಡ್ಡಿಗಳಿಂದ ಕೂಡಿದ ಮುದ್ದೆ ನೀಡಲಾಗುತ್ತಿದೆ. ರುಚಿಯಾದ ಊಟ ಹಾಕಿ ಎಂದು ಬೇಡಿಕೊಂಡರೂ ತಮ್ಮ ಮಾತನ್ನು ಯಾರೂ ಕೇಳುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಳಲು ತೋಡಿಕೊಂಡಿದ್ದಾರೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ವಸತಿ ಶಾಲೆಯು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಾಗಿದ್ದು, 218 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಪ್ರಾಚಾರ್ಯ ಜಿ.ಎಂ.ಪ್ರಕಾಶ್‌ ವಿರುದ್ಧ ಹಿಂದೆಯೂ ಪೋಷಕರು ದೂರು ನೀಡಿದ್ದರು. ಅಧಿಕಾರಿಗಳ (ಡಿಟಿಡಬ್ಲ್ಯೂ) ಭೇಟಿ ವೇಳೆಯೂ ಇಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ತಿಳಿಸಿದ್ದರು ಎನ್ನಲಾಗಿದೆ.

***

‘ಈ ವಸತಿಶಾಲೆಯ ಮಕ್ಕಳದು ನರಕಯಾತನೆ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ. ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಇಲ್ಲ’
–ಮಂಜ್ಯಾ ನಾಯ್ಕ, ತಾ.ಪಂ. ಉಪಾಧ್ಯಕ್ಷ, ಹರಪನಹಳ್ಳಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT